ಬಸ್ ದರ, ಹಾಲಿನ ದರ ಏರಿಕೆ ವಿರೋಧಿಸಿ ಸಿಪಿಐ,(ಎಂ) ಪ್ರತಿಭಟನೆ

ಬೆಂಗಳೂರು: ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ ಬರೆ ಎಳೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿ, ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕರ್ನಾಟಕ ರಾಜ್ಯೋತ್ಸವದ ಬೆನ್ನಲ್ಲೇ ಹಾಲಿನ ದರ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ತಕ್ಷಣವೇ ಈ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕಾರ್ಪೊರೇಟ್ ಬಂಡವಾಳಗಾರರಿಗೆ ಪ್ರೋತ್ಸಾಹ, ಜನಸಾಮಾನ್ಯರಿಗೆ ಹೊರೆ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಈಗಾಗಲೇ ಕೇಂದ್ರದ ಮೋದಿ ಸರ್ಕಾರದ ನೀತಿಗಳಿಂದಾಗಿ ಜನರ ಜೀವನಾಧಾರ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್, ಔಷಧಿ ಮತ್ತಿತರ ಅಗತ್ಯ ಸಾಮಗ್ರಿಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಡಿ.ಕೆ.ಶಿವಕುಮಾರ್ ಸರ್ಕಾರ ಸಹ ಬೆಲೆ ಏರಿಕೆಯ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕುತ್ತಿದೆ. ಇನ್ನೊಂದೆಡೆ ಕಾರ್ಪೊರೇಟ್ ಬಂಡವಾಳಗಾರರಿಗೆ ಪ್ರೋತ್ಸಾಹ ಧನ ಹಾಗೂ ವಿವಿಧ ರಿಯಾಯಿತಿಗಳನ್ನು ನೀಡುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು-ಗ್ರಾಹಕರ ಮಧ್ಯೆ ವೈರತ್ವ ತರುತ್ತಿರುವ ಹಾಲಿನ ದರ ಏರಿಕೆ: ಹೈನುಗಾರಿಕೆ ಮಾಡುವ ರೈತರ ಕಷ್ಟಕ್ಕೆ ಸಬ್ಸಿಡಿ ಹೆಚ್ಚಿಸಿ ನೆರವಾಗುವ ಬದಲು, ಹಾಲಿನ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರು ಮತ್ತು ಹಾಲು ಉತ್ಪಾದಕ ರೈತರ ಮಧ್ಯೆ ವೈರತ್ವ ತರುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ರೈತರಿಗೆ ವಾಸ್ತವವಾಗಿ ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ 1 ಲೀಟರ್‌ಗೆ ಕೇವಲ 7 ರೂಪಾಯಿ ಮಾತ್ರ ಸಿಗುತ್ತಿದೆ. ಆದರೆ, ರೈತರ ನೆಪ ಹೇಳಿ ವಿವಿಧ ಗುಣಮಟ್ಟದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿಯಿಂದ ಹಿಡಿದು 15 ರೂಪಾಯಿಯವರೆಗೆ ಭಾರಿ ಹೆಚ್ಚಳ ಮಾಡಲಾಗಿದೆ.

ಇದರೊಂದಿಗೆ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 14 ರೂಪಾಯಿ ಹೆಚ್ಚಿಸಲಾಗಿದ್ದು, ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನ್ನೀರು ಇತ್ಯಾದಿಗಳ ಬೆಲೆಯನ್ನು ಶೇಕಡಾ 20 ರಿಂದ 30 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಜನರಿಂದ ನೇರ ಲೂಟಿ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.

ಬಸ್ ಪ್ರಯಾಣ ದರ ಏರಿಕೆ ಗಾಯದ ಮೇಲೆ ಬರೆ:
ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಂಗಳೂರು ನಗರದ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾ 26 ರಿಂದ ಶೇಕಡಾ 67 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದರೆ, ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾ 20 ರಿಂದ 30 ರಷ್ಟು ಹೆಚ್ಚಿಸಲಾಗಿದೆ. ಅಲ್ಲದೆ ಬಸ್ ಪಾಸ್ ದರಗಳನ್ನು ಸಹ ಶೇಕಡಾ 25 ರಷ್ಟು ಹೆಚ್ಚಳ ಮಾಡಿರುವ ಸರ್ಕಾರದ ಕ್ರಮ ಸಂಪೂರ್ಣ ಜನವಿರೋಧಿಯಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ದುಡಿಯುವ ಜನರ ಜೇಬಿಗೆ ಕತ್ತರಿ:
ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸದ ರಾಜ್ಯ ಕಾಂಗ್ರೆಸ್ ಸರ್ಕಾರ, ತಾನೇ ಸಿದ್ಧಪಡಿಸಿದ್ದ ಪರಿಷ್ಕೃತ ಕನಿಷ್ಠ ವೇತನ ಜಾರಿಯನ್ನು ಸಹ ತಡೆಹಿಡಿದಿದೆ. ಹೀಗೆ ಕಾರ್ಮಿಕರ ವೇತನ ಹೆಚ್ಚಿಸದೆ, ಇನ್ನೊಂದೆಡೆ ಸತತ ಬೆಲೆ ಏರಿಕೆಯ ಮೂಲಕ ದುಡಿಯುವ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖಂಡರು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡಲೇ ಏರಿಕೆ ಮಾಡಿರುವ ಬಸ್ ಪ್ರಯಾಣ ದರವನ್ನು ಇಳಿಸಬೇಕು ಮತ್ತು ಹಾಲು ಉತ್ಪಾದಕ ರೈತರಿಗೆ ನೇರ ಸಬ್ಸಿಡಿ ನೀಡಿ ಹಾಲಿನ ದರ ಏರಿಕೆಯನ್ನು ತಕ್ಷಣವೇ ವಾಪಸ್ ಪಡೆಯುವ ಮೂಲಕ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ತಪ್ಪಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಕಠಿಣವಾಗಿ ಒತ್ತಾಯಿಸಿವೆ.

ಈ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಮುಖಂಡರಾದ ಗೌರಮ್ಮ ಅವರು ಮಾತನಾಡಿದರು. ಹೋರಾಟದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್. ಲಕ್ಷ್ಮಿ, ಶ್ರೀಪತಿ.ಸಿ.ಜಿ, ಪಿ. ಮುನಿರಾಜು, ಚಂದ್ರಶೇಖರ್, ಹುಳ್ಳಿ ಉಮೇಶ್, ಗೋಪಾಲಗೌಡ, ಸ್ವಾಮಿರಾಜು, ಪಿ. ಸುರೇಶ್, ರವಿಚಂದ್ರನ್, ರಾಜಣ್ಣ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *