ಅಭಿವೃದ್ಧಿ ಮತ್ತು ಲಿಂಗ ಸಮಾನತೆ

ಸಂಪುಟ 10 ಸಂಚಿಕೆ 2 ಜನವರಿ 10 – 2016, ಅತಿಥಿ ಅಂಕಣ – ಡಾ. ಟಿ. ಆರ್ ಚಂದ್ರಶೇಖರ್ 

ಡಾ. ನಾರಾಯಣಾಚಾರ್ಯ ಅವರು ಮಹಿಳೆಯರ ಮಾಸಿಕ ಋತುಚಕ್ರದ ಬಗ್ಗೆ ವಿಚಿತ್ರವಾದ ವಿವರಣೆ ನೀಡಿದ್ದಾರೆ. ಗಂಡನ ಆಕ್ರಮಣವನ್ನು ಆ ಸಮಯದಲ್ಲಿ ತಡೆಯುವುದಕ್ಕಾಗಿ ಅದನ್ನು ಸೂತಕ ಎಂದು ಪುರೋಹಿತ ವರ್ಗ ಆಚರಣೆಗೆ ತಂದಿದೆ ಎಂಬುದು ಅವರ ವೇದಾಗಮ ಆಧಾರಿತ ವ್ಯಾಖ್ಯಾನ. ಹಾಗಾದರೆ ಅವರ ಮೇಲೆ ದೇವಾಲಯ ಪ್ರವೇಶಕ್ಕೆ ನಿಷೇಧ ಏಕೆ ಸ್ವಾಮಿ? ಅಲ್ಲಿ ಯಾರ ಆಕ್ರಮಣ ಇರುತ್ತದೆಯಯ್ಯಾ! ಇದೆಂತಹ ಬ್ರಹ್ಮ ಜ್ಞಾನವಯ್ಯಾ?

ಸಾಮಾನ್ಯವಾಗಿ ಲಿಂಗ ಸಮಾನತೆಯ ವಿಷಯವನ್ನು ಮಹಿಳೆಯರಿಗೆ ಸಂಬಂಧಿಸಿದ್ದು ಎಂದು ಭಾವಿಸಲಾಗಿದೆ. ಇದನ್ನು ಖಾಸಗಿಯಾದದ್ದು ಮತ್ತು ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ತಿಳಿಯಲಾಗಿದೆ. ಆದ್ದರಿಂದ ಮಹಿಳೆಯರ ಸಮಸ್ಯೆಗಳನ್ನು ಶಾಸನಗಳಿಂದ ಸರಿಪಡಿಸುವುದು ಸಾಧ್ಯವಿಲ್ಲ, ಮಹಿಳೆಯರ ವಿಷಯದಲ್ಲಿ ಶಾಸನಗಳು ಪ್ರವೇಶಿಸಲು ಬರುವುದಿಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯ, ಹಿಂಸೆ, ಮಾನಭಂಗ, ಪ್ರತ್ಯೇಕೀಕರಣ, ಶೋಷಣೆÉಗಳ ಹಿಂದೆ ಲಿಂಗ ತಾರತಮ್ಯದ ಪಾತ್ರವಿದೆ. ಮಹಿಳೆಯರ ಕಾರ್ಯಕ್ಷೇತ್ರವೇನಿದ್ದರೂ ಅದು ಕುಟುಂಬಕ್ಕೆ, ಗಂಡ, ಮಕ್ಕಳಿಗೆ ಸೀಮಿತವಾದುದು ಎನ್ನಲಾಗಿದೆ. ಜ್ಞಾನಶಿಸ್ತುಗಳು ಮತ್ತು ಸರ್ಕಾರಗಳು ಅವರ ಎಲ್ಲ ಬಗೆಯ ದುಡಿಮೆಯನ್ನು ರಾಷ್ಟ್ರೀಯ ಉತ್ಪನ್ನದ ಖಾತೆಯಲ್ಲಿ ಸೇರಿಸಲು ಸಿದ್ದವಿಲ್ಲ. ಈ ಭಾವನೆ ಸಮಾಜದಲ್ಲಿ ಇಂದು ಎಷ್ಟು ವ್ಯಾಪಕವಾಗಿದೆ ಮತ್ತು ಎಷ್ಟು ಆಳವಾಗಿ ಬೇರೂರಿದೆ ಎಂದರೆ ಲಿಂಗ ಅಸಮಾನತೆಯು ಅನಿವಾರ್ಯ ಮತ್ತು ಅದನ್ನು ಅನುಭವಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಅನ್ನುವ ಭಾವನೆ ಮಹಿಳೆÉಯರಲ್ಲಿಯೂ ಮನೆಮಾಡಿಕೊಂಡಿದೆ.
ನಮ್ಮ ಸಮುದಾಯಗಳಲ್ಲಿ ಮತ್ತು ಕುಟುಂಬಗಳಲ್ಲಿ ಸಾಮಾಜೀಕರಣವು ಲಿಂಗ ತಾರತಮ್ಯದಿಂದ ಕೂಡಿದೆ. ಲಿಂಗ ತಾರತಮ್ಯದಿಂದ ಕೂಡಿದ ಸಾಮಾಜೀಕರಣಕ್ಕೆ ಒಳಗಾದ ಮಹಿಳೆಯರೂ ಕೂಡ ಲಿಂಗ ತಾರತಮ್ಯದ ಧೋರಣೆ ಬೆಳೆಸಿಕೊಂಡಿದ್ದರೆ ಅದರಲ್ಲಿ ಆಶ್ಚರ್ಯಪಟ್ಟುಕೊಳ್ಳುವುದು ಏನಿಲ್ಲ. ಗಂಡು ಮಕ್ಕಳನ್ನು ಪಡೆಯುವುದರÀ ಬಗೆಗಿನ ವ್ಯಾಮೋಹ ಮಹಿಳೆಯರಲ್ಲಿಯೂ ಇದೆ. ಮಾಸಿಕ ಋತುಚಕ್ರವು ಸೂತಕ-ಮೈಲಿಗೆ ಅನ್ನುವುದರ ಬಗ್ಗೆ ಮಹಿಳೆಯರಲ್ಲಿಯೂ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯನ್ನು ಸಾಧಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅನ್ನುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಲಿಂಗ ತಾರತಮ್ಯವನ್ನು ಸಂಪ್ರದಾಯದ ಹೆಸರಿನಲ್ಲಿ, ಕಂದಾಚಾರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ ಕೆಲಸವು ನಡೆಯುತ್ತಿದೆ. ದಿನನಿತ್ಯ ಇಂತಹ ಸುದ್ಧಿಗಳು ಮಾಧ್ಯಮದಲ್ಲಿ ಪ್ರಕಟವಾಗುತ್ತಿವೆ.

“ಮಹಿಳೆಯರ  ದೇವಾಲಯ ಪ್ರವೇಶ”

ಇತ್ತೀಚಿಗೆ ಮಹಿಳೆಯರ ದೇವಾಲಯ ಪ್ರವೇಶದ ಬಗ್ಗೆ, ಅವರು ಋತುಮತಿ ಗಳಾಗುವುದರಿಂದ ಅವರು ದೇವಾಲಯ ಪ್ರವೇಶಕ್ಕೆ ಅನರ್ಹರು, ಅವರ ಪ್ರವೇಶ ಸೂತಕ ಮುಂತಾದ ಸಂಗತಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಇಂದು ನಡೆಯುತ್ತ್ತಿರುವ ಮೌಢ್ಯ ನಿಷೇಧ ಕಾಯಿದೆ ಕುರಿತಂತೆ ಪುರೋಹಿತಶಾಹಿಗಳ ಅಪಪ್ರಚಾರ ಆರಂಭವಾಗಿದೆ. ಬಹುಶೃತರು ಎನಿಸಿಕೊಂಡಿರುವ ಡಾ. ನಾರಾಯಣಾಚಾರ್ಯ ಅವರು ಮಹಿಳೆಯರ ಮಾಸಿಕ ಋತುಚಕ್ರದ ಬಗ್ಗೆ ‘ವಿಜಯವಾಣಿ’ಯಲ್ಲಿ (ನವೆಂಬರ್ 24, 2015) ‘ಇವರು ನಿಷೇಧಿಸÀ ಬಯಸುವ ಮೂಢನಂಬಿಕೆಗಳು’ ಅನ್ನುವ ಲೇಖನದಲ್ಲಿ ವಿಚಿತ್ರವಾದ ವಿವರಣೆ ನೀಡಿದ್ದಾರೆ. ಗಂಡನ ಆಕ್ರಮಣವನ್ನು ಆ ಸಮಯದಲ್ಲಿ ತಡೆಯುವುದಕ್ಕಾಗಿ ಅದನ್ನು ಸೂತಕ ಎಂದು ಪುರೋಹಿತ ವರ್ಗ ಆಚರಣೆಗೆ ತಂದಿದೆ ಎಂಬುದು ಅವರ ವೇದಾಗಮ ಆಧಾರಿತ ವ್ಯಾಖ್ಯಾನ. ಹಾಗಾದರೆ ಅವರ ಮೇಲೆ ದೇವಾಲಯ ಪ್ರವೇಶಕ್ಕೆ ನಿಷೇಧ ಏಕೆ ಸ್ವಾಮಿ? ಅಲ್ಲಿ ಯಾರ ಆಕ್ರಮಣ ಇರುತ್ತದೆಯಯ್ಯಾ! ಇದೆಂತಹ ಬ್ರಹ್ಮ ಜ್ಞಾನವಯ್ಯಾ?

ಈ ಬಗೆಯ ಲಿಂಗ ತಾರತಮ್ಯವನ್ನು, ಮೌಢ್ಯವನ್ನು ನಿಷೇಧಿಸದೆ ಅವುಗಳನ್ನು ಪೋಷಿಸುವುದು ಸಾಧ್ಯವೇ? ಬಹುಶೃತರೂ ಎನ್ನಿಸಿಕೊಂಡ ‘’ಜ್ಞಾನಿ’ಗಳೆ ಮೌಢ್ಯವನ್ನು ಬಿತ್ತುವುದಾದರೆ ಸಮಾಜವನ್ನು ಯಾರು ಕಾಯಬೇಕು? ಲಿಂಗ ಅಸಮಾನತೆಯನ್ನು ಸಮಾಜದಲ್ಲಿ ಊರ್ಜಿತಗೊಳಿಸುತ್ತಿರುವ ಕ್ರಮಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ತಮ್ಮ ಲೇಖನದಲ್ಲಿ ಇವರು ಮೌಢ್ಯ ನಿಷೇಧ ಕಾಯಿದೆಯನ್ನು ಒತ್ತಾಯಿಸುತ್ತಿರುವವರನ್ನು ‘ಹೆಂಡ’ಕ್ಕೆ ಮತ್ತು ಮೌಢ್ಯವನ್ನು ಸಮರ್ಥಿಸುತ್ತಿರುವವರನ್ನು ‘ಅಮೃತ’ಕ್ಕೆ ಹೋಲಿಸುವುದರ ಮೂಲಕ ತಮ್ಮ ಕುಬ್ಜತನವನ್ನು ಮತ್ತು ಅಸಹ್ಯತನವನ್ನು ತಾವೇ ಜಗಜ್ಜಾಹೀರುಪಡಿಸಿಕೊಂಡಿದ್ದಾರೆ. ಕುಲೀನ ಸ್ತ್ರೀಯರ ಬಗ್ಗೆ ಇವರಿಗೆ ಇಷ್ಟೊಂದು ಅಸಹ್ಯ ಭಾವನೆಯಿದ್ದರೆ ಕೆಳಜಾತಿ ವರ್ಗಗಳ ಮಾಂಸಾಹಾರಿ ಮಹಿಳೆಯರ ಬಗ್ಗೆ ಇವರಿಗೆಷ್ಟು ಅಸೂಯೆ, ಅಸಹನೆ, ಅಗೌರವ ಇರಬೇಕು? ಈ ಹಿಂದೆ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ಸಂದರ್ಭದಲ್ಲಿ ಇವರಂತೆ ಬಹುಶೃತರು ಅನ್ನಿಸಿಕೊಂಡ ಒಬ್ಬ ವಯೋವೃದ್ದ ಶಿಕ್ಷಣ ತಜ್ಞರು ಕೆಳವರ್ಗದವರನ್ನು ಕೊಳಚೆ ನೀರಿಗೂ ಮತ್ತು ಉನ್ನತ ವರ್ಗವನ್ನು ಸಮುದ್ರದ ನೀರಿಗೂ ಹೋಲಿಸಿದ್ದರು.

ಸಮಾಜದಲ್ಲಿ ಲಿಂಗ ಅಸಮಾನತೆಯನ್ನು ಪರಿಶುದ್ಧತೆ, ಮಡಿ, ಸೂತಕ ಮುಂತಾದವುಗಳ ಹೆಸರಿನಲ್ಲಿ ಸತತವಾಗಿ ಪೋಷಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ವೇದಾಗಮಗಳ ಆಧಾರವನ್ನು ನೀಡಲಾಗುತ್ತಿದೆ. ಈ ಶಕ್ತಿಗಳ ಅರ್ಭಟ ಕಳೆದ ಒಂದೆರಡು ವರ್ಷಗಳಿಂದ ಅತಿಯಾಗಿದೆ. ಬಹುಶೃತರೆಲ್ಲರೂ ಇಂದು ಮೌಢ್ಯವನ್ನು ಬಿತ್ತುವ ಕೆಲಸದಲ್ಲಿ ನಿರತರಾಗಿರುವಂತೆ ಕಾಣುತ್ತದೆ.

