ಅಮೇರಿಕದಲ್ಲಿ ಅಡಾನಿ ಪ್ರಕರಣದ ವಜಾ ಪ್ರಕರಣ

ತಿಂದವರು, ತಿನ್ನಿಸಿದವರು, ತಿನ್ನಿಸಲು ಬಿಟ್ಟವರು, ಫಲಾನುಭವಿಗಳು ಯಾರು?
ಗೌತಮ್‌ ಅಡಾನಿಯ ಮೇಲೆ ವಂಚನೆಯ ಆರೋಪ ಹೊರಿಸಿದ್ದ ಅಮೆರಿಕದ ನ್ಯಾಯ ಇಲಾಖೆಯೇ  ಅದನ್ನೀಗ ವಜಾ ಮಾಡುವಂತೆ ಕೇಳಿರುವುದೇಕೆ ಎಂದು ನ್ಯೂಯಾರ್ಕಿನ ನ್ಯಾಯಾಲಯದ ನ್ಯಾಯಾಧೀಶರು ಸ್ಪಷೀಕರಣ ಕೇಳಿದ್ದಾರೆ. ಅದಕ್ಕೆ  ಆ ಇಲಾಖೆ ಉತ್ತರಿಸುತ್ತಿರುವಂತೆಯೇ ಅವರು ಅಡಾಣಿಯವರಿಗೂ ಇದಕ್ಕೆ ಸಂಬಂಧಿಸಿದಂತೆ  ಯಾವುದಾದರೂ ಆಶ್ವಾಸನೆ ನೀಡಲಾಗಿದೆಯೇ ಅಥವ ಅದಕ್ಕೆ ವಿನಿಮಯವಾಗಿ ಯಾವುದೇ ಒಪ್ಪಂದ ಆಗಿರುವ ಬಗ್ಗೆ ತಿಳಿದಿದೆಯೇ ಎಂಬ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆ ಹೇಳಿದ್ದಾರೆ. ಅಂತಿಮವಾಗಿ, ಈ ಪ್ರಕರಣ ʼನ ಖಾವೂಂಗ, ನ ಖಾನೇ ದೂಂಗʼದ ಇನ್ನೊಂದು ಉದಾಹರಣೆಯಾಗಲಿದೆಯೇ? ಅಮೇರಿಕ

ಜಿ.ಎಸ್.ಮಣಿ

ಕಳೆದ ವಾರ ಅಮೇರಿಕದ ಫೆಡರಲ್‌ ಜಡ್ಜ್‌ ನಿಕೊಲಸ್‌ ಗರೌಫ್ಫಿಸ್‌ ಭಾರತದ ದೊಡ್ಡ ಬಂಡವಳಿಗ ಮತ್ತು ಜಗತ್ತಿನ ಹದಿನೇಳನೇ ಸ್ಥಾನದಲ್ಲಿರುವ ಕೋಟ್ಯಾಧಿಪತಿ ಗೌತಮ್‌ ಅಡಾನಿ ವಿರುದ್ದ ಪ್ರಕರಣವನ್ನು ಏಕೆ ಕೈಬಿಡಲಾಯಿತು ಎಂಬ ಸ್ಪಷ್ಟೀಕರಣ ನೀಡುವಂತೆ ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್‌)ದ ನ್ಯಾಯ ಇಲಾಖೆ (ಡಿಒಜೆ)ಯ ಮುಖ್ಯಸ್ಥ ಅಟಾರ್ನಿ ಜನರಲ್‌ ಅವರನ್ನು ಸಮಜಾಯಿಷಿ ಕೇಳಿತು. ಈ ಪ್ರಕರಣ 2024 ರ ಅದಾನಿ ಮತ್ತು ಇನ್ನೊಂದು ಅಜುರೆ ಎಂಬ ಕಂಪನಿಯ ವಿರುದ್ದ 2000 ಕೋಟಿ ರೂಪಾಯಿಗಳ ಲಂಚವನ್ನು ಸರ್ಕಾರಿ(ಆಂದ್ರ ಪ್ರದೇಶದ) ಅಧಿಕಾರಿಗಳಿಗೆ ಕೊಟ್ಟಿದ್ದರು ಎಂಬ ಆರೋಪಕ್ಕೆ ಸಂಬಂದಪಟ್ಟಿದ್ದು. ಅಡಾನಿ ಗ್ರೀನ್‌ ಎನರ್ಜಿ ಎಂಬ ಕಂಪನಿ ಅಮೇರಿಕದ ಹೂಡಿಕೆದಾರರಿಂದ ದೊಡ್ಡ ಮೊತ್ತದ ಹೂಡಿಕೆಯನ್ನು ಇಂತಹ ಲಂಚದ ತಿಳುವಳಿಕೆ ನೀಡದೇ ಸಂಗ್ರಹಿಸಿದ್ದರೆಂದು ಅಲ್ಲಿನ ನ್ಯಾಯ ಇಲಾಖೆಯ ಮುಂದೆ ಇದು ಬಂದಿತ್ತು.

ಅಡಾನಿ ತನ್ನ ಮೇಲಿನ ಮೊಕದ್ದಮೆಯನ್ನು ಹಿಂತೆಗೆದುಕೊಂಡರೆ ಅಮೇರಿಕದಲ್ಲಿ 10 ಬಿಲಿಯನ್‌ ಡಾಲರುಗಳ ಹೂಡಿಕೆ ಮಾಡಲು ತಯಾರಿದ್ದಾರೆ ಎಂಬ ಸಂದೇಶ ಟ್ರಂಪ್‌ ಅವರ ವೈಯಕ್ತಿಕ ವಕೀಲರ ಮೂಲಕ ಬಂದಿತ್ತಂತೆ. ಇಷ್ಟು ದೊಡ್ಡ ಮೊತ್ತದ ಹೂಡಿಕೆ ಎಂದರೆ ಅದರಿಂದ ಅಮೇರಿಕದಲ್ಲಿ 15000 ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದು ಒಂದು ಆರ್ಥಿಕ ಅಂದಾಜು. ಈ ಕಾರಣಕ್ಕೆ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲಾಯಿತೆ ಎಂಬ ಗುಮಾನಿ  ಅಮೆರಿಕಾದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ  ಜಡ್ಜ್‌ ನಿಕೊಲಸ್‌ ಗರೌಫ್ಫಿಸ್‌ರವರು  ಸ್ಪಷ್ಟೀಕರಣ ಕೇಳಿರುವುದನ್ನು ಗಮನಿಸಬೇಕು.

ಇದನ್ನೂ ಓದಿ: ಬೆಂಗಳೂರು| ಎಸ್‌ಐಆರ್‌ ಪ್ರಕ್ರಿಯೆ: ಬಿಎಲ್ಒಗಳ ಮೇಲಿನ ಒತ್ತಡ ಕಡಿಮೆ ಮಾಡಲು ಆಗ್ರಹ

ನ್ಯಾಯ ಇಲಾಖೆಗೆ ಸ್ಪಷ್ಟೀಕರಣ ಕೇಳಿದ್ದರೂ, ಆ ಇಲಾಖೆ ಈ ಪ್ರಕರಣವನ್ನೇ ಕೈಬಿಡಲು ನಿರ್ಧರಿಸಿರುವಾಗ ಅಡಾನಿಗೆ ಅದರಿಂದೇನೂ ತೊಂದರೆಯಾಗದು ಎಂದು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಅದೇ ಜಡ್ಜ್‌ ಜುಲೈ 9ರಂದು ಸ್ವತಃ ಅಡಾನಿಯವರಿಗೆ  ಎರಡು ಪ್ರಶ್ನೆಗಳಿಗೆ ಉತ್ತರ ನೀಡುವ ‘ಪ್ರತಿಜ್ಞಾ ಪತ್ರ'(ಅಫಿಡವಿಟ್) ವನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. 1. ಪ್ರಕರಣವನ್ನು ಕೈಬಿಡುವುದಕ್ಕೆ ಸಂಬಂಧಪಟ್ಟಂತೆ ಯಾವುದೇ ಆಶ್ವಾಸನೆಯನ್ನು ನೀಡಿರುವ, ಕೇಳಿರುವ, ದೊರೆತಿರುವ, ಒಪ್ಪಿರುವ ಅಥವ ಸ್ವೀಕರಿಸಿರುವ ಬಗ್ಗೆ ತಿಳಿದಿದೆಯೇ? 2. ಪ್ರಕರಣವನ್ನು ವಜಾ ಮಾಡುವುದಕ್ಕೆ ವಿನಿಮಯವಾಗಿ ಯಾವುದೇ ಒಪ್ಪಂದ ಆಗಿರುವ ಬಗ್ಗೆ ತಿಳಿದಿದೆಯೇ?-ಇವೇ ಆ ಎರಡು ಪ್ರಶ್ನೆಗಳು. ಗೌತಮ್‌ ಅಡಾನಿಯವರು ಜುಲೈ ೧೫ರೊಳಗೆ ಈ ಎರಡು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ.

