ನ.5ರಂದು ಬೆಂಗಳೂರಿನಲ್ಲಿ ಇಂಡಿಯಾ ಒಕ್ಕೂಟದ ಬೃಹತ್ ಪ್ರತಿಭಟನೆ: ಎಸ್‌ಐಆರ್ ರದ್ದು, ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಪಡಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಲಿವೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಮೈತ್ರಿಪಕ್ಷಗಳ ನಾಯಕರ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಈ ವಿಷಯ ತಿಳಿಸಿದರು. ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟ ನಡೆಸಿದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಈ ಬೃಹತ್ ಸಭೆ ಆಯೋಜಿಸಲಾಗಿದೆ ಎಂದರು.

ದೇಶದಾದ್ಯಂತ ತಾಲ್ಲೂಕು ಮತ್ತು ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ತೀರ್ಮಾನಿಸಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಮೊದಲು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟಕ್ಕೆ ಹೋರಾಟವನ್ನು ವಿಸ್ತರಿಸಲು ಮೈತ್ರಿಕೂಟದ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ ಎಂದು ಹರಿಪ್ರಸಾದ್ ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ. ರಾಜ್ಯಮಟ್ಟದ ಪ್ರತಿಭಟನೆಯ ಬಳಿಕ ಜಿಲ್ಲೆ, ತಾಲ್ಲೂಕು ಮತ್ತು ಬ್ಲಾಕ್ ಮಟ್ಟದಲ್ಲೂ ಜನರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ನಾಯಕರ ವಿರುದ್ಧ ಇ.ಡಿ., ಆದಾಯ ತೆರಿಗೆ ಇಲಾಖೆ ಬಳಕೆಗೆ ಕೇಂದ್ರ ಸಚಿವರ ಒತ್ತಡ: ಪ್ರಿಯಾಂಕ್ ಖರ್ಗೆ ಆರೋಪ

ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಪ್ರಜಾಸತ್ತಾತ್ಮಕವಾಗಲಿ: ಕೆ. ಪ್ರಕಾಶ್

ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್ ಮಾತನಾಡಿ, ಎಸ್‌ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕಗೊಳಿಸುವುದು ಮತ್ತು ಸುಪ್ರೀಂ ಕೋರ್ಟ್ ಸೂಚನೆಯಂತೆ ಆಯ್ಕೆ ಪ್ರಕ್ರಿಯೆ ನಡೆಸುವುದು ಮೈತ್ರಿಕೂಟದ ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತರಿಗೆ ಶಾಶ್ವತ ವಿನಾಯಿತಿ ನೀಡಿರುವ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದೂ ನಮ್ಮ ಆಗ್ರಹವಾಗಿದೆ. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 5ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ನಂತರ ರಾಜ್ಯದಾದ್ಯಂತ ಹೋರಾಟವನ್ನು ವಿಕೇಂದ್ರೀಕರಣಗೊಳಿಸಿ ಜನರ ಬಳಿಗೆ ಕೊಂಡೊಯ್ಯಲಾಗುವುದು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಹೋರಾಟವನ್ನು ರಾಜ್ಯದಾದ್ಯಂತ ವಿಸ್ತರಿಸಲು ಇಂಡಿಯಾ ಒಕ್ಕೂಟ ನಿರ್ಧರಿಸಿದ್ದು, ಪ್ರತಿಭಟನೆಯಲ್ಲಿ ಮೈತ್ರಿಕೂಟದ ಎಲ್ಲ ಪಕ್ಷಗಳೂ ಭಾಗವಹಿಸಲಿವೆ ಎಂದು ತಿಳಿಸಿದರು.

ಭಾರತವನ್ನು ಸರ್ವಾಧಿಕಾರಿ ವ್ಯವಸ್ಥೆಯತ್ತ ಕೊಂಡೊಯ್ಯುವ ಮತ್ತು ಕೋಮುವಾದಿ ಹಿಂದುತ್ವ ರಾಷ್ಟ್ರ ನಿರ್ಮಿಸುವ ಬಿಜೆಪಿ ಪ್ರಯತ್ನಗಳಿಗೆ ದೇಶದಲ್ಲಿ ಅವಕಾಶವಿಲ್ಲ ಎಂಬ ಸಂದೇಶವನ್ನು ಈ ಹೋರಾಟದ ಮೂಲಕ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರಕಾಶ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್, ಫಾರ್ವರ್ಡ್ ಬ್ಲಾಕ್‌ನ ಶಿವಶಂಕರ್, ಅಲಿ, ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ’ರೊಜಾರಿಯೋ, ಸಿಪಿಐಎಂ ಮುಖಂಡ ಕೆ. ಮಹಾಂತೇಶ್ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಸೌಜನ್ಯ ಪ್ರಕರಣ | ಹೊಸ ಎಸ್‌ಐಟಿ ಮೇಲೆ ನಂಬಿಕೆಯಿಲ್ಲ! ನವೀನ್ ಸೂರಿಂಜೆ ಹೀಗೆ ಹೇಳಿದ್ದು ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *