ಕೆ.ಎಂ. ನಾಗರಾಜ್ – ಕುರುಡು ಕಾಂಚಾಣ 9 ಸಂಚಿಕೆ 50, 13 ಡಿಸೆಂಬರ್ 2015
ವ್ಯಾಪಕವಾಗಿ ಸರಗಳ್ಳತನ ನಡೆಯುತ್ತಿದ್ದರೂ ಸಮಾಜದಲ್ಲಿ ಬಂಗಾರದ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ಕೊನೆಯ ಪಕ್ಷ, ಸರಗಳ್ಳರ ಭಯದಿಂದಾದರೂ ಮಹಿಳೆಯರು ಬಂಗಾರದ ಠೇವಣಿ ಮಾಡಬಹುದಿತ್ತೇನೋ? ಅಥವಾ, ಅವರಿಗೆ ಸರಗಳ್ಳರ ಮೇಲಿರುವಷ್ಟೇ ಭಯ ಸರ್ಕಾರದ ಮೇಲೂ ಇರಬಹುದೇನೋ?
ಮೋದಿಯವರ ಸಾಹಸಗಳು ಒಂದೊಂದಾಗಿ ಕೈ ಕೊಡುತ್ತಿವೆ. ಅಧಿಕಾರ ಹಿಡಿದ ಕೂಡಲೆ ಬೃಹತ್ ಪ್ರಮಾಣದ ಭೂಮಿ ಸ್ವಾಧೀನಪಡಿಸಿಕೊಳ್ಳು ಹುನ್ನಾರದಿಂದ ಕೈ ಹಾಕಿದ್ದ ಕಾಯ್ದೆಯ ತಿದ್ದುಪಡಿ ಬಿದ್ದುಹೋಯ್ತು. ದೇಶದಲ್ಲಿರುವ 20,000 ಟನ್‍ಗಿಂತಲೂ ಮಿಗಿಲಾದ ಪ್ರಮಾಣದಲ್ಲಿ ನಿಷ್ಕ್ರಿಯವಾಗಿರುವ ಬಂಗಾರವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂಬ ಮೋದಿಯವರ ಭಾರಿ ನಿರೀಕ್ಷೆಯ ಯೋಜನೆಯೂ ಈಗ ತಲೆಕೆಳಗಾಗಿದೆ. 150 ಕೋಟಿ ರೂಪಾಯಿಗಳ ಬಾಂಡ್ ಮಾರಾಟ ಮತ್ತು 400 ಗ್ರಾಂ ಚಿನ್ನದ ಠೇವಣಿ ಪಡೆದಿರುವ ಈ ಯೋಜನೆಗಳು ಎಷ್ಟು ಹೀನಾಯವಾಗಿ ಸೋತಿವೆ ಎಂದರೆ ಬಿಹಾರದ ಸೋಲು ಏನೂ ಅಲ್ಲ. ಈ ಯೋಜನೆಯ ಸೋಲಿಗೆ ಸಾಟಿಯೇ ಇಲ್ಲ.
ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ ಬಂಗಾರ ಆಮದು ಮಾಡಿಕೊಳ್ಳುತ್ತಿರುವ ದೇಶ ಭಾರತ. ಅತ್ಯಧಿಕ ಪ್ರಮಾಣದ ಬಂಗಾರದ ಖಾಸಗಿ ಸಂಗ್ರಹ ಇರುವ ದೇಶವೂ ಭಾರತ. ಇಷ್ಟೊಂದು ಬಂಗಾರದ ಶೇಖರಣೆ ಇರುವ ಭಾರತ ಬಡ ದೇಶವೇ? ಅಲ್ಲ ಎನ್ನುತ್ತಾರೆ ಮೋದಿಯವರು. ನಿಷ್ಕ್ರಿಯವಾಗಿರುವ ಬಂಗಾರವನ್ನು ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸಬಹುದೆಂಬ ಮಹತ್ವಾಕಾಂಕ್ಷೆಯೊಂದಿಗೆ ಮೋದಿಯವರು ನವೆಂಬರ್ ಐದರಂದು ಗೋಲ್ಡ್ ಬಾಂಡ್ ಸ್ಕೀಂ, ಗೋಲ್ಡ್ ಡೆಪಾಸಿಟ್ ಸ್ಕೀಂ, ಮತ್ತು ಗೋಲ್ಡ್ ಕಾಇನ್ ಸ್ಕೀಂ ಎಂಬ ಮೂರು ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ.
