ಬಡವರ ಅನ್ನದ ತಟ್ಟೆಗೆ ಮಣ್ಣು ಹಾಕದಿರಿ- ಬಡವರ ಮಕ್ಕಳ ಊಟದ ತಟ್ಟೆಗೆ ಕಣ್ಣು ಹಾಕದಿರಿ…. ಬಿಸಿಯೂಟ ಮಾಡಿ ಬಡಿಸೋರ ಪರಿಶ್ರಮ ಕಡಿಮೆಯಲ್ಲ …ಕಡೆಗಣಿಸದಿರಿ

ಬಡವರ  ಅನ್ನದ ತಟ್ಟೆಗೆ ಮಣ್ಣು ಹಾಕದಿರಿ-

ಬಡವರ  ಮಕ್ಕಳ ಊಟದ ತಟ್ಟೆಗೆ ಕಣ್ಣು ಹಾಕದಿರಿ….

ಬಿಸಿಯೂಟ ಮಾಡಿ ಬಡಿಸೋರ ಪರಿಶ್ರಮ ಕಡಿಮೆಯಲ್ಲ …ಕಡೆಗಣಿಸದಿರಿ

ಆರ್. ರಾಮಕೃಷ್ಣ

ಸಂಪುಟ 9, ಸಂಚಿಕೆ 26, 28 ಜೂನ್ 2015

Mid-day meal workers under the Karnataka State Akshara Dasoha Workers Association and CITU stage

ಕರ್ನಾಟಕ ರಾಜ್ಯ ಸರಕಾರದ ಉಚಿತ ‘ಅಕ್ಕಿ ಭಾಗ್ಯ’ಯೋಜನೆಯ ಮೇಲೆ ಬಾರಿ ದಾಳಿ ನಡೆದಿದೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ವಿಷಯದಲ್ಲಿಯೂ ಹಲವು ಬಾರಿ ಟೀಕೆ ಗೇಲಿಗಳು, ಕುಹಕದ ಮಾತುಗಳು ಕೇಳಿಬರುತ್ತವೆ. ಇದು ಒಂದು ಬಗೆಯ ವ್ಯವಸ್ಥಿತ ದಾಳಿ. ಈ ಬಾರಿ ದಾಳಿಯಲ್ಲಿ ಎಸ್.ಎಲ್. ಭೈರಪ್ಪ ಅವರನ್ನು ದಾಳಿಗಿಳಿಸಲಾಗಿದೆ. ‘ರಾಜ್ಯದ ಹಲವು ದೇವಾಲಯಗಳು-ಮಠಗಳಲ್ಲಿ ಬ್ರಾಹ್ಮಣರಿಗೆ ಮಾತ್ರ ಯಾಕೆ ವಿಶೇಷ ಪಂಕ್ತಿ-ಅವರಿಗೆ ಮಾತ್ರ ಭೂರಿಭೋಜನ?’ ಎಂದು ರಾಜ್ಯದ ಜನ ಚಳುವಳಿ ಮಾಡುತ್ತಿದ್ದಾಗ ಈ ಭೈರಪ್ಪ ಸೊಲ್ಲು ಎಲ್ಲಿ ಅಡಗಿತ್ತೋ ಗೊತ್ತಿಲ್ಲ.!!

ಜನಪರ ಹೋರಾಟಗಳ ಒತ್ತಡದಿಂದ ರಾಜ್ಯ ಸರಕಾರ ಬಡವರಿಗೆ ಒಬ್ಬರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿಕೊಟ್ಟರೆ ಅದರಿಂದ ರಾಜ್ಯ ದಿವಾಳಿ ಎದ್ದುಹೋಗುವುದಂತೆ. ಜನರು ಸೋಮಾರಿಗಳಾಗುತ್ತಾರಂತೆ. ಸರಕಾರ ಉಚಿತ ಅಕ್ಕಿ ಏಕೆ ಕೊಡಬೇಕು. ಉದ್ಯೋಗ ಸೃಷ್ಟಿಸಲಿ ಎಂದು ಇವರು ಅಪ್ಪಣೆ ಕೊಡಿಸಿದ್ದಾರೆ.

