ಬಿಜೆಪಿ ನಾಯಕನ ವಿರುದ್ಧ ಕೊಲೆ ಆರೋಪ: ʼಮಗಳ ಸಾವಿಗೆ ನ್ಯಾಯ ಕೊಡಿʼ ಎಂದ ಪೋಷಕರನ್ನೇ ಹೊತ್ತೊಯ್ದ ಪೊಲೀಸರು

ಮಗಳ ಕೊಲೆ ಪ್ರಕರಣದ ವಿಐಪಿ ನಂಟಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ
ಪ್ರತಿಭಟನಾಕಾರರನ್ನು ಬಲವಂತವಾಗಿ ಹೊತ್ತೊಯ್ದ ದೆಹಲಿ ಪೊಲೀಸರು
ಪ್ರತಿಭಟನೆ ವೇಳೆ ಮೃತಳ ತಾಯಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು
ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ವಿರುದ್ಧವೂ ಆಕ್ರೋಶ
ನವದೆಹಲಿ: ಮಗಳ ಕೊಲೆಗೆ ನ್ಯಾಯ ಕೊಡಿಸಿ ಎಂದು ಹೋರಾಟ ನಡೆಸುತ್ತಿರುವ ಪೋಷಕರ ಪ್ರತಿಭಟನೆಯನ್ನು ದೆಹಲಿ ಪೊಲೀಸರು ಬಲವಂತವಾಗಿ ತೆರವುಗೊಳಿಸಿದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಉತ್ತರಾಖಂಡದ ಅಂಕಿತಾ (19) ಭಂಡಾರಿ ಕೊಲೆ ಪ್ರಕರಣದ ನ್ಯಾಯಕ್ಕಾಗಿ ಹೋರಾಡುತ್ತಿರುವ ತಂದೆ ವೀರೇಂದ್ರ ಸಿಂಗ್ ಭಂಡಾರಿ ಮತ್ತು ತಾಯಿ ಸೋನಿ ದೇವಿ ಅವರು ದೆಹಲಿಯ ರಾಜ್‌ಘಾಟ್‌ನಲ್ಲಿ ಧರಣಿ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಸ್ಥಳದಿಂದ ಹೊತ್ತೊಯ್ದಿದ್ದು, ಗದ್ದಲದ ನಡುವೆ ತಾಯಿ ಸೋನಿ ದೇವಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾರೆ. ಬಿಜೆಪಿ 

ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಕೂಡ ಪೋಷಕರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅಂಕಿತಾ ಕೊಲೆ ಪ್ರಕರಣದಲ್ಲಿ ಆರೋಪಿಸಲಾಗಿರುವ ವಿಐಪಿ ನಂಟಿನ ಬಗ್ಗೆ ಸಂಪೂರ್ಣ ಸಿಬಿಐ ತನಿಖೆ ನಡೆಸಬೇಕು ಎಂಬುದು ಕುಟುಂಬದ ಆಗ್ರಹಿಸಿದೆ.

ಏನಿದು ಘಟನೆ?

ನವೆಂಬರ್ 4ರಂದು ಅಂಕಿತಾ ಪೋಷಕರು ರಾಜ್‌ಘಾಟ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಾರ್ವಜನಿಕ ಪ್ರವೇಶ ದ್ವಾರದ ಬಳಿ ಧರಣಿ ಆರಂಭಿಸಿದ್ದರು. ಆದರೆ ರಾಜ್‌ಘಾಟ್ ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳವಲ್ಲ ಎಂದು ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳದಿಂದ ತೆರಳುವಂತೆ ಹಲವು ಬಾರಿ ಸೂಚಿಸಿದರೂ ಪ್ರತಿಭಟನಾಕಾರರು ಕದಲದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಸೋನಿ ದೇವಿ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಬುರಾರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ತಮ್ಮನ್ನು ಎಳೆದೊಯ್ದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಆದರೆ ಪ್ರತಿಭಟನಾಕಾರರನ್ನು ಬಂಧಿಸಿಲ್ಲ, ಕೇವಲ ಸ್ಥಳದಿಂದ ತೆರವುಗೊಳಿಸಲಾಗಿದೆ ಎಂಬುದು ಪೊಲೀಸರ ಹೇಳಿಕೆ.

ಬಿಜೆಪಿ ನಾಯಕನ ನೇಮಕದ ವಿರುದ್ಧವೂ ಪ್ರತಿಭಟನೆ

ಇದಕ್ಕೂ ಮುನ್ನ ಅಕ್ಟೋಬರ್ 14ರಂದು ಅಂಕಿತಾ ಪೋಷಕರು ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಅಂಕಿತಾ ಕೊಲೆ ಪ್ರಕರಣದ ವಿಐಪಿ ಆಯಾಮದ ತನಿಖೆ ಪೂರ್ಣಗೊಳ್ಳುವವರೆಗೆ ಅವರ ನೇಮಕಾತಿಯನ್ನು ತಡೆಹಿಡಿಯಬೇಕು ಎಂದು ಪೋಷಕರು ಆಗ್ರಹಿಸಿದ್ದರು. ಈ ಪ್ರತಿಭಟನೆಯಲ್ಲೂ ಪೊಲೀಸರು ಪೋಷಕರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಕಮಲ ಪಾಳಯದಲ್ಲಿ ಭುಗಿಲೆದ್ದ ಆಂತರಿಕ ಕಲಹ; ಸ್ವಪಕ್ಷೀಯರಿಂದಲೇ BJP ಶಾಸಕನ ಮೇಲೆ ಹಲ್ಲೆ ಆರೋಪ, ತನಿಖೆಗೆ ಪಟ್ಟು!

ಏನಿದು ಕೊಲೆ ಪ್ರಕರಣ?

2022ರ ಸೆಪ್ಟೆಂಬರ್‌ನಲ್ಲಿ ಉತ್ತರಾಖಂಡದ ರಿಷಿಕೇಶದ ವನಂತರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿ ಕೊಲೆಯಾಗಿದ್ದರು. ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರು ಈ ಪ್ರಕರಣದ ಆರೋಪಿಗಳಾಗಿದ್ದು, ನ್ಯಾಯಾಲಯವು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಪುಲ್ಕಿತ್ ಆರ್ಯ ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ.

ಅಂಕಿತಾ ಮೇಲೆ ವಿಐಪಿ ಅತಿಥಿಗಳಿಗೆ ವಿಶೇಷ ಸೇವೆ ನೀಡುವಂತೆ ಒತ್ತಡ ಹೇರಲಾಗಿತ್ತು ಎಂಬ ಆರೋಪ ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ಆಯಾಮ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಪಾತ್ರವಿದೆಯೇ ಎಂಬ ಪ್ರಶ್ನೆ ಎದ್ದಿತ್ತು.

ಬಿಜೆಪಿ ನಾಯಕ ದುಷ್ಯಂತ್ ಗೌತಮ್ ಕೈವಾಡ?

ಪ್ರಕರಣದ ವಿಐಪಿ ಆಯಾಮದ ಚರ್ಚೆಯಲ್ಲಿ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರ ಹೆಸರು ಪ್ರಸ್ತಾಪವಾಗಿದೆ. ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿದ ಬಳಿಕ ಅಂಕಿತಾ ಪೋಷಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಆದರೆ ಗೌತಮ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಸಂಬಂಧ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ.

ಇನ್ನು ಪ್ರಕರಣದ ವಿಐಪಿ ಆಯಾಮದ ತನಿಖೆಗಾಗಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಆಯಾಮದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂಬುದು ಅಂಕಿತಾ ಪೋಷಕರ ಒತ್ತಾಯವಾಗಿದೆ. ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದದ್ದಾರೆ.

ಇದನ್ನೂ ನೋಡಿ : 3 ಕೋಟಿ ನುಸುಳುಕೋರರು ಎಲ್ಲಿ? ಅಮಿತ್‌ ಶಾ ಅವರದ್ದೂ ಮತ್ತೊಂದು ಜುಮ್ಲಾನಾ? | ಕೆ.ಎಸ್‌ ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *