ಬೆಂಗಳೂರು : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಬೆನ್ನಲ್ಲೇ, ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥ ಐಜಿಪಿ ಎನ್. ಶಶಿಕುಮಾರ್ ಅವರು ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಪ್ರಕರಣದ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ.
ಸೌಜನ್ಯ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕ ರಾಜ್ಯ ಸರಕಾರ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಹೊಸ ಎಸ್ಐಟಿ ರಚಿಸಿತ್ತು. ಈ ತಂಡಕ್ಕೆ ಐಜಿಪಿ ಎನ್. ಶಶಿಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ, ಎಸ್ಐಟಿ ಮುಖ್ಯಸ್ಥರ ನೇಮಕದ ವಿಚಾರವಾಗಿ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಶಶಿಕುಮಾರ್ ಅವರು ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿರುವುದು ಪ್ರಕರಣದ ತನಿಖೆಯ ನಡುವೆ ಹೊಸ ಬೆಳವಣಿಗೆಯಾಗಿದೆ.
2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ತನಿಖೆಯ ವಿವಿಧ ಹಂತಗಳನ್ನು ಪರಿಶೀಲಿಸುತ್ತಿರುವ ಎಸ್ಐಟಿ, ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಮುಂದುವರಿಸಿದೆ.
ತನಿಖೆ ಆರಂಭಿಸಿದ ಎಸ್ಐಟಿ, ಹಿಂದಿನ ತನಿಖೆಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಒದಗಿಸುವಂತೆ ಸಿಐಡಿ ಹಾಗೂ ಸಿಬಿಐಗೆ ಪತ್ರ ಬರೆದಿತ್ತು. ಪ್ರಕರಣದ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ್ದ ಅಧಿಕಾರಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇದೀಗ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಬೆಳ್ತಂಗಡಿ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಭಾಸ್ಕರ್ ರೈ, ಪಿಎಸ್ಐ ಯೋಗೇಶ್ ಮತ್ತು ಸಿಐಡಿಯ ಅಂದಿನ ಡಿವೈಎಸ್ಪಿ ರುದ್ರಮುನಿ ಸೇರಿದಂತೆ ಅಧಿಕಾರಿಗಳು ಎಸ್ಐಟಿ ಮುಂದೆ ಹಾಜರಾಗಿದ್ದಾರೆ. ಹಿಂದಿನ ತನಿಖೆಯ ಪ್ರಕ್ರಿಯೆ, ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಪ್ರಕರಣದ ವಿವಿಧ ಹಂತಗಳ ಕುರಿತು ಅವರಿಂದ ಮಾಹಿತಿ ಪಡೆಯಲಾಗುತ್ತಿದೆ.
ಇದನ್ನೂ ಓದಿ : ಎಸ್ಐಆರ್ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರಕಾರ ಒಪ್ಪಬಾರದು: ನೂರ್ ಶ್ರೀಧರ್
2012ರಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾಗಿದ್ದರು. ಮರುದಿನ ಮಾನಸಂಕದ ಸಮೀಪದ ಪೊದೆ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆಯ ಅಂಶಗಳು ಬೆಳಕಿಗೆ ಬಂದಿದ್ದವು.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ನಡೆಸಿದ್ದರು. ಬಳಿಕ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿ ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, ಸೌಜನ್ಯ ಕುಟುಂಬ ಈ ತನಿಖೆಯ ಬಗ್ಗೆ ಆರಂಭದಿಂದಲೇ ಆಕ್ಷೇಪ ವ್ಯಕ್ತಪಡಿಸಿತ್ತು. ನೈಜ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಕುಟುಂಬ ಆರೋಪಿಸಿತ್ತು. ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಹೋರಾಟ ನಡೆಸಿದ್ದರು.
ಸಿಐಡಿ, ಸಿಬಿಐ ತನಿಖೆಯೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿಫಲ
ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ವಹಿಸಲಾಗಿತ್ತು. ಬಳಿಕ 2013ರಲ್ಲಿ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಯಿತು. ಸಿಬಿಐ ಕೂಡ ಸಂತೋಷ್ ರಾವ್ನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಿ ಆರೋಪಪಟ್ಟಿ ಸಲ್ಲಿಸಿತ್ತು.
