ಕೆಪಿಎಸ್‌ಸಿ ನೇಮಕಾತಿಯಲ್ಲಿ ಡೇಟಾ ಲೀಕ್: ಇಬ್ಬರು ಸಿಬ್ಬಂದಿ ಬಂಧನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತೊಂದು ಗಂಭೀರ ಅಕ್ರಮ ಬೆಳಕಿಗೆ ಬಂದಿದ್ದು, ಅಭ್ಯರ್ಥಿಗಳ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಇಬ್ಬರು ಸಿಬ್ಬಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿ ಇದ್ದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಹಾಗೂ ಇತರ ವಿವರಗಳನ್ನು ಆಯೋಗದ ಒಳಗಿನಿಂದಲೇ ಮಧ್ಯವರ್ತಿಗಳಿಗೆ ಒದಗಿಸಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಸಹಾಯಕ ಶರಣಪ್ಪ ಅಡವಳ್ಳಿ ಮತ್ತು ಹಿರಿಯ ಸಹಾಯಕ ಸ್ವಾಮಿದಾಸ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಈ ಪ್ರಕರಣ ರಾಜ್ಯದ ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಹಾಗೂ ಆಕ್ರೋಶ ಉಂಟುಮಾಡಿದೆ.

ಇದನ್ನೂ ಓದಿ: ಎಸ್‌ಐಆರ್‌ ಅವಧಿ ಆಗಸ್ಟ್‌ 17ರವರೆಗೆ ವಿಸ್ತರಣೆ; ಮತದಾರರಿಗೆ ಇನ್ನಷ್ಟು ಸಮಯ, ಕರಡು ಪಟ್ಟಿ ಆಗಸ್ಟ್‌ 27ಕ್ಕೆ

ಅಭ್ಯರ್ಥಿಗಳಿಂದ ಸಾಕ್ಷ್ಯ ಸಮೇತ ದೂರು

ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಆಯೋಗಕ್ಕೆ ದೂರು ನೀಡಿದ್ದರು. ಮಧ್ಯವರ್ತಿಗಳು ಕರೆ ಮಾಡಿ, “ನಾವು ಆಯೋಗದವರೇ, ಲಕ್ಷಾಂತರ ರೂಪಾಯಿ ನೀಡಿದರೆ ಉದ್ಯೋಗ ಖಚಿತ” ಎಂದು ಹೇಳಿರುವ ಆಡಿಯೋ ಹಾಗೂ ವಾಟ್ಸ್‌ಆಪ್ ದಾಖಲೆಗಳನ್ನು ಅವರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗದ ಸಹಾಯಕ ಕಾರ್ಯದರ್ಶಿ ಬಿ.ಎನ್. ಶೋಭಾ ಅವರು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು.

ಮಧ್ಯವರ್ತಿಗಳ ಬಂಧನದಿಂದ ಸತ್ಯ ಬಹಿರಂಗ

ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಮೊದಲ ಹಂತದಲ್ಲಿ ಮೂವರು ಮಧ್ಯವರ್ತಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಮತ್ತೊಬ್ಬ ಆರೋಪಿಯ ಹೆಸರು ಬಹಿರಂಗವಾಗಿದ್ದು, ಬಳಿಕ ಅವನನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತರ ಮಾಹಿತಿ ಆಧರಿಸಿ ಆಯೋಗದ ಒಳಗಿನಿಂದಲೇ ಮಾಹಿತಿ ಸೋರಿಕೆಯಾಗಿರುವುದು ಸ್ಪಷ್ಟವಾಗಿದ್ದು, ಇಬ್ಬರು ಸಿಬ್ಬಂದಿಯ ಪಾತ್ರ ಬಯಲಾಗಿದೆ.

ಕಾರ್ಯಾಚರಣೆಗೆ ಆಯೋಗ ಸಿದ್ಧತೆ

ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ, “ಪೊಲೀಸರ ವರದಿ ಬಂದ ತಕ್ಷಣ ಬಂಧಿತ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗುವುದು. ಮುಂದಿನ ಕಠಿಣ ಕ್ರಮಗಳ ಬಗ್ಗೆ ಆಯೋಗ ಚರ್ಚೆ ನಡೆಸುತ್ತಿದೆ” ಎಂದು ತಿಳಿಸಿದ್ದಾರೆ.

ನೇಮಕಾತಿ ಹಿನ್ನೆಲೆ

ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗಳಿಗಾಗಿ 2025ರ ಮಾರ್ಚ್ 16ರಂದು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಗಸ್ಟ್ 16ರಂದು ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು. ಬಳಿಕ 2026ರ ಜನವರಿ 28ರಂದು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ, ಫೆಬ್ರವರಿ 20ರಿಂದ 26ರವರೆಗೆ ದಾಖಲೆ ಪರಿಶೀಲನೆ ನಿಗದಿಪಡಿಸಲಾಗಿತ್ತು.

ಈ ಅವಧಿಯಲ್ಲೇ ಮಧ್ಯವರ್ತಿಗಳು ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಮೂಡಿವೆ.

ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು

Donate Janashakthi Media

Leave a Reply

Your email address will not be published. Required fields are marked *