ಹೆಣ್ಣು ಭೋಗದ ವಸ್ತುವಲ್ಲ, ಸ್ತ್ರೀ ಶೋಷಣೆ ಕೊನೆಗೊಳ್ಳಲಿ: ಸಂಕಮ್ಮ ಸಂಕಣ್ಣನವರ

ಹಾವೇರಿಯಲ್ಲಿ ಜನವಾದಿ ಮಹಿಳಾ ಸಂಘಟನೆ ಸಭೆ; ‘ಸೌಜನ್ಯ ತೀರ್ಪು’ ಪುಸ್ತಕ ಬಿಡುಗಡೆ
ಹಾವೇರಿ: ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ತಾರತಮ್ಯ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಕೊನೆಗೊಳಿಸಿ, ಮಹಿಳೆಯರಿಗೆ ಘನತೆಯ ಬದುಕು, ಸಮಾನ ಅವಕಾಶ ಹಾಗೂ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸುವುದು ಸರಕಾರ ಮತ್ತು ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.

ನಗರದ ಮಹಿಳಾ ಸಾಂತ್ವನ ಕೇಂದ್ರದ ಸಭಾಂಗಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಹಾಗೂ ಇಡಾರಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಹಿರಿಯ ಪತ್ರಕರ್ತ ನವೀನ ಸೂರಿಂಜೆ ಕನ್ನಡಕ್ಕೆ ಅನುವಾದಿಸಿರುವ ‘ಸೌಜನ್ಯ ತೀರ್ಪು’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬೆಳ್ತಂಗಡಿ ತಾಲೂಕಿನ ಪಾಂಗಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ 14 ವರ್ಷ ಕಳೆದರೂ, ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ವ್ಯವಸ್ಥೆ ವಿಫಲವಾಗಿದೆ. ಇಂತಹ ಘಟನೆಗಳು ಹೆಣ್ಣುಮಕ್ಕಳಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಯಾವ ಭಾವನೆ ಮೂಡಿಸಬಹುದು ಎಂದು ಅವರು ಪ್ರಶ್ನಿಸಿದರು.

ಮಹಿಳೆಯರು ಸಮಾಜದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಕುಟುಂಬ, ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ. ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ವೇತನ ತಾರತಮ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಪಿತೃಪ್ರಧಾನ ಮನೋಭಾವಗಳು ಅವರ ಘನತೆ ಮತ್ತು ಸ್ವಾವಲಂಬನೆಗೆ ಅಡ್ಡಿಯಾಗಿವೆ ಎಂದು ಹೇಳಿದರು. ಹೆಣ್ಣು

ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲು ಐಕ್ಯ ಹೋರಾಟ ಅಗತ್ಯ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಸೌಜನ್ಯ ಸೇರಿದಂತೆ ಆ ಪ್ರದೇಶದಲ್ಲಿ ಅಸಹಜವಾಗಿ ಸಾವಿಗೀಡಾದ ಪದ್ಮಲತಾ, ವೇದವಲ್ಲಿ ಹಾಗೂ ಆನೆ ಮಾವುತ ನಾರಾಯಣ ಅವರ ಸಾವಿನ ಪ್ರಕರಣಗಳಲ್ಲಿಯೂ ನ್ಯಾಯಕ್ಕಾಗಿ ಹೋರಾಟಗಳು ನಡೆದಿವೆ. ಈ ಕುಟುಂಬಗಳು ನ್ಯಾಯದಿಂದ ವಂಚಿತವಾಗಿವೆ ಎಂಬ ಆತಂಕವಿದೆ. ಜೆಎಂಎಸ್, ಡಿವೈಎಫ್‌ಐ, ಎಸ್‌ಎಫ್‌ಐ ಸೇರಿದಂತೆ ಜನಪರ ಸಂಘಟನೆಗಳು ಹಾಗೂ ಹಲವು ವ್ಯಕ್ತಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರು.

ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವುದು ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಟುಂಬಕ್ಕೆ ಹಾಗೂ ಹೋರಾಟಗಾರರಿಗೆ ಭರವಸೆ ಮೂಡಿಸಿದೆ. ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಲು ಮತ್ತೊಮ್ಮೆ ಐಕ್ಯ ಆಂದೋಲನ ನಡೆಸುವ ಅಗತ್ಯವಿದೆ ಎಂದು ಹೇಳಿದರು. ಹೆಣ್ಣು

ಇದನ್ನೂ ಓದಿ: ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!

ಪುರುಷ ಪ್ರಧಾನ ಮನೋಭಾವ ಬದಲಾಗಬೇಕು

ಡಿವೈಎಫ್‌ಐ ಕೇಂದ್ರ ಸಮಿತಿ ಸದಸ್ಯ ಬಸವರಾಜ ಪೂಜಾರ ಮಾತನಾಡಿ, ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲಿನ ಶೋಷಣೆ ಹಾಗೂ ದೌರ್ಜನ್ಯಗಳು ಮುಂದುವರಿದಿರುವುದು ಆತಂಕಕಾರಿ. ಮಹಿಳೆಯರ ರಕ್ಷಣೆಗೆ ಹಲವು ಕಾನೂನುಗಳಿದ್ದರೂ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಮನೋಭಾವವನ್ನು ಬದಲಾಯಿಸದೆ ಮಹಿಳೆಯರಿಗೆ ಸಮಾನತೆ ದೊರೆಯಲು ಸಾಧ್ಯವಿಲ್ಲ. ಲಿಂಗ ತಾರತಮ್ಯ ಮತ್ತು ಶೋಷಣೆಯ ವಿರುದ್ಧ ಜನವಾದಿ ಮಹಿಳಾ ಸಂಘಟನೆಯ ಚಳವಳಿ ಬಲಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಮಳ ಜೈನ್ ಮಾತನಾಡಿ, ಮಹಿಳೆಯರನ್ನು ಗೌರವದ ಹೆಸರಿನಲ್ಲಿ ಕೆಲವು ಮಿತಿಗಳಿಗೆ ಸೀಮಿತಗೊಳಿಸುವುದಕ್ಕಿಂತ ಅವರ ಸ್ವಾತಂತ್ರ್ಯ, ಸ್ವಾಭಿಮಾನ, ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮತ್ತು ವ್ಯಕ್ತಿತ್ವವನ್ನು ಗೌರವಿಸುವುದು ಮುಖ್ಯ. ಮಹಿಳೆಯರ ಮೇಲಿನ ಶೋಷಣೆಗೆ ಕಾರಣವಾಗಿರುವ ಸಾಮಾಜಿಕ ಮನೋಭಾವ ಬದಲಾಗಬೇಕು. ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಂತ್ರಸ್ತರಿಗೆ ತ್ವರಿತ ನ್ಯಾಯ ದೊರಕಿಸುವ ವ್ಯವಸ್ಥೆ ಬಲಗೊಳ್ಳಬೇಕು ಎಂದು ಹೇಳಿದರು. ಹೆಣ್ಣು

ಜೆಎಂಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಇದೇ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಎಫ್‌ಐ-ಡಿವೈಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್., ಶಿಲ್ಪಕಲಾವಿದ ಹರೀಶ್ ಮಾಳಪ್ಪನವರ, ವಕೀಲರಾದ ಬೀರಪ್ಪ ಗುಬ್ಬೇರ ಮತ್ತು ಶಿವನಗೌಡ ಪಾಟೀಲ, ಸಹಮತ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀಪ್ರಭ ಹುಲ್ಲೂರು ಉಪಸ್ಥಿತರಿದ್ದರು. ಡಿವೈಎಫ್‌ಐ ಜಿಲ್ಲಾ ಖಜಾಂಚಿ ರೇಣುಕಾ ಕಹಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಹಾಗೂ ಡಿವೈಎಫ್‌ಐ ಜಿಲ್ಲಾ ಮುಖಂಡ ತಸ್ಲೀಮ್ ಕೆ.ಸಿ. ಕಾರ್ಯಕ್ರಮ ನಿರ್ವಹಿಸಿದರು.

ಡಿಎಚ್‌ಎಸ್ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರ, ಅಲೆಮಾರಿ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ನಾಯಕ ವಿಭೂತಿ, ಬಿಜಿವಿಎಸ್ ರಾಜ್ಯ ಮುಖಂಡೆ ರೇಣುಕಾ ಗುಡಿಮನಿ, ಅತಿಥಿ ಉಪನ್ಯಾಸಕಿ ನಂದಿನಿ ಮಾಳದಕರ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ಶಾಂತಕ್ಕ ಗಡ್ಡಿಯವರ, ಸಹಮತ ಸಂಸ್ಥೆಯ ಸದಸ್ಯೆ ಸವಿತಾ ಗುಬ್ಬೇರ ಸೇರಿದಂತೆ ಹಲವು ಮಹಿಳೆಯರು ಮತ್ತು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಹೆಣ್ಣು

ಇದನ್ನೂ ನೋಡಿ : ಎಸ್‌ಐಆರ್‌ | ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ! ಹೇಗೆ ಪರಿಶೀಲಿಸಬೇಕು? ಈ ವಿಡಿಯೋ ನೋಡಿ

Donate Janashakthi Media

Leave a Reply

Your email address will not be published. Required fields are marked *