ನವದೆಹಲಿ: ಚುನಾವಣಾ ಆಯೋಗದ ನಿರ್ಧಾರಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ಬೆನ್ನಲ್ಲೇ ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇದೇ ವೇಳೆ ಮತ್ತೊಬ್ಬ ಪ್ರಮುಖ ವ್ಯಂಗ್ಯಚಿತ್ರಕಾರ ಮಂಜುಲ್ ಅವರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಒಂದು ವ್ಯಂಗ್ಯಚಿತ್ರಕ್ಕೂ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ. ಎರಡೂ ಪ್ರಕರಣಗಳಲ್ಲಿ ಸರ್ಕಾರ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಬಂದ ಸೂಚನೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಇನ್‌ಸ್ಟಾಗ್ರಾಂನ ಸಂದೇಶಗಳಿಂದ ತಿಳಿದುಬಂದಿದೆ.
ಸತೀಶ್ ಆಚಾರ್ಯ ಅವರ ಖಾತೆಯನ್ನು ಭಾರತದಲ್ಲಿ ಪ್ರವೇಶಿಸಲು ಪ್ರಯತ್ನಿಸಿದಾಗ, ಸ್ಥಳೀಯ ಕಾನೂನುಗಳಿಗೆ ಸಂಬಂಧಿಸಿದ ಕಾರಣಕ್ಕಾಗಿ ಖಾತೆಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದೆ. ಸರ್ಕಾರದಿಂದ ಕಾನೂನುಬದ್ಧ ಮನವಿ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಸರ್ಕಾರ ಅಥವಾ ನ್ಯಾಯಾಲಯದಿಂದ ಸೂಚನೆ ಬಂದರೆ ಕಾನೂನುಬಾಹಿರ ಎಂದು ಗುರುತಿಸಲಾದ ವಿಷಯವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ತೆಗೆದುಹಾಕಬೇಕಾಗುತ್ತದೆ.
ಆಚಾರ್ಯ ಅವರು ತಮ್ಮ ಕೆಲವು ವ್ಯಂಗ್ಯಚಿತ್ರಗಳನ್ನು ಯಾವುದೇ ಮುನ್ನೋಟಿಸ್ ಇಲ್ಲದೆ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ, 2023ರಲ್ಲಿ ಪ್ರಕಟಿಸಿದ್ದ ಕೆಲವು ಹಳೆಯ ವ್ಯಂಗ್ಯಚಿತ್ರಗಳಿಗೂ ಈಗ ನಿರ್ಬಂಧ ಎದುರಾಗಿದೆ. ನಂತರ ಅವರ ಇಡೀ ಪ್ರೊಫೈಲ್ ಭಾರತದಲ್ಲಿ ಲಭ್ಯವಿರುವುದಿಲ್ಲ ಎಂಬ ಸೂಚನೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ವಿರುದ್ಧದ ವ್ಯಂಗ್ಯಚಿತ್ರಗಳೇ ಹಿನ್ನೆಲೆ
ಸತೀಶ್ ಆಚಾರ್ಯ ಅವರ ಇತ್ತೀಚಿನ ಕೆಲವು ವ್ಯಂಗ್ಯಚಿತ್ರಗಳು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತ ಚುನಾವಣಾ ಆಯೋಗದ ನಿರ್ಧಾರಗಳನ್ನು ಪ್ರಶ್ನಿಸಿದ್ದವು. ಸೆಪ್ಟೆಂಬರ್ 23ರಂದು ಪ್ರಕಟವಾದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನೂ ಆಧರಿಸಿ ಅವರು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದರು. ಆ ವರದಿಯಲ್ಲಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗದ ಕೆಲವು ನಿರ್ಧಾರಗಳ ಬಗ್ಗೆ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.
