ರಾಯಪುರ: ಛತ್ತೀಸ್‌ಗಢ ಪಬ್ಲಿಕ್ ಸರ್ವಿಸ್ ಕಮಿಷನ್ (CGPSC) ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬಳಿಕ ಉದ್ಭವಿಸಿದ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಮೆರಿಟ್ ಪಟ್ಟಿಯಲ್ಲಿ ಕಾಣಿಸಿಕೊಂಡ ಅಸಾಮಾನ್ಯ ಹೆಸರುಗಳಿರುವ ಅಭ್ಯರ್ಥಿಗಳು ತಮ್ಮ ಗುರುತುಗಳು ನಿಜವಾದವು ಎಂದು ದೃಢೀಕರಿಸಿದ್ದಾರೆ.
ಫಲಿತಾಂಶ ಪ್ರಕಟವಾದ ತಕ್ಷಣ ‘ನ್ಯೂಸ್’, ‘ಸ್ಪೇಸ್ ರಾಣಿ’, ‘ಹೇ ರಾಮ್’, ‘ತು ಫೇಲ್’ ಮತ್ತು ‘ಭಕ್ತ ಪ್ರಹ್ಲಾದ್’ ಎಂಬ ಅಸಾಮಾನ್ಯ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದವು. ಈ ಹಿನ್ನೆಲೆ ರಾಜಕೀಯ ಟೀಕೆಗಳು ಮತ್ತು ಮಾಧ್ಯಮ ವರದಿಗಳೂ ಹೆಚ್ಚಾಗಿದ್ದವು.
ಈ ಗೊಂದಲಕ್ಕೆ ಅಂತ್ಯಕಾಣಿಸಲು, ಸಂಬಂಧಿತ ಅಭ್ಯರ್ಥಿಗಳು ತಮ್ಮದೇ ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿ, ಅಧಿಕೃತ ಗುರುತಿನ ಚೀಟಿಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಪ್ರದರ್ಶಿಸಿ ತಮ್ಮ ಹೆಸರುಗಳು ಕಾನೂನುಬದ್ಧವಾಗಿವೆ ಎಂದು ಸಾಬೀತುಪಡಿಸಿದರು.
ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿಯಲ್ಲಿ ಡೇಟಾ ಲೀಕ್: ಇಬ್ಬರು ಸಿಬ್ಬಂದಿ ಬಂಧನ
ಅವರಲ್ಲಿ ರಾಯಗಢ ಜಿಲ್ಲೆಯ ಭಟ್ನಪಾಳಿ ಗ್ರಾಮದ ನಿವಾಸಿ ನ್ಯೂಸ್ ಕುಮಾರ್ ಪ್ರಧಾನ ಕೂಡ ಒಬ್ಬರು. ತಮ್ಮ ಹೆಸರಿನ ಬಗ್ಗೆ ಉಂಟಾದ ಅನುಮಾನಗಳಿಗೆ ಪ್ರತಿಕ್ರಿಯಿಸಿದ ಅವರು, “ನ್ಯೂಸ್ ಕುಮಾರ್ ಪ್ರಧಾನ” ಎಂಬ ಹೆಸರು ತಮ್ಮ 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಇದೆ ಎಂದು ಹೇಳಿದರು.
ತಮ್ಮ ಹೆಸರಿನ ಮೂಲವನ್ನು ವಿವರಿಸಿದ ಪ್ರಧಾನ, ಜ್ಯೋತಿಷಿಯೊಬ್ಬರು ‘ನ’ ಅಕ್ಷರದಿಂದ ಹೆಸರು ಇಡಲು ಸಲಹೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ಪೋಷಕರು “ನ್ಯೂಸ್” ಎಂಬ ಹೆಸರನ್ನು ಆಯ್ಕೆ ಮಾಡಿದರು ಎಂದು ತಿಳಿಸಿದರು.
ಇನ್ನೂ ಸ್ಪೇಸ್ ರಾಣಿ, ಹೇ ರಾಮ್ ಮತ್ತು ತು ಫೇಲ್ (ತುಫೈಲ್) ಎಂಬ ಅಭ್ಯರ್ಥಿಗಳೂ ವಿಡಿಯೋ ಮೂಲಕ ತಮ್ಮ ಗುರುತನ್ನು ದೃಢೀಕರಿಸಿ, ದಾಖಲೆಗಳನ್ನು ಪ್ರದರ್ಶಿಸಿ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ರಾಜ್ಯದ ಸಾಂಸ್ಕೃತಿಕ ತಜ್ಞರ ಪ್ರಕಾರ, ಇಂತಹ ವಿಭಿನ್ನ ಹೆಸರುಗಳ ರೂಢಿ ಛತ್ತೀಸ್‌ಗಢದ ಗ್ರಾಮೀಣ ಸಂಸ್ಕೃತಿಯ ಭಾಗವಾಗಿದೆ. ಕೆಲವು ಸಮುದಾಯಗಳಲ್ಲಿ ವಾರದ ದಿನಗಳ ಆಧಾರದಲ್ಲಿ ಮಕ್ಕಳಿಗೆ ಸೋಮಾರು (ಸೋಮವಾರ), ಮಂಗಲು (ಮಂಗಳವಾರ) ಎಂಬಂತೆ ಹೆಸರು ಇಡುವ ಪದ್ಧತಿಯಿದೆ. ಇನ್ನೂ ಕೆಲವರು ಆರೋಗ್ಯ ಪರಿಸ್ಥಿತಿಗಳು ಅಥವಾ ಪ್ರಮುಖ ಘಟನೆಗಳ ನೆನಪಿಗಾಗಿ ಹೆಸರು ಇಡುತ್ತಾರೆ.
ಉದಾಹರಣೆಗೆ, ಮನೇಂದ್ರಗಢ-ಚಿರ್ಮಿರಿ-ಭಾರತ್ಪುರ್ ಜಿಲ್ಲೆಯ ಘುತ್ರಾ ಗ್ರಾಮದ ಒಬ್ಬ ವ್ಯಕ್ತಿಗೆ ಶಾಲಾ ದಾಖಲೆಗಳಲ್ಲಿ ‘ರಾಷ್ಟ್ರಪತಿ’ ಎಂದು ಹೆಸರು ಇಡಲಾಗಿದೆ. ಅದೇ ರೀತಿ, 2017ರ ಜುಲೈ 1ರಂದು ಮಧ್ಯರಾತ್ರಿ ಜನಿಸಿದ ಬಾಲಕಿಗೆ ದೇಶಾದ್ಯಂತ ಜಿಎಸ್‌ಟಿ ಜಾರಿಗೆ ಬಂದ ನೆನಪಿಗಾಗಿ ‘GST’ ಎಂದು ಹೆಸರು ಇಡಲಾಗಿದೆ.
ಅಭ್ಯರ್ಥಿಗಳ ಸ್ಪಷ್ಟನೆ ಮತ್ತು ದಾಖಲೆಗಳ ಪರಿಶೀಲನೆಯ ನಂತರ, CGPSC ಅಧಿಕಾರಿಗಳು ಮೆರುಟ್ ಪಟ್ಟಿಯಲ್ಲಿ ಉಲ್ಲೇಖಿಸಿರುವ ಹೆಸರುಗಳು ಅರ್ಜಿ ಸಲ್ಲಿಸುವ ವೇಳೆ ನೀಡಲಾದ ನಿಜವಾದ ದಾಖಲೆಗಳೇ ಎಂದು ದೃಢಪಡಿಸಿದ್ದಾರೆ.
ಇದನ್ನೂ ನೋಡಿ: ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media