ಈಗ ಉದ್ಯೋಗಿಗಳಾಗಿರುವವರಿಗೆ ಎಷ್ಟು ಜನ ಮಾಲೀಕರು ಸರಕಾರ ನಿಗದಿ ಮಾಡಿದ ಕನಿಷ್ಟ ಕೂಲಿ ಕೊಡುತ್ತಾರೆ? ಈ ಬಗೆಗೆ ಭೈರಿಗೆ ಭೈರಪ್ಪನವರು ಯಾಕೆ ಒಂದು ದಿನವೂ ಪ್ರಶ್ನೆ ಎತ್ತಿಲ್ಲ.  ಆಳುವ ಸರಕಾರಗಳೇ ಗೌರವ ಧನದ ಹೆಸರಿನಲ್ಲಿ ಬಿಸಿಯೂಟ ನೌಕರರಿಗೆ ಒಂದು ತಿಂಗಳ ದುಡಿಮೆಗೆ 1,000-1,100 ರೂಪಾಯಿಗಳ ನಿಕೃಷ್ಟ ಸಂಬಳ ನೀಡುತ್ತಿವೆ. ಈ ಬಗೆಗೆ ಭೈರಪ್ಪನವರು ಕಣ್ಣು ಮುಚ್ಚಿಕೊಳ್ಳುವುದು ಸಹಜವೇ. ಅವರಿಗೆ ಕಾಣುವುದು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷದ ಉರಿಇಕ್ಕಲು ಅವಕಾಶ ನೀಡುವ ವಿಷಯಗಳು ಮಾತ್ರ. ಆದರೆ ‘ಹಸಿವಿನ ಸಂಕಟದ ಕುರಿತು ‘ಕತ್ತಲನು ತ್ರಿಶೂಲ ಹಿಡಿದ ಕತೆ’ಯಂತಹ ಸೊಗಸಾದ ಕತೆ ಬರೆದ ಕುಂ.ವೀ.ಯವರು ಇದೇ ರೀತಿ ಮಾತನಾಡಿದ್ದಾರೆ.  ಕುಂ.ವಿ. ಅವರು ಜನರಿಂದ ದೂರವಾಗಿ ‘ಎ.ಸಿ.ರೂಂ ಸಾಹಿತಿ’ಯಾಗಿ ಬಡ್ತಿ ಪಡೆದುಕೊಂಡಿರಬಹುದು. ನಮ್ಮ ರಾಜ್ಯದ ಮತ್ತು ದೇಶದ ದುಡಿಯುವ ಜನರ ಬದುಕಿಗೆ ಇಂತಹ ಬಡ್ತಿಯಾವುದೂ ದೊರೆತಿಲ್ಲವಾದ್ದರಿಂದ ‘ಅಕ್ಕಿ ಭಾಗ್ಯ’ ಮತ್ತು ಬಿಸಿಯೂಟದಂತಹ ಯೋಜನೆ, ಅಂಗನವಾಡಿಗಳ ವ್ಯವಸ್ಥೆ, ಇವುಗಳಲ್ಲಿ ಕೆಲಸ ಮಾಡುವ ನೌಕರರಿಗೆ ಒಳ್ಳೆಯ ವೇತನ ಹಾಗೂ ಸಿಗಬೇಕಾದ ಸೌಲಭ್ಯಗಳು ಸಿಗಬೇಕಾಗಿವೆ.

ರಾಜ್ಯದ ಶೇ. 52 ಗರ್ಭಿಣಿಯರು, ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಸಹ ಅಪೌಷ್ಟಿಕತೆ  ತಾಂಡವವಾಡುತ್ತಿದೆ. ಕರ್ನಾಟಕದ ಹಸುಗೂಸುಗಳಲ್ಲಿ ಶೇ. 37 ರಷ್ಟು ಮಕ್ಕಳಿಗೆ ಮಾತ್ರ ತಾಯಂದಿರಿಂದ ಅಗತ್ಯಪ್ರಮಾಣದ ಹಾಲು ದೊರೆಯುತ್ತಿದೆ ಎನ್ನುತ್ತದೆ ಅಧಿಕೃತವಾದ ಅಧ್ಯಯನ ವರದಿ. ದೇಶದ ಪರಿಸ್ಥಿತಿಯೂ ಇದಕ್ಕಿಂತ ಕೊಂಚ ಹಿಂದೆ ಮುಂದೆ ಅಷ್ಟೆ.

ಅಕ್ಕಿ ಭಾಗ್ಯ ಎಂದರೆ ಅದು ಮಹಾಕ್ರಾಂತಿಯೇನು ಅಲ್ಲ.  ಬಡತನ, ಹಸಿವು ಮುಂತಾದ ಜನರ ಸಮಸ್ಯೆಗಳಿಗೆ ಅದೊಂದು ಶಾಶ್ವತ ಪರಿಹಾರವೂ ಅಲ್ಲ. ಆದರೆ ಹಗಲಿರುಳು ದುಡಿ ದುಡಿದು ಹುಡಿಯಾದರೂ ತಿಂಗಳಿಗೆ 4-5 ಸಾವಿರದ ಕನಿಷ್ಟ ವೇತನವೂ ಸಿಗದೇ, ನ್ಯಾಯಬದ್ದವಾದ ಕೂಲಿ ಸಿಗದೇ ಹೋಗುವ ಭಾರತದ ಕೋಟಿ ಕೋಟಿ ಜನರಿಗೆ ಅಕ್ಕಿ ಭಾಗ್ಯದಂತಹ ಕೆಲವು ಭಾಗ್ಯಗಳಿಂದ ಸರಕಾರಗಳು ಮತ್ತು ಮಾಲೀಕ ವರ್ಗ ದುಡಿಯುವ ಜನರಿಗೆ ಮಾಡುವ ಮೋಸಗಳಿಗೆ ಕೊಂಚವಾದರೂ  ಪರಿಹಾರ ಕೊಟ್ಟಂತಾಗುತ್ತದೆ ಅಷ್ಟೆ.

ರಕ್ತ ಬಸಿದು, ಮೈಮುರಿದು ಹಗಲಿರುಳು ದುಡಿದರೂ, ಹೊಟ್ಟೆ ತುಂಬ ಊಟದ ಕನವರಿಕೆಯಲ್ಲೇ-ಹಸಿವಿನ ನರಳಿಕೆಯಲ್ಲಿ ಮಲಗುವ ದುಡಿಯುವ ಜನರ  ಚರಿತ್ರೆ ದೊಡ್ಡದು.  ಶತಮಾನಗಳ ಕಾಲ ಲೂಟಿಕೋರ ಬ್ರಿಟೀಷ್ ಸಾಮ್ರಾಜ್ಯಶಾಹಿಗಳು ಭಾರತವನ್ನು ಹಿಂಡಿ ಭಾರತಕ್ಕೆ ಬರಗಾಲ, ಕ್ಷಾಮ ಡಾಮರಗಳನ್ನು ಕೊಡುಗೆಯಾಗಿ ಕೊಟ್ಟರು.   ಬ್ರಿಟೀಷ್ ಭಾರತದಲ್ಲೂ ಸ್ವಾತಂತ್ರ್ಯಾನಂತರವೂ ಭಾರತದ  ಜನತೆ ಹಸಿವಿನ ಬಾಣಲೆಯಲ್ಲಿ ಬೇಯುತ್ತಲೇ ಬಂದಿದ್ದಾರೆ. ಭಾರತದ ಆರ್ಥಿಕತೆಗೆ ಕೊಟ್ಟ ಪೆಟ್ಟು ಮತ್ತು ಆಹಾರ ಬೆಳೆಗಳಿಗೆ ಬದಲಿಗೆ ವಾಣಿಜ್ಯ ಬೆಳೆಗಳನ್ನು ಇಂಗ್ಲೆಂಡಿನ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು  ಬೆಳೆಯುವ ಒತ್ತಡ, ಹಲವಾರು ಭಾಗಗಳಲ್ಲಿ ರೈತರನ್ನು ಬಡಿದು, ಒಕ್ಕಲೆಬ್ಬಿಸಿ, ಪಾಳೇಗಾರಿ ಭೂಮಾಲೀಕತ್ವವನ್ನು ಕ್ರೋಢೀಕರಿಸಿ ಕೊಬ್ಬಿಸುವ ಬ್ರಿಟಿಷ್ ಸರಕಾರದ ನೀತಿಗಳು, ಆಳುವವರ ಯುದ್ಧಕೋರತನಗಳು ಮುಂತಾದವುಗಳ ದೆಸೆಯಿಂದ ಸ್ವಾತಂತ್ರ್ಯಪೂರ್ವದಲ್ಲಿಯೇ ಭಾರತದ ಕೋಟಿ ಕೋಟಿ ಜನರು ಹಸಿವಿನಿಂದ ನಲುಗಿದ್ದರು. ಆಗಾಗ ಬಂದರೆಗುವ ಮುನುಷ್ಯ ನಿರ್ಮಿತ ಕ್ಷಾಮ ಬರಗಾಲಗಳಲ್ಲಿ ತಿನ್ನಲು ಅನ್ನವಿಲ್ಲದೇ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಬಂಗಾಳದಲ್ಲಿ ಕಂಡು ಬಂದ ಕ್ಷಾಮದಲ್ಲಿ ಸು. ನಾಲ್ಕೈದು ಲಕ್ಷ ಜನರು ಪ್ರಾಣಗಳನ್ನು ಕಳೆದುಕೊಂಡಿದ್ದರು.

images (2)

ರೈತರು, ಬಡವರು ಎಷ್ಟೇ ದುಡಿದರೂ ಬಡತನ ಇವರ ಬದುಕಿನ ಮೇಲೆ ನಿಂತು ಕೇಕೆ ಹಾಕುತ್ತಿತ್ತು. ಅಪೌಷ್ಟಿಕತೆಯಿಂದ ರೋಗ ರುಜಿನಗಳು ತಾಂಡವವಾಡುತ್ತಿದ್ದವು. ಕ್ಷಯ ಎಂಬುದು ಅಪೌಷ್ಟಿಕತೆಯಿಂದ ಬರುವ ಒಂದು ಕಾಯಿಲೆ. ಭಾರತದಲ್ಲಿ ಇದು ವ್ಯಾಪಕವಾಗಿ ಹರಡಿತ್ತು. ಕ್ಷಯಕ್ಕೆ ತುತ್ತಾದವರನ್ನು ಜನರಿಂದ ಪ್ರತ್ಯೇಕಗೊಳಿಸಿ ತುಚ್ಚೀಕರಿಸಿ ನೋಡಲಾಗುತ್ತಿತ್ತು.  ರೋಗಕ್ಕೆ ಕಾರಣ ಪೂರ್ವ ಜನ್ಮದ ಪಾಪ ಎಂದು ಜನರನ್ನು ನಂಬಿಸಲಾಗಿತ್ತು.

