ಬೆಂಗಳೂರು: 2026ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಲು ಕರ್ನಾಟಕ ಸರ್ಕಾರ ಎರಡು ಪ್ರಮುಖ ಸಮಿತಿಗಳನ್ನು ರಚಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಆಯ್ಕೆ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ರಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ. ಎರಡೂ ಸಮಿತಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ರಚನೆಯಾಗಿವೆ. ಕನ್ನಡ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿರುವ ಉನ್ನತ ಮಟ್ಟದ ಆಯ್ಕೆ ಸಮಿತಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಜಿ. ಪರಮೇಶ್ವರ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಎಲ್ಲ ಸದಸ್ಯರೂ ಈ ಸಮಿತಿಯ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಲಹಾ ಸಮಿತಿ
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಅಧ್ಯಕ್ಷತೆಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯಲ್ಲಿ ಸಾಹಿತ್ಯ, ಸಮಾಜಸೇವೆ, ಜಾನಪದ, ಕ್ರೀಡೆ, ಮಾಧ್ಯಮ, ರಂಗಭೂಮಿ, ಲಲಿತಕಲೆ, ಕಿರುತೆರೆ ಮತ್ತು ಚಲನಚಿತ್ರ, ನೃತ್ಯ, ಗಡಿನಾಡು ಕನ್ನಡಿಗರು, ನ್ಯಾಯಾಂಗ, ಸಂಗೀತ, ಕೃಷಿ-ಪರಿಸರ, ವೈದ್ಯಕೀಯ, ಆಡಳಿತ, ಸಹಕಾರ, ವಿಜ್ಞಾನ-ತಂತ್ರಜ್ಞಾನ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ನೇಮಿಸಲಾಗಿದೆ.
ಸಮಿತಿಯಲ್ಲಿ ಸಮಾಜಸೇವೆ ಕ್ಷೇತ್ರದಿಂದ ಪ್ರೊ. ಜಿ.ಎಸ್. ಜಯದೇವ್, ಶೈಲಜಾ ಹಿರೇಮಠ್, ಸಾಹಿತ್ಯ ಕ್ಷೇತ್ರದಿಂದ ಡಾ. ವೈ.ಬಿ. ಹಿಮ್ಮಡಿ, ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಮತ್ತು ಪ್ರೊ. ರಂಗಸ್ವಾಮಿ ಎಂ.ಜಿ., ಜಾನಪದ ಕ್ಷೇತ್ರದಿಂದ ಸಿ.ಎಂ. ನರಸಿಂಹಮೂರ್ತಿ ಹಾಗೂ ಶರಣಪ್ಪ ವಡಗೇರಿ, ಕ್ರೀಡಾ ಕ್ಷೇತ್ರದಿಂದ ಅಶ್ವಿನಿ ನಾಚಪ್ಪ, ಮಾಧ್ಯಮ ಕ್ಷೇತ್ರದಿಂದ ಸತೀಶ್, ರವೀಂದ್ರ ಭಟ್ ಮತ್ತು ಗುರುಮೂರ್ತಿ ಅವರನ್ನು ಸೇರಿಸಲಾಗಿದೆ. ಕನ್ನಡ
ಇದನ್ನೂ ಓದಿ : ಎಸ್‌ಐಆರ್ ರದ್ದು, ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ರಂಗಭೂಮಿ ಕ್ಷೇತ್ರದಿಂದ ಡಾ. ನಾಗೇಶ್ ಬೆಟ್ಟಕೋಟೆ ಮತ್ತು ಜೀವರ್ಗಿ ರಾಜಣ್ಣ, ಲಲಿತಕಲೆಯಿಂದ ಪ್ರೊ. ಪಾಂಚಾಲ್, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದಿಂದ ವೈಜನಾಥ್ ಪಾಟೀಲ್, ನೃತ್ಯ ಕ್ಷೇತ್ರದಿಂದ ವಸುಂಧರಾ ದೊರೆಸ್ವಾಮಿ, ಗಡಿನಾಡು ಕನ್ನಡಿಗರ ಪ್ರತಿನಿಧಿಯಾಗಿ ಕಾಸರಗೋಡು ಚಿನ್ನಾ, ನ್ಯಾಯಾಂಗ ಕ್ಷೇತ್ರದಿಂದ ಅಹಮ್ಮದ್, ಸಂಗೀತ ಕ್ಷೇತ್ರದಿಂದ ದೇವೇಂದ್ರಕುಮಾರ್ ಪತ್ತಾರ್ ಅವರನ್ನು ಸಮಿತಿಗೆ ನೇಮಿಸಲಾಗಿದೆ.
