ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರಕಾರ ಒಪ್ಪಬಾರದು: ನೂರ್ ಶ್ರೀಧರ್

ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಸಿದ್ಧಪಡಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರಕಾರ ಒಪ್ಪಬಾರದು. ಪಟ್ಟಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಸಾಮಾಜಿಕ ಲೆಕ್ಕಪರಿಶೋಧನೆ, ಸಾರ್ವಜನಿಕ ವಿಚಾರಣೆ ಹಾಗೂ ಸಾರ್ವಜನಿಕ ಪರಿಶೀಲನೆ ನಡೆಸಬೇಕು ಎಂದು ಎಸ್‌ಐಆರ್ ವಿರೋಧಿ ಒಕ್ಕೂಟದ ಮುಖಂಡ ನೂರ್ ಶ್ರೀಧರ್ ಆಗ್ರಹಿಸಿದ್ದಾರೆ. ಎಸ್‌ಐಆರ್ 

ನಗರದ ಶಾಸಕರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪಗಳು, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ ಆರೋಪಗಳು ಮತ್ತು ಮತದಾನದ ಹಕ್ಕಿನ ಮೇಲಿನ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಚುನಾವಣಾ ಆಯೋಗ ಪ್ರಕಟಿಸಿರುವ ಪಟ್ಟಿಯನ್ನು ಅಂತಿಮವೆಂದು ಪರಿಗಣಿಸುವ ಬದಲು, ಜನರ ಪಾಲ್ಗೊಳ್ಳುವಿಕೆಯೊಂದಿಗೆ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆಗಳು, ಕಾರಣಗಳು ಮತ್ತು ಪರಿಷ್ಕರಣೆಯ ವಿಧಾನವನ್ನು ಬಹಿರಂಗಪಡಿಸಬೇಕು. ಸಾಮಾಜಿಕ ಲೆಕ್ಕಪರಿಶೋಧನೆಯ ಮೂಲಕ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಗುರುತಿಸಬೇಕು. ಸಾರ್ವಜನಿಕ ವಿಚಾರಣೆ ನಡೆಸಿ, ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರಿಂದ ತೊಂದರೆಗೊಳಗಾದ ಮತದಾರರ ಅಹವಾಲುಗಳನ್ನು ಆಲಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಎಸ್‌ಐಆರ್ ಮೂಲಕ ಸಿದ್ಧಪಡಿಸಿರುವ ಹೊಸ ಪಟ್ಟಿಯ ಬದಲಿಗೆ ಹಿಂದಿನ ಮತದಾರರ ಪಟ್ಟಿಯನ್ನೇ ಬಳಸಬೇಕು ಎಂಬುದು ನೂರ್ ಶ್ರೀಧರ್ ಅವರ ಪ್ರಮುಖ ಬೇಡಿಕೆಯಾಗಿದೆ.

ಎಸ್‌ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯಲ್ಲಿನ ಲೋಪಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮತದಾರರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸಲು ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್ ವಿರುದ್ಧದ ಹೋರಾಟವನ್ನು ವಿಸ್ತರಿಸುವ ಭಾಗವಾಗಿ ನವೆಂಬರ್ 1ರಂದು ಇಂಡಿಯಾ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಇದರೊಂದಿಗೆ, ಪೀಪಲ್ ಅಗೆನೆಸ್ಟ್ ಎಸ್‌ಐಆರ್ ಮಹಾಒಕ್ಕೂಟದ ವತಿಯಿಂದ ನವೆಂಬರ್ 26ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನದ ಅವಧಿಯಲ್ಲಿ ಹೋರಾಟವನ್ನು ಮುಂದುವರಿಸಲು ಯೋಜಿಸಲಾಗಿದೆ ಎಂದು ನೂರ್ ಶ್ರೀಧರ್ ತಿಳಿಸಿದರು. ಎಸ್‌ಐಆರ್ 

ಇದನ್ನೂ ಓದಿ : ಮತದಾನದ ಹಕ್ಕು ಕಸಿಯಲು ಎಸ್‌ಐಆರ್‌ ಸಂಚು: ಮೋದಿ, ಅಮಿತ್ ಶಾ, ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಆರೋಪ

ನೂರಾರು ಕೋಟಿ ಖರ್ಚು ಮಾಡಿ ಸಾಧಿಸಿದ್ದೇನು?

