ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಸಂತ್ರಸ್ತರಾದ ಜನರಿಗೆ ನ್ಯಾಯ ಒದಗಿಸಬೇಕು ಹಾಗೂ SIRನಲ್ಲಿನ ಅಕ್ರಮಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಅಕ್ಟೋಬರ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಜನತಾ ನ್ಯಾಯಾಲಯ’ ಆಯೋಜಿಸಲಾಗಿದೆ. SIR
ಕರ್ನಾಟಕದ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಜಂಟಿಯಾಗಿ ಆಯೋಜಿಸುತ್ತಿರುವ ಈ ವಿಶಿಷ್ಟ ಪ್ರತಿಭಟನೆಯಲ್ಲಿ SIR ಪ್ರಕ್ರಿಯೆಗೆ ಸಂಬಂಧಿಸಿದ ಆರೋಪಗಳು ಮತ್ತು ಸಂತ್ರಸ್ತರ ಅನುಭವಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಮಂಡಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
SIR ಪ್ರಕ್ರಿಯೆಯಿಂದ ಶೋಷಿತರು, ಅಲ್ಪಸಂಖ್ಯಾತರು ಸೇರಿದಂತೆ ಹಲವು ಸಮುದಾಯಗಳ ಮತದಾನದ ಹಕ್ಕಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿರುವ ಸಂಘಟನೆಗಳು, ಈ ಕುರಿತು ದೇಶದಾದ್ಯಂತ ಹೋರಾಟಗಳು ತೀವ್ರಗೊಳ್ಳುತ್ತಿವೆ ಎಂದು ಹೇಳಿವೆ. ‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, SIR ರದ್ದಾಗಬೇಕು’ ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಗಳು ನಡೆಯುತ್ತಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಜನತಾ ನ್ಯಾಯಾಲಯ’ದಲ್ಲಿ ದೇಶದ ಗಣ್ಯ ನ್ಯಾಯಮೂರ್ತಿಗಳು SIRಗೆ ಸಂಬಂಧಿಸಿದ ಆರೋಪಗಳನ್ನು ಆಲಿಸಿ ತೀರ್ಪು ನೀಡಲಿದ್ದಾರೆ. ವಿಶೇಷ ವ್ಯಕ್ತಿಗಳು, ಕಲಾವಿದರು, ಸಾಹಿತಿಗಳು ಮತ್ತು ಚಿಂತಕರು ಕೂಡ ಭಾಗವಹಿಸಲಿದ್ದು, ಪ್ರಕಾಶ್ ರಾಜ್, ಕಿಶೋರ್ ಸೇರಿದಂತೆ ಹಲವು ಕಲಾವಿದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ವಿದ್ಯಾರ್ಥಿ–ಯುವಜನ ಸಂಘಟನೆಗಳು, ರೈತ, ಕಾರ್ಮಿಕ, ದಲಿತ ಮತ್ತು ಮಹಿಳಾ ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ.
ಇದನ್ನೂ ಓದಿ : ಉಡುಪಿಯಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ ಆರೋಪ | ಕ್ರಮಕ್ಕೆ ಸಿಪಿಐಎಂ ಆಗ್ರಹ
SIR ಪ್ರಕ್ರಿಯೆಯಿಂದ ಸಂತ್ರಸ್ತರಾದವರು ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು ತಮ್ಮ ಮೇಲಾದ ಅನ್ಯಾಯವನ್ನು ‘ಜನತಾ ನ್ಯಾಯಾಲಯ’ದ ಮುಂದೆ ಮಂಡಿಸಲು ಅವಕಾಶವಿದೆ. ಸಂತ್ರಸ್ತರು ಕೂಡಲೇ ಆಯೋಜಕರನ್ನು ಸಂಪರ್ಕಿಸಿ ತಮ್ಮ ಪ್ರಕರಣಗಳನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಅಕ್ಟೋಬರ್ 8ರಂದು ನಡೆಯಲಿರುವ ‘ಜನತಾ ನ್ಯಾಯಾಲಯ’ದ ಕಲಾಪವನ್ನು ವೀಕ್ಷಿಸಲು ಸಾರ್ವಜನಿಕರು ತಮ್ಮ ಕೆಲಸಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಇದನ್ನೂ ನೋಡಿ :ಧಾರವಾಡದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಪ್ರತಿರೋಧದ ಕಹಳೆ Janashakthi Media
