ಸಾಹಿತ್ಯದಲ್ಲಿ ಸೃಜನಶೀಲ ಬರಹಗಳ ಮರುವಿಮರ್ಶೆ ಅಗತ್ಯ: ಡಾ. ವಸುಂಧರಾ ಭೂಪತಿ

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ವೇಗವಾಗಿ ಪ್ರವೇಶಿಸುತ್ತಿರುವುದು ಸೃಜನಶೀಲತೆ, ನೈತಿಕತೆ ಹಾಗೂ ಸಾಹಿತ್ಯದ ಅಸ್ತಿತ್ವದ ಕುರಿತಾಗಿ ಹೊಸ ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದು, ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸೃಜನಶೀಲ ಬರಹಗಳನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಿದೆ ಎಂದು ಲೇಖಕಿ ಡಾ. ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ ನಡೆದ ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಯಾವುದೇ ಸಂಸ್ಥೆಯ ಉನ್ನತಿ ಅಥವಾ ಅವನತಿ ಅದರ ಚುಕ್ಕಾಣಿ ಹಿಡಿದವರ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸಮರ್ಥ ವ್ಯಕ್ತಿಗಳಿಂದ ಮಾತ್ರ ಸಮರ್ಥ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ. ಇತ್ತೀಚಿನ ಲೇಖಕಿಯರ ಕಥೆಗಳಲ್ಲಿ ಸಮಕಾಲೀನ ಸಾಮಾಜಿಕ ತಲ್ಲಣಗಳು ಪರಿಣಾಮಕಾರಿಯಾಗಿ ಮೂಡಿಬರುತ್ತಿದ್ದು, ಮಹಿಳಾ ಸಾಹಿತ್ಯ ಹೊಸ ಎತ್ತರವನ್ನು ತಲುಪುತ್ತಿದೆ. ಇದು ಮಹಿಳೆಯರ ಸಕ್ರಿಯ ಸಾಮಾಜಿಕ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಎಐ ಬೆಳವಣಿಗೆಯು ಸಾಹಿತ್ಯದ ಸ್ವರೂಪವನ್ನೇ ಪ್ರಶ್ನಿಸುವಂತಿದ್ದು, ಸೃಜನಶೀಲ ಬರಹಗಳ ಮೌಲ್ಯಮಾಪನದ ವಿಧಾನಗಳನ್ನು ಮರುವಿಮರ್ಶೆ ಮಾಡುವ ಅಗತ್ಯವಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಶಿಮ್ಲಾ| ಮಳೆ ಅಬ್ಬರ: ಭೂಸ್ಖಲನ, ಸೇತುವೆ ಕುಸಿತ, ಮನೆಗೆ ನುಗ್ಗಿದ ನೀರು

ಈ ಸಂದರ್ಭದಲ್ಲಿ ಕಾವ್ಯ ವಿಭಾಗದಲ್ಲಿ ಮಾಧವಿ ಭಂಡಾರಿ ಕೆರೆಕೋಣ, ಗದ್ಯ ವಿಭಾಗದಲ್ಲಿ ಬಿ.ಟಿ. ಜಾಹ್ನವಿ ಹಾಗೂ ಸಂಕೀರ್ಣ ವಿಭಾಗದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಅವರಿಗೆ ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಣಿ ಸತೀಶ್, “ಎಐ ಎಷ್ಟೇ ಮುಂದುವರಿದರೂ ಸ್ತ್ರೀಶಕ್ತಿಯ ಮುಂದೆ ಅದು ನಗಣ್ಯ. ತಾಯ್ತನದ ಶಕ್ತಿಯೇ ಶ್ರೇಷ್ಠ. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ವಿಕೃತ ಮನೋಭಾವಗಳಿಗೆ ಕಡಿವಾಣ ಹಾಕಬೇಕಾದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಹದವರಿತ ಅಡುಗೆ, ಹದ ಅರಿತ ಬದುಕು ಹಾಗೂ ಶಂಕರಮ್ಮ ಅವರು ಬದುಕಿದ ಮೌಲ್ಯಾಧಾರಿತ ಜೀವನ ಇಂದಿನ ಪೀಳಿಗೆಗೆ ಆದರ್ಶವಾಗಿದೆ. ಮಹಿಳೆಯರ ದಾರಿ ತಪ್ಪುತ್ತಿರುವ ಹೆಜ್ಜೆಗಳನ್ನು ಲೇಖಕಿಯರ ಬರಹಗಳು ಸರಿದಾರಿಗೆ ತರಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ ಮಾತನಾಡಿ, “ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳಿಗೆ ಮಹಿಳಾ ಅಧ್ಯಯನದ ಅರಿವು ಪುರುಷರಿಗೆ ತಲುಪದಿರುವುದೂ ಒಂದು ಕಾರಣವಾಗಿದೆ. ಮಹಿಳೆಯರ ಬದಲಾಗುತ್ತಿರುವ ಬದುಕಿಗೆ ಅನುಗುಣವಾಗಿ ಕುಟುಂಬ ವ್ಯವಸ್ಥೆಯೂ ಬದಲಾಗಬೇಕು. ಮಹಿಳೆಯರ ಶ್ರಮ ಮತ್ತು ಜೀವನವನ್ನು ನೋಡುವ ಸಮಾಜದ ದೃಷ್ಟಿಕೋನವೂ ಪರಿವರ್ತನೆಯಾಗಬೇಕು. ಸಮಾನತೆ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಕಾಣಿಸಿಕೊಳ್ಳಬೇಕು. ಮುಂದಿನ ವರ್ಷದಿಂದ ರೈತ ಮಹಿಳೆಯೊಬ್ಬರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಮನು ಬಳಿಗಾರ್ ಅವರನ್ನು ವಿನಂತಿಸಲಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದ ರೂವಾರಿಯಾಗಿರುವ ಮನು ಬಳಿಗಾರ್ ಮಾತನಾಡಿ, “ತಂದೆಯ ಹೆಸರಿನಲ್ಲಿ ಪುಸ್ತಕ ಬರೆಯುವುದಕ್ಕಿಂತ ತಾಯಿಯ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಇಂತಹ ಅರ್ಥಪೂರ್ಣ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆ ಹಾಗೂ ತಾಯಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಳಿಗಾರ್ ಕುಟುಂಬದ ಸದಸ್ಯೆ ಡಾ. ಮೇಘಾ ಸಿದ್ದಾರ್ಥ್ ಸೇರಿದಂತೆ ಸಾಹಿತ್ಯಾಸಕ್ತರು, ಲೇಖಕಿಯರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *