ಕ್ರೈಸ್ಟ್ ಅಕಾಡೆಮಿ ಕಾನೂನು ಸಂಸ್ಥೆಯಲ್ಲಿ ‘ಸಿಎಐಎಲ್ ಪುಸ್ತಕ ಸಂತೆ 2026’ ಉದ್ಘಾಟನೆ

ವಿದ್ಯಾರ್ಥಿಗಳು ವ್ಯಾಪಕವಾಗಿ ಓದಿ, ನಿರ್ಭೀತಿಯಿಂದ ಬರೆಯಬೇಕು: ಡಾ. ಟಿ.ಎಸ್. ನಾಗಾಭರಣ
ಬೆಂಗಳೂರು: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (NBT) ಹಾಗೂ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ (CAIL) ಆಯೋಜಿಸಿರುವ ಮೂರು ದಿನಗಳ ‘ಸಿಎಐಎಲ್ ಪುಸ್ತಕ ಸಂತೆ 2026’ಕ್ಕೆ ಚಾಲನೆ ದೊರೆತಿದೆ.

ಖ್ಯಾತ ಲೇಖಕ, ನಿರ್ದೇಶಕ ಹಾಗೂ ನಟ ಡಾ. ಟಿ.ಎಸ್. ನಾಗಾಭರಣ ಅವರು ಪುಸ್ತಕ ಸಂತೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ ನೈಜ ಜ್ಞಾನವನ್ನು ಅರಸುವುದಕ್ಕೂ ಇರುವ ವ್ಯತ್ಯಾಸವನ್ನು ವಿವರಿಸಿದರು.

ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ಡಾ. ನಾಗಾಭರಣ, ಬಾಲ್ಯದಿಂದಲೇ ಬೆಳೆಸಿಕೊಂಡ ಓದುವ ಹವ್ಯಾಸ ತಮ್ಮ ವಿಶ್ವದೃಷ್ಟಿಕೋನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಓದು ತಮ್ಮನ್ನು ಚಲನಚಿತ್ರ ನಿರ್ಮಾಪಕರಾಗಿ ರೂಪಿಸಿಕೊಳ್ಳುವಲ್ಲಿಯೂ ಮಹತ್ವದ ಪ್ರಭಾವ ಬೀರಿತು ಎಂದು ಹೇಳಿದರು.

ವಿದ್ಯಾರ್ಥಿಗಳು ವ್ಯಾಪಕವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಿರ್ಭೀತಿಯಿಂದ ಬರೆಯುವ ಮೂಲಕ ತಮ್ಮ ಆಲೋಚನೆಗಳನ್ನು ನೈಜವಾಗಿ ವ್ಯಕ್ತಪಡಿಸಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ :ಉಡುಪಿಯಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ ಆರೋಪ | ಕ್ರಮಕ್ಕೆ ಸಿಪಿಐಎಂ ಆಗ್ರಹ

ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್‌ನ ದಕ್ಷಿಣ ಪ್ರಾದೇಶಿಕ ಕಚೇರಿಯ ಪ್ರಭಾರಿ ಅಧಿಕಾರಿ ಡಾ. ಪ್ರತ್ತಿಪಾಕ ಮೋಹನ್, ಕ್ರೈಸ್ಟ್ ಅಕಾಡೆಮಿ ಸಮೂಹ ಶಿಕ್ಷಣ ಸಂಸ್ಥೆಗಳ ಮ್ಯಾನೇಜರ್ ರೆ. ಫಾ. ಥಾಮಸ್ ಚಕ್ರಮಕ್ಕಿಲ್ (CMI) ಹಾಗೂ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ ಉಪ-ಪ್ರಾಂಶುಪಾಲೆ ಡಾ. ಸಿನಿ ಜಾನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

‘ಸಿಎಐಎಲ್ ಪುಸ್ತಕ ಸಂತೆ 2026’ ಮೂಲಕ ಪ್ರಮುಖ ಪ್ರಕಾಶಕರು ಹಾಗೂ ಸಾಹಿತ್ಯಿಕ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಾಗಿದ್ದು, ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾರ್ವಜನಿಕರಲ್ಲಿಯೂ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ.

ಪುಸ್ತಕ ಪ್ರದರ್ಶನವು ಅಕ್ಟೋಬರ್ 6ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ ಆವರಣದಲ್ಲಿ ಸಾರ್ವಜನಿಕರಿಗೆ ಪ್ರದರ್ಶನ ಮುಕ್ತವಾಗಿರಲಿದೆ.

ಇದನ್ನೂ ನೋಡಿ : ಧಾರವಾಡದಲ್ಲಿ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಪ್ರತಿರೋಧದ ಕಹಳೆ Janashakthi Media

Donate Janashakthi Media

Leave a Reply

Your email address will not be published. Required fields are marked *