ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಷಾ ವಿವಾದ: ಕನ್ನಡದಲ್ಲೇ ಫಾರ್ಮ್‌ಗಳಿಗೆ ಬೆಂಗಳೂರಿನಲ್ಲಿ ವಿರೋಧ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬೆಂಗಳೂರಿನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಆರ್ ಫಾರ್ಮ್‌ಗಳು ಮತ್ತು 2002ರ ಮತದಾರರ ಪಟ್ಟಿಗಳು ಕೇವಲ ಕನ್ನಡದಲ್ಲೇ ಲಭ್ಯವಾಗುತ್ತಿರುವುದನ್ನು ಪ್ರಶ್ನಿಸಿ ಅನೇಕ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ, ಬಹುಸಂಸ್ಕೃತಿಯ ನಗರವಾಗಿರುವ ಬೆಂಗಳೂರಿನಲ್ಲಿ ಗಣನೀಯ ಪ್ರಮಾಣದ ಜನರಿಗೆ ಕನ್ನಡ ಓದಲು ಸಾಧ್ಯವಾಗದ ಹಿನ್ನೆಲೆ, ಈ ಭಾಷಾ ಅಡೆತಡೆ ಅರ್ಹ ಮತದಾರರ ಪಾಲ್ಗೊಳ್ಳುವಿಕೆಯನ್ನು ಕುಗ್ಗಿಸಬಹುದು ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಸುಮಾರು 40% ಜನರು ಕನ್ನಡ ಓದಲು ಸಾಧ್ಯವಿಲ್ಲವೆಂಬ ಅಂದಾಜು ನಡುವೆ, ಅವರು ತಮ್ಮ ವಿವರಗಳನ್ನು ಹೇಗೆ ಪರಿಶೀಲಿಸಬೇಕು ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಎಸ್‌ಐಆರ್ ಸಂಬಂಧಿತ ಎಲ್ಲಾ ದಾಖಲೆಗಳನ್ನು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸರ್ಜಾಪುರ ಹೋಬಳಿ ಭೂ ಸ್ವಾಧೀನ ರೈತರ ಮೇಲೆ ಹಲ್ಲೆ, ಬಂಧನ ಕ್ರಮಕ್ಕೆ ಸಿಪಿಐ(ಎಂ) ಖಂಡನೆ

ಪ್ರಮುಖ ಟಿವಿ ಚಾನೆಲ್‌ನ ನಿರ್ದೇಶಕರೊಬ್ಬರು, “ನನಗೆ ಕನ್ನಡ ಓದಲು ಬರುತ್ತದೆ, ಆದರೆ ಇಂದಿನ ಯುವಪೀಳಿಗೆ, ವಿಶೇಷವಾಗಿ Gen Z, ಇಂಗ್ಲಿಷ್‌ಗೆ ಹೆಚ್ಚು ಒಲವು ಹೊಂದಿದೆ. ಫಾರ್ಮ್‌ಗಳು ಮತ್ತು ಮತದಾರರ ಪಟ್ಟಿಗಳು ಇಂಗ್ಲಿಷ್‌ನಲ್ಲೂ ಇರಬೇಕು ಎಂಬ ಅನೇಕ ವಾಟ್ಸಾಪ್ ಸಂದೇಶಗಳು ನನಗೆ ಬಂದಿವೆ,” ಎಂದು ತಿಳಿಸಿದ್ದಾರೆ.

ಸಿಎಚ್‌ಆರ್‌ಐ ನಿರ್ದೇಶಕ ವೆಂಕಟೇಶ್ ನಾಯಕ್ ಅವರು, ಚುನಾವಣಾ ಆಯೋಗದ ಉದ್ದೇಶ ಎಲ್ಲರಿಗೂ ಸುಲಭವಾಗಿ ಭಾಗವಹಿಸಲು ಅವಕಾಶ ಕಲ್ಪಿಸುವುದಾಗಿರಬೇಕು ಎಂದು ಹೇಳಿದ್ದಾರೆ. “ಎಸ್‌ಐಆರ್ ಪ್ರಕ್ರಿಯೆ ಎಲ್ಲರಿಗೂ ಅನುಕೂಲಕರವಾಗಿರಬೇಕು. ದೇಶದ ವಿವಿಧ ಭಾಗಗಳಿಂದ ಜನರನ್ನು ಬೆಂಗಳೂರಿಗೆ ಕೆಲಸ, ಹೂಡಿಕೆಗಾಗಿ ಆಕರ್ಷಿಸುವ ಸರ್ಕಾರ, ಚುನಾವಣಾ ಪ್ರಕ್ರಿಯೆಯಲ್ಲೂ ಅದೇ ಸಮಾನತೆಯನ್ನು ತೋರಿಸಬೇಕು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅಂಬುಕೂಮಾರ್ ಅವರು, ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ, ಜನರು ವಿಷಯವನ್ನು ಅರ್ಥಮಾಡಿಕೊಳ್ಳಲು ಗೂಗಲ್ ಟ್ರಾನ್ಸ್‌ಲೇಟ್ ಬಳಸಬಹುದು ಎಂದು ಸೂಚಿಸಿದ್ದಾರೆ.

ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್‌ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *