ಈಗ ನಮ್ಮ ದೇಶ ಜಗತ್ತಿನ ಮಹಾಶಕ್ತಿಗಳಲ್ಲಿ ಒಂದು ಆಗಿ ಮೂಡಿ ಬರುತ್ತಿದೆ ಎಂದು ಡಂಗೂರ ಸಾರಲಾಗುತ್ತಿದೆ. ಆದರೆ ಮೇ 2015 ರಲ್ಲಿ ಪ್ರಕಟವಾದ ‘ವಿಶ್ವ ಹಸಿವು ವರದಿ’ ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಸಂಖ್ಯೆಯ ಹಸಿದ ಜನಗಳನ್ನು ಅಂದರೆ 20 ಕೋಟಿ ಹಸಿದವರನ್ನು ಹೊಂದಿರುವ ದೇಶ ಎನ್ನುತ್ತದೆ. ಯುಎನ್ಡಿಪಿ ವರದಿಯ ಪ್ರಕಾರ ನಮ್ಮ ದೇಶದ ಜನಸಂಖ್ಯೆಯ 37.2 ಶೇ. ಬಡತನದಲ್ಲಿ ಇದೆ. ವಯಸ್ಕ ಸಾಕ್ಷರತೆ ಕೇವಲ 62.8 ಶೇ.
ಸರಕಾರದ ಅಂಕಿ-ಅಂಶಗಳ ಪ್ರಕಾರವೇ ಪ್ರತಿ ವರ್ಷ 25 ಲಕ್ಷ ಮಕ್ಕಳು ಅಪೌಷ್ಟಿಕತೆ ಮತ್ತು ಹಸಿವಿನಿಂದ ಸಾಯುತ್ತಾರೆ. ಅರವತ್ತು ವರ್ಷಗಳ ಸ್ವಾತಂತ್ರ್ಯದ ನಂತರವೂ ಜಗತ್ತಿನ ಕಡಿಮೆ ತೂಕದ ಮಕ್ಕಳಲ್ಲಿ 42ಶೇ. ಭಾರತದಲ್ಲಿ ಇದ್ದಾರೆ. 6ರಿಂದ 9 ವರ್ಷದ ಮಕ್ಕಳಲ್ಲಿ 58.6ಶೇ. ಮಕ್ಕಳು ಮತ್ತು 10ರಿಂದ 13 ವರ್ಷದ ಮಕ್ಕಳಲ್ಲಿ 77ಶೇ. ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ. ಅಲ್ಪ ಪ್ರಮಾಣದ ಅಪೌಷ್ಟಿಕತೆಯನ್ನು ಕೂಡ ಗಮನಕ್ಕೆ ತಗೊಂಡರೆ, ಕಡಿಮೆ ತೂಕದ ಮಕ್ಕಳ ಪ್ರಮಾಣ ಈ ಎರಡು ವಯೋಗುಂಪುಗಳಲ್ಲಿ ಅನುಕ್ರಮವಾಗಿ 94.1 ಶೇ. ಮತ್ತು 96.4 ಶೇ. ಅಗುತ್ತದೆ. 10-13 ವಯೋಗುಂಪಿನ ಎಲ್ಲ ಮಕ್ಕಳಲ್ಲಿ 30.1 ಶೇ. ಗಂಭೀರ ಸ್ವರೂಪದ ಕಡಿಮೆ ತೂಕದವರು. ಶಾಲೆ ಬಿಡುವ ಮಕ್ಕಳ ಪ್ರಮಾಣ 60 ಶೇ.ದಷ್ಟಿದೆ.!!
ಸುಪ್ರಿಂ ಕೋರ್ಟ್(2001 ಮತ್ತು 2004ರಲ್ಲಿ) ಸರಕಾರೀ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ಮಗುವಿಗೆ 300 ಕ್ಯಾಲರಿ ಬೇಯಿಸಿದ ಮಧ್ಯಾಹ್ನದ ಊಟ ಮತ್ತು 12 ಗ್ರಾಂ ಪ್ರೊಟೀನ್ ಒದಗಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತು. ಹೀಗೆ ಸರಕಾರ ಹಸಿವು ಮತ್ತು ಅಪೌಷ್ಟಿಕತೆಯನ್ನು, ಅದರಲ್ಲೂ ಮಕ್ಕಳ ನಡುವೆ, ಎದುರಿಸಲು ’ಮಧ್ಯಾಹ್ನದ ಊಟ ಸ್ಕೀಂ’ಅನ್ನು ತರಲೇ ಬೇಕಾಯಿತು.
ಒಳ್ಳೆಯ ಪರಿಣಾಮಗಳು-ಸಮಸ್ಯೆಗಳ ಆಗರ
ಈ ಸ್ಕೀಮು ಶಾಲೆ ಬಿಡುವುದನ್ನು ಕಡಿಮೆ ಮಾಡಿದೆ, ಶಾಲೆಗೆ ಮಕ್ಕಳನ್ನು ಸೆಳೆದಿದೆ. ಜಾತಿ ಮತ್ತಿತರ ಪಕ್ಷಪಾತಗಳ ವಿರುಧ್ಧವಾಗಿದೆ. ಆದರೆ ಅಡುಗೆ ಮನೆಗಳು, ದಾಸ್ತಾನು ಅವಕಾಶ, ಅಡುಗೆ ಪಾತ್ರೆಗಳು, ಅಡುಗೆ ಅನಿಲ ಅಥವ ಇಂಧನ, ಕುಡಿಯುವ ನೀರು ಮತ್ತು ನೈರ್ಮಲ್ಯ ಇತ್ಯಾದಿ ಸರಿಯಾದ ಮೂಲರಚನೆಗಳ ಕೊರತೆ 30 ರಿಂದ 60 ಶೇ. ಶಾಲೆಗಳನ್ನು ಕಾಡುತ್ತಿದೆ. ಸರಕಾರ ಕಳಪೆ ಆಹಾರಧಾನ್ಯ ಕೊಡುವುದು, ಸಿಬ್ಬಂದಿ ಕೊರತೆಯಿಂದ ಶಿಕ್ಷಕರ ಕೆಲಸಕ್ಕೆ ಅಡ್ಡಿ, ಗುಮಾಸ್ತರ ಕೊರತೆ, ಅದರಿಂದ ವೇತನ ವಿಳಂಬ ಮಾಮೂಲಿಯಾಗಿದೆ. ಪೌಷ್ಟಿಕತೆಗೆ ಸಂಬಂಧಪಟ್ಟ ಯೋಜನೆಗಳ ಆಡಳಿತ ನಿರ್ವಹಣೆಗೆ ಒಂದು ಪ್ರತ್ಯೇ ಕ ಇಲಾಖೆ ರಚನೆಯ ಬಗ್ಗೆ ಚರ್ಚಿಸಬೇಕಿದೆ.
ಈ ಸ್ಕೀಮ್ನಲ್ಲಿ 2014ರಲ್ಲಿ 25,70,631 ಕಾರ್ಮಿಕರು ದೇಶಾದ್ಯಂತ ಕೆಲಸದಲ್ಲಿ ತೊಡಗಿದ್ದರು. 95ಶೇ. ಕ್ಕಿಂತಲೂ ಹೆಚ್ಚು ಮಹಿಳೆಯರು. ಹಲವು ರಾಜ್ಯಗಳಲ್ಲಿ ಅಡುಗೆಯ ಕೆಲಸವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೊಡಲಾಗಿದೆ. ನೌಕರರ ಕೊರತೆಯಿಂದ ಒತ್ತಡ ಹೆಚ್ಚಿದೆ. ಅಡುಗೆ ಮಾಡಿ ಬಡಿಸುವುದು ಮತ್ತು ಪಾತ್ರೆ-ಆವರಣವನ್ನು ಸ್ವಚ್ಚಗೊಳಿಸುವುದು ಹೀಗೆ ಕನಿಷ್ಟ 5-6 ಗಂಟೆ ಕೆಲಸ. ಇತ್ತೀಚಿನ ಆದೇಶಗಳ ಪ್ರಕಾರ ಅವರು ಮಕ್ಕಳ ತಟ್ಟೆಗಳನ್ನೂ ತೊಳೆದಿಡಲೇ ಬೇಕಾಗಿದೆ.
ದುಡಿಮೆಯನ್ನು ಗೌರವಿಸದ ಜಾಗತೀಕರಣ-ಉದಾರೀಕರಣ ನೀತಿಗಳು
ಈ ಎಂಡಿಎಂ ಕೆಲಸವನ್ನು ಮತ್ತು ಅಂತಹ ಇತರ ಕೆಲಸಗಳನ್ನು ’ಸೇವೆ’ ಅಥವ ’ಸ್ವಯಮಿಚ್ಚೆಯ ಕೆಲಸ’ ಎಂದು ಪರಿಗಣಿಸಲಾಗಿದೆ. ಅವರನ್ನು ’ಸ್ವಯಮಿಚ್ಛೆಯ ಕಾರ್ಯಕರ್ತರು’ ಅಥವ ’ಸಾಮಾಜಿಕ ಕಾರ್ಯಕರ್ತರು’ ಎನ್ನಲಾಗುತ್ತದೆ. ಮಹಿಳೆಯರು ಎಂಬ ಕಾರಣಕ್ಕೂ ಇವರ ಶ್ರಮಕ್ಕೆ ಬೆಲೆ ಕಡಿಮೆ. ’ಸಮುದಾಯದ ಭಾಗವಹಿಸುವಿಕೆ’ ಮತ್ತು ’ಮಹಿಳಾ ಸಬಲೀಕರಣ’ ಮುಂತಾದ ಮಂಕುಬೂದಿ ಎರಚುವ ಮಾತುಗಳ ಜಾಲದಿಂದ ದುಡಿಯುವವರಿಗೆ ಮೋಸ ಮಾಡಲಾಗುತ್ತಿದೆ. ಇವುಗಳ ಹಿಂದೆ ಆರ್ಥಿಕ ಉದಾರೀಕರಣ-ಜಾಗತೀಕರಣ-ಖಾಸಗೀಕರಣ ಎನ್ನುವ ನೀತಿಗಳ ಒತ್ತಡ ಇದೆ.
