ದೇಶದಲ್ಲಿ ಪತ್ರಿಕಾ ವಲಯಕ್ಕೆ ಎದುರಾಗಿರುವ ಹೊಸ ನಿಯಮಗಳು ಸಣ್ಣ ಪತ್ರಿಕೆಗಳ ಭವಿಷ್ಯದ ಬಗ್ಗೆ ಆತಂಕ ಮೂಡಿಸಿವೆ. ಕಳೆದ ಒಂದು ವರ್ಷದಲ್ಲಿ ದೇಶದ ಸುಮಾರು 88 ಸಾವಿರ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ನೋಂದಣಿ ರದ್ದಾಗಿವೆ. ಕನ್ನಡ ಪ್ರಕಟಣೆಗಳ ಸಂಖ್ಯೆಯೂ 6,083ರಿಂದ 3,903ಕ್ಕೆ ಇಳಿದಿದೆ. ಇದರ ಬೆನ್ನಲ್ಲೇ 2027ರಿಂದ ಅಂಚೆ ಮೂಲಕ ಪತ್ರಿಕೆಗಳನ್ನು ಕಳುಹಿಸುವ ವೆಚ್ಚ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಒಂದೆಡೆ ನೋಂದಣಿ ರದ್ದತಿ, ಮತ್ತೊಂದೆಡೆ ಅಂಚೆ ವೆಚ್ಚದ ಹೊರೆ. ಈ ಎರಡೂ ಬೆಳವಣಿಗೆಗಳು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಪತ್ರಿಕೆಗಳ ಪಾಲಿಗೆ ಮತ್ತೊಂದು ಸವಾಲಾಗಿವೆ. ನೋಂದಣಿ
ಗುರುರಾಜ ದೇಸಾಯಿ
ಕೇಂದ್ರ ಸರ್ಕಾರವು 2023ರಲ್ಲಿ ರೂಪಿಸಿದ ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ 2024ರ ಮಾರ್ಚ್ 1ರಿಂದ ಜಾರಿಗೆ ಬಂದಿದೆ. ಇದು 1867ರ ಹಳೆಯ ಕಾಯ್ದೆಯ ಬದಲಿಗೆ ಬಂದಿದ್ದು, ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ಗೊಳಿಸಿದೆ. ಹೊಸ ಪತ್ರಿಕೆ ಆರಂಭಿಸುವುದು, ನೋಂದಣಿಯಲ್ಲಿ ಬದಲಾವಣೆ ಮಾಡುವುದು, ಮಾಲೀಕತ್ವ ವರ್ಗಾವಣೆ ಹಾಗೂ ವಾರ್ಷಿಕ ವಿವರ ಸಲ್ಲಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನೂ ಈಗ ‘ಪ್ರೆಸ್ ಸೇವಾ ಪೋರ್ಟಲ್’ ಮೂಲಕವೇ ನಡೆಸಲಾಗುತ್ತಿದೆ. ಈ ಹಿಂದೆ ಆರ್ಎನ್ಐ (RNI) ನಿರ್ವಹಿಸುತ್ತಿದ್ದ ನೋಂದಣಿ ವ್ಯವಸ್ಥೆಯ ಬದಲಿಗೆ ಈಗ ಪತ್ರಿಕಾ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (PRGI) ಕಾರ್ಯನಿರ್ವಹಿಸುತ್ತಿದೆ. ನೋಂದಣಿ
