ಬೆಂಗಳೂರು: ರಾಜ್ಯದಲ್ಲಿ ಶಾಸಕರ ಶಿಫಾರಸು ಪತ್ರಗಳಿಲ್ಲದೆ ಪೊಲೀಸ್ ಇಲಾಖೆಯಲ್ಲೂ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಗೃಹ ಇಲಾಖೆ ಗಂಭೀರ ಚಿಂತನೆ ಆರಂಭಿಸಿದೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ಮಾದರಿಯನ್ನು ಅನುಸರಿಸುವ ಈ ಕ್ರಮ, ಪೊಲೀಸ್ ವರ್ಗಾವಣೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.
ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೊಸ ನೀತಿ ಜಾರಿಗೆ ಇರುವ ತಾಂತ್ರಿಕ ಅಡಚಣೆಗಳ ಕುರಿತು ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವ್ಯವಸ್ಥೆ ಜಾರಿಯಾದರೆ ಆಡಳಿತಾತ್ಮಕ ಮಾತ್ರವಲ್ಲ, ರಾಜಕೀಯ ವಲಯದಲ್ಲಿಯೂ ಸಂಚಲನ ಮೂಡುವ ಸಾಧ್ಯತೆ ಇದೆ. ಹೀಗಾಗಿ, ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಹಂತ ಹಂತವಾಗಿ ಈ ನೀತಿಯನ್ನು ಜಾರಿಗೆ ತರಲು ಸಚಿವರು ತಂತ್ರ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆ. ಜನರಲ್ ಧೀರಜ್ ಸೇಠ್ ನೇಮಕ
ಇನ್ಸ್‌ಪೆಕ್ಟರ್, ಎಸಿಪಿ ಮಟ್ಟದಲ್ಲಿ ಬದಲಾವಣೆ?
2011ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಪೊಲೀಸ್ ವರ್ಗಾವಣೆಗಳಿಗಾಗಿ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ (PEB) ರಚನೆಯಾಗಿತ್ತು. ಆದರೆ ಈ ಮಂಡಳಿ ಆಡಳಿತ ಪಕ್ಷದ ಶಿಫಾರಸುಗಳಿಗೆ ಮುದ್ರೆ ಹಾಕುವ ಮಟ್ಟಕ್ಕೆ ಸೀಮಿತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ವಿಶೇಷವಾಗಿ ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್ಪಿ/ಎಸಿಪಿ ಹುದ್ದೆಗಳ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ಟೀಕೆಗಳಿವೆ. ಇತ್ತೀಚೆಗೆ 9 ತಿಂಗಳ ವಿಳಂಬದ ನಂತರ ನಡೆದ ಸಾಮೂಹಿಕ ವರ್ಗಾವಣೆಗಳು ಇದಕ್ಕೆ ಉದಾಹರಣೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲೇ ಅರ್ಹತೆ ಆಧಾರಿತ, ಪಾರದರ್ಶಕ ವ್ಯವಸ್ಥೆ ರೂಪಿಸಲು ಕೌನ್ಸೆಲಿಂಗ್ ಮಾದರಿಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಈಗಾಗಲೇ ಕೆಲ ಮಟ್ಟದಲ್ಲಿ ಜಾರಿ
ಬೆಂಗಳೂರು ಕಮೀಷನರೇಟ್ ಸೇರಿದಂತೆ ಕೆಲವು ವಲಯಗಳಲ್ಲಿ ಸಬ್-ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೇಬಲ್‌ಗಳ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಇದೇ ಮಾದರಿಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವ ಯೋಜನೆ ರೂಪಿಸಲಾಗುತ್ತಿದೆ.
ಪಿಡಿಓ ಮಾದರಿ ಪ್ರೇರಣೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಓಗಳ ವರ್ಗಾವಣೆಯಲ್ಲೂ ರಾಜಕೀಯ ಹಸ್ತಕ್ಷೇಪ ದೊಡ್ಡ ಸಮಸ್ಯೆಯಾಗಿತ್ತು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕರ ವಿರೋಧವನ್ನೂ ಲೆಕ್ಕಿಸದೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರು. ಅದೇ ಮಾದರಿಯನ್ನು ಪೊಲೀಸ್ ಇಲಾಖೆಯಲ್ಲೂ ಅನ್ವಯಿಸಲು ಯೋಚಿಸಲಾಗಿದೆ.
ಕಾಯ್ದೆ ತಿದ್ದುಪಡಿ ಸಾಧ್ಯತೆ
ಹೊಸ ವ್ಯವಸ್ಥೆ ಜಾರಿಗೆ ಮುನ್ನ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ (PEB) ಸಂಬಂಧಿತ ನಿಯಮಗಳಲ್ಲಿ ತಿದ್ದುಪಡಿ ತರಬಹುದೆಂಬ ಸಾಧ್ಯತೆಗಳಿವೆ. ಪ್ರಸ್ತುತ ಪಿಐ ಮತ್ತು ಎಸಿಪಿ ಹುದ್ದೆಗಳಿಗೆ ಎರಡು ವರ್ಷಗಳ ಅವಧಿ ನಿಗದಿಯಿದೆ.
ಶಾಸಕರ ಒಪ್ಪಿಗೆ ಸವಾಲು
ಪೊಲೀಸರ ವರ್ಗಾವಣೆಯಲ್ಲಿ ಶಾಸಕರ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಈ ಹೊಸ ನೀತಿಗೆ ರಾಜಕೀಯ ವಿರೋಧ ಎದುರಾಗುವ ಸಾಧ್ಯತೆ ಇದೆ. ತಮ್ಮ ಕ್ಷೇತ್ರಗಳಲ್ಲಿ ಅಧಿಕಾರಿಗಳ ನೇಮಕಾತಿ ರಾಜಕೀಯವಾಗಿ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ, ಶಾಸಕರು ಈ ಬದಲಾವಣೆಯನ್ನು ಒಪ್ಪಿಕೊಳ್ಳುವರೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ನೋಡಿ: FIFA World Cup 2026 | ಮೆಸ್ಸಿ, ರೊನಾಲ್ಡೊ, ಎಂಬಾಪ್ಪೆ ಮೇಲೆ ಎಲ್ಲರ ಕಣ್ಣು! ಫುಟ್ಬಾಲ್‌ಗೆ AI ಎಂಟ್ರಿ!