ಕೆಲಸಗಾರರಿಗೆ ಕೊಡುವ ’ಗೌರವ ಧನ’ ಹಲವು ರಾಜ್ಯಗಳಲ್ಲಿ ಇರುವ ಶಾಸನಬದ್ಧ ಕನಿಷ್ಟ ಕೂಲಿಯ ಹತ್ತನೇ ಒಂದು ಭಾಗ ಮತ್ತು ವರ್ಷದ ಹತ್ತು ತಿಂಗಳು ಮಾತ್ರ ಕೊಡಲಾಗುತ್ತದೆ. ಸಾಮಾಜಿಕ ಭದ್ರತೆ ಇಲ್ಲ. ಹಲವು ವರ್ಷಗಳ ಸೇವೆಯ ನಂತರ ಕೆಲಸಗಾರರನ್ನು ಪೆನ್ಶನ್ ಆಗಲೀ ’ಎಕ್ಸ್ ಗ್ರೇಶಿಯಾ’ ಮೊತ್ತವಾಗಲೀ ಇಲ್ಲದೆ ’ನಿವೃತ್ತ’ರಾಗುವಂತೆ ಮಾಡಲಾಗುತ್ತಿದೆ. ಕೆಲಸದಲ್ಲಿ ಅಪಾಯವಿದೆ. ಆದರೆ ವೈದ್ಯಕೀಯ ವಿಮೆಯಿಲ್ಲ. ಹೆರಿಗೆ ರಜೆಯಿಲ್ಲ. ಯಾವ ರಜೆಗಳೂ ಅನ್ವಯವಾಗುವುದಿಲ್ಲ. ಕೆಲಸದ ಅವಧಿ ಸ್ಪಷ್ಟವಿಲ್ಲ. 6-7 ಗಂಟೆಗಳ ಕೆಲಸ, 8-9 ಗಂಟೆಗಳ ವರೆಗೂ ವಿಸ್ತರಿಸಬಹುದು. ತಮ್ಮದಲ್ಲದ ಶಾಲಾ ಕೆಲಸಗಳ ಒತ್ತಡ ಮತ್ತು ಜಾತಿ ತಾರತಮ್ಯ, ಅಪಮಾನಗಳನ್ನು ನೌಕರರು ಎದುರಿಸಬೇಕಾಗುತ್ತದೆ. ನೇಮಕಾತಿಗೆ ಕೇಂದ್ರ ಸರಕಾರದಿಂದ ಸಮರೂಪದ ಮಾರ್ಗದರ್ಶನ ಇಲ್ಲ. ಹೆಚ್ಚಿನ ರಾಜ್ಯ ಸರಕಾರಗಳು ನೇಮಕಾತಿ ಪತ್ರ, ಗುರುತು ಕಾರ್ಡುಗಳನ್ನಾಗಲೀ ಕೊಡುತ್ತಿಲ್ಲ. ಹಿಮಾಚಲ ಪ್ರದೇಶ, ಒಡಿಶಾದಂತಹ ಹಲವು ರಾಜ್ಯಗಳು 6-8 ವರ್ಷಗಳಿಂದ ದುಡಿಯುತ್ತಿರುವ ನೂರಾರು ಮಧ್ಯಾಹ್ನದ ಊಟದ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕಲಾರಂಭಿಸಿವೆ.
ಇವರಲ್ಲಿ ಹಲವರು ಹಿಂದುಳಿದವರು, ವಿಧವೆಯರು, ಗಂಡನಿಂದ ತ್ಯಜಿಸಲ್ಪಟ್ಟವರೂ ಆಗಿರುವುದರಿಂದ ಸಮಾಜದಲ್ಲೂ, ಕೆಲಸದ ಜಾಗಗಳಲ್ಲೂ ಅನ್ಯಾಯವನ್ನು, ಲೈಂಗಿಕ ದೌರ್ಜನ್ಯಗಳನ್ನು ಸಹ ಎದುರಿಸಬೇಕಿದೆ.
ಬಂಡವಾಳಶಾಹಿಯು ಪ್ರತಿಯೊಂದನ್ನೂ ತನ್ನ ಲಾಭಗಳನ್ನು ಗರಿಷ್ಟ ಮಟ್ಟಕ್ಕೇರಿಸಲು ಬಳಸುತ್ತದೆ. ಜಗತ್ತಿನಲ್ಲೇ ಅತಿ ದೊಡ್ಡ ಶಾಲಾ ಆಹಾರ ಉಣಿಸುವ ಭಾರತದ ಈ ಪ್ರತಿಷ್ಠೆಯ ಯೋಜನೆಯಾದ ಮಧ್ಯಾಹ್ನದ ಊಟದ ಯೋಜನೆಯಲ್ಲಿ ಸಹ. ಪೌಷ್ಟಿಕತೆಯ ವ್ಯವಹಾರದಲ್ಲಿರುವ ದೊಡ್ಡ ಕಾರ್ಪೊರೇಟ್ ಗುಂಪುಗಳು ನೇಮಿಸಿರುವ ವಿಭಿನ್ನ ಕಾರ್ಪೊರೇಟ್ ಎನ್ಜಿಒಗಳು ಅಥವ ಏಜೆನ್ಸಿಗಳು ಹಲವು ‘ಅಧ್ಯಯನ’ ನಡೆಸಿ ಗದ್ದಲವೆಬ್ಬಿಸುತ್ತವೆ. ಇವುಗಳಲ್ಲಿ ಹಲವು ಏಜೆನ್ಸಿಗಳು ಸಿದ್ಧ ಆಹಾರದ ವ್ಯಾಪಾರದಲ್ಲಿವೆ ಮತ್ತು ಸರಕಾರ ನಡೆಸುವ ಸ್ಕೀಮುಗಳಲ್ಲಿನ ತಾವೇ ತೂರಿಕೊಳ್ಳಲು ಅಥವಾ ತಾವೇ ವಹಿಸಿಕೊಳ್ಳಲು ಕಾಯುತ್ತಿವೆ. ಸರಕಾರಕ್ಕೆ ಅಂತಹ ಸಲಹೆ ನೀಡುತ್ತಿವೆ.