ಹೊಸ ಕಾಯ್ದೆಯ 11ನೇ ವಿಧಿಯ ಪ್ರಕಾರ, ಪತ್ರಿಕೆ ನಿರಂತರವಾಗಿ ಪ್ರಕಟವಾಗದಿದ್ದರೆ, ವರ್ಷದಲ್ಲಿ ಪ್ರಕಟಿಸಬೇಕೆಂದು ಘೋಷಿಸಿದ ಸಂಚಿಕೆಗಳ ಅರ್ಧಕ್ಕಿಂತ ಕಡಿಮೆ ಸಂಚಿಕೆಗಳು ಪ್ರಕಟವಾದರೆ, ವಾರ್ಷಿಕ ವಿವರಗಳಲ್ಲಿ ತಪ್ಪು ಮಾಹಿತಿ ನೀಡಿದರೆ ಅಥವಾ ಹಣಕಾಸು ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ವಾರ್ಷಿಕ ವಿವರ ಸಲ್ಲಿಸದಿದ್ದರೆ ನೋಂದಣಿಯನ್ನು ಅಮಾನತುಗೊಳಿಸಬಹುದು. ಅಮಾನತಿನ ಅವಧಿಯಲ್ಲಿ ಲೋಪ ಸರಿಪಡಿಸದಿದ್ದರೆ ನೋಂದಣಿ ರದ್ದುಗೊಳಿಸುವ ಅವಕಾಶವೂ ಇದೆ. ಆದರೆ ಇಂತಹ ಕ್ರಮ ಕೈಗೊಳ್ಳುವ ಮೊದಲು ಪ್ರಕಾಶಕ ಅಥವಾ ಮಾಲೀಕರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡುವುದು ಕಡ್ಡಾಯ. ಈ ನಿಯಮಗಳ ಅನುಷ್ಠಾನದ ಭಾಗವಾಗಿ ದೇಶದಲ್ಲಿ 88,315 ಪತ್ರಿಕೆಗಳ ನೋಂದಣಿ ರದ್ದುಗೊಳಿಸಿರುವುದಾಗಿ ಕೇಂದ್ರ ಸರ್ಕಾರ 2026ರ ಮಾರ್ಚ್ನಲ್ಲಿ ಲೋಕಸಭೆಗೆ ತಿಳಿಸಿದೆ.
ದೊಡ್ಡ ಮಾಧ್ಯಮ ಸಂಸ್ಥೆಗಳ ನಡುವೆ ಸಣ್ಣ ಪತ್ರಿಕೆಗಳು ತಮ್ಮದೇ ಆದ ಓದುಗರನ್ನು ಹೊಂದಿವೆ. ಸ್ಥಳೀಯ ಸಮಸ್ಯೆಗಳು, ಕಾರ್ಮಿಕರು, ರೈತರು, ದಲಿತರು, ಅಲ್ಪಸಂಖ್ಯಾತರು ಹಾಗೂ ಅಂಚಿನ ಸಮುದಾಯಗಳ ವಿಚಾರಗಳಿಗೆ ಇವು ವೇದಿಕೆಯಾಗಿವೆ. ದೊಡ್ಡ ಮಾಧ್ಯಮಗಳಲ್ಲಿ ಹೆಚ್ಚು ಗಮನ ಸೆಳೆಯದ ಹಲವು ಸಮಸ್ಯೆಗಳನ್ನು ಸಣ್ಣ ಪತ್ರಿಕೆಗಳು ನಿರಂತರವಾಗಿ ಜನರ ಮುಂದಿಡುತ್ತಿವೆ. ಇಂತಹ ಪತ್ರಿಕೆಗಳ ನೋಂದಣಿ ರದ್ದಾಗುವುದು ಮತ್ತು ಅಂಚೆ ಮೂಲಕ ವಿತರಿಸುವ ವೆಚ್ಚ ಹೆಚ್ಚಾಗುವುದು ಅವುಗಳ ಪ್ರಕಟಣೆ ಮುಂದುವರಿಸುವುದನ್ನೇ ಕಷ್ಟವಾಗಿಸಬಹುದು. ನೋಂದಣಿ
ಸಾವಿರಾರು ಪತ್ರಿಕೆಗಳು ನೋಂದಣಿ ಪಟ್ಟಿಯಿಂದ ಹೊರಕ್ಕೆ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಹಿರಿಯ ಪತ್ರಕರ್ತ ಅನಿಲ್ ಚಮಾಡಿಯಾ, ತಮ್ಮ ಲೇಖನದಲ್ಲಿ ಈ ಬೆಳವಣಿಗೆಯತ್ತ ಗಮನ ಸೆಳೆದಿದ್ದಾರೆ. 2024–25ರಲ್ಲಿ ಭಾರತೀಯ ಪತ್ರಿಕೆಗಳ ನೋಂದಣಾಧಿಕಾರಿ (ಆರ್ಎನ್ಐ) ಬಳಿ 1,54,523 ಪ್ರಕಟಣೆಗಳು ನೋಂದಣಿಯಾಗಿದ್ದವು. ಈಗ ಈ ಸಂಖ್ಯೆ 74,374ಕ್ಕೆ ಇಳಿದಿದೆ. ಅಂದರೆ, ಶೇ 51.86ರಷ್ಟು ಕುಸಿತವಾಗಿದೆ.
2023ರ ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಈ ನೋಂದಣಿ ರದ್ದತಿ ಕ್ರಮ ಕೈಗೊಳ್ಳಲಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪತ್ರಿಕೆಗಳ ನೋಂದಣಿ ರದ್ದಾಗಿರುವುದಕ್ಕೆ ಕಾರಣಗಳೇನು? ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ? ಸಂಬಂಧಪಟ್ಟ ಪ್ರಕಾಶಕರಿಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅಥವಾ ನಿರ್ಧಾರವನ್ನು ಪ್ರಶ್ನಿಸಲು ಅವಕಾಶ ನೀಡಲಾಗಿದೆಯೇ? ಇಂತಹ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿದೆ.
ನೋಂದಣಿ ರದ್ದಾಗಿದೆ ಎಂದ ಮಾತ್ರಕ್ಕೆ ಆ ಪತ್ರಿಕೆಗಳ ಪ್ರಕಟಣೆ ನಿಂತಿದೆ ಎಂದರ್ಥವಲ್ಲ. ಆದರೆ ನೋಂದಣಿ ಪಟ್ಟಿಯಿಂದ ಹೊರಗುಳಿಯುವುದು ಅವುಗಳ ಪ್ರಕಟಣೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಸಣ್ಣ ಪ್ರಕಾಶಕರಿಗೆ ಹೊಸ ನಿಯಮಗಳನ್ನು ಪಾಲಿಸುವುದು, ಅಗತ್ಯ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಸುಲಭದ ಕೆಲಸವಲ್ಲ.

ಕನ್ನಡ ಪತ್ರಿಕೆಗಳ ಸಂಖ್ಯೆಯಲ್ಲೂ ಇಳಿಕೆ
ಭಾಷಾವಾರು ಅಂಕಿಅಂಶಗಳನ್ನು ಗಮನಿಸಿದರೆ ಕನ್ನಡವೂ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳ ಪ್ರಕಟಣೆಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕನ್ನಡದಲ್ಲಿ ನೋಂದಣಿಯಾಗಿದ್ದ ಪ್ರಕಟಣೆಗಳ ಸಂಖ್ಯೆ 6,083ರಿಂದ 3,903ಕ್ಕೆ ಇಳಿದಿದೆ. ಅಂದರೆ, 2,180 ಪ್ರಕಟಣೆಗಳು ನೋಂದಣಿ ಪಟ್ಟಿಯಿಂದ ಹೊರಗುಳಿದಿವೆ.
ಹಿಂದಿ ಪ್ರಕಟಣೆಗಳ ಸಂಖ್ಯೆ 56,052ರಿಂದ 33,491ಕ್ಕೆ ಇಳಿದಿದ್ದರೆ, ಇಂಗ್ಲಿಷ್ ಪ್ರಕಟಣೆಗಳು 19,929ರಿಂದ 6,430ಕ್ಕೆ ಕುಸಿದಿವೆ. ಬಂಗಾಳಿ ಪ್ರಕಟಣೆಗಳು 5,060ರಿಂದ 1,162ಕ್ಕೆ, ಮರಾಠಿ ಪ್ರಕಟಣೆಗಳು 10,380ರಿಂದ 6,664ಕ್ಕೆ ಇಳಿದಿವೆ. ತಮಿಳು ಪ್ರಕಟಣೆಗಳ ಸಂಖ್ಯೆ 6,100ರಿಂದ 2,490ಕ್ಕೆ ಕುಸಿದಿದೆ. ಸಂತಾಲಿ ಭಾಷೆಯ ಪ್ರಕಟಣೆಗಳು 23ರಿಂದ ಆರಕ್ಕೆ ಇಳಿದಿರುವುದು ಇನ್ನಷ್ಟು ಗಮನಾರ್ಹ.
ಈ ಅಂಕಿಅಂಶಗಳು ಸಣ್ಣ ಮತ್ತು ಪ್ರಾದೇಶಿಕ ಭಾಷೆಗಳ ಪತ್ರಿಕಾ ವಲಯ ಎದುರಿಸುತ್ತಿರುವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಭಾಷಾ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗುವುದು ಎಂದರೆ ಆ ಭಾಷೆಯಲ್ಲಿ ನಡೆಯುವ ಸಾರ್ವಜನಿಕ ಚರ್ಚೆಗೂ ವೇದಿಕೆಗಳು ಕಡಿಮೆಯಾಗುತ್ತವೆ ಎಂಬುದನ್ನು ಮರೆಯಬಾರದು. ನೋಂದಣಿ
ಇದನ್ನೂ ಓದಿ : ಬೆಂಗಳೂರು: ಎಸ್ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ
ಅಂಚೆ ವೆಚ್ಚ ಹೆಚ್ಚಳದ ಮತ್ತೊಂದು ಹೊಡೆತ
ನೋಂದಣಿ ರದ್ದತಿಯ ಆತಂಕದ ನಡುವೆಯೇ ಸಣ್ಣ ಪತ್ರಿಕೆಗಳಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅಂಚೆ ಮೂಲಕ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಲು ಈವರೆಗೆ ದೊರೆಯುತ್ತಿದ್ದ ರಿಯಾಯಿತಿ ವ್ಯವಸ್ಥೆಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇದೆ. ದೊಡ್ಡ ನಗರಗಳ ಹೊರಗೆ ವಾಸಿಸುವ ಓದುಗರಿಗೆ ಪತ್ರಿಕೆಗಳನ್ನು ತಲುಪಿಸಲು ಸಣ್ಣ ಪ್ರಕಟಣೆಗಳು ಅಂಚೆ ವ್ಯವಸ್ಥೆಯನ್ನೇ ಅವಲಂಬಿಸಿವೆ. ಚಂದಾದಾರರಿಗೆ ನೇರವಾಗಿ ಪತ್ರಿಕೆ ಕಳುಹಿಸುವುದೇ ಅವುಗಳ ವಿತರಣೆಯ ಪ್ರಮುಖ ಮಾರ್ಗವಾಗಿದೆ. ಈಗ ಈ ವ್ಯವಸ್ಥೆಯ ವೆಚ್ಚ ಹೆಚ್ಚಾದರೆ ಪತ್ರಿಕೆಗಳ ಆರ್ಥಿಕ ಹೊರೆಯೂ ಹೆಚ್ಚಲಿದೆ.