ಆದರೆ, ಸುದೀರ್ಘ ವಿಚಾರಣೆಯ ಬಳಿಕ 2023ರ ಜೂನ್ 16ರಂದು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಸಂತೋಷ್ ರಾವ್ನನ್ನು ಖುಲಾಸೆಗೊಳಿಸಿತು. ಆರೋಪ ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ತನಿಖೆಯಲ್ಲಿನ ಲೋಪಗಳ ಬಗ್ಗೆಯೂ ನ್ಯಾಯಾಲಯ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.
ವೈದ್ಯಕೀಯ ಪರೀಕ್ಷೆಯ ವೇಳೆ ಅಗತ್ಯವಾದ ಕೆಲವು ಮಾದರಿಗಳನ್ನು ಸರಿಯಾಗಿ ಸಂಗ್ರಹಿಸದಿರುವುದು, ವಿಧಿವಿಜ್ಞಾನ ಪರೀಕ್ಷೆಗೆ ಸಂಬಂಧಿಸಿದ ಲೋಪಗಳು ಮತ್ತು ಸಾಕ್ಷ್ಯಗಳ ನಿರ್ವಹಣೆಯಲ್ಲಿನ ಸಮಸ್ಯೆಗಳು ತನಿಖೆಗೆ ಹಿನ್ನಡೆಯಾಗಿದ್ದವು. ಹೀಗಾಗಿ, ಸಂತೋಷ್ ರಾವ್ ಖುಲಾಸೆಯಾದರೂ ಸೌಜನ್ಯ ಪ್ರಕರಣದಲ್ಲಿ ನೈಜ ಆರೋಪಿಗಳು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ.
ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಸಂತೋಷ್ ರಾವ್ ಖುಲಾಸೆಯಾದ ಬಳಿಕ ಸೌಜನ್ಯ ತಾಯಿ ಕುಸುಮಾವತಿ ಅವರು ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಕಾನೂನು ಹೋರಾಟ ಮುಂದುವರಿಸಿದರು. 2024ರಲ್ಲಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರೂ ಮರುತನಿಖೆಗೆ ಅನುಮತಿ ದೊರೆಯಲಿಲ್ಲ. ಬಳಿಕ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
2026ರ ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಪ್ರಕರಣದ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿತು. ಹಿಂದಿನ ತನಿಖೆಯಲ್ಲಿ ಸಂಗ್ರಹವಾಗಿದ್ದ ಸಾಕ್ಷ್ಯಗಳು, ಬಾಕಿ ಉಳಿದಿರುವ ಸುಳಿವುಗಳು ಮತ್ತು ಸಂಭಾವ್ಯ ಸಾಕ್ಷಿಗಳ ಮಾಹಿತಿಯನ್ನು ಪರಿಶೀಲಿಸುವ ಅಗತ್ಯವನ್ನು ನ್ಯಾಯಾಲಯ ಪರಿಗಣಿಸಿತು. ಹೊಸ ಎಸ್ಐಟಿ ರಚಿಸಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿತು.
ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಬೆಳ್ತಂಗಡಿ ಪೊಲೀಸರು, ಸಿಐಡಿ ಮತ್ತು ಸಿಬಿಐ ಅಧಿಕಾರಿಗಳನ್ನು ಹೊಸ ಎಸ್ಐಟಿಯಲ್ಲಿ ಸೇರಿಸಬಾರದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಸಂತೋಷ್ ರಾವ್ ಈಗಾಗಲೇ ಖುಲಾಸೆಯಾಗಿರುವುದರಿಂದ ಆತನ ವಿರುದ್ಧ ಮತ್ತೆ ತನಿಖೆ ಅಥವಾ ವಿಚಾರಣೆ ನಡೆಸಬಾರದು ಎಂದೂ ಆದೇಶದಲ್ಲಿ ತಿಳಿಸಿತ್ತು.
ಇದನ್ನೂ ನೋಡಿ : ಎಸ್ಐಆರ್ | ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ! ಹೇಗೆ ಪರಿಶೀಲಿಸಬೇಕು? ಈ ವಿಡಿಯೋ ನೋಡಿ