ಗ್ರೂಪ್ ದನೋನ್, ಕಾರ್ಗಿಲ್ ಮತ್ತು ಯುನಿಲಿವರ್ನಂತಹ ಹಲವು ದೈತ್ಯ ಆಹಾರ ಕಂಪನಿಗಳು ನಡೆಸುತ್ತಿರುವ ಜಾಗತಿಕ ಎನ್ಜಿಒ ಕೂಟವಾದ ಗೈನ್(ಉತ್ತಮಪಡಿಸಿದ ಪೌಷ್ಟಿಕತೆಗಾಗಿ ಜಾಗತಿಕ ಮೈತ್ರಿಕೂಟ) ಭಾರತದ ಮಂತ್ರಿಗಳನ್ನು ಭೇಟಿಯಾಗಿತ್ತು. ವಿಶ್ವಸಂಸ್ಥೆಯ ಮಾನ್ಯತೆ ಪಡೆದಿರುವ ಈ ’ಗೈನ್’ನ ಪ್ರಸಕ್ತ ನಿರ್ದೇಶಕ ಕ್ಯಾಡ್ಬರಿ, ಕೊಕಕೋಲ, ಬ್ರಿಟಾನಿಯಾ ಮುಂತಾದ ಕಂಪೆನಿಗಳ ಸೇವೆಯಲ್ಲಿದ್ದವರು. ಇವು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಪ್ರಾಜೆಕ್ಟುಗಳನ್ನು ಪೌಷ್ಟಿಕಗೊಳಿಸಿದ ಸಿದ್ಧ ಆಹಾರದೊಂದಿಗೆ ಪ್ರವೇಶಿಸಿ ಬಿಟ್ಟಿವೆ. ಇದು ಪ್ರಾಯೋಗಿಕವಾಗಿ ಇನ್ನೂ ಪರೀಕ್ಷಿಸಿರದ ಆಹಾರ. ಇದು ಆಪಾಯಕರ. ಕಾರ್ಪೊರೇಟ್ ಗುಂಪುಗಳು ಮತ್ತು ಇಸ್ಕಾನ್ನಂತಹ ಕಾರ್ಪೊರೇಟ್ ಎನ್ಜಿಒಗಳು ಪೂರ್ಣ ಶಾಮೀಲಿನಿಂದ ಈಗಿರುವ ಸ್ಕೀಮುಗಳಲ್ಲಿನ ಲೋಪದೋಷಗಳನ್ನು ತೋರಿಸಿ ಮತ್ತು ’ನವೀನ ಮಾದರಿ’ಗಳನ್ನು ಮುಂದಿಡುವ ಹೆಸರಿನಲ್ಲಿ ಹೆಚ್ಚೆಚ್ಚು ಖಾಸಗೀಕರಣವನ್ನು ಪ್ರತಿಪಾದಿಸುತ್ತಿದ್ದಾರೆ. ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ)ದ ಹೆಸರಿನಲ್ಲಿ ಬಿಸಿಊಟದ ಸ್ಕೀಮನ್ನು ಒಡಿಶಾ, ಝಾರ್ಖಂಡ್ ಮತ್ತು ರಾಜಸ್ತಾನದಂತಹ ರಾಜ್ಯಗಳಲ್ಲಿ ಅನಿಲ್ ಅಗರ್ವಾಲ್, ಬಹುರಾಷ್ಟ್ರೀಯ ಕಂಪನಿ ವೆದಾಂತ ಮುಂತಾದವಕ್ಕೆ ವಹಿಸಿ ಕೊಡಲಾಗಿದೆ. ಅವರಿಗೆ ಸ್ಕೀಮಿಗೆ ಸರಕಾರದ ಬೆಂಬಲ ಸಿಗುತ್ತದೆ ಇದರಿಂದ ತಮ್ಮ ಉದ್ದಿಮೆಗಳಿಗೆ ತೆರಿಗೆ ರಿಯಾಯ್ತಿಗಳನ್ನೂ ಪಡೆಯುತ್ತಾರೆ. ಜನರ ಹಣದಿಂದ ಈ ಸ್ಕೀಮನ್ನು ನಡೆಸಿದ್ದಕ್ಕೆ ವೆದಾಂತಕ್ಕೆ ’ಅಂತರ್ರಾಷ್ಟ್ರೀಯ ’ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ’ ಪ್ರಶಸ್ತಿಯೂ ಸಿಕ್ಕಿತು.!!
ಇದಲ್ಲದೆ, ಬಹುರಾಷ್ಟ್ರೀಯ ಕಂಪನಿಗಳು ಈ ಸ್ಕೀಮುಗಳನ್ನು ನೈಸರ್ಗಿಕ ಸಂಪನ್ಮೂಲಗಳನ್ನು ದೋಚುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಒಡಿಶಾದ ’ವೆದಾಂತ’ ಕಂಪನಿ ಇತ್ತೀಚೆಗೆ ಆದಿವಾಸಿಗಳ ಜಾಗದಲ್ಲಿ ಗಣಿಗಾರಿಕೆಗೆ ಅರಣ್ಯ ಭೂಮಿಯನ್ನು ಒಳಹಾಕಿಕೊಂಡ ಲಂಜಿಗಡ್ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟದ ಸ್ಕೀಮನ್ನು ಮತ್ತು ಅಂಗನವಾಡಿ ಕೇಂದ್ರಗಳನ್ನು ನಡೆಸಿ ತನ್ನ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿತು. ಈ ಕೆಲವು ಎನ್ಜಿಒಗಳ ಆಸ್ತಿಗಳು ಮತ್ತು ಲಾಭಗಳ ಮಟ್ಟದಲ್ಲಿ ಹಲವು ಪಟ್ಟು ಹೆಚ್ಚಳ ತನಿಖೆ ಮಾಡಬೇಕಾದ ಸಂಗತಿ. ಇಸ್ಕಾನ್ನ ’ಅಕ್ಷಯ ಪಾತ್ರೆ’ ಮತ್ತು ನಾಂದಿ ಮುಂತಾದ ಎನ್ಜಿಒಗಳು ಮಧ್ಯಾಹ್ನದ ಊಟದ ಸ್ಕೀಮನ್ನು ನಡೆಸಲು ಸರಕಾರದಿಂದ ಸಂಪೂರ್ಣ ಹಣವನ್ನು ಮತ್ತು ಕಾರ್ಪೊರೇಟ್ ಸಾಮಾಜಿಕ ಜವಬ್ದಾರಿಯ ಹೆಸರಿನಲ್ಲಿ ಕಾರ್ಪೊರೇಟ್ಗಳಿಂದಲೂ ನಿಧಿ ಪಡೆಯುತ್ತಾರೆ. ’ಪ್ರತಿದಿನ ಒಂದು ಮಿಲಿಯ(ಹತ್ತು ಲಕ್ಷ) ಮಕ್ಕಳಿಗೆ ಊಟ ಹಾಕುವ ಅಕ್ಷಯಪಾತ್ರ’ ಇಡೀ ಜಗತ್ತಿನಲ್ಲೇ ಯಾವುದೇ ಎನ್ಜಿಒ ನಡೆಸುತ್ತಿರುವ ಅತಿ ದೊಡ್ಡ ಸ್ಕೀಮ್ ಎಂದು ಹೇಳಿಕೊಳ್ಳುತ್ತಲೇ ಅದನ್ನು ನಡೆಸಲು ಸರಕಾರದಿಂದಲೇ ಹಣ ಪಡೆದುಕೊಳ್ಳುತ್ತದೆ. ಜತೆಗೆ ದಾನಗಳ ಸಂಗ್ರಹ. ರಕ್ತಹೀನತೆ ವಿಪರೀತ ಮಟ್ಟದಲ್ಲಿದೆ ಎಂಬ ವರದಿಗಳ ಬೆನ್ನಲ್ಲೇ ರಕ್ತಹೀನತೆಯನ್ನು ಎದುರಿಸಲು ಸಣ್ಣ ಪೊಟ್ಟಣಗಳಲ್ಲಿ ಲಘು ಪಾನೀಯಗಳನ್ನು ಸು. ಐದು ರೂಪಾಯಿಯಲ್ಲಿ ಮಾರುಕಟ್ಟೆಗೆ ತರುವ ಪೆಪ್ಸಿಕೋಲಾದ ’ದಾನಶೂರ’ ಪ್ರಸ್ತಾವ ಬಂತು.
ಮೋದಿ ಸಂಪುಟದ ಆಹಾರ ಮಂತ್ರಿಗಳು ಈ ಸ್ಕೀಮುಗಳಲ್ಲಿ ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಲು ಪೆಪ್ಸಿಕೋದ ಅ ಧ್ಯಕ್ಷರಿಗೆ ಆಹ್ವಾನ ನೀಡಿದ್ದರು. ಇದು ಪೌಷ್ಟಿಕವಲ್ಲದ ಆಹಾರ ಉತ್ಪನ್ನಗಳು ಮತ್ತು ಕೋಲಾಗಳಿಗಾಗಿ ಕುಖ್ಯಾತವಾದ ಒಂದು ಕಂಪನಿ.
ಹೊಣೆಯಿಂದ ಜಾರಿಕೊಳ್ಳುವ ತಂತ್ರ
ಕೆಲಸ ಕಾಯಂ ಮಾಡಲು ಸಿದ್ದವಿಲ್ಲದೇ ’ಸಮುದಾಯ ಸಹಯೋಗ’ದ ಹೆಸರಿನಲ್ಲಿ ವಿಶ್ವಬ್ಯಾಂಕಿನ ಖಾಸಗೀಕರಣದ ಪಥ್ಯವನ್ನು ಒಂದು ಪರಿಹಾರೋಪಾಯವಾಗಿ ಆರಂಭಿಸಲಾಯಿತು. ಆಂಧ್ರಪ್ರದೇಶ, ಮಹಾರಾಷ್ಟ್ರ, ಹರ್ಯಾಣ ಮುಂತಾದ ರಾಜ್ಯಗಳಲ್ಲಿ ಅಡುಗೆಯ ಕೆಲಸವನ್ನು ’ಸ್ವಸಹಾಯ ಗುಂಪುಗಳಿಗೆ ವಹಿಸಲಾಗಿದೆ. ಅಲ್ಲದೆ, ಈಗ, ಗ್ರಾಮದಿಂದ ಅಥವ ’ಸಮುದಾಯ’ದಿಂದ ಮಕ್ಕಳಿಗೆ ಒದಗಿಸಲು ಅಗತ್ಯ ಹಣ ಮತ್ತು ತರಕಾರಿಗಳು, ಮೊಟ್ಟೆಗಳು ಮುಂತಾದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಬೇಕು ಎಂದು ಹೇಳಲಾಗುತ್ತಿದೆ. ಕೇರಳದಲ್ಲೂ ಕಾಂಗ್ರೆಸ್ ನೇತೃತ್ವದ ಸರಕಾರ ಈ ಸ್ಕೀಮಿಗೆ ಹಣಕಾಸು ಕಡಿತ ಮಾಡಿ, ಮಕ್ಕಳಿಗೆ ವಾರಕ್ಕೆ ಒಮ್ಮೆ ಅಥವ ಎರಡು ಬಾರಿ ಹಾಲು, ಮೊಟ್ಟೆಗಳನ್ನು ಕೊಡಲು ಶಿಕ್ಷಕರು ಮತ್ತು ಅಡುಗೆಯವರು ಅವನ್ನು ಜನರಿಂದ ಸಂಗ್ರಹಿಸಬೇಕೆಂದಿದೆ.
‘ಕೇಂದ್ರೀಕೃತ ಅಡುಗೆಮನೆ’ ಎಂಬ ಕುತಂತ್ರ
ಸ್ವಚ್ಛತೆ ಇತ್ಯಾದಿ ನೆಪ ಒಡ್ಡಿ ಈಗ ಶಾಲೆಗಳಲ್ಲಿ ಬಿಸಿಯೂಟ ಮಾಡಿ ಬಡಿಸುವ ಕ್ರಮಕ್ಕೆ ಬದಲಾಗಿ ದೊಡ್ಡ ಅಡುಗೆ ಕೇಂದ್ರದಲ್ಲಿ ಯಾಂತ್ರೀಕೃತವಾಗಿ ಅಡುಗೆ ಮಾಡಿ ಪೂರೈಸುವ ಯೋಜನೆ ತರಲಾಗುತ್ತಿದೆ. ಇದರಿಂದ ಸಾವಿರಾರು ಕೆಲಸಗಾರರ ಉದ್ಯೋಗಕ್ಕೆ ಸಂಚಕಾರ. ಕಾರ್ಪೊರೇಟ್ಗಳು, ಎನ್ಜಿಒಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಅನುಕೂಲ.
ಮೋದಿ ಸರಕಾರದ ವಂಚನೆ
ಯೋಜನಾ ಆಯೋಗವನ್ನೇ ರದ್ದು ಮಾಡಿರುವ ಮೋದಿ ಸರಕಾರ ಹೆಚ್ಚು ಹೆಚ್ಚು ಖಾಸಗೀಕರಣದ ನೀತಿಗಳನ್ನು ದೇಶದ ಮೇಲೆ ಹೇರುತ್ತಿದೆ.ಎನ್ಡಿಎ ಸರಕಾರದ ಮೊದಲ ಪೂರ್ಣ ಬಜೆಟ್ ಕಾರ್ಪೊರೇಟ್ಗಳಿಗೆ ದೊಡ್ಡ ರಿಯಾಯ್ತಿಗಳನ್ನು ಮತ್ತು ತೆರಿಗೆ ಕಡಿತಗಳನ್ನು ಕೊಟ್ಟಿತಷ್ಟೇ ಅಲ್ಲ, ಎಲ್ಲ ಜನಪರ ಕ್ರಮಗಳಿಗೆ ಮತ್ತು ಯೋಜನೆಗಳಿಗೆ ಹಣ ಕಡಿತಗೊಳಿಸಿತು.
ಹಣಕಾಸು ಆಯೋಗ ರಾಜ್ಯಗಳಿಗೆ ಸಂಪನ್ಮೂಲ ನೀಡಿಕೆಗಳನ್ನು ಹೆಚ್ಚಿಸಿದೆ ಎಂಬ (ಸುಳ್ಳು)ನೆವವೊಡ್ಡಿ ಸರಕಾರ ಕಲ್ಯಾಣ ಯೋಜನೆಗಳಿಗೆ ನೀಡಿಕೆಗಳಲ್ಲಿ ರೂ.1,23,000 ಕೋಟಿ ಕಡಿತ ಮಾಡಲಾಗಿದೆ. 2014-15 ರಲ್ಲಿ ಎಂಡಿಎಂಎಸ್ಗೆ ರೂ.13,215 ಕೋಟಿ ನೀಡಲಾಗಿತ್ತು, 2015-16ಕ್ಕೆ ಅದನ್ನು ರೂ.8,990 ಕೋಟಿ ರೂ.ಗೆ ಕಡಿತ ಮಾಡಲಾಗಿದೆ. ಕೆಲಸಗಾರರ ಗೌರವಧನದ ಹೆಚ್ಚಳದ ಪ್ರಸ್ತಾಪವೂ ಇಲ್ಲ.!!
ಕೇಂದ್ರದಿಂದ ಪ್ರಾಯೋಜಿತವಾದ ಸ್ಕೀಮುಗಳಲ್ಲಿ ಹಲವನ್ನು ಕೇಂದ್ರ ಸರಕಾರವೇ ನೇರವಾಗಿ ಕಳಚಿ ಹಾಕಲು ಸಾಧ್ಯವಿಲ್ಲವಾದ್ದರಿಂದ ಹಿಂದಿನ ಬಾಗಿಲಿನಿಂದ ಅದನ್ನು ಮಾಡಲು ಅವುಗಳ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಿಕೊಡ ಬಯಸುತ್ತಿದೆ. ಆದರೆ ಅದಕ್ಕೆ ಸಂಪನ್ಮೂಲಗಳನ್ನು ವಹಿಸಿ ಕೊಡುವುದಿಲ್ಲ. ಎಂಡಿಎಂಎಸ್ ಮತ್ತು ಐಸಿಡಿಎಸ್ಗಳನ್ನು ಸಂಪೂರ್ಣವಾಗಿ ಕೇಂದ್ರದಿಂದಲೇ ಪ್ರಾಯೋಜಿತವಾದ ಸ್ಕೀಮುಗಳಾಗಿ ಆರಂಭಿಸಲಾಗಿತ್ತು. ಆದರೆ ಈ ಬಾರಿಯ ಬಜೆಟ್ ಕಡಿತದ ಮೊದಲೇ, ಇವುಗಳ ಒಟ್ಟು ವೆಚ್ಚದ 25ಶೇ.ವನ್ನು ರಾಜ್ಯಗಳು ತೆರಬೇಕಾಗಿದೆ. ಒಂದೆರಡು ವರ್ಷಗಳಲ್ಲಿ ಇದು 50ಶೇ. ಆಗಬಹುದು.
ಹಲವು ರಾಜ್ಯಸರಕಾರಗಳು ಈ ಸ್ಕೀಮಿನ ಬಗ್ಗೆ ಮತ್ತು ಕೆಲಸಗಾರರ ಬಗ್ಗೆ ಕೇಂದ್ರ ಸರಕಾರದ ರೀತಿಯಲ್ಲೇ ನಿರ್ಲಕ್ಷ್ಯವನ್ನು ತೋರುತ್ತಿವೆ. ಹಲವಾರು ರಾಜ್ಯಗಳಲ್ಲಿ ತಿಂಗಳಾನುಗಟ್ಟಲೆ ಸಂಬಳಗಳನ್ನೇ ಕೊಟ್ಟಿಲ್ಲ, ಮತ್ತು ಹೆಚ್ಚಿಸಿದ ಸಂಬಳ ಇನ್ನೂ ಜಾರಿಯಾಗಿಲ್ಲ. ಕೆಲಸಗಾರರ ದುಡಿಮೆಯ ಶರತ್ತುಗಳಿಗೆ ಸಂಬಂಧಪಟ್ಟಂತೆ ಸಮರೂಪದ ಮಾರ್ಗದರ್ಶಕ ಸೂತ್ರಗಳಿಗೆ ಸಿದ್ಧವಿಲ್ಲ. ಬರೀ ರಾಜ್ಯ ಸರಕಾರವನ್ನು ದೂರಿ ಜಾರಿಕೊಳ್ಳಲಾಗುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ, 2006ರಿಂದ 2015ರ ವರೆಗೆ ಕೋಟ್ಯಾಧಿಪತಿಗಳಿಗೆ-ಕಾರ್ಪೊರೇಟ್ ಮನೆತನಗಳಿಗೆ ಮತ್ತು ವ್ಯಕ್ತಿಗಳಿಗೆ ನೀಡಿರುವ ತೆರಿಗೆ ರಿಯಾಯ್ತಿಗಳ ಮೊತ್ತ 36ಲಕ್ಷ ಕೋಟಿ ರೂ.ಗಳನ್ನೂ ಮೀರಿದೆ. ಕಳೆದ ಕೆಲವು ವರ್ಷಗಳಲ್ಲಿ ಪ್ರತಿ ವರ್ಷ ಕಾರ್ಪೊರೇಟ್ಗಳಿಗೆ ನೀಡಿದ ತೆರಿಗೆ ರಿಯಾಯ್ತಿಗಳ ಸರಾಸರಿ 5ಲಕ್ಷ ಕೋಟಿ ರೂ.ಗಳಿಗಿಂತಲೂ ಹೆಚ್ಚು. ಮೋದಿ ಸರಕಾರದ ಮೊದಲ ಪೂರ್ಣ ಬಜೆಟ್ ಕಾರ್ಪೊರೇಟ್ಗಳಿಗೆ ಬಿಟ್ಟುಕೊಟ್ಟಿರುವುದು ರೂ.5,89,285.2 ಕೋಟಿ.!!
ಕಾರ್ಮಿಕರಲ್ಲಿ 93ಶೇ. ಅಸಂಘಟಿತ ವಲಯದಲ್ಲಿ ಇದ್ದಾರೆ, ಅಲ್ಲಿ ಕನಿಷ್ಟ ಕೂಲಿ ಇಲ್ಲ, ಅಥವ ಸಾಮಾಜಿಕ ಭದ್ರತೆ ಇಲ್ಲ. ಖಾಸಗಿ ಸಂಘಟಿತ ವಲಯದಲ್ಲೂ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಲಾಗುತ್ತಿದೆ. ಈಗ ಕಾರ್ಪೊರೇಟ್ ಒತ್ತಡಗಳಿಗೆ ತಲೆಬಾಗಿ ಮೋದಿ ಸರಕಾರ ಎಲ್ಲ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕುತ್ತಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ಪಕ್ಷಗಳ ಧೋರಣೆಗಳು ಕಾರ್ಪೊರೇಟ್ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಮತ್ತಷ್ಟು ಶ್ರೀಮಂತಿಕೆ ಪಡೆಯಲು ನೆರವಾಗುತ್ತಿವೆ, ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೋದಿಯ ಆಪ್ತಮಿತ್ರ ಬಂಡವಾಳಗಾರ ಅದಾನಿಯ ಆಸ್ತಿ ರೂ.19,000 ಕೋಟಿಗಳಷ್ಟು ಹೆಚ್ಚಿದೆ. ದುಡಿಯುವ ಜನರ ಐಕ್ಯ ಹೋರಾಟವೊಂದೇ ಈ ಪರಿಸ್ಥಿತಿಯನ್ನು ಬದಲಿಸಲು ಸಾಧ್ಯ.
ಪರಿಹಾರದ ದಾರಿ-ಚಳುವಳಿಯ ದಾರಿ
ಅಮೆರಿಕ ನಿಯಂತ್ರಣದ ಐಎಂಎಫ್, ವಿಶ್ವಬ್ಯಾಂಕ್ ಮುಂತಾದ ಸಂಸ್ಥೆಗಳು, ಜಗತ್ತಿನ ಬಾರಿ ಬಂಡವಾಳಗಾರರು, ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳನ್ನೇ ತರಲು ಒತ್ತಡ ಹೇರುತ್ತವೆ. ಇಂತಹ ನೀತಿಗಳಿಂದ ನೊಂದು ಬಸವಳಿದು ಹೋದ ವೆನೆಜುವೆಲಾ, ಬೊಲಿವಿಯಾ, ಈಕ್ವೆಡಾರ್ ಮುಂತಾದ ಎಷ್ಟೋ ದೇಶಗಳು ಅಮೆರಿಕ ಒತ್ತಡದ ಜಾಗತೀಕರಣ ನೀತಿಗಳನ್ನು ಧಿಕ್ಕರಿಸಿ ಹಸಿವು ಮತ್ತು ಅನಕ್ಷರತೆ ನಿವಾರಣೆಯಂತಹ ನೀತಿಗಳನ್ನು ಆದ್ಯತೆಯಾಗಿ ಕೈಗೆತ್ತಿಕೊಂಡು ಬಡತನ ನಿರ್ಮೂಲನೆಯಂತಹ ಕ್ರಮಗಳಿಗೆ ಮುಂದಾಗಿವೆ. ಭ್ರಮಾತ್ಮಕವಾದ ಟೊಳ್ಳು ಅಭಿವೃದ್ಧಿಯ ದಾರಿ ಕೈಬಿಟ್ಟು ನಿಜವಾದ ಅಭಿವೃದ್ಧಿಯ ದಾರಿಯ ಕಡೆಗೆ ಹೆಜ್ಜೆ ಹಾಕುತ್ತಿವೆ. ನಮ್ಮ ದೇಶದ ಧೋರಣೆಯ ದಿಕ್ಕು ಬದಲಾಗ ಬೇಕಿದೆ. ಹಸಿವು, ಅನಕ್ಷರತೆ, ಬಡತನ ನಿವಾರಣೆ ನಮ್ಮ ಆಳುವ ಸರಕಾರಗಳ ಪ್ರಧಾನ ಗುರಿಗಳಾಗಬೇಕಾಗಿದೆ. ಹೊರತು ಬಂಡವಾಳಿಗರ ಬೊಜ್ಜು ಬೆಳೆಸುವುದಲ್ಲ. ಅದು ಅಭಿವೃದ್ಧಿಯಲ್ಲ. ಭಾರತದಲ್ಲಿಯೂ ಬಂಡವಾಳಿಗರ ಪರವಾದ ಶಕ್ತಿಗಳ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಬೇಕಿದೆ. ರಕ್ತಬಸಿದು-ಮೈಮುರಿದು ದುಡಿಯುವ ಜನರಿಗೆ ಕನಿಷ್ಟ ನ್ಯಾಯವನ್ನು ಒದಗಿಸುವಂತಹ ದುಡಿಯುವ ಜನರ ಪರವಾದ ಶಕ್ತಿಗಳನ್ನು ಅಧಿಕಾರಕ್ಕೆ ತರುವುದು ಆಗಬೇಕಿದೆ. ಇಂತಹ ಜನಪರ ನೀತಿಗಳ ಜಾರಿಗಾಗಿ ದುಡಿಯುವ ವರ್ಗ ಸಂಘರ್ಷ ಹೂಡುವುದು ಇಂದಿನ ಅನಿವಾರ್ಯವಾಗಿದೆ. ಇದೊಂದೇ ದುಡಿಯುವ ಜನರ ಮುಂದಿರುವ ಏಕೈಕ ಮಾರ್ಗ.
ಬಿಸಿಯೂಟ ನೌಕರರು ಸಂಘಟಿತರಾಗ ಬೇಕು. ನ್ಯಾಯಕ್ಕಾಗಿ ಕೆಂಬಾವುಟ ಹಿಡಿದು ಸಾಗುತ್ತಿರುವ ಶ್ರಮಿಕ ವರ್ಗದೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಸಾಗಬೇಕು. ಎಲ್ಲ ಕೂಡಿ ಹೊಸ ಚರಿತ್ರೆಗೆ ಮುನ್ನುಡಿ ಬರೆಯಬೇಕು. ಮಧ್ಯಾಹ್ನದ ಊಟದ ನೌಕರರ ಮೊದಲ ಅಖಿಲ ಭಾರತ ಸಮ್ಮೇಳನವು ಈ ದಿಕ್ಕಿನಲ್ಲಿ ಒಂದು ಪ್ರೇರಣೆಯಾಗಲಿ.