ಬಸ್ ದರ ಏರಿಕೆ: ದುಡಿಯುವ ವರ್ಗದ ಹೊಟ್ಟೆ ಮೇಲೆ ಹೊರೆ; ತಕ್ಷಣ ಹಿಂಪಡೆಯಲು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಆಗ್ರಹ

  • ಬಸ್ ಪ್ರಯಾಣ ದರ ಏರಿಕೆ ವಿರುದ್ಧ ‘ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆʼ ಕಿಡಿ
  • ಬಿಎಂಟಿಸಿಯ ದೈನಂದಿನ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.
  • ಪ್ರಯಾಣ ವೆಚ್ಚ ದುಬಾರಿಯಾದರೆ,ದುಡಿಯುವ ವರ್ಗದ ದಿನಸಿ ಖರೀದಿ ಮೇಲೆ ಪರಿಣಾಮ ಬೀರಲಿದೆ.
ಬೆಂಗಳೂರು: ಕರ್ನಾಟಕ ಸರ್ಕಾರವು ಬುಧವಾರ ನಾಲ್ಕು ನಿಗಮಗಳ ಬಸ್‌ ಪ್ರಯಾಣದ ದರ ಟಿಕೆಟ್‌ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗೆ ಶಾಕಿಂಗ್‌ನ್ಯೂಸ್‌  ಕೊಟ್ಟಿದೆ.  ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಹಾಲು, ತುಪ್ಪ, ಮೊಸರು ಬೆಲೆ ಏರಿಕೆ ಹಾಗೂ ಬಸ್‌ ಟಿಕೆಟ್‌ ದರವೂ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ‘ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ’ ಒತ್ತಾಯಿಸಿದೆ.  ಬೆಲೆ ಏರಿಕೆ

ದರ ನಿಗದಿ, ಬಸ್ ಸೇವೆಗಳ ಸುಧಾರಣೆ ಹಾಗೂ ಸಾರ್ವಜನಿಕ ಸಾರಿಗೆಯನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡುವ ಕುರಿತು ಸರ್ಕಾರವು ಪ್ರಯಾಣಿಕರೊಂದಿಗೆ ಮುಕ್ತ ಚರ್ಚೆ ನಡೆಸಬೇಕು ಎಂದು ‘ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ’ ತೀವ್ರವಾಗಿ ಪಟ್ಟುಹಿಡಿದು, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಇದರಿಂದ ಸರ್ಕಾರ ಎದುರಿಸುವ ಸಮಸ್ಯೆ ಬಗ್ಗೆ ಎಚ್ಚರಿಕೆ ಕೊಟ್ಟಿದೆ.

ದುಡಿಯುವ ವರ್ಗದ ಮೇಲೆ ಆರ್ಥಿಕ ಹೊರೆ

ಪ್ರತಿದಿನ ಬಸ್‌ಗಳನ್ನು ಅವಲಂಬಿಸಿರುವ ಬೀದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಈ ದರ ಏರಿಕೆಯಿಂದ ತೀವ್ರ ತೊಂದರೆಯಾಗಲಿದೆ. ಪ್ರಯಾಣ ವೆಚ್ಚ ಹೆಚ್ಚಾಗುವುದರಿಂದ ಬಡ ಕುಟುಂಬಗಳು ತಮ್ಮ ನಿತ್ಯ ಬಳಸುವ ಆಹಾರ ಮತ್ತು ಶಿಕ್ಷಣದ ಖರ್ಚುಗಳನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವೇದಿಕೆ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ʼಮತಗಳ್ಳತನಕ್ಕೆ‌ ಕುಮಕ್ಕು, ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆʼ: ಸಿಎಂ ಡಿಕೆ ಶಿವಕುಮಾರ್

ಪ್ರಯಾಣಿಕರ ಸಂಖ್ಯೆ ಇಳಿಕೆ ಸಾಧ್ಯತೆ

2025ರ ಜನವರಿಯಲ್ಲಿ ದರ ಹೆಚ್ಚಿಸಿದ ನಂತರ ಬಿಎಂಟಿಸಿಯ ದೈನಂದಿನ ಪ್ರಯಾಣಿಕರ ಸಂಖ್ಯೆ 38.03 ಲಕ್ಷದಿಂದ 35.85 ಲಕ್ಷಕ್ಕೆ ಇಳಿದಿದೆ. ದರ ಹೆಚ್ಚಳದಿಂದ ಜನರು ಬಸ್ ಪ್ರಯಾಣ ಕಡಿಮೆ ಮಾಡಿ ಖಾಸಗಿ ವಾಹನ ಅಥವಾ ದುಬಾರಿ ಮೆಟ್ರೋವನ್ನು ಅವಲಂಬಿಸುವುದರಿಂದ ನಿಗಮದ ಆದಾಯಕ್ಕೂ ನಷ್ಟವಾಗಲಿದೆ ಎಂದು ಎಚ್ಚರಿಸಲಾಗಿದೆ.

ತಪ್ಪಾದ ಸಾರಿಗೆ ನೀತಿ

ಖಾಸಗಿ ವಾಹನಗಳಿಗಾಗಿ ಮೇಲ್ಸೇತುವೆ, ಸುರಂಗ ಮಾರ್ಗ ಹಾಗೂ ಎಲಿವೇಟೆಡ್ ರಸ್ತೆಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಸರ್ಕಾರ, ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕಡಿಮೆ ಮಾಡಲು ಸಹಾಯ ಮಾಡುವ ಸಾರ್ವಜನಿಕ ಬಸ್ ಪ್ರಯಾಣಿಕರಿಗೆ ಹೆಚ್ಚಿನ ದರ ವಿಧಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸರ್ಕಾರವೇ ಹೊಣೆ

ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಹೊಣೆ ಹೊರಬೇಕು. ಕೇಂದ್ರ ಸರ್ಕಾರವು ಇಂಧನದ ಮೇಲಿನ ತೆರಿಗೆ ಕಡಿಮೆ ಮಾಡಬೇಕು ಮತ್ತು ಸಾರ್ವಜನಿಕ ಬಸ್‌ಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಅಥವಾ ನೇರ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಬಸ್ ಪ್ರಯಾಣಿಕರ ವೇದಿಕೆಯ ಬೇಡಿಕೆಗಳಿವು

  • ಸರ್ಕಾರವು ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ಹಿಂಪಡೆದು ಹಿಂದಿನ ದರವನ್ನು ಜಾರಿಗೆ ತರಬೇಕು.
  • ಪ್ರಯಾಣ ದರ ನಿಗದಿ ಮಾಡುವ ಮೊದಲು ಪ್ರಯಾಣಿಕರು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸಬೇಕು.
  • ಬಸ್‌ಗಳ ಸಂಖ್ಯೆ ಹೆಚ್ಚಿಸುವುದು, ಹೊಸ ಮಾರ್ಗಗಳನ್ನು ಆರಂಭಿಸುವುದು ಹಾಗೂ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
  • ಬಿಎಂಟಿಸಿ ಮತ್ತು ಇತರ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು.

ಇದನ್ನೂ ನೋಡಿ:ಸೌಜನ್ಯ ಪ್ರಕರಣಕ್ಕೆ ಮಹತ್ವದ ತಿರುವು? 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಗೆ ಎಸ್‌ಐಟಿ ಸಮನ್ಸ್‌!

Donate Janashakthi Media

Leave a Reply

Your email address will not be published. Required fields are marked *