ಎಚ್‌ಎಂಟಿ ಅರಣ್ಯ ಭೂಮಿ ವಿವಾದ ತೀವ್ರ: ಕುಮಾರಸ್ವಾಮಿ – ಖಂಡ್ರೆ ನಡುವೆ ಆರೋಪ – ಪ್ರತ್ಯಾರೋಪ

ಬೆಂಗಳೂರು: ಎಚ್‌ಎಂಟಿ ಸಂಸ್ಥೆಗೆ ನೀಡಿರುವ ಅರಣ್ಯ ಭೂಮಿ ವಿಚಾರ ಮತ್ತೊಮ್ಮೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸರ್ಕಾರದ ನಡುವೆ ಆರೋಪ–ಪ್ರತ್ಯಾರೋಪಗಳು ಜೋರಾಗಿವೆ. ಕುಮಾರಸ್ವಾಮಿ ಆರೋಪಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.

ಎಚ್‌ಎಂಟಿ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿರುವಾಗ ರಾಜ್ಯ ಸರ್ಕಾರ ಅಡ್ಡಿಪಡಿಸಲು ಅರಣ್ಯ ಇಲಾಖೆಯನ್ನು ಬಳಸುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಗಡುವು ವಿಧಿಸಿ ನೋಟಿಸ್ ನೀಡಿರುವುದು ಕಾನೂನುಬಾಹಿರ ಹಾಗೂ ನ್ಯಾಯಾಂಗ ನಿಂದನೆಗೆ ಸಮಾನ ಎಂದೂ ಅವರು ವಾದಿಸಿದ್ದರು.

ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ 430 ಎಕರೆ ಅರಣ್ಯ ಭೂಮಿಯನ್ನು ವಾಪಸ್ ಪಡೆಯುವ ಆದೇಶವೂ ಅಧಿಕಾರ ವ್ಯಾಪ್ತಿಗೆ ಮೀರಿದದ್ದು ಎಂದು ಕುಮಾರಸ್ವಾಮಿ ಟೀಕಿಸಿದರು. ಎಚ್‌ಎಂಟಿ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ತರಲು ಕೇಂದ್ರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ದುರುದ್ದೇಶದಿಂದ ಕ್ರಮ ಕೈಗೊಂಡಿದೆ ಎಂದೂ ಅವರು ಆರೋಪಿಸಿದರು.

ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್ RTI ವ್ಯಾಪ್ತಿಗೆ ತರಲು ಸಿಪಿಐ(ಎಂ) ಸಂಸದ ಬ್ರಿಟ್ಟಾಸ್ ಒತ್ತಾಯ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ ಖಂಡ್ರೆ, “ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಬಳಸಿರುವುದು ಎಚ್‌ಎಂಟಿ ಸಂಸ್ಥೆಯೇ ಹೊರತು ಅರಣ್ಯ ಇಲಾಖೆ ಅಲ್ಲ” ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64(ಎ) ಹಾಗೂ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಪ್ರಕಾರ, ಅರಣ್ಯ ಭೂಮಿ ಎಂದರೆ ಅದು ಅರಣ್ಯವಾಗಿಯೇ ಉಳಿಯಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದರು.

ಕೆಲವು ಅಧಿಕಾರಿಗಳು ಅನುಮತಿ ಇಲ್ಲದೆ ಡಿ-ನೋಟಿಫಿಕೇಶನ್ ಮಾಡಲು ಮುಂದಾಗಿದ್ದ ಹಿನ್ನೆಲೆ ಅವರಿಗೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈಗ ಸರ್ಕಾರವೇ ಆ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯದ ಮೊರೆ ಹೋಗಿದೆ ಎಂದು ಖಂಡ್ರೆ ತಿಳಿಸಿದರು.

“ಎಚ್‌ಎಂಟಿ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿ. ಇದು ಬೆಂಗಳೂರಿನ ಜನರಿಗೆ ಶ್ವಾಸತಾಣವಾಗಿದ್ದು, ಇಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸುವ ಉದ್ದೇಶವಿದೆ. ಇದನ್ನು ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯುವುದು ಅಸಂಬದ್ಧ” ಎಂದು ಅವರು ತಿರುಗೇಟು ನೀಡಿದರು.

ಈ ವಿವಾದ ರಾಜಕೀಯವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದ ತೀರ್ಪು ಮಹತ್ವ ಪಡೆದುಕೊಳ್ಳಲಿದೆ.

ಇದನ್ನೂ ನೋಡಿ: ನವ ಉದಾರವಾದಿ ಆರ್ಥಿಕತೆಯಲ್ಲಿ ನಿರುದ್ಯೋಗದ ಬಿಕ್ಕಟ್ಟು -ನಾಗರಾಜ ಶಾನಭೋಗ Janashakthi Media

Donate Janashakthi Media

Leave a Reply

Your email address will not be published. Required fields are marked *