ಮತ್ತೊಂದು ಸಂಗತಿಯೆಂದರೆ ಲಿಂಗ ಸಮಾನತೆಯನ್ನು ಪುರುಷರು ಮತ್ತು ಮಹಿಳೆಯರ ನಡುವಿನ ಸಂಗತಿಗೆ ಸೀಮಿತಗೊಳಿಸಿಕೊಳ್ಳಲಾಗಿದೆ. ನಿಜ, ಇಲ್ಲಿ ತೀವ್ರ ಅಸಮಾನತೆಯಿದೆ. ಆದರೆ ಇಲ್ಲಿ ಮಹಿಳೆಯರನ್ನು ಒಂದು ಅಭಿನ್ನ ವರ್ಗವನ್ನಾಗಿ ಪರಿಗಣಿಸಲಾಗುತ್ತದೆ. ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರನ್ನು ಒಂದು ಸಾಮಾಜಿಕ ವರ್ಗವನ್ನಾಗಿ ಪರಿಭಾವಿಸಿಕೊಳ್ಳುವುದು ಸಾಧ್ಯವಿಲ್ಲ. ಇಲ್ಲಿ ಜಾತಿ, ಧರ್ಮ, ಅಂತಸ್ತು, ಪ್ರದೇಶ ಮುಂತಾದ ಸಂಗತಿಗಳು ಇವೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಅಂಕಿಅಂಶಗಳನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ ಇಲ್ಲಿ ನೀಡಲಾಗಿದೆ.

ಲಿಂಗ ಸಮಾನತೆಗೆ ಎರಡು ಆಯಾಮಗಳಿವೆ. ಮೊದಲನೆಯದು ಮಹಿಳೆಯರ ಮತ್ತು ಪುರುಷರ ನಡುವಿನ ಅಸಮಾನತೆ. ಎರಡನೆಯದು ಉನ್ನತ ವರ್ಗದ ಮಹಿಳೆಯರು ಮತ್ತು ಕೆಳವರ್ಗದ ಮಹಿಳೆಯರ ನಡುವಿನ ಅಸಮಾನತೆ. ಎರಡರ ವಿರುದ್ಧವೂ ಹೋರಾಡುವ ಅಗತ್ಯವಿದೆ.

ಇಲ್ಲಿನ ಚೌಕಟ್ಟಿನಲ್ಲಿ ನೀಡಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಪ.ಜಾ. (ಪರಿಶಿಷ್ಟ ಜಾತಿ) ಮತ್ತು ಪ.ಪಂ. (ಪರಿಶಿಷ್ಟ ಪಂಗಡ) ಮಹಿಳೆಯರು ಉಳಿದ ಸಾಮಾನ್ಯ ಮಹಿಳೆಯರಿಗೆ ತುಲನೆ ಮಾಡಿದರೆ ಯಾವ ಬಗೆಯ ತಾರತಮ್ಯ, ಅನ್ಯಾಯ, ಶೋಷಣೆ ಅನುಭವಿಸುತ್ತ್ತಿದ್ದಾರೆ ಎಂಬುದು ತಿಳಿಯುತ್ತದೆ. ಲಿಂಗ ಅಸಮಾನತೆಯ ಬಗ್ಗೆ ಎಷ್ಟು ಮಾತನಾಡಲಾಗುತ್ತಿದೆಯೋ ಅದರ ಕಾಲು ಭಾಗದಷ್ಟು ಪ.ಜಾ ಮತ್ತು ಪ.ಪಂ. ಮಹಿಳೆಯರು ಮತ್ತು ಸಾಮಾನ್ಯ ಮಹಿಳೆಯರ ನಡುವಿನ ಸಂಬಂಧದಲ್ಲಿ ಯಾವ ಬಗೆಯ ಅಸಮಾನತೆ ಎದುರಿಸುತ್ತಿದ್ದಾರೆ ಎಂಬುದನ್ನು ಚರ್ಚಿಸಲು ನಮ್ಮ ಸಮಾಜ ಸಿದ್ದವಿಲ್ಲ. ಈ ಬಗೆಯ ಅಸಮಾನತೆಯನ್ನು ಸಮಾಜವೂ ಅನಿವಾರ್ಯ ಎಂದು ಒಪ್ಪಿಕೊಂಡಿರುವಂತೆ ಕಾಣುತ್ತದೆ.

• ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 49.31 (ಸಂಖ್ಯೆ 301.28 ಲಕ್ಷ)
• ಒಟ್ಟು ಪ.ಜಾ. ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ49.73 (ಸಂಖ್ಯೆ 52.10 ಲಕ್ಷ)
• ಒಟ್ಟು ಪ. ಪಂ. ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 49.75 (ಸಂಖ್ಯೆ 21.14 ಲಕ್ಷ)
• ಒಟ್ಟು ದುಡಿಮೆಗಾರರಲ್ಲಿ ಮಹಿಳಾ ದುಡಿಮೆಗಾರರ ಪ್ರಮಾಣ ಶೇ34.45 (ಸಂಖ್ಯೆ 96.02 ಲಕ್ಷ)
• ಒಟ್ಟು ಪ.ಜಾ ದುಡಿಮೆಗಾರರಲ್ಲಿ ಮಹಿಳಾ ದುಡಿಮೆಗಾರರ ಪ್ರಮಾಣ ಶೇ39.92 (ಸಂಖ್ಯೆ 19.90 ಲಕ್ಷ)
• ಒಟ್ಟು ಪ.ಪಂ. ಮಹಿಳೆಯರಲ್ಲಿ ದುಡಿಮೆಗಾರ ಮಹಿಳೆಯರ ಪ್ರಮಾಣ ಶೇ 41.12 ( ಸಂಖ್ಯೆ 8.78 ಲಕ್ಷ)
• ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ 44.62(ಸಂಖ್ಯೆ 181.38 ಲಕ್ಷ)
• ಒಟ್ಟು ಅಕ್ಷರಸ್ಥ ಮಹಿಳೆಯರಲ್ಲಿ ಪ.ಜಾ ಅಕ್ಷರಸ್ಥ ಮಹಿಳೆಯರ ಪ್ರಮಾಣ ಶೇ 14.16 (ಸಂಖ್ಯೆ25.70 ಲಕ್ಷ)
• ಒಟ್ಟು ಅಕ್ಷರಸ್ಥ ಮಹಿಳೆಯರಲ್ಲಿ ಪ.ಪಂ.ದ ಅಕ್ಷರಸ್ಥ ಮಹಿಳೆಯರ ಪ್ರಮಾಣ ಶೇ 5.36 (ಸಂಖ್ಯೆ9.74 ಲಕ್ಷ)
• ಮಹಿಳಾ ದುಡಿಮೆಗಾರರಲ್ಲಿ ಭೂರಹಿತ ಕೂಲಿಕಾರರ ಪ್ರಮಾಣ ಶೇ40.32 (ಸಂಖ್ಯೆ38.72 ಲಕ್ಷ)
• ಕೂಲಿಕಾರ ಮಹಿಳೆಯರಲ್ಲಿ ಪ.ಜಾ. ಕೂಲಿಕಾರರ ಪ್ರಮಾಣ ಶೇ 27.81 (ಸಂಖ್ಯೆ 10.77 ಲಕ್ಷ)
• ಕೂಲಿಕಾರ ಮಹಿಳೆಯರಲ್ಲಿ ಪ.ಪಂ. ಕೂಲಿಕಾರರ ಪ್ರಮಾಣ ಶೇ 12.80 (ಸಂಖ್ಯೆ 4.96ಲಕ್ಷ)

ಸಾಮಾನ್ಯ ಮಹಿಳೆಯರಿಗೆ ಸಂಬಂಧಿಸಿದಂತೆ ಲಿಂಗ ಅಸಮಾನತೆಯು ಒಂದು ಆಯಾಮವನ್ನು ಪಡೆದಿದ್ದರೆ ಪ.ಜಾ ಮತ್ತು ಪ.ಪಂ. ಮಹಿಳೆಯರು ಮೂರು ಬಗೆಯ ತಾರತಮ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಮಹಿಳೆಯರು ಎಂಬ ಕಾರಣಕ್ಕೆ ಸಾಮಾನ್ಯ ಮಹಿಳೆಯರು ಎದುರಿಸುತ್ತಿರುವಂತೆ ಲಿಂಗ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಎರಡನೆಯದಾಗಿ ಪ.ಜಾ ಮತ್ತು ಪ.ಪಂ. ಮಹಿಳೆಯರು ಜಾತಿಗೆ ಸಂಬಂಧಿಸಿದಂತೆ ಪ್ರತ್ಯೇಕೀಕರಣವನ್ನು ಮತ್ತು ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಮೂರನೆಯದಾಗಿ ಬಡವರು, ಅನಕ್ಷರಸ್ಥರು ಅನ್ನುವ ಕಾರಣಕ್ಕೆ ವರ್ಗ ಅಸಮಾನತೆಯನ್ನು, ಆರ್ಥಿಕ ಶೋಷಣೆಯನ್ನು ಎದುರಿಸುತ್ತಿದ್ದಾರೆ. ಒಟ್ಟು ಅಕ್ಷರಸ್ಥ ಮಹಿಳೆಯರಲ್ಲಿ ಪ.ಜಾ. ಮತ್ತು ಪ.ಪಂ,ದ ಅಕ್ಷರಸ್ಥ ಮಹಿಳೆಯರ ಪ್ರಮಾಣ ಅವರು ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದ್ದಾರೋ ಅದಕ್ಕಿಂತ ಕಡಿಮೆಯಿದೆ(ಅದು ಕ್ರಮವಾಗಿ ಶೇ14.16 ಮತ್ತು ಶೇ5.36). ಆದರೆ ದುಡಿಮೆಗೆ ಬಂದರೆ ಅವರ ಪ್ರಮಾಣವು ಅವರು ಜನಸಂಖ್ಯೆಯಲ್ಲಿ ಪಡೆದಿರುವ ಪ್ರಮಾಣಕ್ಕಿಂತ ಅಧಿಕವಾಗಿದೆ(ಕ್ರಮವಾಗಿ ಶೇ27.81 ಮತ್ತು ಶೇ12.80).

ಒಟ್ಟು ಮಹಿಳೆಯರ ಸಾಕ್ಷರತಾ ಪ್ರಮಾಣ 2011ರಲ್ಲಿ ಶೇ68.08. ಆದರೆ ಪ.ಜಾ. ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ 56.58 ಮತ್ತು ಪ.ಪಂ. ಸಾಕ್ಷರತಾ ಪ್ರಮಾಣ ಶೇ 52.96. ಒಂದು ವೇಳೆ ಸಾಮಾಜಿಕ ಪ್ರತ್ಯೇಕೀಕರಣ-ಅಸ್ಪøಶ್ಯತೆ ಇಲ್ಲದಿದಿದ್ದರೆ ಅವರ ಸಾಕ್ಷರತಾ ಪ್ರಮಾಣವೂ ಶೇ68.08ರಷ್ಟಿರ ಬೇಕಾಗಿತ್ತು. ಅಸ್ಪøಶ್ಯತೆಯ ಆಚರಣೆಯಿಂದ ಪ.ಜಾ. ಮತ್ತು ಪ.ಪಂ. ಮಹಿಳೆಯರಿಗೆ ಉಂಟಾಗಿರುವ ಹಾನಿ ಕ್ರಮವಾಗಿ ಶೇ 11.5 ಮತ್ತು ಶೇ15.12. ‘ಪ.ಜಾ. ಮತ್ತು ಪ.ಪಂ.ಗಳಿಗೆ ಇನ್ನೆಷ್ಟು ವರ್ಷಗಳ ಕಾಲ ಮೀಸಲಾತಿ ನೀಡಬೇಕು’ ಎಂಬ ಮಾತುಗಳು ಇಂದು ಕೇಳಿ ಬರುತ್ತಿವೆ. ಮೀಸಲಾತಿ ನೀತಿಯನ್ನು ಮರುಪರಿಶೀಲಿಸಬೇಕು-ಪರಿಷ್ಕರಿಸಬೇಕು ಎಂದು ಬಹುಶೃತರ ನಾಯಕರೊಬ್ಬರು ಒಂದೆರಡು ತಿಂಗಳುಗಳ ಹಿಂದೆ ಕರೆ ನೀಡಿದ್ದರು. ಸಮಾಜವು ಆಚರಿಸುತ್ತಿರುವ ಘೋಷಿತ ಮತ್ತು ಅಘೋಷಿತ, ಹಾಗೂ ಗೋಚರ ಮತ್ತು ಅಗೋಚರ ಅಸ್ಪøಶ್ಯತೆÉಯಿಂದಾಗಿ ಅವರು ಏನೆಲ್ಲ ಅವಮಾನ, ಅನ್ಯಾಯ, ತಾರತಮ್ಯ ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆ ಈ ಬಹುಶೃತರು ಯೋಚಿಸಲು ಸಿದ್ದರಿಲ್ಲ. ಮೀಸಲಾತಿಯನ್ನು ಇವರೆಲ್ಲ ದಾನ ಕೊಟ್ಟಿರುವವರಂತೆ ಅದರ ಬಗ್ಗೆ ಉಗ್ರ ಟೀಕೆ ಮಾಡ ತೊಡಗಿದ್ದಾರೆ.

ಲಿಂಗ ಸಮಾನತೆಯನ್ನಾಗಲಿ ಅಥವಾ ಸಾಮಾನ್ಯ ಸಾಮಾಜಿಕ ಸಮಾನತೆಯನ್ನಾಗಲಿ ಶಾಸನಗಳಿಂದ, ಕಾನೂನುಗಳ ಮೂಲಕ ಸಾಧಿಸಿಕೊಳ್ಳುವುದು ಕಷ್ಟಸಾಧ್ಯ. ಶಾಸನಗಳು ಬೇಕು. ಆದರೆ ಸಮಾಜದಲ್ಲಿ ಜನರ ಧೋರಣೆಯಲ್ಲಿ ಬದಲಾವಣೆ ನಡೆಯದಿದ್ದರೆ ಶಾಸನಗಳು ಏನೂ ಮಾಡುವುದಕ್ಕಾಗುವುದಿಲ್ಲ. ಮಾಸಿಕ ಋತುಚಕ್ರದ ಕಾರಣವಾಗಿ ಮಹಿಳೆಯರಿಗೆ ದೇವಾಲಯ ಪ್ರವೇಶವನ್ನು ನಿóಷೇದಿಸುವ ಬಗ್ಗೆ ಯೋಚಿಸುತ್ತಿರುವ ಬಹುಶೃತರು ತಮ್ಮ ಪರವಾಗಿ ನಿಲ್ಲುವಂತೆ ಮಹಿಳೆಯರಿಗೂ ಪ್ರಚೋದನೆ ನೀಡುತ್ತಿದ್ದಾರೆ. ಕೆಲವು ಬಹುಶೃತ ಮಹಿಳೆಯರು ಅವರ ಪರವಾಗಿ ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರು ದೇವಾಲಯವನ್ನು ಪ್ರವೇಶಿಸಿದರು ಅನ್ನುವ ಕಾರಣಕ್ಕೆ ಆ ದೇವಾಲಯವನ್ನು ಶುದ್ಧೀಕರಣಕ್ಕೆ ಒಳಪಡಿಸಲಾಯಿತು.

ಈ ಬಗೆಯ ಲಿಂಗ ತಾರತಮ್ಯ, ಅಸಮಾನತೆ, ಮೌಢ್ಯಗಳಿಂದಾಗಿ ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಕಡಿಮೆಯಾಗುತ್ತಿದೆ. ಯಾವುದನ್ನು ನಾವು ಲಿಂಗ ಅನುಪಾತ ಎಂದು ಕರೆಯುತ್ತೇವೇಯೋ ಅದು 0-6 ವಯೋಮಾನದಲ್ಲಿ ಕುಸಿಯುತ್ತಿದೆ ಮತ್ತು ಒಟ್ಟು ಜನಸಂಖ್ಯೆಯಲ್ಲಿ ಅದರ ಪ್ರಮಾಣ ಸಾವಿರಕ್ಕಿಂತ ಕಡಿಮೆಯಿದೆ. ಉತ್ತರ ಭಾರತದ ಗುಜರಾತ್, ಪಂಜಾಬ್, ಹರಿಯಾಣ, ರಾಜಸ್ಥಾನ್ ಮುಂತಾದ ರಾಜ್ಯಗಳಲ್ಲಿ 0-6 ವಯೋಮಾನದ ಮಕ್ಕಳ ಲಿಂಗ ಅನುಪಾತ 900ಕ್ಕಿಂತ ಕಡಿಮೆಯಿದೆ. ಕರ್ನಾಟಕದಲ್ಲಿ ಒಟ್ಟು ಮಕ್ಕಳ ಲಿಂಗ ಅನುಪಾತ 2011ರಲ್ಲಿ 948ರಷ್ಟಿದ್ದರೆ ಪ.ಜಾ. ಮತ್ತು ಪ.ಪಂ.ಗಳಲ್ಲಿ ಅದು ಕ್ರಮವಾಗಿ 963 ಮತ್ತು 964ರಷ್ಟಿದೆ.

ಲಿಂಗ ತಾರತಮ್ಯ ಅನ್ನುವುದು ಕೇವಲ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು ಇಡೀ ಸಮಾಜಕ್ಕೆ ಸಂಬಂಧಿಸಿದೆ. ಇದು ಪ್ರಧಾನವಾಗಿ ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿ. ಲಿಂಗ ಅಸಮಾನತೆಯು ತನ್ನ ದುಷ್ಪರಿಣಾಮಗಳನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುತ್ತಿರುತ್ತದೆ.

ವಿಶ್ವಬ್ಯಾಂಕು ಲಿಂಗ ಸಮಾನತೆಯನ್ನು ‘ಸ್ಮಾರ್ಟ್ ಇಕನಾಮಿಕ್ಸ್’ ಎಂದು ಕರೆದಿದೆ(2012, ವಿಶ್ವ ಅಭಿವೃದ್ಧಿ ವರದಿ). ಅಮತ್ರ್ಯಸೆನ್(1990) ಮಹಿಳೆಯರ ದುಡಿಮೆಯನ್ನು ‘ಸಾಮಾಜಿಕ ತಂತ್ರಜ್ಞಾನ’ ಎಂದು ಕರೆದಿದ್ದಾನೆ. ರಾಷ್ಟ್ರದ ಅಭಿವೃದ್ಧಿಗೆ ಅವರು ಅಪಾರ ಕಾಣಿಕೆ ನೀಡುತ್ತಿದ್ದರೂ ಅದನ್ನು ಗುರುತಿಸುವ, ಮನ್ನಿಸುವ, ಮಾಪನ ಮಾಡುವ ಕ್ರಮಗಳು ಜಾರಿಯಲ್ಲಿಲ್ಲ. ಈ ಬಗ್ಗೆ ಕರ್ನಾಟಕ ದಿಟ್ಟ ಹೆಜ್ಜೆಗಳನ್ನು ಇಡಬೇಕಾಗಿದೆ. ಲಿಂಗ ಸಮಾನತೆಯನ್ನು ಸಾಧಿಸಿಕೊಳ್ಳಲು ಬಂಡವಾಳ, ವಿದೇಶಿ ಬಂಡವಾಳದ ಅಗತ್ಯವಿಲ್ಲ. ಆದರೆ ಅದು ಅಭಿವೃದ್ಧಿಯ ಚಾಲಕÀ ಶಕ್ತಿಯಾಗಿದೆ. ಇನ್ನೆರಡು ತಿಂಗಳುಗಳಲ್ಲಿ ನಮ್ಮ ಸರ್ಕಾರ ತನ್ನ 2016-2017ನೆಯ ಸಾಲಿನ ಬಜೆಟ್ಟನ್ನು ಮಂಡಿಸುತ್ತದೆ. ಅದರಲ್ಲಿ ವಿಶೇಷವಾಗಿ ದುಡಿಯುವ ಮಹಿಳೆಯರಿಗೆ ಸಂಬಂಧಿಸಿದಂತೆ ವಿಶಿಷ್ಟವಾದ ಕ್ರಮಗಳನ್ನು, ಕಾರ್ಯಕ್ರಮಗಳನ್ನು, ಹೆಚ್ಚು ಸಂಪಲ್ಮೂಲಗಳನ್ನು, ನೀಡುವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾವಿಸಬಹುದು.

ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 96.72 ಲಕ್ಷ ದುಡಿಯುವ ಮಹಿಳೆಯರಿದ್ದಾರೆ. ಇವರಲ್ಲಿ ಪ.ಜಾ. ಮತ್ತು ಪ.ಪಂ. ದುಡಿಯುವ ಮಹಿಳೆಯರ ಪ್ರಮಾಣ ಕ್ರಮವಾಗಿ ಶೇ 20.73 ಮತ್ತು ಶೇ9.14. ಅವರ ಸಂಖ್ಯೆ ಸಣ್ಣದೇನಲ್ಲ. ಇದರಲ್ಲಿ ಭೂರಹಿತ ದಿನಗೂಲಿ ಮಹಿಳಾ ದುಡಿಮೆಗಾರರ ಸಂಖ್ಯೆ 56.99 ಲಕ್ಷ. ಇವರಲ್ಲಿ ಪ.ಜಾ. ಮಹಿಳೆಯರ ಸಂಖ್ಯೆ 13.09 ಲಕ್ಷ ಮತ್ತು ಪ.ಪಂ. ಮಹಿಳೆಯರ ಸಂಖ್ಯೆ 5.5.

ಒಟ್ಟು ಮಹಿಳೆಯರಿಗೆ, ಅದರಲ್ಲಿ ಭೂರಹಿತ ದಿನಗೂಲಿ ಪರಿಶಿಷ್ಟ ಮಹಿಳೆಯರಿಗೆ ಬಜೆಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ‘ಅಹಿಂದ’ ಸಿದ್ಧಾಂತಕ್ಕೆ ಮಹಿಳಾ ಮುಖವಿದೆ ಅನ್ನುವುದನ್ನು ಸರ್ಕಾರ ಗಮನಿಸಬೇಕು. ಅಹಿಂದ ತತ್ವವನ್ನು ಅಪ್ಪಿಕೊಂಡಿರುವ ನಮ್ಮ ಸರ್ಕಾರ ಈ ಬಗ್ಗೆ ಕ್ರಾಂತಿಕಾರಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸಿದ್ದೇವೆ.

Donate Janashakthi Media

Leave a Reply

Your email address will not be published. Required fields are marked *