“ಕುಟುಂಬದವರು ಬೇರೆ ಬೇರೆ ಊರಲ್ಲಿದ್ದಾರೆಂದು ವಂಶವೃಕ್ಷ ಪ್ರಮಾಣಪತ್ರ ತಿರಸ್ಕರಿಸುವಂತಿಲ್ಲ: ಹೈಕೋರ್ಟ್”

ಸ್ಥಳೀಯ ವಿಚಾರಣೆಯಲ್ಲಿ ಆಕ್ಷೇಪ ಅಥವಾ ವಿವಾದ ಇಲ್ಲದಿದ್ದರೆ ಪ್ರಮಾಣಪತ್ರ ನೀಡಬೇಕು
ಬೆಂಗಳೂರು: ಕುಟುಂಬದ ಸದಸ್ಯರು ಅಥವಾ ಮೃತ ವ್ಯಕ್ತಿಯ ವಾರಸುದಾರರು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಮಾತ್ರ ವಂಶವೃಕ್ಷ, ಕುಟುಂಬ ವೃಕ್ಷ ಅಥವಾ ವಾರಸುದಾರರ ಪ್ರಮಾಣಪತ್ರ ನೀಡುವ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕುಟುಂಬದವರು

ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಸ್ಥಳೀಯ ಪರಿಶೀಲನೆ ಅಥವಾ ವಿಚಾರಣೆಯಲ್ಲಿ ಯಾವುದೇ ಆಕ್ಷೇಪ, ವಿರೋಧ ಅಥವಾ ವಾರಸುದಾರಿಕೆ ವಿವಾದ ಕಂಡುಬರದಿದ್ದರೆ ಪ್ರಮಾಣಪತ್ರ ನೀಡಲು ನಿರಾಕರಿಸುವುದು ಅಕ್ರಮ ಹಾಗೂ ಅನ್ಯಾಯಕರ ಕ್ರಮವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕುಟುಂಬದವರು

11 ಮಂದಿ ಕುಟುಂಬ ಸದಸ್ಯರ ಪ್ರಮಾಣಪತ್ರಕ್ಕೆ ಅರ್ಜಿ

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಸ್. ಅಭಿನಂದನ್ ಕುಮಾರ್ ಅವರು ತಮ್ಮ ಕುಟುಂಬದ 11 ಸದಸ್ಯರನ್ನು ಒಳಗೊಂಡ ವಂಶವೃಕ್ಷ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕುಟುಂಬದ ಕೆಲವು ಸದಸ್ಯರು ಸಂಬಂಧಪಟ್ಟ ಕಂದಾಯ ವ್ಯಾಪ್ತಿಯಲ್ಲಿ ವಾಸಿಸುತ್ತಿಲ್ಲ ಮತ್ತು ಅವರ ವಿಳಾಸದ ದಾಖಲೆಗಳನ್ನು ನೀಡಿಲ್ಲ ಎಂಬ ಕಾರಣಕ್ಕೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪವಿಭಾಗಾಧಿಕಾರಿ ತಹಶೀಲ್ದಾರ್ 2021ರ ಡಿಸೆಂಬರ್ 27ರಂದು ಅರ್ಜಿಯನ್ನು ತಿರಸ್ಕರಿಸಿದ್ದರು.

ಈ ಆದೇಶವನ್ನು ಸಹಾಯಕ ಆಯುಕ್ತರು ಕೂಡ 2022ರಲ್ಲಿ ಸಕಾಲ ಕಾಯ್ದೆಯಡಿ ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಅಭಿನಂದನ್ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಕುಟುಂಬದವರು

ಮೃತ ವ್ಯಕ್ತಿಯ ಮೂಲ ನಿವಾಸವೂ ಪರಿಗಣನೆಗೆ

ಮೃತ ವ್ಯಕ್ತಿಯ ಕುಟುಂಬದ ಎಲ್ಲ ಸದಸ್ಯರೂ ಒಂದೇ ಸ್ಥಳದಲ್ಲಿ ವಾಸಿಸಬೇಕು ಎಂಬುದು ಪ್ರಮಾಣಪತ್ರ ನೀಡುವ ಕಡ್ಡಾಯ ಮಾನದಂಡವಲ್ಲ ಎಂದು ನ್ಯಾಯಾಲಯ ಹೇಳಿದೆ. ಮೃತ ವ್ಯಕ್ತಿ ನಿಧನರಾಗುವ ಮುನ್ನ ಹೊಂದಿದ್ದ ಶಾಶ್ವತ ನಿವಾಸ ಹಾಗೂ ಸಂಬಂಧಪಟ್ಟ ವ್ಯಾಪ್ತಿಯಲ್ಲಿರುವ ಕುಟುಂಬ ಸದಸ್ಯರ ಮಾಹಿತಿಯನ್ನು ಪರಿಗಣಿಸಿ ಸ್ಥಳೀಯ ವಿಚಾರಣೆ ನಡೆಸಬಹುದು ಎಂದು ತಿಳಿಸಿದೆ.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತಮ್ಮ ವ್ಯಾಪ್ತಿಯ ನಿವಾಸಿಗಳ ಬಗ್ಗೆ ಮಾಹಿತಿ ಹೊಂದಿರುವುದರಿಂದ, ಅರ್ಜಿದಾರರು ನೀಡಿರುವ ವಿವರಗಳನ್ನು ನೆರೆಹೊರೆಯವರು ಮತ್ತು ಸ್ಥಳೀಯ ನಿವಾಸಿಗಳ ಮೂಲಕ ಪರಿಶೀಲಿಸುವುದು ಸಾಮಾನ್ಯ ಸ್ಥಳೀಯ ವಿಚಾರಣೆಯ ಭಾಗವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ದೇಶದಲ್ಲಿ ಮತ್ತೆ ವಿದ್ಯುತ್ ಸಂಕಷ್ಟದ ಭೀತಿ: ಹಲವು ರಾಜ್ಯಗಳು ಕೇಂದ್ರದತ್ತ

ಸರ್ಕಾರದ ಸುತ್ತೋಲೆಗಳು ಮಾರ್ಗಸೂಚಿ ಮಾತ್ರ

ವಂಶವೃಕ್ಷ ಪ್ರಮಾಣಪತ್ರ ನೀಡುವ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಕಡ್ಡಾಯ ನಿರ್ಬಂಧಗಳಂತೆ ಪರಿಗಣಿಸಬಾರದು. ಅವು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅರ್ಜಿದಾರರು ಜುಲೈ 17, 2026ರ ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿರುವ ಅಗತ್ಯ ವಿವರಗಳನ್ನು ಸಲ್ಲಿಸಿದ ನಂತರ, ಸಕಾಲ ಯೋಜನೆಯಡಿ ನಿಗದಿಪಡಿಸಿರುವ ಅವಧಿಯಲ್ಲಿ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ತಹಶೀಲ್ದಾರ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ವಂಶವೃಕ್ಷ ಅಥವಾ ಕುಟುಂಬ ವೃಕ್ಷ ಪ್ರಮಾಣಪತ್ರ ನೀಡುವುದರಿಂದ ಕಾನೂನುಬದ್ಧ ವಾರಸುದಾರಿಕೆಯ ಹಕ್ಕು ಅಂತಿಮವಾಗಿ ನಿರ್ಧಾರವಾದಂತಲ್ಲ ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ. ವಾರಸುದಾರಿಕೆ ಅಥವಾ ಆಸ್ತಿಯ ಹಕ್ಕಿನ ಕುರಿತು ಕುಟುಂಬ ಸದಸ್ಯರ ನಡುವೆ ವಿವಾದವಿದ್ದರೆ, ಅಂತಹ ವಿವಾದವನ್ನು ಸಮರ್ಥ ಸಿವಿಲ್ ನ್ಯಾಯಾಲಯವೇ ವಿಚಾರಣೆ ನಡೆಸಿ ತೀರ್ಮಾನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಕುಟುಂಬದವರು

ಇದನ್ನೂ ನೋಡಿ : SIR | ಕಿತ್ತುಹಾಕುವವರಿಗೆ ಸಂತಸ, ಹೊರಹೋಗುವವರಿಗೆ ಆತಂಕ! ಫಾರ್ಮ್‌–7ರ ಆಟದ ಸೂತ್ರಧಾರರು ಯಾರು? Janashakthi Media

 

Donate Janashakthi Media

Leave a Reply

Your email address will not be published. Required fields are marked *