ಮಹಿಳೆಯರಿಗೆ 571 ಸ್ಥಾನ ಮೀಸಲು; ಬೆಳಗಾವಿಯಲ್ಲಿ ಅತಿ ಹೆಚ್ಚು, ಗದಗದಲ್ಲಿ ಅತಿ ಕಡಿಮೆ ಕ್ಷೇತ್ರ
ಬೆಂಗಳೂರು: ಕರ್ನಾಟಕದ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 31 ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳ ವರ್ಗವಾರು ಮೀಸಲಾತಿ ಅಧಿಸೂಚನೆಯನ್ನು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ರಾಜ್ಯದ ಒಟ್ಟು 1,129 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ಈ ಪೈಕಿ 571 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಸೆಕ್ಷನ್ 162ರ ಅಡಿಯಲ್ಲಿ ಮೀಸಲಾತಿ ನಿಗದಿಪಡಿಸಲಾಗಿದೆ. ಈ ಮೂಲಕ ಜಿಲ್ಲಾ ಪಂಚಾಯಿತಿ ಚುನಾವಣೆಯ ಕ್ಷೇತ್ರವಾರು ಮೀಸಲಾತಿಯ ಚಿತ್ರಣ ಸ್ಪಷ್ಟವಾಗಿದ್ದು, ಮುಂದಿನ ಚುನಾವಣಾ ಪ್ರಕ್ರಿಯೆಗೆ ಮಹತ್ವದ ಹಂತ ಪೂರ್ಣಗೊಂಡಿದೆ.
ಯಾವ ವರ್ಗಕ್ಕೆ ಎಷ್ಟು ಸ್ಥಾನ?
ಒಟ್ಟು 1,129 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ (ಎಸ್ಸಿ) 225 ಸ್ಥಾನಗಳನ್ನು ಮೀಸಲಿಡಲಾಗಿದೆ. ಇದರಲ್ಲಿ 121 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) 102 ಸ್ಥಾನಗಳಿದ್ದು, 59 ಸ್ಥಾನಗಳು ಮಹಿಳೆಯರಿಗೆ ಮೀಸಲು. ಹಿಂದುಳಿದ ವರ್ಗ ‘ಅ’ಗೆ 183 ಸ್ಥಾನಗಳಿದ್ದು, 98 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ ‘ಬ’ಗೆ 43 ಸ್ಥಾನಗಳಿದ್ದು, 25 ಸ್ಥಾನಗಳು ಮಹಿಳೆಯರಿಗೆ ಮೀಸಲು ಮಾಡಲಾಗಿದೆ.
ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳಿದ್ದು, ಈ ಪೈಕಿ 268 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಒಟ್ಟಾರೆ ಮಹಿಳೆಯರಿಗೆ ಮೀಸಲಾಗಿರುವ 571 ಸ್ಥಾನಗಳು ಒಟ್ಟು ಸ್ಥಾನಗಳ ಅರ್ಧಕ್ಕಿಂತ ಹೆಚ್ಚಾಗಿವೆ. ಜಿಲ್ಲಾ
ಇದನ್ನೂ ಓದಿ : ಮೇಘಾಲಯದಲ್ಲಿ ಶೇ.60ರಷ್ಟು ಮಳೆ ಕೊರತೆ: ಎಲ್ನಿನೊ ಪರಿಣಾಮದ ಆತಂಕ
ಬೆಳಗಾವಿಯಲ್ಲಿ ಅತಿ ಹೆಚ್ಚು ಕ್ಷೇತ್ರ
ಜಿಲ್ಲಾವಾರು ನೋಡಿದರೆ ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಅತಿ ಹೆಚ್ಚು 90 ಕ್ಷೇತ್ರಗಳಿವೆ. ಈ ಪೈಕಿ 45 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಇನ್ನು ಗದಗ ಜಿಲ್ಲಾ ಪಂಚಾಯಿತಿಯಲ್ಲಿ ಅತಿ ಕಡಿಮೆ 25 ಕ್ಷೇತ್ರಗಳಿದ್ದು, 13 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಬೆಂಗಳೂರು ನಗರದಲ್ಲಿ 28, ಬೆಂಗಳೂರು ಗ್ರಾಮಾಂತರದಲ್ಲಿ 28, ಕೋಲಾರದಲ್ಲಿ 29, ತುಮಕೂರಿನಲ್ಲಿ 57, ಮೈಸೂರಿನಲ್ಲಿ 46, ಉತ್ತರ ಕನ್ನಡದಲ್ಲಿ 53, ಕಲಬುರಗಿಯಲ್ಲಿ 48 ಹಾಗೂ ವಿಜಯಪುರದಲ್ಲಿ 45 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ.
ಚುನಾವಣೆಗೆ ಸಿದ್ಧತೆ
ಜಿಲ್ಲಾ ಪಂಚಾಯಿತಿಗಳ ಸದಸ್ಯರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ನಡೆಯುತ್ತಿತ್ತು. ಜುಲೈನಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ನಡೆಸುವ ಸಾಧ್ಯತೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದರು. ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯ ಮುಂದಿನ ಹಂತಗಳನ್ನು ಕೈಗೊಳ್ಳಲಿದೆ.
ಈ ನಡುವೆ ತಾಲೂಕು ಪಂಚಾಯಿತಿಗಳಿಗೂ ಮೀಸಲಾತಿ ಅಧಿಸೂಚನೆ ಪ್ರಕಟವಾಗಿದ್ದು, ರಾಜ್ಯದ 239 ತಾಲೂಕು ಪಂಚಾಯಿತಿಗಳ ಒಟ್ಟು 3,656 ಸದಸ್ಯ ಸ್ಥಾನಗಳ ಪೈಕಿ 1,905 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಅಧಿಸೂಚನೆಗಳು ಪ್ರಕಟವಾಗಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಚಟುವಟಿಕೆಗಳು ಮುಂದಿನ ಹಂತಕ್ಕೆ ಸಾಗುವ ಸಾಧ್ಯತೆ ಇದೆ. ಜಿಲ್ಲಾ
ಇದನ್ನೂ ನೋಡಿ : LIVE : ಗ್ಯಾನೇಶ್ ಕುಮಾರ್ ವಜಾ, SIR ರದ್ದತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಾಗೂ ರಾಜ್ಯಮಟ್ಟದ SIR ಜನತಾ ನ್ಯಾಯಾಲಯ
