ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ: ಪರವಾನಗಿ ಅಮಾನತು, ದಂಡ ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಸಂಚಾರ ನಿಯಮಗಳನ್ನು ಪದೇಪದೆ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರ ಭಾಗವಾಗಿ ಅಂಕ ಆಧಾರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ತರುವುದು, ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಿಸುವುದು ಹಾಗೂ ಪುನರಾವರ್ತಿತ ತಪ್ಪುಗಳಿಗೆ ಪರವಾನಗಿ ಅಮಾನತು ಮಾಡುವ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ. ಸಂಚಾರ

ಬುಧವಾರ ವಿಧಾನಸೌಧದಲ್ಲಿ ಗೃಹ ಮತ್ತು ಸಾರಿಗೆ ಇಲಾಖೆಗಳ ಜಂಟಿ ಪರಿಶೀಲನಾ ಸಭೆ ನಡೆಯಿತು. ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಸಾರಿಗೆ ಸಚಿವ ಬೈರತಿ ಸುರೇಶ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಚಾರ ನಿರ್ವಹಣೆ, ರಸ್ತೆ ಸುರಕ್ಷತೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ನಿಯಮ ಉಲ್ಲಂಘನೆಗೆ ಅಂಕ, ಮಿತಿ ಮೀರಿದರೆ ಪರವಾನಗಿ ಅಮಾನತು

ಪ್ರಸ್ತಾವಿತ ಅಂಕ ಆಧಾರಿತ ವ್ಯವಸ್ಥೆಯಲ್ಲಿ ಪ್ರತಿ ಸಂಚಾರ ನಿಯಮ ಉಲ್ಲಂಘನೆಗೂ ಚಾಲಕರಿಗೆ ದಂಡದ ಜೊತೆಗೆ ಅಂಕಗಳನ್ನು ನಿಗದಿಪಡಿಸುವ ಕುರಿತು ಚರ್ಚಿಸಲಾಗಿದೆ. ನಿಗದಿತ ಮಿತಿಯನ್ನು ತಲುಪಿದ ಬಳಿಕ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ.

ಇದಕ್ಕಾಗಿ ಸಾರಿಗೆ ಇಲಾಖೆಯ ಸಾರಥಿ ವ್ಯವಸ್ಥೆ ಮತ್ತು ಬೆಂಗಳೂರು ಸಂಚಾರ ಪೊಲೀಸರ ಇ-ಚಲನ್ ವ್ಯವಸ್ಥೆಯನ್ನು ಪರಸ್ಪರ ಸಂಪರ್ಕಿಸುವ ಪ್ರಸ್ತಾವನೆಯೂ ಇದೆ. ಇದರಿಂದ ವಾಹನ ಸವಾರರ ಪರವಾನಗಿ, ಹಿಂದಿನ ಸಂಚಾರ ನಿಯಮ ಉಲ್ಲಂಘನೆಗಳು ಹಾಗೂ ಹೊಸ ಪ್ರಕರಣಗಳ ಮಾಹಿತಿಯನ್ನು ಒಂದೇ ಡಿಜಿಟಲ್ ದಾಖಲೆಯಲ್ಲಿ ಪರಿಶೀಲಿಸಲು ಸಾಧ್ಯವಾಗಲಿದೆ. ಸಂಚಾರ

ಪುನರಾವರ್ತಿತ ತಪ್ಪುಗಳಿಗೆ ಹೆಚ್ಚಿನ ದಂಡ

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವುದು, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಪಾದಚಾರಿ ಮಾರ್ಗದಲ್ಲಿ ವಾಹನ ಓಡಿಸುವುದು, ಅಕ್ರಮ ನಿಲುಗಡೆ, ‘ನೋ ಪಾರ್ಕಿಂಗ್‌’ ಪ್ರದೇಶದಲ್ಲಿ ವಾಹನ ನಿಲ್ಲಿಸುವುದು, ಸಂಚಾರ ಸಂಕೇತ ಉಲ್ಲಂಘನೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಪಡಿಸುವಂತಹ ಕೃತ್ಯಗಳಿಗೆ ಹೆಚ್ಚಿನ ದಂಡ ವಿಧಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಅದೇ ರೀತಿ ಪದೇಪದೆ ಸಂಚಾರ ನಿಯಮ ಉಲ್ಲಂಘಿಸುವವರು ಹಾಗೂ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಹೆಚ್ಚುವರಿ ದಂಡ ವಿಧಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಸಂಚಾರ

ಇದನ್ನೂ ಓದಿ : ನಮೂನೆ-7ರ ಅಕ್ರಮದ ಆರೋಪ: ತನಿಖೆಗೆ ಸಿಎಂ ಭರವಸೆ

ಪರವಾನಗಿ ರದ್ದಾದರೆ ರಸ್ತೆ ಸುರಕ್ಷತಾ ತರಬೇತಿ

ಪುನರಾವರ್ತಿತ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿ ಅಮಾನತು ಅಥವಾ ರದ್ದುಗೊಂಡರೆ, ಅಂತಹ ಚಾಲಕರಿಗೆ ರಸ್ತೆ ಸುರಕ್ಷತೆ ಹಾಗೂ ಸುರಕ್ಷಿತ ಚಾಲನಾ ತರಬೇತಿ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ತರಬೇತಿ ಪೂರ್ಣಗೊಳಿಸಿದ ಮಾಹಿತಿಯನ್ನು ಡಿಜಿಟಲ್‌ ವ್ಯವಸ್ಥೆಯಲ್ಲಿ ದಾಖಲಿಸುವ ಪ್ರಸ್ತಾವನೆಯಿದೆ.

ಅನಧಿಕೃತ ಹಾರ್ನ್‌ಗಳು, ಮಾರ್ಪಡಿಸಿದ ಸೈಲೆನ್ಸರ್‌ಗಳು ಹಾಗೂ ಅತಿಯಾದ ತೀವ್ರತೆಯ ಎಲ್‌ಇಡಿ ದೀಪಗಳ ಬಳಕೆಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.

‘ಒಂದು ನಗರ, ಒಂದು ದರ’ ನೀತಿಯೂ ಚರ್ಚೆ

ಸಂಚಾರ ನಿರ್ವಹಣೆಯ ಜತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಬೆಂಗಳೂರಿನಲ್ಲಿ ಬಸ್‌ ದರಗಳಲ್ಲಿ ಹೆಚ್ಚಿನ ಏಕರೂಪತೆ ತರಲು ‘ಒಂದು ನಗರ, ಒಂದು ದರ’ ನೀತಿ ಜಾರಿಗೆ ತರುವ ಪ್ರಸ್ತಾವನೆ ಹಾಗೂ ಹೊರ ವರ್ತುಲ ರಸ್ತೆಯ ಮಾರ್ಗಗಳಲ್ಲಿ ಬಿಎಂಟಿಸಿ ಸೇವೆಗಳನ್ನು ವಿಸ್ತರಿಸುವ ಕುರಿತು ಚರ್ಚೆ ನಡೆದಿದೆ. ಸಂಚಾರ

ಇದನ್ನೂ ನೋಡಿ : ದಿಗ್ಬಂಧನದ ನಡುವೆಯೂ ಕ್ಯೂಬಾ ಹೇಗಿದೆ? | ಕಣ್ಣಾರೆ ಕಂಡ ವಿಭಿನ್ನ ಬದುಕಿನ ಅನುಭವ | ಮೀನಾಕ್ಷಿ ಸುಂದರಂ

Donate Janashakthi Media

Leave a Reply

Your email address will not be published. Required fields are marked *