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ನಡೆಸಿದ ಎಸ್‌ಐಆರ್ ಪ್ರಕ್ರಿಯೆಯಿಂದ ಸಾಧಿಸಿದ್ದೇನು ಎಂದು ಪ್ರಶ್ನಿಸಿದರು. “ಚುನಾವಣಾ ಆಯೋಗ ಬೆಟ್ಟ ಅಗೆದು ಇಲಿ ಹಿಡಿದಿದೆ” ಎಂದು ಟೀಕಿಸಿದ ಅವರು, ಹೊಸ ಮತದಾರರನ್ನು ಸಮರ್ಪಕವಾಗಿ ಪಟ್ಟಿಗೆ ಸೇರಿಸಿಲ್ಲ. ಅಕ್ರಮ ಮತದಾರರನ್ನು ಪತ್ತೆಹಚ್ಚುವಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಆರೋಪಿಸಿದರು.

ಅಕ್ರಮ ವಲಸಿಗರನ್ನು ಪತ್ತೆಹಚ್ಚುವುದಾಗಿ ಹೇಳಿಕೊಂಡು ಆರಂಭಿಸಿದ ಪ್ರಕ್ರಿಯೆ, ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಕಸರತ್ತಾಗಿ ಪರಿಣಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೊಂದು ಹಣ ಖರ್ಚು ಮಾಡಿ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದ ಉದ್ದೇಶವೇನು ಎಂಬುದಕ್ಕೆ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ನೂರಾರು ಕೋಟಿ ರೂಪಾಯಿ ತೆರಿಗೆ ಹಣವನ್ನು ಖರ್ಚು ಮಾಡಿ ಸಿದ್ಧಪಡಿಸಿರುವ ಹೊಸ ಮತದಾರರ ಪಟ್ಟಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಕಾಣುತ್ತಿಲ್ಲ ಎಂದು ಟೀಕಿಸಿದರು. ಅಕ್ರಮ ವಲಸಿಗರನ್ನು ಪತ್ತೆಹಚ್ಚುವುದೂ ಸಾಧ್ಯವಾಗಿಲ್ಲ, ಅರ್ಹ ಹೊಸ ಮತದಾರರನ್ನು ಸಮರ್ಪಕವಾಗಿ ಸೇರಿಸುವುದೂ ಆಗಿಲ್ಲ. ಬದಲಿಗೆ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ನಡೆದಿರುವುದು ಆತಂಕಕಾರಿ ಎಂದು ಹೇಳಿದರು.

ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಬಗ್ಗೆ ಪ್ರಶ್ನೆ

ವಿ. ನಾಗರಾಜ್ ಮಾತನಾಡಿ, ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದರು. ಪ್ರಧಾನಮಂತ್ರಿ ಮತ್ತು ಗೃಹಮಂತ್ರಿಗಳು ಸೇರಿ ನೇಮಿಸಿರುವ ಆಯೋಗವು ಸರಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದ ಅವರು, ಎಸ್‌ಐಆರ್ ಒಂದು ಯೋಜಿತ ಷಡ್ಯಂತ್ರ ಎಂದು ಟೀಕಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವುದಾಗಿರಬೇಕು. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಜೆ.ಎಂ. ವೀರಸಂಗಯ್ಯ, ಜೆಸಿಟಿಯುನ ಕೆ.ವಿ. ಭಟ್, ಎದ್ದೇಳು ಕರ್ನಾಟಕದ ಇಂದಿರಮ್ಮ ಮತ್ತು ಇಸಾಬೆಲ್, ಕೆಎಂಆರ್‌ವಿ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ, ಹೋರಾಟಗಾರರಾದ ಡಾ. ಪೂರ್ಣಾನಂದ, ಕೆ.ಎಲ್. ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಎಸ್‌ಐಆರ್‌ | ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ! ಹೇಗೆ ಪರಿಶೀಲಿಸಬೇಕು? ಈ ವಿಡಿಯೋ ನೋಡಿ

Donate Janashakthi Media

Leave a Reply

Your email address will not be published. Required fields are marked *