ಬೀದಿಬದಿ ವ್ಯಾಪಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಮಂಗಳೂರು : ನಗರದ ವಿವಿಧ ಭಾಗಗಳಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಕೆಲವರು ಸುಳ್ಳು ಆರೋಪಗಳನ್ನು ಮಾಡಿ ಸಾರ್ವಜನಿಕವಾಗಿ ಅವಮಾನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧಿಗಳಂತೆ ಬಿಂಬಿಸಿ ವ್ಯಾಪಾರಿಗಳ ವಿರುದ್ಧ ದ್ವೇಷ ಹಾಗೂ ಅಪನಂಬಿಕೆ ಮೂಡಿಸುವ ಕೃತ್ಯ ನಡೆಯುತ್ತಿದ್ದು, ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಒತ್ತಾಯಿಸಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್., ಟೌನ್‌ಹಾಲ್‌ ಬಳಿ ಭಾನುವಾರ ಹಳೆ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳನ್ನು “ಮೈಸೂರಿನಿಂದ ಬಂದ ಅಕ್ರಮ ವ್ಯಾಪಾರಿಗಳು” ಎಂದು ಕೆಲವರು ಆರೋಪಿಸಿ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಹೇಳಿದರು. ವ್ಯಾಪಾರಿಗಳಿಗೆ ಕಾನೂನುಬದ್ಧ ಅನುಮತಿ ಇಲ್ಲ ಎಂದು ಹೇಳಿ ಅವರೊಂದಿಗೆ ಸಂಘರ್ಷಕ್ಕಿಳಿದು ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿರುವುದಲ್ಲದೆ, ಪೊಲೀಸ್ ಠಾಣೆಯಲ್ಲಿಯೂ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದರು.

ವಾಸ್ತವವಾಗಿ ಈ ವ್ಯಾಪಾರಿಗಳು ಕಳೆದ 30ರಿಂದ 40 ವರ್ಷಗಳಿಂದ ನಗರದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. “ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-2014” ಹಾಗೂ ಕರ್ನಾಟಕ ಬೀದಿ ವ್ಯಾಪಾರ ಅಧಿನಿಯಮ-2019 ಪ್ರಕಾರ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣಪತ್ರ ವಿತರಿಸುವ ಜವಾಬ್ದಾರಿ ಪಟ್ಟಣ ವ್ಯಾಪಾರ ಸಮಿತಿಯದ್ದಾಗಿದೆ. ಆದರೆ, ಕಾನೂನು ಜಾರಿಗೆ ತರದ ಪಾಲಿಕೆಯ ವೈಫಲ್ಯವನ್ನು ಬಡ ವ್ಯಾಪಾರಿಗಳ ಮೇಲೆ ಹೊರಿಸುವುದು ಸರಿಯಲ್ಲ ಎಂದು ಸಂಘ ಪ್ರಶ್ನಿಸಿದೆ.

ಇದನ್ನೂ ಓದಿ : ಹೊಸ ಸಂಪುಟದಲ್ಲಿ ಯಾರಿಗೆ ಅವಕಾಶ? ಕಾಂಗ್ರೆಸ್‌ನಲ್ಲಿ ಆರಂಭವಾದ ಲಾಬಿ ರಾಜಕಾರಣ

ಸಂಘವು 2011ರಿಂದ ದ.ಕ ಜಿಲ್ಲೆಯಲ್ಲಿ ಬೀದಿಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗೆ ಕೆಲಸ ಮಾಡುತ್ತಿದ್ದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರಡಿ ನೋಂದಾಯಿತ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸದಸ್ಯರಿಂದ ವಾರದ ದೇಣಿಗೆಯಾಗಿ ಸಂಗ್ರಹಿಸುವ ಹಣವನ್ನು ಶೈಕ್ಷಣಿಕ ನೆರವು, ವೈದ್ಯಕೀಯ ನೆರವು ಹಾಗೂ ಮರಣ ಪರಿಹಾರಕ್ಕೆ ಬಳಸಲಾಗುತ್ತಿದೆ ಎಂದು ಸಂಘ ಸ್ಪಷ್ಟಪಡಿಸಿದೆ.

ಈ ದೇಣಿಗೆ ಸಂಗ್ರಹಣೆಯನ್ನು ಕೆಲವರು “ಹಫ್ತಾ ವಸೂಲಿ” ಎಂದು ಬಿಂಬಿಸಿ, ಮಹಿಳಾ ಸಿಬ್ಬಂದಿಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಸದಸ್ಯರ ಹೇಳಿಕೆಗಳನ್ನು ಸಂಪಾದಿಸಿ ಸಂಘದ ನಾಯಕರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಲಾಯಿತು.

ನಗರದ ಸ್ಟೇಟ್‌ ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣದ ಬಳಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಗೂಡಂಗಡಿ, ಹಾಲಿನ ಬೂತ್‌ ಹಾಗೂ ಅಂಗವಿಕಲರ ಕೋಟಾದ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ತಪ್ಪು ಮಾಹಿತಿ ಹರಡಲಾಗುತ್ತಿದೆ. ಇಂತಹ ವರದಿಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದಲ್ಲದೆ, ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಪ್ರಚೋದಿಸುವಂತಿವೆ ಎಂದು ಸಂಘ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್‌, ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್‌, ಅಧ್ಯಕ್ಷ ಮುಜಾಫರ್ ಅಹ್ಮದ್‌, ಉಪಾಧ್ಯಕ್ಷ ಎಂ.ಎನ್. ಶಿವಪ್ಪ, ಸಹ ಕಾರ್ಯದರ್ಶಿ ಮುತ್ತುರಾಜ್‌, ಕೋಶಾಧಿಕಾರಿ ಹಂಝ ಮೊಹಮ್ಮದ್‌, ಉಪಾಧ್ಯಕ್ಷ ವಿಜಯ್ ಜೈನ್‌, ಅಬ್ದುಲ್ ಖಾದರ್ ವಾಮಂಜೂರು ಹಾಗೂ ಗುಡ್ಡಪ್ಪ ಉಪಸ್ಥಿತರಿದ್ದರು.

ಇದನ್ನೂ ನೋಡಿ : ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ಸಿಐಟಿಯು ಪ್ರತಿಕ್ರಿಯೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *