- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗಾಗಿ ಮುಂದುವರೆದ ಪ್ರತಿಭಟನೆ.
- ನ. 5ರಂದು ಫ್ರೀಡಂ ಪಾರ್ಕ್ನಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ.
- ಮತದಾರರ ಪಟ್ಟಿ ಶುದ್ಧೀಕರಣದ ನೆಪದಲ್ಲಿ ಅರ್ಹ ಮತದಾರರನ್ನು ತೆಗೆದು ಹಾಕಲಾಗಿದೆ.
ಬೆಂಗಳೂರು: ಕೋಟಿಗಟ್ಟಲೆ ಅರ್ಹ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡಿರುವ ಪ್ರಜಾಪ್ರಭುತ್ವ ವಿರೋಧಿ ‘ಎಸ್ಐಆರ್’ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಗುರುವಾರ (ನ. 5)ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿತು.
ಮತದಾರರ ಬೃಹತ್ ಕಡಿತ
ಮತದಾರರ ಪಟ್ಟಿ ಶುದ್ಧೀಕರಣದ ನೆಪದಲ್ಲಿ ದೇಶಾದ್ಯಂತ 14ಕೋಟಿಗೂ ಹೆಚ್ಚು ಹಾಗೂ ಕರ್ನಾಟಕದಲ್ಲಿ ಬರೋಬ್ಬರಿ 76 ಲಕ್ಷಕ್ಕೂ ಅಧಿಕ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ರಾಜ್ಯದ ಜನಸಂಖ್ಯೆ ಮತ್ತು ನೈಜ ಅಂಕಿ-ಅಂಶಗಳಿಗೆ ವಿರುದ್ಧವಾಗಿ ಬೆಂಗಳೂರಿನಲ್ಲಿಯೇ ಸುಮಾರು 45 ಲಕ್ಷ ಮತದಾರರ ಹೆಸರುಗಳನ್ನು ತೆರವುಗೊಳಿಸಲಾಗಿದೆ ಎಂದು ಸಮಾವೇಶದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ: ʼಮತಗಳ್ಳತನಕ್ಕೆ ಕುಮಕ್ಕು, ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆʼ: ಸಿಎಂ ಡಿಕೆ ಶಿವಕುಮಾರ್
ಫಾರ್ಮ್ 7 (ಅರ್ಜಿ ನಮೂನೆ 7) ದುರುಪಯೋಗ
ಸ್ಥಳಾಂತರಗೊಂಡವರಿಗೆ ನಮೂನೆ 8 ರ ಮೂಲಕ ಅಧಿಕೃತಗೊಳಿಸುವ ಬದಲು ಹೆಸರನ್ನೇ ಅಳಿಸಿ ಹಾಕಿ, ನಮೂನೆ 6 ರ ಮೂಲಕ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಅಕ್ರಮವಾಗಿ ಹೇರಿಕೆ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ನಮೂನೆ 7 ಅನ್ನು ಸಾಮೂಹಿಕವಾಗಿ ದುರ್ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತರು ಹಾಗೂ ಶ್ರಮಜೀವಿಗಳ ಮತಗಳನ್ನು ಅಳಿಸಲು ಸಂಚು ರೂಪಿಸಿದ್ದಾರೆ ಎಂದು ದೂರಲಾಯಿತು.
ಅಕ್ರಮ ನುಸುಳುಕೋರರ ನೆಪ
ಎಸ್ಐಆರ್ ಮಾಡಲು ಅಕ್ರಮ ನುಸುಳುಕೋರರ ವಿಚಾರವನ್ನು ಮುನ್ನೆಲೆಗೆ ತರಲಾಗಿದ್ದರೂ, ಕರ್ನಾಟಕದಲ್ಲಿ ಸಿಕ್ಕಿರುವ ನಿಜವಾದ ವಿದೇಶಿ ಪ್ರಜೆಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದು ಅಕ್ರಮ ನುಸುಳುಕೋರರನ್ನು ಹುಡುಕುವುದಕ್ಕಲ್ಲ, ಬದಲಿಗೆ ಚುನಾವಣಾ ಕಳ್ಳತನವನ್ನು ಕ್ರಮಬದ್ಧಗೊಳಿಸಲು ನಡೆಸುತ್ತಿರುವ ಕೃತ್ಯ ಎಂದು ಟೀಕಿಸಲಾಯಿತು.
ಇಂಡಿಯಾ ಒಕ್ಕೂಟದ ಬೇಡಿಕೆ ಏನು?
- ಅಕ್ರಮ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಎಸ್ಐಆರ್ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು.
- ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು.
- ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಕಾನೂನನ್ನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್ ಸೂಚನೆಯಂತೆ ನೇಮಕಾತಿಯ ಸ್ವಾಯತ್ತತೆಯನ್ನು ಖಾತ್ರಿಪಡಿಸಬೇಕು.
- ಕರ್ನಾಟಕ ಸರ್ಕಾರವು ರಾಜ್ಯದ ಎಸ್ಐಆರ್ ಅಂತಿಮ ಪಟ್ಟಿಯನ್ನು ತಿರಸ್ಕರಿಸಬೇಕು.
- ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಮುಂಬರುವ ತಾಲೂಕು-ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಎಸ್ಐಆರ್ ಪೂರ್ವದ (2025ರ) ಪಟ್ಟಿಯ ಆಧಾರದ ಮೇಲೆಯೇ ನಡೆಸಲು ಕ್ರಮವಹಿಸಬೇಕು.
ಇದನ್ನೂ ನೋಡಿ: 3 ಕೋಟಿ ನುಸುಳುಕೋರರು ಎಲ್ಲಿ? ಅಮಿತ್ ಶಾ ಅವರದ್ದೂ ಮತ್ತೊಂದು ಜುಮ್ಲಾನಾ? | ಕೆ.ಎಸ್ ವಿಮಲಾ Janashakthi Media
