ಡಿವೈಎಫ್‌ಐ ರಾಜ್ಯ ಅಧ್ಯಕ್ಷರಾಗಿ ಲವಿತ್ರ ವಸ್ತ್ರದ್, ಕಾರ್ಯದರ್ಶಿಯಾಗಿ ಸಂತೋಷ ಬಜಾಲ್

ಬಾಗೇಪಲ್ಲಿ: ಶಿಕ್ಷಣ-ಉದ್ಯೋಗದ ಹಕ್ಕಿಗಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ ಹಾಗೂ ಸೌಹಾರ್ದ ಸಮಾಜಕ್ಕಾಗಿ ಎಂಬ ಘೋಷಣೆಯಡಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ)ನ 13ನೇ ರಾಜ್ಯ ಯುವಜನರ ಸಮ್ಮೇಳನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೆ.26ರಿಂದ 28ರವರೆಗೆ ಮೂರು ದಿನಗಳ ಕಾಲ ನಡೆಯಿತು. ಸಮ್ಮೇಳನದ ಕೊನೆಯಲ್ಲಿ 15 ಪದಾಧಿಕಾರಿಗಳನ್ನೊಳಗೊಂಡ 45 ಸದಸ್ಯರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಡಿವೈಎಫ್‌ಐ

ನೂತನ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಲವಿತ್ರ ವಸ್ತ್ರದ್, ಕಾರ್ಯದರ್ಶಿಯಾಗಿ ಸಂತೋಷ ಬಜಾಲ್ ಹಾಗೂ ಖಜಾಂಚಿಯಾಗಿ ದಿಲೀಪ್ ಎಸ್. ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮನೋಜ ವಾಮಂಜೂರು, ರಾಜಶೇಖರ್ ಎಸ್., ಶಿವಪ್ಪ ಅಂಬ್ಲಿಕಲ್, ಬಸವರಾಜ ಎಸ್. ಹಾಗೂ ಮಾಧುರಿ ಬೋಳಾರ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಗಳಾಗಿ ರಿಝ್ವಾನ್ ಹರೇಕಳ, ಹರೀಶ್ ವೈ.ಎನ್., ರಿಯಾಜ ಅರ್ತಿ ಹಾಗೂ ಅಮರೇಶ ಕಡಗದ ಆಯ್ಕೆಯಾಗಿದ್ದಾರೆ ಎಂದು ಡಿವೈಎಫ್‌ಐ ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಪೂಜಾರ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಸಂಸದ ಹಾಗೂ ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ.ಎ. ರಹೀಮ್, ಪ್ರಧಾನ ಕಾರ್ಯದರ್ಶಿ ಹಿಮಾಗ್ನಿರಾಜ್ ಭಟ್ಟಾಚಾರ್ಯ ಹಾಗೂ ಕೇಂದ್ರ ಸಮಿತಿ ಸದಸ್ಯ ಜಾಕ್ ಸಿ. ಥಾಮಸ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಮೂರು ದಿನಗಳ ಕಾಲ ಯುವಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಡಿವೈಎಫ್‌ಐ

ಉದ್ಯೋಗ ಸೃಷ್ಟಿ, ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

ರಾಜ್ಯದಲ್ಲಿ ನಿರುದ್ಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಮತ್ತು ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ. ಕೃಷಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ದೊರೆಯುವಂತೆ ಸ್ಥಳೀಯ ಮೀಸಲಾತಿ ಜಾರಿಗೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಉದ್ಯೋಗ ಸಿಗದ ಯುವಜನರಿಗೆ ನಿರುದ್ಯೋಗ ಭತ್ಯೆ ನೀಡಬೇಕು, ಯುವಜನರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಯುವಜನ ಆಯೋಗ ರಚಿಸಬೇಕು ಎಂಬ ಬೇಡಿಕೆಯನ್ನೂ ಸಮ್ಮೇಳನ ಮುಂದಿಟ್ಟಿದೆ. ಶಿಕ್ಷಣ, ನಿರುದ್ಯೋಗ, ಅಭದ್ರ ಉದ್ಯೋಗ, ಮಾನಸಿಕ ಒತ್ತಡ ಮತ್ತು ಮಾದಕ ದ್ರವ್ಯ ವ್ಯಸನ ಸೇರಿದಂತೆ ಯುವಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.

ಇದನ್ನೂ ಓದಿ : ಕರ್ನಾಟಕದಲ್ಲಿ ಕಿಡ್ನಿ ಸಾವು ಮೂರು ಪಟ್ಟು! 10 ವರ್ಷದಲ್ಲಿ 5,940ರಿಂದ 18,730ಕ್ಕೆ ಏರಿಕೆ

ಬರ ಪರಿಸ್ಥಿತಿ, ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ನಿರ್ಣಯ

ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರು ಲಭ್ಯವಾಗುವಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮ್ಮೇಳನ ಆಗ್ರಹಿಸಿದೆ. ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ.

ಇದರ ಜೊತೆಗೆ ಜಾತಿವಾದ ಮತ್ತು ಕೋಮುವಾದದ ವಿರುದ್ಧ ಹೋರಾಟ ನಡೆಸುವುದು, ಸೌಹಾರ್ದ ಸಮಾಜ ನಿರ್ಮಾಣಕ್ಕೆ ಮುಂದಾಗುವುದು ಸೇರಿದಂತೆ ಹಲವು ನಿರ್ಣಯಗಳನ್ನು ಸಮ್ಮೇಳನ ಅಂಗೀಕರಿಸಿದೆ. ಮುಂಬರುವ ದಿನಗಳಲ್ಲಿ ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯಗಳ ಜಾರಿಗೆ ಹಾಗೂ ಯುವಜನರು ಸೇರಿದಂತೆ ಜನಸಾಮಾನ್ಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನೂತನ ರಾಜ್ಯ ಸಮಿತಿ ರಚನಾತ್ಮಕ ಚಟುವಟಿಕೆಗಳು ಮತ್ತು ಹೋರಾಟಗಳನ್ನು ರೂಪಿಸಲಿದೆ ಎಂದು ಡಿವೈಎಫ್‌ಐ ಪ್ರಕಟಣೆ ತಿಳಿಸಿದೆ. ಡಿವೈಎಫ್‌ಐ

ಇದನ್ನೂ ನೋಡಿ : “ಜೊಕುಮಾರಸ್ವಾಮಿ: ಜನಪದ ನಂಬಿಕೆ ಮತ್ತು ಆಚರಣೆ” — ಜೀವನ್‌ಸಾಬ್‌ ವಾಲೀಕಾರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *