ಜ್ಞಾನೇಶ್ ಕುಮಾರ್ ವಿರುದ್ಧ ಹೆಚ್ಚಿದ ಆಕ್ರೋಶ: ವಿರೋಧ ಪಕ್ಷಗಳ ಪ್ರತಿಭಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್‌ 2ರಂದು ಸಿಜೆಪಿ ಹಾಗೂ ವಿವಿಧ ವಿರೋಧ ಪಕ್ಷಗಳು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳಿಂದ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಪ್ರತಿಭಟನೆಗಳು ನಡೆಯುತ್ತಿವೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂಬುದು ಸಿಜೆಪಿಯ ಪ್ರಮುಖ ಬೇಡಿಕೆಗಳಾಗಿವೆ.

2025ರ ಮತದಾರರ ಪಟ್ಟಿಯನ್ನು ಮುಂದಿನ ಚುನಾವಣೆಗಳಿಗೆ ಬಳಸುವಂತೆ ಮಾಡಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು, ನಾಗರಿಕ ಸಮಾಜದ ಪ್ರತಿನಿಧಿಗಳಿಗೂ ಪಾತ್ರ ಇರಬೇಕು ಎಂದು ದೀಪ್ಕೆ ಒತ್ತಾಯಿಸಿದ್ದಾರೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೇಶದ ವಿವಿಧ ನಗರಗಳಲ್ಲಿ ಹೋರಾಟ ವಿಸ್ತರಿಸಿ, ಅಕ್ಟೋಬರ್ ಅಂತ್ಯದಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಮುಂಬೈ ಪೊಲೀಸರು ಶಿವಾಜಿ ಪಾರ್ಕ್ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಅನುಮತಿ ನಿರಾಕರಣೆಯ ನಡುವೆಯೂ ಪ್ರತಿಭಟನೆ ಮುಂದುವರಿಸುವುದಾಗಿ ಸಿಜೆಪಿ ಹೇಳಿದ್ದು, ಬಳಿಕ ‘ಜೈಲ್‌ ಭರೋ’ ಚಳವಳಿಯ ಎಚ್ಚರಿಕೆಯನ್ನೂ ನೀಡಿದೆ.

ಇದೇ ವೇಳೆ ಕಾಂಗ್ರೆಸ್, ಸಿಪಿಐಎಂ ಸೇರಿದಂತೆ ವಿರೋಧ ಪಕ್ಷಗಳು ಅಕ್ಟೋಬರ್‌ 2ರಿಂದ ಪ್ರತ್ಯೇಕ ಹಂತಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿವೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ಎಸ್‌ಎಫ್‌ಐ ಸೇರಿದಂತೆ, ಅನೇಕ ಎಡ ವಿದ್ಯಾರ್ಥಿ ಸಂಘಟನೆಗಳು, ಎಡಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ರಾಜಕೀಯ ಮುಖಂಡರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಎಸ್‌ಐಆರ್‌ನಿಂದ ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ಬದಲಾವಣೆಗಳು ಮತ್ತು ಚುನಾವಣಾ ಆಯೋಗದ ಕಾರ್ಯವಿಧಾನದ ಕುರಿತು ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ ಅಕ್ಟೋಬರ್‌ 2ರಿಂದ ದೇಶಾದ್ಯಂತ ಹಂತ ಹಂತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಜಿಲ್ಲಾಮಟ್ಟದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆಗಳು, ಸಾರ್ವಜನಿಕ ಸಭೆಗಳು, ಅಕ್ಟೋಬರ್‌ 6ರಂದು ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸುವ ಯೋಜನೆಯೂ ಇದೆ.

ಇದನ್ನೂ ಓದಿ : ಬೆಂಗಳೂರು| ಟ್ರಾಫಿಕ್‌ ಕಾಟ: ಮಕ್ಕಳ 53 ಶಾಲಾ ದಿನಗಳು ರಸ್ತೆಯಲ್ಲೇ ಕಳೆದುಹೋಗುತ್ತಿವೆ!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯದ ವರದಿ

ಜ್ಞಾನೇಶ್ ಕುಮಾರ್ ವಿರುದ್ಧದ ವಿರೋಧ ತೀವ್ರಗೊಳ್ಳಲು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಸಂದರ್ಭಗಳಲ್ಲಿ ಕೆಲವು ನಿರ್ಧಾರಗಳು ಮತ್ತು ಆದೇಶಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಯೂ ಪ್ರಮುಖ ಕಾರಣವಾಗಿದೆ. ಈ ಆಕ್ಷೇಪಗಳಲ್ಲಿ ಮತದಾರರ ನೋಂದಣಿ, ಹೆಸರು ಸೇರ್ಪಡೆ–ತೆಗೆದುಹಾಕುವಿಕೆ, ನಮೂನೆ–6 ಮತ್ತು ಮತದಾರರ ದತ್ತಾಂಶ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳೂ ಸೇರಿವೆ ಎಂದು ವರದಿಯಾಗಿದೆ.

ಆದರೆ ಚುನಾವಣಾ ಆಯೋಗವು ಈ ವರದಿಗಳ ಹಿನ್ನೆಲೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಎಸ್‌ಐಆರ್ ಸೇರಿದಂತೆ ಆಯೋಗದ ನಿರ್ಧಾರಗಳನ್ನು ಮೂವರು ಚುನಾವಣಾ ಆಯುಕ್ತರೂ ಒಳಗೊಂಡಿರುವ ಸಮಿತಿಯು ನಿಯಮಾನುಸಾರ ಮತ್ತು ಸರ್ವಾನುಮತದಿಂದ ತೆಗೆದುಕೊಂಡಿದೆ ಎಂದು ಹೇಳಿದೆ. ಹೀಗಾಗಿ ಆಯೋಗದೊಳಗಿನ ಆಕ್ಷೇಪಗಳ ವರದಿ ಮತ್ತು ಆಯೋಗದ ಅಧಿಕೃತ ಪ್ರತಿಕ್ರಿಯೆ ಎರಡೂ ಪ್ರಸ್ತುತ ವಿವಾದದ ಪ್ರಮುಖ ಅಂಶಗಳಾಗಿವೆ.

ದೆಹಲಿಯಲ್ಲಿ ಭದ್ರತೆ ಬಿಗಿ

ಜಂತರ್‌ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಕೇಂದ್ರ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ಮೂಲಕ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪಡೆಗಳನ್ನೂ ಸಿದ್ಧವಾಗಿಡಲಾಗಿದೆ ಎಂದು ವರದಿಯಾಗಿದೆ.

ಹೀಗಾಗಿ ಅಕ್ಟೋಬರ್‌ 2ರಂದು ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿರುವ ಪ್ರತ್ಯೇಕ ಪ್ರತಿಭಟನೆಗಳು ಎಸ್‌ಐಆರ್, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತಾಗಿ ನಡೆಯುತ್ತಿರುವ ರಾಷ್ಟ್ರಮಟ್ಟದ ರಾಜಕೀಯ ಸಂಘರ್ಷದ ಮುಂದಿನ ಹಂತವಾಗಿವೆ.

ಇದನ್ನೂ ನೋಡಿ : LIVE : SIR ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಪತ್ರಿಕಾಗೋಷ್ಠಿ

Donate Janashakthi Media

Leave a Reply

Your email address will not be published. Required fields are marked *