ಹಿಂದೆ ಒಂದು ಪ್ರತಿಯನ್ನು ಸುಮಾರು 50 ಪೈಸೆ ವೆಚ್ಚದಲ್ಲಿ ಕಳುಹಿಸಲು ಸಾಧ್ಯವಿತ್ತು. ಹೊಸ ದರಗಳು ಅನ್ವಯಿಸಿದರೆ ಪ್ರತಿ ಪ್ರತಿಗೆ ನಾಲ್ಕು ರೂಪಾಯಿವರೆಗೆ ವೆಚ್ಚವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. 2027ರ ಅವಧಿಗೆ ನಿಯತಕಾಲಿಕೆಗಳ ಅಂಚೆ ಪರವಾನಗಿ ನವೀಕರಣದ ಬಗ್ಗೆಯೂ ಕೆಲವು ಪ್ರಕಾಶಕರಿಗೆ ಸ್ಪಷ್ಟತೆ ಇಲ್ಲದಂತಾಗಿದೆ.
ಈಗಾಗಲೇ ಕಾಗದ, ಮುದ್ರಣ, ಸಾರಿಗೆ ಮತ್ತು ಸಿಬ್ಬಂದಿ ವೆಚ್ಚಗಳನ್ನು ಭರಿಸುವುದೇ ಸಣ್ಣ ಪತ್ರಿಕೆಗಳಿಗೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅಂಚೆ ವೆಚ್ಚವೂ ಹೆಚ್ಚಾದರೆ ಪತ್ರಿಕೆಗಳನ್ನು ಪ್ರಕಟಿಸುವುದು ಮತ್ತು ಓದುಗರಿಗೆ ತಲುಪಿಸುವುದು ಇನ್ನಷ್ಟು ದುಬಾರಿಯಾಗಲಿದೆ. ಹೆಚ್ಚುವರಿ ವೆಚ್ಚವನ್ನು ಚಂದಾದಾರರ ಮೇಲೆ ಹಾಕಿದರೆ ಪತ್ರಿಕೆಗಳ ಬೆಲೆ ಹೆಚ್ಚಿಸಬೇಕಾಗುತ್ತದೆ. ಬೆಲೆ ಹೆಚ್ಚಿಸಿದರೆ ಓದುಗರು ದೂರವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಸಣ್ಣ ಪತ್ರಿಕೆಗಳು ಇಕ್ಕಟ್ಟಿಗೆ ಸಿಲುಕಲಿವೆ.
ಸಣ್ಣ ಪತ್ರಿಕೆಗಳ ಮಹತ್ವವನ್ನು ಮರೆಯಬಾರದು
ಸಣ್ಣ ಪತ್ರಿಕೆಗಳನ್ನು ಕೇವಲ ಅವುಗಳ ಪ್ರಸರಣ ಸಂಖ್ಯೆ ಅಥವಾ ಜಾಹೀರಾತು ಆದಾಯದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಸ್ಥಳೀಯ ಸಮಸ್ಯೆಗಳು, ಕಾರ್ಮಿಕರ ಹಕ್ಕುಗಳು, ರೈತರ ಹೋರಾಟಗಳು, ಜಾತಿ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಅಲ್ಪಸಂಖ್ಯಾತರ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳಿಗೆ ಇವು ಧ್ವನಿಯಾಗಿವೆ.
ಸೀಮಿತ ಸಂಪನ್ಮೂಲಗಳ ನಡುವೆಯೂ ಅನೇಕ ಪತ್ರಿಕೆಗಳು ಸಾಮಾಜಿಕ ಬದ್ಧತೆಯಿಂದ ಪ್ರಕಟವಾಗುತ್ತಿವೆ. ದೊಡ್ಡ ಮಾಧ್ಯಮಗಳಲ್ಲಿ ಜಾಗ ಸಿಗದ ವಿಷಯಗಳನ್ನು ಜನರ ಮುಂದಿಡುವ ಕೆಲಸವನ್ನು ಇವು ಮಾಡುತ್ತಿವೆ. ಇಂತಹ ಪತ್ರಿಕೆಗಳು ನಿಂತುಹೋದರೆ ನಷ್ಟವಾಗುವುದು ಕೇವಲ ಪ್ರಕಾಶಕರಿಗೆ ಮಾತ್ರವಲ್ಲ. ಸ್ಥಳೀಯ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ದಾಖಲಿಸುವ ಮತ್ತು ಅಧಿಕಾರವನ್ನು ಪ್ರಶ್ನಿಸುವ ಒಂದು ಮಾಧ್ಯಮವೇ ಇಲ್ಲದಂತಾಗುತ್ತದೆ.
