ಖಾತೆ ಹಂಚಿಕೆ ಗೊಂದಲ: ಮುನಿಯಪ್ಪ ಅಸಮಾಧಾನ

ದೇವನಹಳ್ಳಿ: ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಇದೀಗ ಹಿರಿಯ ಕಾಂಗ್ರೆಸ್ ನಾಯಕ ಕೆ. ಎಚ್‌. ಮುನಿಯಪ್ಪ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸಂಪುಟದಲ್ಲಿ ಹಿರಿಯ ನಾಯಕರಿಗೆ ತಕ್ಕ ಮಟ್ಟಿನ ಗೌರವ ಸಿಕ್ಕಿಲ್ಲ ಎಂದು ಹೇಳಿರುವ ಮುನಿಯಪ್ಪ, “ನನ್ನ ಹಿರಿತನಕ್ಕೆ ಸರಿಯಾದ ಮಾನ್ಯತೆ ಸಿಗುವವರೆಗೆ ನನಗೆ ನೀಡಿರುವ ಖಾತೆಯನ್ನು ವಹಿಸಿಕೊಳ್ಳುವುದಿಲ್ಲ. ಈ ವಿಷಯವನ್ನು ಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸಿ ತಿದ್ದಿಕೊಳ್ಳಬೇಕು” ಎಂದು ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ಸಂಬಂಧ ತಮ್ಮ ಅಸಮಾಧಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ವಂದೇ ಮಾತರಂ, ಅದರ ಆರು ಚರಣಗಳು ಮತ್ತು ಈಗಾಗಲೇ ಇತ್ಯರ್ಥಗೊಂಡ ಪ್ರಶ್ನೆ

“ನಾನು ಸುಮಾರು ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಖಾತೆ ಹಂಚಿಕೆ ವೇಳೆ ಹಿರಿತನವನ್ನು ಪರಿಗಣಿಸುವುದು ಅಗತ್ಯ. ಆರ್‌.ವಿ. ದೇಶಪಾಂಡೆ, ರಾಮಲಿಂಗಾರೆಡ್ಡಿ ಮತ್ತು ನಾನು ಹಲವು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆದ್ದರಿಂದ ಸಮಾಜಕ್ಕೆ ಉಪಯೋಗವಾಗುವ ಪ್ರಮುಖ ಖಾತೆಗಳನ್ನು ನೀಡಬೇಕಿತ್ತು” ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಸಿದ್ದರಾಮಯ್ಯ ಸರ್ಕಾರದಲ್ಲಿ ವಹಿಸಿದ್ದ ಆಹಾರ ಇಲಾಖೆಯನ್ನೇ ಮತ್ತೆ ನೀಡಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷದ ಬಗ್ಗೆ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ ಮುನಿಯಪ್ಪ, “ಪಕ್ಷ ನನಗೆ ತಾಯಿಯಂತೆ. ಹಾಗಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

“ನಾನು ಎಂಟು ಬಾರಿ ಗೆದ್ದಿದ್ದೇನೆ. ಆದರೂ ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಸರಿಯಾದ ಗೌರವ ಸಿಕ್ಕಿಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ 2028ರ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು.

ಗಮನಾರ್ಹವಾಗಿ, ಜೂನ್‌ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ 13 ಸಚಿವರಲ್ಲಿ ರಾಮಲಿಂಗಾರೆಡ್ಡಿ ಮತ್ತು ಮುನಿಯಪ್ಪ ಕೂಡ ಸೇರಿದ್ದರು. ಜೂನ್‌ 4ರಂದು ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು.

ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್‌ಟಿಎ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ; ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *