ನವದೆಹಲಿ: 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಪ್ರಕಟಿಸಿರುವ ನ್ಯಾಯಾಂಗ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಫೆಬ್ರವರಿ 25ರಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಸ್ವಯಂ ಪ್ರೇರಿತ ವಿಚಾರಣೆ ನಡೆಸಲಾಗುವುದು ಎಂದು ಸಿಜೆಐ ಸೂರ್ಯಕಾಂತ್ ಎಚ್ಚರಿಕೆ ನೀಡಿದರು.
ಇದು ವಕೀಲ ಸಮುದಾಯ ಮತ್ತು ನ್ಯಾಯಿಕ ವರ್ಗ ಎರಡನ್ನೂ ವಿಚಲಿತರನ್ನಾಗಿ ಮಾಡಿದೆ. ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಆಲಿಸಲಾಗುವುದು. ನ್ಯಾಯಾಂಗ ಸಂಸ್ಥೆಯನ್ನು ದೂಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಅವರು ವಿವರಿಸಿದರು.
ನ್ಯಾ. ಜೊಯಮಲ್ಯ ಬಾಗ್ಚಿ ಅವರು ಇದು ಸಂವಿಧಾನದ ಮೂಲ ರಚನೆ ಮೇಲೆ ನಡೆಸಿದ ದಾಳಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ಜಿಎಸ್ಟಿ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಯನ್ನ ಬೆದರಿಸಿ ಸುಲಿಗೆ; ಇಬ್ಬರ ಬಂಧನ
“ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ” ಎಂಬ ಅಧ್ಯಾಯದ ಭಾಗವಾಗಿ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ವಿಷಯವನ್ನು ಪುಸ್ತಕ ಒಳಗೊಂಡಿದೆ ಎಂದು ಆಂಗ್ಲ ದಿನಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.
ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಲ್ಲಿ ನ್ಯಾಯಾಂಗದ ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರ ಮತ್ತು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನು ಕಾರ್ಯವಿಧಾನಗಳು ಮತ್ತು ಕಳಪೆ ಮೂಲಸೌಕರ್ಯದಂತಹ ಅನೇಕ ಕಾರಣಗಳಿಂದಾಗಿ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಬಾಕಿ ಉಳಿದಿವೆ” ಎಂದು ಅಧ್ಯಾಯದಲ್ಲಿ ಹೇಳಲಾಗಿತ್ತು.
ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿರಿಯ ವಕೀಲ ಕಪಿಲ್ ಸಿಬಲ್ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನ್ಯಾಯಾಂಗದ ಭ್ರಷ್ಟಾಚಾರ ಬೋಧಿಸುವುದು ಗಂಭೀರ ಕಳವಳಕಾರಿ ಸಂಗತಿ ಎಂದರು.
ಮತ್ತೊಬ್ಬ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಪಠ್ಯದಲ್ಲಿ ಆಯ್ದು ನ್ಯಾಯಾಂಗದ ಭ್ರಷ್ಟಾಚಾರವನ್ನೇ ಟೀಕಿಸಲಾಗಿದೆ. ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆಗಳಿದ್ದರೂ ನ್ಯಾಯಾಂಗವನ್ನೇ ಪ್ರತ್ಯೇಕವಾಗಿ ಬಿಂಬಿಸಲಾಗಿದೆ ಎಂದು ಆಕ್ಷೇಪಿಸಿದರು.
ಇದನ್ನೂ ನೋಡಿ: “ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ಪ್ರಚಾರ: ನಿಜವೇ, ರಾಜಕೀಯ ಆಟವೇ?” – ಶಿವಸುಂದರ್ Janashakthi Media