ಚುನಾವಣಾ ಆಯೋಗದ ನಿರ್ಧಾರಗಳು ಮತ್ತು ಎಸ್‌ಐಆರ್ ಪ್ರಕ್ರಿಯೆ ಕುರಿತು ದೇಶಾದ್ಯಂತ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ವ್ಯಂಗ್ಯಚಿತ್ರಕಾರರ ವಿರುದ್ಧದ ಈ ಕ್ರಮಗಳು ಬೆಳಕಿಗೆ ಬಂದಿವೆ. ಚುನಾವಣಾ ಆಯೋಗವು ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಇದನ್ನೂ ಓದಿ :ನಮೂನೆ-7ರ ಅಕ್ರಮದ ಆರೋಪ: ತನಿಖೆಗೆ ಸಿಎಂ ಭರವಸೆ
ಮಂಜುಲ್ ಅವರ ವ್ಯಂಗ್ಯಚಿತ್ರಕ್ಕೂ ನಿರ್ಬಂಧ
ಮಂಜುಲ್ ಅವರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಒಂದು ವ್ಯಂಗ್ಯಚಿತ್ರವನ್ನೂ ಭಾರತದಲ್ಲಿನ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಕಾಣದಂತೆ ನಿರ್ಬಂಧಿಸಲಾಗಿದೆ. ಭಾರತ ಸರ್ಕಾರ ಅಥವಾ ಕಾನೂನು ಜಾರಿ ಸಂಸ್ಥೆಯಿಂದ ಬಂದ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಜುಲ್ ತಿಳಿಸಿದ್ದಾರೆ. ಆದರೆ ಆ ವ್ಯಂಗ್ಯಚಿತ್ರವು ಭಾರತದ ಹೊರಗೆ ಇನ್ನೂ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.
ಸತೀಶ್ ಆಚಾರ್ಯ ಮತ್ತು ಮಂಜುಲ್ ಇಬ್ಬರೂ ದೇಶದ ಪ್ರಮುಖ ರಾಜಕೀಯ ವ್ಯಂಗ್ಯಚಿತ್ರಕಾರರಾಗಿದ್ದು, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ವ್ಯಂಗ್ಯಚಿತ್ರಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಇಬ್ಬರ ಕೃತಿಗಳಿಗೆ ನಿರ್ಬಂಧ ಎದುರಾದ ಬೆನ್ನಲ್ಲೇ ಹಲವು ಸಹೋದ್ಯೋಗಿ ವ್ಯಂಗ್ಯಚಿತ್ರಕಾರರು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಪರವಾಗಿ ನಿಂತಿದ್ದಾರೆ.
‘ವ್ಯಂಗ್ಯಕ್ಕೆ ನಿರ್ಬಂಧ ಸಲ್ಲದು’: ಕಾರ್ಟೂನಿಸ್ಟ್‌ಗಳ ಪ್ರತಿಕ್ರಿಯೆ
ಸತೀಶ್ ಆಚಾರ್ಯ ಮತ್ತು ಮಂಜುಲ್ ಅವರ ಕೃತಿಗಳ ಮೇಲಿನ ನಿರ್ಬಂಧಕ್ಕೆ ಇತರ ವ್ಯಂಗ್ಯಚಿತ್ರಕಾರರು ವಿರೋಧ ವ್ಯಕ್ತಪಡಿಸಿದ್ದಾರೆ. ವ್ಯಂಗ್ಯಚಿತ್ರವು ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಕಲಾ ಮಾಧ್ಯಮವಾಗಿದ್ದು, ಅದಕ್ಕೆ ನಿರ್ಬಂಧ ಹೇರುವ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೇರಳ ಕಾರ್ಟೂನ್ ಅಕಾಡೆಮಿಯೂ ಇಬ್ಬರು ವ್ಯಂಗ್ಯಚಿತ್ರಕಾರರಿಗೆ ಬೆಂಬಲ ಸೂಚಿಸಿ, ಟೀಕೆಗಳನ್ನು ನಿರ್ಬಂಧಿಸುವ ಪ್ರವೃತ್ತಿ ಕುರಿತು ಆತಂಕ ವ್ಯಕ್ತಪಡಿಸಿದೆ.
ಈ ಬೆಳವಣಿಗೆ ಕುರಿತು ಮೆಟಾ ಸಂಸ್ಥೆ ಪ್ರತ್ಯೇಕವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ನೋಡಿ : ದಿಗ್ಬಂಧನದ ನಡುವೆಯೂ ಕ್ಯೂಬಾ ಹೇಗಿದೆ? | ಕಣ್ಣಾರೆ ಕಂಡ ವಿಭಿನ್ನ ಬದುಕಿನ ಅನುಭವ | ಮೀನಾಕ್ಷಿ ಸುಂದರಂ