ಇದರ ಜತೆಗೆ ಕೃಷಿ-ಪರಿಸರ ಕ್ಷೇತ್ರದಿಂದ ಶಿವನಾಪುರ ರಮೇಶ್, ಸಮಾಜಸೇವೆಯಿಂದ ಸುಬ್ಬರಾಜು, ವೈದ್ಯಕೀಯ ಕ್ಷೇತ್ರದಿಂದ ಡಾ. ರುದ್ರಪ್ರಸಾದ್ ಮತ್ತು ಡಾ. ಯೂಸುಫ್ ಕುಂಬ್ಳೆ, ಆಡಳಿತ ಕ್ಷೇತ್ರದಿಂದ ಕೆ. ಅಮರ ನಾರಾಯಣ, ಸಹಕಾರ ಕ್ಷೇತ್ರದಿಂದ ಶೇಖರಗೌಡ ಮಾಲಿ ಪಾಟೀಲ್, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಿಂದ ಚೇತನ್ ಕುಮಾರ್ ಜಿರಾಳೆ ಹಾಗೂ ಶಿಕ್ಷಣ ಕ್ಷೇತ್ರದಿಂದ ಸಿ.ಎಸ್. ಕುಂದಗೋಳ ಅವರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿದ್ದಾರೆ.
ಸಾಧಕರ ಆಯ್ಕೆ ಪ್ರಕ್ರಿಯೆಗೆ ಸಮಿತಿಗಳ ಜವಾಬ್ದಾರಿ
ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅರ್ಹ ಸಾಧಕರನ್ನು ಗುರುತಿಸಿ, ಅವರ ಸಾಧನೆ ಮತ್ತು ಕೊಡುಗೆಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಶಿಫಾರಸು ಮಾಡುವುದು ಈ ಸಮಿತಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಸಲಹಾ ಸಮಿತಿಯ ಶಿಫಾರಸುಗಳನ್ನು ಉನ್ನತ ಮಟ್ಟದ ಆಯ್ಕೆ ಸಮಿತಿ ಪರಿಶೀಲಿಸಿ ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ 71 ಚಿನ್ನದ ಪದಕಗಳನ್ನು ತಯಾರಿಸಲು ಸರ್ಕಾರ ಈಗಾಗಲೇ ಟೆಂಡರ್ ಪ್ರಕ್ರಿಯೆ ಕೈಗೊಂಡಿರುವುದು ಕೂಡ ಗಮನಾರ್ಹವಾಗಿದೆ. ಪ್ರತಿ ಪದಕ 22 ಕ್ಯಾರೆಟ್ ಚಿನ್ನದಿಂದ, 25 ಗ್ರಾಂ ತೂಕದಲ್ಲಿ ತಯಾರಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎರಡು ಹಂತದ ಆಯ್ಕೆ ಸಮಿತಿಗಳನ್ನು ರಚಿಸಿರುವುದರಿಂದ 2026ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರ ಆಯ್ಕೆ ಪ್ರಕ್ರಿಯೆ ಅಧಿಕೃತವಾಗಿ ವೇಗ ಪಡೆದುಕೊಂಡಿದೆ.
ಇದನ್ನೂ ನೋಡಿ : LIVE : ಗ್ಯಾನೇಶ್ ಕುಮಾರ್ ವಜಾ, SIR ರದ್ದತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಾಗೂ ರಾಜ್ಯಮಟ್ಟದ SIR ಜನತಾ ನ್ಯಾಯಾಲಯ
