ವಾಷಿಂಗ್ಟನ್: ಹಿಜ್ಬುಲ್ಲಾ ದಾಳಿಗಳು ನಿಲ್ಲದಿದ್ದರೆ ಬೈರೂತ್‌ನ “ಭಯೋತ್ಪಾದನಾ ಗುರಿ”ಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
“ಹಿಜ್ಬುಲ್ಲಾ ದಾಳಿಗಳನ್ನು ನಿಲ್ಲಿಸದಿದ್ದರೆ ಬೈರೂತ್‌ನಲ್ಲಿ ಗುರಿಯಾಗಿಸಿದ ದಾಳಿಗಳು ನಡೆಯಲಿವೆ. ಇದೇ ವೇಳೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಯೋಜನೆಯಂತೆ ಕಾರ್ಯಾಚರಣೆ ಮುಂದುವರಿಸುತ್ತವೆ,” ಎಂದು ನೆತನ್ಯಾಹು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಡುವೆ, ಲೆಬನಾನ್ ವಿರುದ್ಧ ಇಸ್ರೇಲ್ ಕೈಗೊಂಡ ಸೈನಿಕ ಕ್ರಮಗಳ ಹಿನ್ನೆಲೆ, ಟ್ರಂಪ್ ಸೋಮವಾರ ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಆಕ್ಸಿಯೊಸ್’ ವರದಿ ಮಾಡಿದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್ ಪ್ರಸಾರ ಹಕ್ಕು ಜೀ ನೆಟ್‌ವರ್ಕ್‌ಗೆ; ಭಾರತದಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ದಾರಿ
ಲೆಬನಾನ್ ಮೇಲಿನ ದಾಳಿಗಳಿಂದ ಜಾಗತಿಕ ಮಟ್ಟದಲ್ಲಿ ಅಮೆರಿಕ ವಿರುದ್ಧ ಅಸಮಾಧಾನ ಹೆಚ್ಚುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾಗಿ ತಿಳಿದುಬಂದಿದೆ. ಹಿಜ್ಬುಲ್ಲಾ ದಾಳಿಗೆ ಪ್ರತಿಯಾಗಿ ಇಸ್ರೇಲ್ ಕೈಗೊಂಡ ಕ್ರಮಗಳು ಅತಿಯಾದವು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದಕ್ಷಿಣ ಲೆಬನಾನ್‌ನ ಪಟ್ಟಣಗಳು ಹಾಗೂ ಹಳ್ಳಿಗಳ ಮೇಲೆ ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಬೈರೂತ್‌ನ ದಕ್ಷಿಣ ಉಪನಗರದಲ್ಲಿರುವ ವಸತಿ ಕಟ್ಟಡವೊಂದನ್ನು ಕ್ಷಿಪಣಿ ದಾಳಿಯಲ್ಲಿ ಧ್ವಂಸಗೊಳಿಸಲಾಗಿದೆ. ಹಿಜ್ಬುಲ್ಲಾ ಕಮಾಂಡರ್ ಗುರಿಯಾಗಿಸಿದ್ದರೂ, ಸಂಪೂರ್ಣ ಕಟ್ಟಡ ನಾಶಪಡಿಸಿರುವುದು ಟ್ರಂಪ್ ಅಸಮಾಧಾನಕ್ಕೆ ಕಾರಣವಾಗಿದೆ.
“ಲೆಬನಾನ್ ವಿರುದ್ಧದ ಕ್ರಮಗಳಿಂದ ಈಗ ಎಲ್ಲರೂ ಇಸ್ರೇಲ್ ಅನ್ನು ದ್ವೇಷಿಸುತ್ತಿದ್ದಾರೆ,” ಎಂದು ಟ್ರಂಪ್ ಹೇಳಿದ್ದಾರೆ ಎಂಬುದಾಗಿ ವರದಿ ಉಲ್ಲೇಖಿಸಿದೆ.
ದೂರವಾಣಿ ಮಾತುಕತೆ ವೇಳೆ ಟ್ರಂಪ್, ಬೈರೂತ್ ಮೇಲಿನ ಪ್ರಮುಖ ದಾಳಿಗಳನ್ನು ತಪ್ಪಿಸುವಂತೆ ಸೂಚಿಸಿದ್ದಾಗಿ, ನಂತರ ಇಸ್ರೇಲ್ ಕೆಲವು ಸೇನಾ ಕ್ರಮಗಳನ್ನು ಹಿಂಪಡೆದಿದೆ ಎಂದು ಅವರು ‘ಟ್ರುತ್ ಸೋಶಿಯಲ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದಾಗ್ಯೂ, ಈ ಮಾತುಕತೆಯ ಬಳಿಕವೂ ನೆತನ್ಯಾಹು ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇಸ್ರೇಲ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಎದುರಾಗಿದೆ.
ಇದನ್ನೂ ನೋಡಿ: ಯುವಜನರಿಗೆ ಮೌಲ್ಯ ಬೇಕಿದೆ, ಅದಕ್ಕಾಗಿ ದೊರೆಸ್ವಾಮಿಯರನ್ನು ಓದಬೇಕು – ಸಿದ್ದನಗೌಡ ಪಾಟೀಲ್ Janashakthi Media
