ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ 16ರಿಂದ ಶೇ.10 ನೀರು ಕಡಿತ: ಬರದ ಆತಂಕ

ಮುಂಬೈ: ಮುಂಗಾರು ಮಳೆ ಕೊರತೆ ಹಾಗೂ ಬರದಂತಹ ಪರಿಸ್ಥಿತಿಯ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಕನಿಷ್ಠ ಶೇ.10ರಷ್ಟು ನೀರು ಕಡಿತಗೊಳಿಸಲು ನಿರ್ಧರಿಸಿದೆ. ಅಕ್ಟೋಬರ್‌ 16ರಿಂದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಪೂರೈಕೆಗೆ ಈ ಕಡಿತ ಅನ್ವಯವಾಗಲಿದೆ.

ರಾಜ್ಯದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಈ ಕುರಿತು ಮಾಹಿತಿ ನೀಡಿದ್ದು, ಮಹಾನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಅಕ್ಟೋಬರ್‌ 16ರಿಂದ ಶೇ.10ರಷ್ಟು ನೀರು ಕಡಿತ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್‌ 2027ರವರೆಗೆ ನೀರಿನ ಲಭ್ಯತೆ ಯೋಜನೆ

ಎಲ್‌ ನಿನೊ ಪರಿಣಾಮ ಹಾಗೂ ಮುಂದಿನ ವರ್ಷವೂ ಮಳೆ ಕೊರತೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಲಭ್ಯತೆಯನ್ನು 2027ರ ಆಗಸ್ಟ್‌ 31ರವರೆಗೆ ಪರಿಗಣಿಸಿ ಜಲಸಂಪನ್ಮೂಲ ಇಲಾಖೆ ಯೋಜನೆ ರೂಪಿಸಿದೆ. ಪ್ರತಿ ಜಲಾಶಯದಲ್ಲೂ ಹೆಚ್ಚುವರಿಯಾಗಿ ಶೇ.10ರಷ್ಟು ತುರ್ತು ನೀರಿನ ಸಂಗ್ರಹವನ್ನು ಕಾಯ್ದಿರಿಸಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರ

ಕುಡಿಯುವ ನೀರು, ಜಾನುವಾರು ಮತ್ತು ಮೇವಿನ ಅಗತ್ಯಗಳನ್ನು ಪೂರೈಸಿದ ಬಳಿಕವಷ್ಟೇ ನೀರನ್ನು ನೀರಾವರಿಗೆ ಬಿಡುಗಡೆ ಮಾಡಲಾಗುವುದು. ರಬಿ ಆಹಾರ ಧಾನ್ಯಗಳು ಮತ್ತು ಮೇವು ಬೆಳೆಗಳಿಗೆ ಆದ್ಯತೆ ನೀಡಲಾಗಿದ್ದು, ನೀರು ಉಳಿದರೆ ಮಾತ್ರ ಇತರ ರಬಿ ಬೆಳೆಗಳಿಗೆ ನೀರು ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ : ಜ್ಞಾನೇಶ್‌ ಕುಮಾರ್‌ ವಿರುದ್ಧ ಹೋರಾಟ ತೀವ್ರ: ಅ.10ರಿಂದ ದೇಶವ್ಯಾಪಿ ಬೃಹತ್‌ ಚಳವಳಿ

265 ತಾಲ್ಲೂಕುಗಳಲ್ಲಿ ಬರದ ಪರಿಸ್ಥಿತಿ

2026ರ ಮುಂಗಾರು ಹಂಗಾಮಿನಲ್ಲಿ ರಾಜ್ಯದ 265 ತಾಲ್ಲೂಕುಗಳಲ್ಲಿ ಬರ ಘೋಷಿಸಲಾಗಿದೆ. ರಾಜ್ಯದ ಜಲಾಶಯಗಳಲ್ಲಿ ಮುಂಗಾರು ಅವಧಿ ಮುಗಿದಾಗ ಸರಾಸರಿ ನೀರಿನ ಲಭ್ಯತೆ ಶೇ.75.25ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.88.82ರಷ್ಟಿತ್ತು.

ಈಗಾಗಲೇ 11 ಜಿಲ್ಲೆಗಳ 481 ಗ್ರಾಮಗಳು ಮತ್ತು 1,862 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ವರದಿಯಾಗಿದೆ.

ಕೈಗಾರಿಕೆಗಳಿಗೂ ನೀರು ಬಳಕೆಯಲ್ಲಿ ನಿರ್ಬಂಧ

ಕೈಗಾರಿಕೆಗಳು ತಮ್ಮ ಬಳಕೆಯ ಕನಿಷ್ಠ ಶೇ.30ರಷ್ಟು ನೀರನ್ನು ಮರುಬಳಕೆ ಅಥವಾ ಮರುಸಂಸ್ಕರಣೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಸ್ಥಳೀಯ ಸಂಸ್ಥೆಗಳು ನೀರು ಸೋರಿಕೆಯನ್ನು ತಡೆಯಲು ವಿಶೇಷ ಕಾರ್ಯಾಚರಣೆ ನಡೆಸಬೇಕು. ಒಳಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಸಂಸ್ಕರಿಸಿದ ನೀರನ್ನು ತೋಟಗಾರಿಕೆ, ನಿರ್ಮಾಣ ಕಾಮಗಾರಿ ಹಾಗೂ ಇತರ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ ಬಳಸಲು ಸೂಚಿಸಲಾಗಿದೆ.

ಜಲಾಶಯಗಳು, ನದಿಗಳು, ಕಾಲುವೆಗಳು ಮತ್ತು ಇತರ ಜಲಮೂಲಗಳಿಂದ ಅಕ್ರಮವಾಗಿ ನೀರು ಪಡೆಯುವುದನ್ನು ತಡೆಯಲು ಕಂದಾಯ, ಪೊಲೀಸ್‌ ಮತ್ತು ಜಲಸಂಪನ್ಮೂಲ ಇಲಾಖೆಗಳ ಜಂಟಿ ತಂಡಗಳು ಗಸ್ತು ನಡೆಸಲಿವೆ. ಅಕ್ರಮ ಪಂಪ್‌, ಪೈಪ್‌ಲೈನ್‌ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಮಳೆ ಕೊರತೆ ಮತ್ತು ಎಲ್‌ ನಿನೊ ಪರಿಣಾಮದಿಂದ ನೀರಿನ ಲಭ್ಯತೆ ಕುಸಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮವು ಮುಂದಿನ ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಆತಂಕವನ್ನು ಎತ್ತಿದೆ.

ಇದನ್ನೂ ನೋಡಿ : ಧಾರವಾಡದಲ್ಲಿ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಪ್ರತಿರೋಧದ ಕಹಳೆ Janashakthi Media

Donate Janashakthi Media

Leave a Reply

Your email address will not be published. Required fields are marked *