ಲಂಚ ಪ್ರಕರಣ

2024ರಲ್ಲಿ ಅಡಾನಿ ಸಮೂಹಕ್ಕೆ ಸಂಬಂಧಪಟ್ಟಂತೆ ಅಮೆರಿಕಾದಿಂದ ಎರಡು ಸುದ್ದಿಗಳು ಪ್ರಕಟವಾದವು. ಒಂದು-ಯುಎಸ್‌ ನ ನ್ಯಾಯ ಇಲಾಖೆ(ಡಿಒಜೆ) ಗೌತಮ್‌ ಅಡಾನಿ ಮತ್ತು ಅವರ ಕಂಪನಿಯ ಹಲವು ಅಧಿಕಾರಿಗಳು ಭಾರತದಲ್ಲಿ ತಮ್ಮ ಸೌರ ವಿದ್ಯುತ್‌ ಯೋಜನೆಗಳಿಗೆ ಸಂಬಂಧಪಟ್ಟಂತೆ ಸರಕಾರೀ ಅಧಿಕಾರಿಗಳಿಗೆ ಸುಮಾರು 250ಮಿಲಿಯ ಡಾಲರುಗಳ ಲಂಚ ನೀಡಿದ್ದರು, ಮತ್ತು ಅದರ ಬಗ್ಗೆ ಅಮೆರಿಕಾದ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದಾರೆ ಎಂದು  ಆರೋಪ ಹೊರಿಸಿದೆ ಎಂಬ ಸುದ್ದಿ ಮತ್ತು ಎರಡನೆಯದು – ಇದಕ್ಕೆ ಸಂಬಂಧಪಟ್ಟಂತೆ ಅಮೆರಿಕಾದ  ಸೆಕ್ಯುರಿಟೀಸ್‌ ಅಂಡ್‌ ಎಕ್ಸ್ಚೇಂಜ್‌ ಕಮಿಷನ್‌ (ಎಸ್‌ಇಸಿ) ಗೌತಮ್‌ ಅಡಾನಿ ಮತ್ತಿಬ್ಬರ ಮೇಲೆ ಅಮೆರಿಕನ್ ಹೂಡಿಕೆದಾರರಿಗೆ ವಂಚನೆ ಮಾಡಿದ ಆರೋಪ ಹೊರಿಸಿದೆ ಎಂಬ ಸುದ್ದಿ.

ಎರಡು ವರ್ಷಗಳ ನಂತರ ಕಳೆದ ತಿಂಗಳು ಇದೇ ಗೌತಮ್‌ ಅಡಾನಿ ಗೆ ಸಂಬಂಧಪಟ್ಟಂತೆ ಮತ್ತೆರಡು ಸುದ್ದಿಗಳು ಅದೇ ಅಮೆರಿಕಾದಿಂದ ಪ್ರಕಟಗೊಂಡವು. ಒಂದು,‌ ನ್ಯಾಯ ಇಲಾಖೆ ಅಡಾನಿ ಮತ್ತಿತರರ ವಿರುದ್ಧ ತಾನು ಹಾಕಿದ ಮೊಕದ್ದಮೆಯನ್ನು ವಜಾ ಮಾಡುವಂತೆ ಅರ್ಜಿ ಹಾಕಿದೆ ಎಂಬ ಸುದ್ದಿ. ಮತ್ತು ಎರಡನೆಯದ್ದು ಮೇಲೆ ಹೇಳಿದ  ಎಸ್‌ಇಸಿ ಕೂಡ ವಂಚನೆಯ ತನ್ನ ಆರೋಪವನ್ನು ಕೈಬಿಟ್ಟಿದೆ ಎಂಬುದು.

ಇದರೊಂದಿಗೇ , ಯುಎಸ್‌ನ ಮಾಧ್ಯಮಗಳಲ್ಲಿ ಅಡಾನಿಯಿಂದ ಅಮೇರಿಕದಲ್ಲಿ 10 ಬಿಲಿಯನ್‌ ಡಾಲರುಗಳ ಹೂಡಿಕೆಯ ಈ ಮೇಲೆ ಹೇಳಿರುವ  ಸುದ್ದಿಯೂ ಪ್ರಕಟವಾಯಿತು.

ಈ ನಡುವೆ, ಅಧ್ಯಕ್ಷ ಟ್ರಂಪ್‌ ಪುನರಾಯ್ಕೆಯ ನಂತರ ಗೌತಮ್‌ ಅಡಾನಿ ತಮ್ಮ ವಕೀಲರನ್ನು ಬದಲಿಸಿ ಟ್ರಂಪ್‌ರವರ ವಕೀಲರನ್ನು ತಮ್ಮ ಪ್ರಕರಣದ ವಕಾಲತ್ತಿಗೆ ನೇಮಿಸಿಕೊಂಡರು ಎಂಬ ಸುದ್ದಿಗಳೂ ಬಂದಿದ್ದವು.

ಗಂಭೀರ ನೈತಿಕ ಪ್ರಶ್ನೆಗಳು

ಅಂದರೆ ಇಂತಹ ಮೇಲ್ ಸ್ತರದಲ್ಲಿ ಲಾಭ ವಿನಿಮಯದ ವಿಷಯ ಬಂದು ನ್ಯಾಯದ ವಿಷಯದಲ್ಲೂ ಇದು ತಲೆ ಹಾಕಿದೆ ಎಂದ ಹಾಗಾಯಿತು.  ಈ ಮೂಲಕ ಇದು ಮೇಲ್ನೋಟಕ್ಕೆ ನ್ಯಾಯಿಕ ವಿಧಿ ವಿಧಾನಗಳ ವಿಷಯವಾದರೂ ಹಲವು ಇತರ ಗಂಭೀರ ವಿಷಯಗಳನ್ನು ಮುನ್ನೆಲೆಗೆ ತಂದಿದೆ. ಗೌತಮ್‌ ಅಡಾನಿ ಮತ್ತು ಸಂಗಡಿಗರ ಮೇಲೆ ತಾನು ಹೊರಿಸಿದ ಆರೋಪವನ್ನು ಎಸ್‌ಇಸಿ  ಕೈಬಿಡುವ ಮೊದಲು ಅಡಾನಿಗಳು ಆರೋಪವನ್ನು ಒಪ್ಪಿಕೊಳ್ಳದೆಯೂ ಅಥವ ನಿರಾಕರಿಸದೆಯೂ 18 ಮಿಲಿಯ ಡಾಲರ್‌ ತೆರಲು ಒಪ್ಪಿದ ನಂತರ  ಆ ಪ್ರಕರಣ ಇತ್ಯರ್ಥಗೊಂಡಿದೆ ಎಂದು ತಿಳಿಸಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಅಮೇರಿಕದ ಸೆನೆಟರುಗಳಿಬ್ಬರು ಜಾಗತಿಕ ಲಂಚ ವಿರುದ್ದದ ಚಳುವಳಿಗೆ ಇದು ಹೊಡೆತ ನೀಡುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲಂಚದ ವಿಷಯದಲ್ಲಿ ಉತ್ತರದಾಯಿತ್ವ ಕಡಿಮೆ ಮಾಡುವುದು ಮತ್ತು ನ್ಯಾಯದ ವಿಷಯಕ್ಕೆ ಇನ್ಯಾವುದೋ ವಿಷಯವನ್ನು ವಿನಿಮಯ ಮಾಡಿಕೊಳ್ಳುವುದು ಎರಡೂ ಜಾಗತಿಕ ನೈತಿಕತೆಯ ವಿಷಯದಲ್ಲಿ ರಾಜಿ ಮಾಡಿಕೊಂಡಂತೆ ಎಂಬ ಚಿಂತೆ ಪ್ರಾಮಾಣಿಕತೆಯ ಪ್ರತಿಪಾದಕರಿಗೆ ಬರತೊಡಗಿದೆ.

