ರಾಜ್ಯಸಭೆ ಚುನಾವಣೆ: ಎನ್‌ಡಿಎ ಅಭ್ಯರ್ಥಿಯಾಗಿ ದೇವೇಗೌಡ?

ನವದೆಹಲಿ/ಬೆಂಗಳೂರು: ಮೇ 31ರಂದು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಎರಡು–ಮೂರು ದಿನಗಳಲ್ಲಿ ಪಟ್ಟಿ ಪ್ರಕಟವಾಗಲಿದೆ.

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಘಟಕದ ಬಿಜೆಪಿ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಇರಿಸಿದ್ದಾರೆ. ಎಚ್‌.ಡಿ. ದೇವೇಗೌಡ ಮತ್ತು ಡಿ.ವಿ.ಸದಾನಂದಗೌಡ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ’ ಎಂದು ಗೊತ್ತಾಗಿದೆ.

‘ಮೈತ್ರಿಯ ಕಾರಣಕ್ಕಾಗಿ ಜೆಡಿಎಸ್‌ನ ಎಚ್‌.ಡಿ.ದೇವೇಗೌಡ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಉದ್ಯೋಗಕ್ಕಾಗಿ ಬೆಂಗಳೂರಿಗೆ ಆಗಮನ; ಹವಾಮಾನವೇ ನಗರ ಬಿಡಲು ಅಡ್ಡಿ?

‘ದೇವೇಗೌಡ ಅವರನ್ನು ಕರ್ನಾಟಕದಿಂದ ಚುನಾಯಿಸುವ ಬಗ್ಗೆ ಬಿಜೆಪಿ ರಾಜ್ಯ ಘಟಕದ ನಾಯಕರು ಆಕ್ಷೇಪ ಎತ್ತಿದ್ದರು. ಅವರನ್ನು ಮಹಾರಾಷ್ಟ್ರದಿಂದ ಕಣಕ್ಕೆ ಇಳಿಸಿ ಎಂಬ ಪ್ರಸ್ತಾವವನ್ನು ರಾಜ್ಯ ನಾಯಕರು ವರಿಷ್ಠರ ಮುಂದೆ ಇರಿಸಿದ್ದರು. ಈ ಬಗ್ಗೆ ದೇವೇಗೌಡರ ಜತೆಗೂ ವರಿಷ್ಠರು ಚರ್ಚಿಸಿದ್ದು, ಮಹಾರಾಷ್ಟ್ರದಿಂದ ಕಣಕ್ಕೆ ಇಳಿಯಲು ಅವರು ನಿರಾಕರಿಸಿದ್ದಾರೆ. ಈ ವಿಷಯವೂ ಸಭೆಯಲ್ಲಿ ಚರ್ಚೆಯಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ದೇವೇಗೌಡ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿಸುವ ಬಗ್ಗೆ ಡಿ.ವಿ.ಸದಾನಂದಗೌಡ ಅವರು ಆಕ್ಷೇಪ ಎತ್ತಿದ್ದು, ರಾಜ್ಯದಿಂದ ತಮ್ಮನ್ನೇ ಚುನಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಹಿಂದಿನ ವಾರ ನಡೆದ ಪಕ್ಷದ ಪ್ರಮುಖರ ಸಮಿತಿ ಸಭೆಯಲ್ಲೂ ಸದಾನಂದಗೌಡ ಅವರು ಇದನ್ನೇ ಪ್ರತಿಪಾದಿಸಿದ್ದರು. ರಾಜ್ಯ ನಾಯಕರು ಈ ಎಲ್ಲ ಅಂಶವನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಚುನಾವಣೆಗೆ ಅಧಿಸೂಚನೆ ಪ್ರಕಟವಾದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದು ಖಚಿತಪಡಿಸಿವೆ.

ಪರಿಷತ್ತು: ಎಂಟು ಜನರ ಹೆಸರು

ರಾಜ್ಯ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತ. ಆದರೆ, ರಾಜ್ಯ ನಾಯಕರು ಎಂಟು ಜನರ ಹೆಸರನ್ನು ಪರಿಗಣಿಸುವಂತೆ ವರಿಷ್ಠರಿಗೆ ಪಟ್ಟಿ ಸಲ್ಲಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇಬ್ಬರು ಮಹಿಳೆಯರು ಮತ್ತು ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರೂ ಸೇರಿ ಜಾತಿ ಸಮೀಕರಣದ ಆಧಾರದಲ್ಲಿ ಆರು ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದಾರೆ. ಅವುಗಳಲ್ಲಿ ಎರಡು ಹೆಸರನ್ನು ವರಿಷ್ಠರು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ: ಗೋವಂಶ ವಧೆ ಮಾಡದಂತೆ ಮುಸ್ಲಿಮರ ನಿರ್ಧಾರ – ವಯಸ್ಸಾದ ದನಗಳನ್ನು ಯಾರಿಗೆ ಮಾರಬೇಕು? ರೈತರಲ್ಲಿ ಹೆಚ್ಚಿದ ಆತಂಕ

Donate Janashakthi Media

Leave a Reply

Your email address will not be published. Required fields are marked *