ಸಣ್ಣ ಪತ್ರಿಕೆಗಳ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಲಿ
ಪತ್ರಿಕೆಗಳ ನೋಂದಣಿ ಮತ್ತು ನಿಯಂತ್ರಣಕ್ಕೆ ನಿಯಮಗಳು ಇರಬೇಕಾದುದು ಸಹಜ. ಆದರೆ ಅವುಗಳನ್ನು ಜಾರಿಗೊಳಿಸುವಾಗ ಸಣ್ಣ ಪ್ರಕಾಶಕರ ಪರಿಸ್ಥಿತಿಯನ್ನೂ ಪರಿಗಣಿಸಬೇಕು. ಸಾವಿರಾರು ಪತ್ರಿಕೆಗಳ ನೋಂದಣಿ ರದ್ದಾಗಿರುವಾಗ ಅದರ ಹಿಂದಿನ ಕಾರಣಗಳು ಮತ್ತು ಅನುಸರಿಸಿದ ಮಾನದಂಡಗಳನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಪ್ರಕಾಶಕರಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸೂಕ್ತ ಅವಕಾಶವನ್ನೂ ನೀಡಬೇಕು.
ಅಂಚೆ ಮೂಲಕ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ರಿಯಾಯಿತಿ ವ್ಯವಸ್ಥೆಯನ್ನು ಮುಂದುವರಿಸುವ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಸಣ್ಣ ಮತ್ತು ಪ್ರಾದೇಶಿಕ ಭಾಷೆಗಳ ಪತ್ರಿಕೆಗಳಿಗೆ ವಿಶೇಷ ರಿಯಾಯಿತಿ ನೀಡುವುದು, ಅಂಚೆ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಅಗತ್ಯ ನೆರವು ಒದಗಿಸುವುದು ಮುಖ್ಯ.
ಪತ್ರಿಕಾ ಸ್ವಾತಂತ್ರ್ಯ ಎಂದರೆ ದೊಡ್ಡ ಮಾಧ್ಯಮ ಸಂಸ್ಥೆಗಳು ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಮಾತ್ರವಲ್ಲ. ಸಣ್ಣ ಪತ್ರಿಕೆಗಳು ಮತ್ತು ಪ್ರಾದೇಶಿಕ ಭಾಷೆಗಳ ಪ್ರಕಟಣೆಗಳಿಗೂ ಜನರ ಧ್ವನಿಯಾಗುವ ಅವಕಾಶ ಇರಬೇಕು. ಪತ್ರಿಕೆಗಳನ್ನು ನೋಂದಾಯಿಸುವ ವ್ಯವಸ್ಥೆ ಇರುವುದಷ್ಟೇ ಮುಖ್ಯವಲ್ಲ, ಅವು ನಿರಂತರವಾಗಿ ಪ್ರಕಟವಾಗಿ ಓದುಗರ ಕೈ ಸೇರುವ ವಾತಾವರಣವೂ ಇರಬೇಕು. ಇಲ್ಲದಿದ್ದರೆ ಮಾಧ್ಯಮ ವೈವಿಧ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೆ ಅರ್ಥವೇ ಇರುವುದಿಲ್ಲ. ನೋಂದಣಿ
ಇದನ್ನೂ ನೋಡಿ : 3 ಕೋಟಿ ನುಸುಳುಕೋರರು ಎಲ್ಲಿ? ಅಮಿತ್ ಶಾ ಅವರದ್ದೂ ಮತ್ತೊಂದು ಜುಮ್ಲಾನಾ? | ಕೆ.ಎಸ್ ವಿಮಲಾ Janashakthi Media