ಈಗ ಬಂದಿರುವ ವರದಿಗಳ ಪ್ರಕಾರ, ಅಮೇರಿಕದ ನ್ಯಾಯ ಇಲಾಖೆ “ರಾಜತಾಂತ್ರಿಕ ಕಲಹ” ವನ್ನು ತಡೆಯಲು ಈ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ವಿವರಣೆ ಕೇಳಿದ ಜಡ್ಜ್‌ ನಿಕೊಲಸ್‌ ಗರೌಫ್ಫಿಸ್‌ ರವರಿಗೆ ಉತ್ತರದಲ್ಲಿ ಹೇಳಿದೆಯಂತೆ. ಇಂತಹ ದೋಷಾರೋಪಣೆ ಬಂದಿರುವ ಪ್ರಕರಣ ವಿದೇಶದ್ದಾದ್ದರಿಂದ “ರಾಜತಾಂತ್ರಿಕ ಕಲಹ” ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಅದು ವಿವರಣೆ ನೀಡಿದೆ. ಹತ್ತು ಪುಟಗಳ ಟಿಪ್ಪಣಿಯಲ್ಲಿ “ಅನೇಕ ಭಾರತೀಯರು (ಒಂದೆರಡು ಯುರೋಪಿಯನ್ನರೂ ಸೇರಿರಬಹುದು) ವಿದ್ಯುತ್‌ ಕಾಂಟ್ರಾಕ್ಟ್ ಪಡೆಯಲು ಸಂಕೀರ್ಣವಾದ ಪದರುಗಳ ಲಂಚ ನೀಡುವ ಪ್ರಯತ್ನದ ದೋಷಾರೊಪಣೆ ಇದು” ಎಂದು ಈ ಟಿಪ್ಪಣಿ ವಿವರಿಸಿದೆ ಎಂದು ವರದಿಯಾಗಿದೆ.

ಇದನ್ನೂ ನೋಡಿ: “ಭೂಗಳ್ಳರ ಸರ್ಕಾರ!” ಜನಾಕ್ರೋಶ ಸಮಾವೇಶದಲ್ಲಿ ಜಿ.ಎನ್. ನಾಗರಾಜರ ಆಕ್ರೋಶ Janashakthi Media

ಎರಡು ವರ್ಷಗಳ ಹಿಂದಿನ ಈ ದೋಷಾರೊಪಣೆಗೆ ಎರಡು ಭಾಗಗಳಿವೆ. ಒಂದು ಅಮೇರಿಕದ ವಿದೇಶೀ ಭ್ರಷ್ಟ ಕ್ರಿಯೆಗಳ ತಡೆಯ ಕಾಯಿದೆಯಡಿ ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಮಾಡಿದ ಪ್ರಯತ್ನದ ಬಗೆಗೆ ಇರುವಂತಹದು. ಎರಡನೇಯದು ಅಮೇರಿಕದಲ್ಲಿ ಬಂಡವಾಳ ಸಂಗ್ರಹಿಸಲು ಹೊರಟಾಗ ಇಂತಹ ಲಂಚ ನೀಡುವಿಕೆಯ ಪ್ರಸ್ತಾಪದ ಬಗೆಗೆ ಹೂಡಿಕೆದಾರರಿಗೆ ಮಾಹಿತಿ ನೀಡಲು ವಿಫಲವಾದ ಬಗೆಗೆ.

ಭಾರತ ಲಂಚದ ವಿಷಯದಲ್ಲಿ ತನಿಖೆ ಮಾಡಿದ್ದು ಶಿಕ್ಷಾರ್ಹ ತಪ್ಪು ನಡೆ ಯಾವುದೂ ಕಂಡು ಬಂದಿಲ್ಲ ಎಂದು ಈ ಟಿಪ್ಪಣಿ ಹೇಳಿಕೊಂಡಿದೆ. ದೊಡ್ಡ ಬಾಧ್ಯತೆ ಇರುವ ದೇಶ (ಅಂದರೆ ಭಾರತ) ಯಾವುದೇ ಅಪರಾಧ ಕಂಡು ಬಂದಿಲ್ಲ ಎಂದು ಹೇಳಿದ ಮೇಲೆ ಇನ್ನೇನಿದೆ ಎಂಬ ರೀತಿಯಲ್ಲಿ ಅಲ್ಲಿನ ನ್ಯಾಯ ಇಲಾಖೆ ಹೇಳಿಕೆ ನೀಡಿದೆ. ರಾಜಕೀಯ ಒಳಸಂಚಯಗಳು ಕೆಲಸ ಮಾಡಿರುವ ಸಾಧ್ಯತೆ ಇಲ್ಲಿ ಎದ್ದು ಕಾಣುತ್ತದೆ.

