ಸಿಬಿಎಸ್‌ಇ ಪೋರ್ಟಲ್ ತಾಂತ್ರಿಕ ತೊಂದರೆ: ಲಾಗಿನ್, ಅರ್ಜಿ ಸಲ್ಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಸಂಕಷ್ಟ

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ತರಗತಿ 12ರ ಮರುಮೌಲ್ಯಮಾಪನ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳು ಬುಧವಾರವೂ ಮುಂದುವರಿದಿದ್ದು, ಲಾಗಿನ್ ಆಗಲು ಮತ್ತು ಅರ್ಜಿಗಳನ್ನು ಸಲ್ಲಿಸಲು ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಇದೇ ವೇಳೆ ಸಾವಿರಾರು ಅರ್ಜಿಗಳು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ಪೋರ್ಟಲ್ ಪ್ರವೇಶಿಸುವಾಗ ನಿರಂತರ ದೋಷಗಳು ಕಾಣಿಸಿಕೊಂಡಿದ್ದು, ಲಾಗಿನ್ ವಿಫಲವಾಗುವುದು ಮತ್ತು ಅರ್ಜಿ ಸಲ್ಲಿಸುವಾಗ ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ತಿಳಿಸಿದ್ದಾರೆ.

ತರಗತಿ 12ರ ವಿದ್ಯಾರ್ಥಿ ಕೃಷ್ಣ, ಸಾಮಾಜಿಕ ಜಾಲತಾಣ X ನಲ್ಲಿ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದು, “ಮರುಮೌಲ್ಯಮಾಪನ ಪೋರ್ಟಲ್‌ನಲ್ಲಿ ದೊಡ್ಡ ಸಮಸ್ಯೆ ಎದುರಿಸುತ್ತಿದ್ದೇನೆ. ನಾಲ್ಕು ಗಂಟೆಗಳ ಕಾಲ ಪ್ರಯತ್ನಿಸಿ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿದ್ದರೂ, ಪ್ರತಿ ಬಾರಿ ಸಲ್ಲಿಸಲು ಒತ್ತಿದಾಗ ದೋಷ ತೋರಿಸಿ ವಿಫಲವಾಗುತ್ತಿದೆ. ಈಗಾಗಲೇ ಎರಡು ಬಾರಿ ಪ್ರಯತ್ನಿಸಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಇದನ್ನು ಪರಿಹರಿಸಲು ಯಾರನ್ನು ಸಂಪರ್ಕಿಸಬೇಕು?” ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಕಾಕ್ರೋಚ್ ಜನತಾ ಪಾರ್ಟಿ’: ವ್ಯಂಗ್ಯದಿಂದ ಹುಟ್ಟಿದ ಯುವಕರ ಕೋಪ, ವ್ಯವಸ್ಥೆಗೆ ಸವಾಲು

ಇನ್ನೊಬ್ಬ ಅರ್ಜಿದಾರ ಸಂದೀಪ್ ಮಿಶ್ರಾ ಕೂಡ ಇದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿ, “ಎಲ್ಲಾ ವಿವರಗಳು ಸರಿಯಾಗಿದ್ದರೂ ನಾನು ಇನ್ನೂ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಹೇಗೆ ಲಾಗಿನ್ ಆಗಬೇಕು ಎಂದು ತಿಳಿಸಿ” ಎಂದು ಮನವಿ ಮಾಡಿದ್ದಾರೆ.

ಇದೇ ರೀತಿಯ ದೂರುಗಳು ದಿನವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮರುಮೌಲ್ಯಮಾಪನ ಸೇವೆಗಳನ್ನು ಪಡೆಯುವಲ್ಲಿ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದೆ.

ಕೆಲವು ಪೋಷಕರು ತಾಂತ್ರಿಕ ಸಮಸ್ಯೆಗಳ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಒತ್ತಡ ಹೆಚ್ಚುತ್ತಿರುವುದಾಗಿ ತಿಳಿಸಿದ್ದಾರೆ. ಈ ವಿಳಂಬವು ಶೈಕ್ಷಣಿಕ ವೇಳಾಪಟ್ಟಿಗೂ ಪರಿಣಾಮ ಬೀರುವ ಭೀತಿ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಿರುವ ವಕೀಲ ವಿನೀತ್ ಜಿಂದಾಲ್, ಸಮಸ್ಯೆ ಎದುರಿಸುತ್ತಿರುವವರು ಕಾನೂನು ಮಾರ್ಗವನ್ನು ಪರಿಗಣಿಸುವಂತೆ ಸಲಹೆ ನೀಡಿದ್ದಾರೆ. “ಒಬ್ಬ ತಾಯಿ ಇತ್ತೀಚೆಗೆ ತನ್ನ ಅಳಲನ್ನು ನನ್ನೊಂದಿಗೆ ಹಂಚಿಕೊಂಡರು. ಅವರ ಮಗ ಮೂರು ವಿಷಯಗಳಲ್ಲಿ ಮರುಪರೀಕ್ಷೆ ವಿಭಾಗಕ್ಕೆ ಸೇರಿಸಲ್ಪಟ್ಟಿದ್ದು, ಮೇ 20ರಂದು ಉತ್ತರಪತ್ರಿಕೆಗಳ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಇಂದಿನವರೆಗೂ ಅವುಗಳನ್ನು ಪಡೆದಿಲ್ಲ,” ಎಂದು ಅವರು ಹೇಳಿದ್ದಾರೆ.

ಅವರು ಮುಂದುವರಿಸಿ, “ಭದ್ರತಾ ಆತಂಕಗಳ ಕಾರಣದಿಂದ ಆ ತಾಯಿ ನ್ಯಾಯಾಲಯವನ್ನು ಸಂಪರ್ಕಿಸಲು ಹಿಂಜರಿದಿದ್ದಾರೆ. ಸಮಸ್ಯೆ ಎದುರಿಸುತ್ತಿರುವವರು ತಮ್ಮ ಧ್ವನಿಯನ್ನು ಎತ್ತಿ ಕಾನೂನು ಪರಿಹಾರವನ್ನು ಹುಡುಕಲು ಮುಂದೆ ಬರದಿದ್ದರೆ, ಇತರರಿಗೆ ಸಹಾಯ ಮಾಡುವುದು ತುಂಬ ಕಷ್ಟವಾಗುತ್ತದೆ,” ಎಂದು ಹೇಳಿದ್ದಾರೆ.

ಇದಕ್ಕಿಡಿಯಲ್ಲಿ, ಸಿಬಿಎಸ್‌ಇ ಪೋರ್ಟಲ್‌ಗೆ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದಾಗಿ ತಿಳಿಸಿದೆ.

ಮಂಡಳಿ ಪ್ರಕಟಣೆಯಲ್ಲಿ, “ಇಂದು ಮಧ್ಯಾಹ್ನ 12 ಗಂಟೆಯ ತನಕ ಮರುಪರಿಶೀಲನೆಗಾಗಿ 4,924 ಅರ್ಜಿಗಳು ಮತ್ತು ಮರುಮೌಲ್ಯಮಾಪನಕ್ಕಾಗಿ 39,056 ಅರ್ಜಿಗಳು (ಒಟ್ಟು 43,980) ಸ್ವೀಕರಿಸಲಾಗಿದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ವಿದ್ಯಾರ್ಥಿ ಸ್ನೇಹಿ ವೇದಿಕೆಯನ್ನು ಖಚಿತಪಡಿಸಲು ನಮ್ಮ ತಂಡಗಳು ನಿರಂತರವಾಗಿ ಗಮನ ಹರಿಸುತ್ತಿವೆ,” ಎಂದು ತಿಳಿಸಿದೆ.

ವಿದ್ಯಾರ್ಥಿಗಳು ವರದಿ ಮಾಡಿರುವ ನಿರ್ದಿಷ್ಟ ತಾಂತ್ರಿಕ ದೋಷಗಳ ಕುರಿತು ಮಂಡಳಿ ಇನ್ನೂ ಸ್ಪಷ್ಟನೆ ನೀಡಿಲ್ಲ.

ಇದನ್ನೂ ನೋಡಿ: ಬೆಂಗಳೂರಿನ ಸರಕಾರಿ ಶಾಲೆಗಳ ದುಸ್ಥಿತಿಗೆ ಯಾರು ಹೊಣೆ? – ಜಯರತ್ನ Janashakthi Media

Donate Janashakthi Media

Leave a Reply

Your email address will not be published. Required fields are marked *