ಬೆಂಗಳೂರು: ಚುನಾವಣಾ ಸಮಗ್ರತೆ, ಮತದಾನದ ಹಕ್ಕುಗಳು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಬಗ್ಗೆ ನಗರದಲ್ಲಿ ನಡೆದ ‘ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ’ ಕುರಿತ ಚರ್ಚೆಯಲ್ಲಿ ಕಳವಳ ವ್ಯಕ್ತವಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಕ್ಷೇತ್ರ ವಿಂಗಡಣೆಯಿಂದ ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ ಎಂದು ಚರ್ಚೆಯಲ್ಲಿ ಭಾಗಿಯಾಗಿದ್ದ ವಕೀಲರು, ರೈತರು ಸೇರಿದಂತೆ ಗಣ್ಯರು ಆರೋಪಿಸಿದರು. ಭಾರತ
ಇದೇ ವೇಳೆ, ಮಾತನಾಡಿದ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಭಾರತದ ಚುನಾವಣಾ ಪ್ರಜಾಪ್ರಭುತ್ವವು ಸೀಜ್ ಆಗಿದೆ. ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಗಳು ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳು ಹೆಚ್ಚು ಅನುಮಾನಾಸ್ಪದವಾಗಿವೆ. ಪ್ರಜಾಪ್ರಭುತ್ವವನ್ನು ಕೇಂದ್ರ ಸರ್ಕಾರವು ಹೈಜಾಕ್ ಮಾಡಿರುವುದನ್ನು ವಿರೋಧಿಸಿ ಜನರು ದೊಡ್ಡ ಜನಾಂದೋಲನವನ್ನು ಪ್ರಾರಂಭಿಸಬೇಕು ಎಂದು ಕರೆ ನೀಡಿದರು.
ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR)ಯಿಂದ ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಿಕೊಂಡು ಸುಮಾರು 91 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ ಭೂಷಣ್, ಜನತಾ ಪ್ರಾತಿನಿಧ್ಯ ಕಾಯ್ದೆಯು ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಮಾತ್ರ ಅವಕಾಶ ನೀಡುತ್ತದೆಯೇ ಹೊರತು ಸಂಪೂರ್ಣವಾಗಿ ಹೊಸ ಮತದಾರರ ಪಟ್ಟಿಯನ್ನು ತಯಾರಿಸಲು ಅಲ್ಲ ಎಂದು ಪ್ರತಿಪಾದಿಸಿದರು. ಜೊತೆಗೆ ಚುನಾವಣಾ ಆಯೋಗವು ಪಾರದರ್ಶಕತೆ ಇಲ್ಲದೇ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು.
ಇದನ್ನೂ ಓದಿ: ಬೆಂಗಳೂರು | ಗಿಗ್ ಕಾರ್ಮಿಕರಿಗಾಗಿ ದೂರು ನಿವಾರಣಾ ಪೋರ್ಟಲ್ ಆರಂಭ
ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಷಯವನ್ನು ಜೊತೆಯಾಗಿ ಪ್ರಸ್ತಾಪಿಸಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಭೂಷಣ್ ಅವರು ವಾಗ್ದಾಳಿ ನಡೆಸಿದರು. ಈ ಮಸೂದೆಯಿಂದ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ ಜೊತೆ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಮಾಡುವ ಉದ್ದೇಶವಿದೆ ಎಂದು ಪ್ರಶಾಂತ್ ಆರೋಪಿಸಿದರು.
ಇದೇ ವೇಳೆ ಮಾತನಾಡಿದ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಅವರು ಮತದಾನದ ಹಕ್ಕುಗಳನ್ನು ರಕ್ಷಿಸಲು ಸಾರ್ವಜನಿಕ ಚಳವಳಿಗಳ ಅಗತ್ಯವನ್ನು ಒತ್ತಿ ಹೇಳಿದರು. ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧವಲ್ಲ, ಆದರೆ ಅದರ ಅನುಷ್ಠಾನದಲ್ಲಿನ ದೋಷಗಳ ವಿರುದ್ಧ, ವಿಶೇಷವಾಗಿ ಮತದಾರರನ್ನು ಡಿಲಿಟ್ ಮಾಡುವ ಸಂಬಂಧ ಆತಂಕಗಳಿವೆ ಎಂದರು.
ಪಶ್ಚಿಮ ಬಂಗಾಳವನ್ನು ಉಲ್ಲೇಖಿಸಿ ಅಲ್ಲಿನ ಎಸ್‌ಐಆರ್ ಮೇಲ್ವಿಚಾರಣಾ ಅಧಿಕಾರಿಯೊಬ್ಬರು ಇದೀಗ ನೂತನ ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದಾರೆ ಎಂದು ಪ್ರಸ್ತಾಪಿಸಿದರು.
ರೈತ ನಾಯಕ ವೀರಸಂಗಯ್ಯ, ಕಾರ್ಯಕರ್ತ ತನ್ವೀರ್ ಅಹಮದ್ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ನೋಡಿ: ದು.ಸರಸ್ವತಿಯವರ ಹೋರಾಟದ ಯಶೋಗಾಥೆ Janashakthi Media