‘ನ ಖಾವೂಂಗ, ನ ಖಾನೇ ದೂಂಗ

ಇದಕ್ಕೆ ಮೊದಲು ಈ ಪ್ರಕರಣವನ್ನು ಕೈಬಿಡುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ‘ಮನವರಿಕೆ’ ಮಾಡಲು ಅಡಾನಿಯವರು ನೇಮಿಸಿಕೊಂಡ ಹೊಸ ವಕಾಲತು ತಂಡ ಫೆಬ್ರುವರಿ 3, 2026 ರಿಂದ ಎಪ್ರಿಲ್‌ 17, 2026 ರ ನಡುವೆ ಸುಮಾರು 500 ಪುಟಗಳಷ್ಟು ಸಂಗತಿಗಳು, ಕಾನೂನು, ಪರಿಣಿತರ ಸಾಕ್ಷ್ಯ, ತರ್ಕಗಳನ್ನು ಸಲ್ಲಿಸಿತ್ತು ಎಂದು ಈಗ ತಿಳಿದು ಬಂದಿದೆ. ಇದರಲ್ಲಿ 200 ಪುಟಗಳ ಪರಿಣಿತ ವರದಿಗಳನ್ನು ಒದಗಿಸಿಕೊಟ್ಟವರಲ್ಲಿ ಹಾರ್ವರ್ಡ್‌ ವಿವಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರು ಮತ್ತು ಅಮೆರಿಕಾದ ಅದೇ ಎಸ್‌ಇಸಿಯ ಮಾಜಿ ಕಮಿಷನರರಲ್ಲದೆ, ಭಾರತದ ಒಬ್ಬ ಮಾಜಿ ಮುಖ್ಯ ನ್ಯಾಯಾಧೀಶರು, ಭಾರತದ ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರೀಯ ವಿದ್ಯುತ್‌ ನಿಯಂತ್ರಣ ಆಯೋಗದ ಸದಸ್ಯರೂ ಇದ್ದಾರೆ ಎಂದೂ ತಿಳಿದು ಬಂದಿದೆ (ದಿ ವೈರ್‌, ಜೂನ್‌ 25)!

ಇಷ್ಟೇ ಅಲ್ಲ, ಸ್ವತಃ 2024ರಲ್ಲಿ ವಂಚನೆಯ ಆರೋಪ ದಾಖಲಿಸಿದ ಅಮೆರಿಕಾದ ಎಸ್‌ಇಸಿ, ಗೌತಮ್‌ ಅಡಾನಿ ಮತ್ತು ಸಾಗರ್‌ ಅಡಾನಿಗೆ ಕಳಿಸಿದ ಸಮನ್ಸ್‌ನ್ನು 14 ತಿಂಗಳುಗಳಿಗಿಂತಲೂ ಹೆಚ್ಚು ಸಮಯದ ವರೆಗೆ ಭಾರತದಲ್ಲಿ ಅವರಿಗೆ ಸರ್ವ್‌ ಮಾಡಲಿಲ್ಲ ಎಂದು ಹೇಳಿರುವದೂ ವರದಿಯಾಗಿದೆ. ಈ ಹೇಳಿಕೆಯ ನಂತರ ಪ್ರಕರಣವನ್ನು ಕೈಬಿಡುವಂತೆ ನ್ಯಾಯ ಇಲಾಖೆಗೆ ‘ಮನವರಿಕೆ’ ಮಾಡುವ ಪ್ರಯತ್ನ ಆರಂಭವಾಯಿತು ಎಂದೂ ಹೇಳಲಾಗಿದೆ.

ಈ ಸಂದರ್ಭದಲ್ಲಿ “ನ ಖಾವೂಂಗ, ನ ಖಾನೇ ದೂಂಗʼ(ತಿನ್ನುವುದಿಲ್ಲ ಮತ್ತು ತಿನ್ನುವುದಕ್ಕೆ ಬಿಡುವುದಿಲ್ಲ) ಎಂಬ ನಮ್ಮ ಪ್ರಧಾನಿಗಳ ಪ್ರಖ್ಯಾತ ಹೇಳಿಕೆ ನೆನಪಿಗೆ ಬಾರದಿರದು. ಅಮೇರಿಕದಲ್ಲಿನದು  ಜಾಗತಿಕ ವ್ಯವಹಾರಗಳ ವಿಷಯವಾದರೆ, ಭಾರತದಲ್ಲಿನ ವಿಷಯಗಳು ಕಡಿಮೆಯೇನು ಎಂಬ ಪ್ರಶ್ನೆಯನ್ನು ಈಗ ಕೇಳಲಾಗುತ್ತಿದೆ. ಮೂಲತಃ, ಅಡಾನಿಯವರ ಸೌರ ವಿದ್ಯುತ್‌ ಯೋಜನೆಗಳಲ್ಲಿ ವಿದ್ಯುತ್‌ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲು, ಅವುಗಳ ದುಬಾರಿ ದರಗಳಿಂದಾಗಿ  ರಾಜ್ಯ ಸರಕಾರಗಳು ಹಿಂದೇಟು ಹಾಕಿದಾಗ ಅವರ ಅಧಿಕಾರಿಗಳ ‘ಮನವೊಲಿಸಲು’ ಆರಂಭವಾದ  ಪ್ರಕರಣ  ಇದು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

 ಚಿತ್ರ ಕೃಪೆ: ರಿಪೋರ್ಟರ್ಸ್‌ ಕಲೆಕ್ಟಿವ್

ಇದರಲ್ಲಿ ಎರಡು ಸಾವಿರ ಕೋಟಿ ರೂಪಾಯಿಗಳ ಲಂಚ ಪಡೆಯ ಹೊರಟಿದ್ದ ರಾಜ್ಯ ಅಧಿಕಾರಿಗಳ ಕತೆಯಷ್ಟೇ ಅಲ್ಲ, ಇದೆಲ್ಲವನ್ನೂ ಸುಗಮಗೊಳಿಸಿ ಅನುಕೂಲ ಮಾಡಿಕೊಟ್ಟ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕತೆಯೂ ಇದೆ ಎನ್ನಲಾಗಿದೆ (ರಿಪೋರ್ಟರ್‌ ಕಲೆಕ್ಟಿವ್‌̧ ಡಿಸೆಂಬರ್‌ 5, 2024)). 2019ರಲ್ಲಿ ಕೇಂದ್ರ ಇಂಧನ ಮಂತ್ರಾಲಯ, ನವೀಕರಿಸಬಹುದಾದ ಇಂಧನದ ಮಂತ್ರಾಲಯ ಮತ್ತು ಭಾರತದ ಸೌರ ವಿದ್ಯುತ್ ಕಾರ್ಪೊರೇಷನ್ (SECI) ಸೇರಿಕೊಂಡು ಒಂದು ೬ ಗಿಗಾವಾಟ್‌ ಸೌರ ವಿದ್ಯುತ್‌ ಖರೀದಿಗೆ ಒಂದು ವಿಚಿತ್ರ ಹರಾಜು ಪ್ರಕ್ರಿಯೆಯನ್ನು ರೂಪಿಸಿದವು. ಇದರಲ್ಲಿ ಭಾಗವಹಿಸುವ ಕಂಪನಿಗಳು ಸೌರ ವಿದ್ಯುತ್‌ ಉತ್ಪಾದನೆ ಮಾತ್ರವಲ್ಲದೆ, ಸೌರ ಉಪಕರಣಗಳನ್ನು ತಯಾರಿಸುವ ಸ್ಥಾವರಗಳನ್ನು ಕಟ್ಟಲೂ ಒಪ್ಪಬೇಕು ಎಂಬ ಷರತ್ತನ್ನು ಹಾಕಲಾಯಿತು.

ಈ ಷರತ್ತನ್ನು ಒಪ್ಪಲು ಸಾಧ್ಯವಿದ್ದದ್ದು ಅಡಾನಿ ಗ್ರೀನ್‌ ಎನರ್ಜಿಯಂತಹ ಒಂದೆರಡು ಕಂಪನಿಗಳಿಗೆ ಮಾತ್ರ. ಇದರ ಪ್ರಯೋಜನ ಪಡೆದು ಅಡಾನಿ ಮತ್ತು ಅಜುರೆ ಕಂಪನಿಗಳು ಹೆಚ್ಚು ದರ ಕೂಗಿ ಕಾಂಟ್ರಾಕ್ಟುಗಳನ್ನು ಗೆದ್ದುಕೊಂಡವು. ಇವು ಮಾರುಕಟ್ಟೆ ದರಗಳಿಗಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ಇದ್ದುದರಿಂದಾಗಿ ರಾಜ್ಯ ಸರಕಾರಗಳು ಇವನ್ನು ಖರೀದಿಸುವಂತೆ ಮಾಡಲು SECI ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಹೆಣಗಬೇಕಾಯಿತು ಮತ್ತು ಇದರಿಂದಾಗಿಯೇ ಅಡಾಣಿ ಮತ್ತು ಅಜುರೆ ಕಂಪನಿಗಳು ಉಬ್ಬರಿಸಿದ ಬೆಲೆಗಳಲ್ಲಿ ವಿದ್ಯುತ್‌ ಖರೀದಿ ಒಪ್ಪಂದಗಳಿಗೆ ಸಹಿ ಹಾಕುವಂತೆ ರಾಜ್ಯ ಸರಕಾರಗಳ ಅಧಿಕಾರಿಗಳಿಗೆ ಲಂಚ ಕೊಡುವ ಪ್ರಸಂಗ ಉದ್ಭವವಾಯಿತು ಎನ್ನಲಾಗಿದೆ.

ಪ್ರಶ್ನೆಗಳ ಸಾಲು ಸಾಲು

ಈಗ ಸೌರ ವಿದ್ಯುತ್‌ ವಲಯದ ಮೇಲೆ ಗಟ್ಟಿ ಹಿಡಿತ ಪಡೆದಿರುವ ಅಡಾನಿ ಸಮೂಹದ ಈ ಎಲ್ಲ ಯೋಜನೆಗಳಿಗಾಗಿ ಎಷ್ಟು ರೈತರನ್ನು ಒಕ್ಕಲೆಬ್ಬಿಸಲಾಯಿತು, ಅವರು ಕಳೆದುಕೊಂಡ ಭೂಮಿಗೆ ಎಂತಹ ಪರಿಹಾರ ದೊರೆಯಿತು, ಕೋರ್ಟುಗಳಿಗೆ ಎಷ್ಟು ಅಲೆದಾಡಬೇಕಾಗಿ ಬಂದಿದೆ ಎಂಬ ಪ್ರಶ್ನೆಗಳು ಒಂದೆಡೆಯಾದರೆ, ಈ ಕೋಟಿಗಟ್ಟಲೆ ಲಂಚದ ಮೊತ್ತದ ಹೊರೆಯನ್ನು ವಿದ್ಯುತ್‌ ಬಳಕೆದಾರರು ಹೊರಬೇಕೇ ಎಂಬಿತ್ಯಾದಿ ಪ್ರಶ್ನೆಗಳ ಸಾಲು ಸಾಲು (ದಿ ಲೀಫ್‌ಲೆಟ್‌, ಜುಲೈ 2).

ಇದಲ್ಲದೆ, ಈ ಪ್ರಕರಣಕ್ಕೂ, ಆಪರೇಷನ್‌ ಸಿಂಧೂರ್‌, ಸುಂಕದರಗಳು ಮುಂತಾದ ವಿಷಯಗಳಲ್ಲಿ ಅಧ್ಯಕ್ಷ ಟ್ರಂಪ್‌ರವರ ಅಟಾಟೋಪಗಳ ಹೊರತಾಗಿಯೂ ಅವರ ಬಗ್ಗೆ ನಮ್ಮ ಪ್ರಧಾನಿಗಳ ಮೃದು ಧೋರಣೆಗೂ, ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ  ಮೇಲಿನ ಮಾತುಕತೆಗಳಿಗೂ ಸಂಬಂಧವಿದೆಯೇ ಎಂಬ ಗುಮಾನಿಗಳೂ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈಗ ಅಮೆರಿಕಾದಲ್ಲಿ ಅಡಾಣಿ ಪ್ರಕರಣ ವಜಾಗೊಂಡರೆ, ಭಾರತದಲ್ಲಿನ ಅದಕ್ಕೆ ಸಂಬಂಧಪಟ್ಟ ಈ ಎಲ್ಲ ಪ್ರಕರಣಗಳೂ ಹಾಗೆಯೇ ‘ಇತ್ಯರ್ಥ’ ಗೊಳ್ಳುತ್ತವೆ ಎಂದು ನಿರೀಕ್ಷಿಸಿದರೆ, ಅದರಲ್ಲಿ ಆಶ್ವರ್ಯವೇನಿಲ್ಲ.

ತಿಂದವರು, ತಿನ್ನಿಸಿದವರು, ತಿನ್ನಿಸಲು ಬಿಟ್ಟವರು  ಯಾರೋ, ಅವೆಲ್ಲದರ ದುಷ್ಪರಿಣಾಮಗಳನ್ನು ಅನುಭವಿಸುವವರು ಮಾತ್ರ ಜನಸಾಮಾನ್ಯರು ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿದ್ಧಗೊಳ್ಳುತ್ತಿದೆ.

“ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ!”

ವ್ಯಂಗ್ಯಚಿತ್ರ ಕೃಪೆ: ಸಜಿತ್‌ ಕುಮಾರ್‌, ‌ಡೆಕ್ಕನ್‌ ಹೆರಾಲ್ಡ್
Donate Janashakthi Media

Leave a Reply

Your email address will not be published. Required fields are marked *