ಬಂಗಾರಕ್ಕೆ ಸಂಬಂಧಿಸಿದ ಈ ಯೋಜನೆಗಳ ಮಹತ್ವವನ್ನು ಮೋದಿಯವರು ಹೀಗೆ ಬಣ್ಣಿಸಿದ್ದರು. “ಮಹಿಳೆಯರ ಸಬಲೀಕರಣದಲ್ಲಿ ಬಂಗಾರ ಒಂದು ಸಾಧನ. ಈ ವರ್ಷದಲ್ಲಿ ನಾವು 568 ಟನ್ ಬಂಗಾರ ಬಳಸುವ ಮೂಲಕ, 548 ಟನ್ ಬಂಗಾರ ಬಳಸಿದ ಚೀನಾ ದೇಶವನ್ನು ಈಗಾಗಲೆ ಹಿಂದಿಟ್ಟಿದ್ದೇವೆ. 20,000 ಟನ್‍ಗಿಂತಲೂ ಅಧಿಕ ಚಿನ್ನದ ದಾಸ್ತಾನು ಹೊಂದಿರುವ ನಾವು ಬಡ ದೇಶವಾಗಿ ಉಳಿಯಲು ಕಾರಣವೇ ಇಲ್ಲ. ದೇಶಕ್ಕೆ ಹಚ್ಚಿರುವ “ಬಡತನ”ದ ಹಣೆಪಟ್ಟಿಯನ್ನು ಕಿತ್ತೆಸೆಯಬೇಕು. ಮೇಲಾಗಿ, ಈ ಯೋಜನೆಗಳು ನಾವು ಬಂಗಾರ ಆಮದು ಮಾಡಿಕೊಳ್ಳುವುದನ್ನು ತಗ್ಗಿಸುತ್ತವೆ. ಇವು ಹೆಮ್ಮೆಪಡುವ ಯೋಜನೆಗಳು”.ಈ ಯೋಜನೆಗಳನ್ನು ಸ್ವಾಗತಿಸುತ್ತಾ ಮಾಲೀಕರ ಸಂಘಟನೆ ಫಿಕ್ಕಿ “ಇದೊಂದು ಸರಿಯಾದ ದಾರಿಯಲ್ಲಿ ಇಟ್ಟ ಹೆಜ್ಜೆ. ನಿಷ್ಕ್ರಿಯವಾಗಿರುವ ಬಂಗಾರದ ನಿಧಿಯನ್ನು ಬಳಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ನೆರವು ನೀಡಿದಂತಾಗಿದೆ” ಎಂದು ಹೇಳಿತ್ತು. ಮೋದಿ ಬೆಂಬಲಿಗ ವಿಶ್ಲೇಷಕರೊಬ್ಬರ ವ್ಯಾಖ್ಯಾನ ಹೀಗಿತ್ತು. “ಗೋಲ್ಡ್ ಸ್ಕೀಂಗಳು ಇಡಿಯಾಗಿ ಅಪ್ಪಟ ಸ್ವದೇಶಿ ಕಲ್ಪನೆಗಳು. ಈ ಯೋಜನೆಗಳು ನಿಷ್ಕ್ರಿಯವಾಗಿರುವ ಬಂಗಾರವನ್ನು ಉತ್ಪಾದನೆಯ ಉದ್ದೇಶಗಳಿಗೆ ತಿರುಗಿಸುತ್ತವೆ. ಬೆಲೆ ಏರಿಕೆ/ಹಣದುಬ್ಬರಗಳ ವಿರುದ್ಧ ರಕ್ಷಣೆ ಒದಗಿಸುತ್ತವೆ. ಬಂಗಾರದ ಆಮದು ತಗ್ಗುತ್ತದೆ. ಮತ್ತು ಅವು ಸುಧಾರಣೆಗಳೂ ಆಗಿದ್ದು ಪರಿವರ್ತನೆಗೆ ನೆರವಾಗಬಲ್ಲ ಸಾಮಥ್ರ್ಯ ಹೊಂದಿವೆ.” ಇಷ್ಟೆಲ್ಲಾ ಹಾಡಿ ಹೊಗಳಿದ ಮತ್ತು ನಿರೀಕ್ಷೆ ಹೊಂದಿದ್ದ ಯೋಜನೆಗಳು ಮಣ್ಣು ಮುಕ್ಕಿವೆ!
ಈ ಸ್ಕೀಂಗಳ ವಿಶೇಷವೇನು? ಅವು ಸೋತದ್ದಾದರೂ ಏಕೆ?
ಬಂಗಾರದ ನಾಣ್ಯಗಳು:
ಐದು, ಹತ್ತು ಮತ್ತು ಇಪ್ಪತ್ತು ಗ್ರಾಂ ತೂಕದ, ಒಂದು ಮಗ್ಗುಲಿನಲ್ಲಿ ಅಶೋಕ ಚಕ್ರ ಮತ್ತೊಂದು ಮಗ್ಗುಲಿನಲ್ಲಿ ಗಾಂಧಿ ಚಿಹ್ನೆಯುಳ್ಳ, ನಕಲು ಮಾಡಲಾಗದ ಮತ್ತು ವಿರೂಪಗೊಳಿಸಲಾಗದ ಲಕ್ಷಣಗಳುಳ್ಳ ಅಪ್ಪಟ ಬಂಗಾರದ ನಾಣ್ಯಗಳ ಮಾರಾಟ ಆರಂಭವಾಗಿದೆ. ನಾಣ್ಯಗಳಲ್ಲಿ ಅಶೋಕ ಚಕ್ರದ ಗುರುತಿರುವುದೇ ಒಂದು ಹೆಮ್ಮೆಯ ಸಂಗತಿ ಎಂಬಂತೆ ಪ್ರಚಾರ ನಡೆದಿದೆ. ಬೇರೆ ಏನೂ ವಿಶೇಷವಿಲ್ಲ.
ಗೋಲ್ಡ್ ಬಾಂಡ್ ಸ್ಕೀಂ:
ಬಂಗಾರ(ಯಾವುದೇ ರೂಪದಲ್ಲಿ) ಖರೀದಿಸಿ ಸ್ಟಾಕ್ ಇಟ್ಟುಕೊಳ್ಳುವ ಬದಲು ಗೋಲ್ಡ್ ಬಾಂಡ್‍ಗಳನ್ನು ಕೊಳ್ಳುವ ಯೋಜನೆ. ಗ್ರಾಂ ಒಂದಕ್ಕೆ 2684 ರೂ ದರದಲ್ಲಿ ಗರಿಷ್ಠ 500 ಗ್ರಾಂ ಮೌಲ್ಯದ ಗೋಲ್ಡ್ ಬಾಂಡ್‍ಗಳನ್ನು ಕೊಳ್ಳಬಹುದು. ಎಂಟು ವರ್ಷಗಳ ಅವಧಿಯ ಈ ಬಾಂಡ್‍ಗಳಿಗೆ 2.75% ಬಡ್ಡಿ ಸಿಗುತ್ತದೆ. ಐದು ವರ್ಷದ ನಂತರ ಸ್ಕೀಂನಿಂದ ಹೊರಹೋಗುವಾಗ, ಮಾರ್ಕೆಟ್ ಬಂಗಾರದ ದರದಲ್ಲಿ ಹಣ ಪಡೆಯಬಹುದು. (ಉದಾ: ಈಗ 2684 ರೂ ದರದಲ್ಲಿ 10 ಗ್ರಾಂ ಮೌಲ್ಯದ ಬಾಂಡ್‍ಗಳನ್ನು ಕೊಂಡರೆ, ಎಂಟು ವರ್ಷಗಳ ನಂತರ, ಆ ಹೊತ್ತಿನ ಮಾರ್ಕೆಟ್ ದರದಲ್ಲಿ 10 ಗ್ರಾಂ ಚಿನ್ನದ ಮೌಲ್ಯವನ್ನು ನಗದು ರೂಪದಲ್ಲಿ ಮಾತ್ರ ಪಡೆಯಬಹುದು. ಜೊತೆಗೆ ಹೂಡಿಕೆಯ ಹಣಕ್ಕೆ ಬಡ್ಡಿಯೂ ದೊರೆಯುತ್ತದೆ.) ಬಾಂಡ್ ಕೊಳ್ಳುವಾಗ ಮತ್ತು ಅದರ ಮೌಲ್ಯವನ್ನು ಪಡೆಯುವ ಎರಡೂ ಸಂದರ್ಭಗಳಲ್ಲಿ ವ್ಯವಹಾರ ನಗದು ರೂಪದಲ್ಲಿರುತ್ತದೆ. ಈಗಿರುವ ಮಾರ್ಕೆಟ್ ದರಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಬೆಲೆ ನಿಗದಿ (2684 ರೂ), ಕೆವೈಸಿ (ನಿಮ್ಮ ಗಿರಾಕಿ ನಿಮಗೆ ತಿಳಿದಿರಲಿ) ರೀತಿ ನೀತಿಗಳು ಅಡಚಣೆಗಳಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೂ, ಗೋಲ್ಡ್ ಬಾಂಡ್ ಸ್ಕೀಂನಲ್ಲಿ ಕೇವಲ 150 ಕೋಟಿ ಸಂಗ್ರಹವಾಗಿರುವುದು ಒಂದು ಅತಿ ದೊಡ್ಡ ನಿರಾಸೆ ಎಂಬುದನ್ನು ಎಲ್ಲಾ ಪತ್ರಿಕೆಗಳು ವರದಿ ಮಾಡಿವೆ.
ಗೋಲ್ಡ್ ಡೆಪಾಸಿಟ್ ಸ್ಕೀಂ:
ಒಡವೆ ಅಥವಾ ಯಾವುದೇ ರೂಪದಲ್ಲಿರುವ ಬಂಗಾರವನ್ನು ಕರಗಿಸಿ ಅದರ ಪರಿಶುದ್ಧತೆಯ ಆಧಾರದ ಮೇಲೆ ಅಪ್ಪಟ ಚಿನ್ನದ ತೂಕವಾಗಿಸಿ ಅದನ್ನು ಒಂದರಿಂದ ಹನ್ನೆರಡು ವರ್ಷಗಳ ಅವಧಿಗೆ ಸ್ವೀಕರಿಸಿ, ಅವಧಿ ಮುಗಿದನಂತರ ಅಷ್ಟೇ ಪ್ರಮಾಣದ ಬಂಗಾರದ ಜೊತೆಗೆ, ಅವಧಿಗೆ ಅವಲಂಬಿಸಿ 0.5% ನಿಂದ 2.5% ದರದಲ್ಲಿ ಕೊಡುವ ಬಡ್ಡಿಯ ಮೌಲ್ಯವನ್ನು ಬಂಗಾರದ ರೂಪದಲ್ಲಿ ನೀಡುವ ಯೋಜನೆ.
ಗೋಲ್ಡ್ ಡೆಪಾಸಿಟ್ ಸ್ಕೀಂ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ. ಕುಟುಂಬಗಳ ಮತ್ತು ದೇವಸ್ಥಾನಗಳ ಬಳಿ ಇರುವ ಚಿನ್ನದ ದಾಸ್ತಾನು ಪ್ರಮಾಣ 18,000 -40,000 ಟನ್ ವರೆಗೂ ಇರಬಹುದೆಂದು ಅಂದಾಜುಗಳಿವೆ. ಅದರಲ್ಲಿ, ಕಡಿಮೆ ಎಂದರೂ 5,000 ಟನ್‍ಗಳಷ್ಟು ಗಟ್ಟಿಗಳ ರೂಪದಲ್ಲಿರುವ ಚಿನ್ನದ ಮೇಲೆ ಮೋದಿಯವರ ಟಾರ್ಗೆಟ್ ಇತ್ತು. 1999 ರಲ್ಲಿ ಆರಂಭ ಮಾಡಿದ್ದ ಇಂತಹ ಯೋಜನೆ ಹದಿನಾರು ವರ್ಷದಲ್ಲಿ 15 ಟನ್ ಠೇವಣಿ ಚಿನ್ನದ ಠೇವಣಿ ಪಡೆದಿತ್ತು. ಅದನ್ನು ಪರಿಷ್ಕರಿಸಿ, ರೂಪಿಸಿದ ಹೊಸ ಯೋಜನೆಯ ಮೂಲಕ ಬೃಹತ್ ಪ್ರಮಾಣದ ಚಿನ್ನ ಸಂಗ್ರಹಿಸುವ ನಿರೀಕ್ಷೆಯಲ್ಲಿದ್ದರು ಮೋದಿ. ಆದರೆ, ಠೇವಣಿಯಾಗಿ ಬಂದದ್ದು ಜುಜುಬಿ 400 ಗ್ರಾಂ! ಸರ್ಕಾರದ ಬಳಿ ಠೇವಣಿ ಇಡಲು ಇಡೀ ದೇಶದಲ್ಲಿ 400 ಗ್ರಾಂ ಚಿನ್ನ ಸಂಗ್ರಹವಾಗಿದೆ ಎಂದರೆ ನಂಬುವ ಮಾತಲ್ಲ. ಆದರೆ, ಇದು ವಾಸ್ತವ ಸಂಗತಿ. ನಿಷ್ಕ್ರಿಯವಾಗಿರುವ ಚಿನ್ನಕ್ಕೆ ಬಡ್ಡಿಯ ಆಮಿಷ ಒಡ್ಡಿದರೂ ಬಂದದ್ದು ಕೇವಲ 400 ಗ್ರಾಂ! ಹೆಮ್ಮೆಪಡುವ, ಅಪ್ಪಟ ಸ್ವದೇಶಿ ಕಲ್ಪನೆಯ, “ಬಡತನ”ದ ಹಣೆಪಟ್ಟಿ ಕಿತ್ತೆಸೆಯುವ ಮೋದಿಯವರ ಯೋಜನೆಗಳ ಫಲಿತಾಂಶ ಇಷ್ಟೊಂದು ಕಳಪೆಯಾಗಿರುವುದು ಅನಿರೀಕ್ಷಿತ.
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ, ಈ ವರೆಗೆ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವಿಫಲವಾದ ಯೋಜನೆ ಬೇರೆ ಯಾವುದೂ ಇರಲಾರದು. ಈ ಯೋಜನೆಗಳ ವೈಫಲ್ಯವು ಜನತೆ ಸರ್ಕಾರದ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ. ತೊಗರಿ ಬೇಳೆಯಿಂದ ಹಿಡಿದು ದೇಶದಲ್ಲಿ ಜರುಗುತ್ತಿರುವ ಅನೇಕ ವಿದ್ಯಮಾನಗಳ ಬಗ್ಗೆ ಜನ ಬೇಸತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.
ಸರ್ಕಾರದ ಕಾಳಜಿಗೆ ಜನತೆ ಪ್ರೀತಿಯಿಂದ ಸ್ಪಂದಿಸಿದ ಉದಾಹರಣೆಗಳೂ ಇವೆ. ಹಿಂದೊಮ್ಮೆ, ಭಾರತ-ಚೀನಾ ಯದ್ಧದ ಸಂದರ್ಭದಲ್ಲಿ, ಸರ್ಕಾರ ಜನತೆಯ ಮುಂದೆ ಕೈಯೊಡ್ಡಿದಾಗ, ಕರ್ನಾಟಕದ ಒಂದು ಜಿಲ್ಲೆ – ಬಿಜಾಪುರದಲ್ಲಿ ಒಬ್ಬ ರಾಷ್ಟ್ರನಾಯಕರ ‘ಸ್ವರ್ಣತುಲಾಭಾರ’ ಮಾಡುವಷ್ಟು ಬಂಗಾರ ದಾನ ರೂಪದಲ್ಲಿ ಸಂಗ್ರಹವಾಗಿತ್ತು.
ವ್ಯಾಪಕವಾಗಿ ಸರಗಳ್ಳತನ ನಡೆಯುತ್ತಿದ್ದರೂ ಸಮಾಜದಲ್ಲಿ ಬಂಗಾರದ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ಕೊನೆಯ ಪಕ್ಷ, ಸರಗಳ್ಳರ ಭಯದಿಂದಾದರೂ ಮಹಿಳೆಯರು ಬಂಗಾರದ ಠೇವಣಿ ಮಾಡಬಹುದಿತ್ತೇನೋ? ಅಥವಾ, ಅವರಿಗೆ ಸರಗಳ್ಳರ ಮೇಲಿರುವಷ್ಟೇ ಭಯ ಸರ್ಕಾರದ ಮೇಲೂ ಇರಬಹುದೇನೋ?