ತನ್ನ ಸಮಾಜದಲ್ಲಿ ಹಸಿವಿನ ಸಂಕಟವನ್ನು ಹಾಗೂ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ನಿವಾರಿಸಿ ದುಡಿಯುವ ಜನತೆಗೆ  ಒಂದು ಗೌರವಯುತ ಜೀವನವನ್ನು ಒದಗಿಸಿದ ಸಮಾಜವಾದಿ ಸೋವಿಯತ್ ಒಕ್ಕೂಟ ಜಗತ್ತಿನ ಒಂದು ಸೂಪರ್ ಪವರ್ ಆಗಿ ಉದಯಿಸಿ ಜಗತ್ತನ್ನು ನಿಬ್ಬೆರಗಾಗಿಸಿತು. ಇಂತಹ ಹಿನ್ನೆಲೆಯಲ್ಲಿ ಕಮ್ಯೂನಿಸ್ಟ್ ರಷ್ಯಾ ಜಗತ್ತಿನ ದುಡಿಯುವ ಜನರ ಆಕರ್ಷಣೆಯಾಗಿತ್ತು.

ದೇಶದಲ್ಲಿ ಸ್ವಾತಂತ್ರ್ಯ ಆಂದೋಲನ ಬಲಿಯಿತು. ತ್ರಿವರ್ಣ ಧ್ವಜ ಮುಖ್ಯವಾಗಿ ರಾಜಕೀಯ ಸ್ವಾತಂತ್ರ್ಯಕ್ಕೆ ಗಮನ ಕೊಟ್ಟಿತು. ಆದರೆ ಹೊಟ್ಟೆ ಬಟ್ಟೆಗೆ ತತ್ವಾರವಿಲ್ಲದ ಉತ್ತಮ ಬದುಕಿನ ಹೊಂಗನಸುಗಳನ್ನು ಬಿತ್ತಿದ ಕೆಂಬಾವುಟವು ಕಾರ್ಮಿಕರು, ಕೂಲಿಕಾರರು, ಬಡರೈತರ ಬದುಕಿನ ಪ್ರಶ್ನೆಗಳನ್ನು ಮುಂದೆ ತಂದಿತು.   ಬ್ರಿಟಿಷರು ಹೋದರು.  ನಮ್ಮದೇ ದೇಶದ ಆಳುವ ವರ್ಗಗಳ ಕೈಗೆ ಅಧಿಕಾರ ಬಂತು. ಹಸಿರು ಕ್ರಾಂತಿ ಎಂಬುದು ಬಂದರೂ ಆಹಾರ ಉತ್ಪಾದನೆ ಹೆಚ್ಚಳವಾದರೂ ಎಲ್ಲ ಜನರಿಗೂ ಆಹಾರ ಸಿಗಲಿಲ್ಲ. ಏಕೆಂದರೆ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಲಿಲ್ಲ. ಭೂಮಿ ಇಲ್ಲದವರಿಗೆ ಭೂಮಿ, ಗೌರವಯುತ ದುಡಿಯುವ ಅವಕಾಶಗಳು ಎಲ್ಲರಿಗೂ ಸಿಗಲಿಲ್ಲ.  ಅಸ್ಪೃಶ್ಯತೆ, ನಾನಾ ಬಗೆಯ ಅಸಮಾನತೆಗಳು ತೊಲಗಲಿಲ್ಲ. ಭೂಹೀನರಿಗೆ ಭೂಮಿಗಾಗಿ ಚಳುವಳಿ, ಕಾರ್ಮಿಕರಿಗೆ ಕನಿಷ್ಟ ವೇತನ ಮತ್ತಿತರ ಅನುಕೂಲಗಳಿಗಾಗಿ ಆಂದೋಲನಗಳಿಂದ ಜನಜೀವನ  ಕೊಂಚ ಸುಧಾರಿಸುತ್ತಾ ಬರುತ್ತಿದ್ದರೂ  ಆಳುವ ಸರಕಾರಗಳು ಉಳ್ಳವರ ಪಕ್ಷವನ್ನೇ ವಹಿಸುತ್ತಾ ಅವರು ದುಡಿಯುವ ಜನರಿಗೆ ಮಾಡುತ್ತಿರುವ ವಂಚನೆಯನ್ನು ಬೆಂಬಲಿಸುತ್ತಿವೆ.

ಇಂತಹ  ಪರಿಸ್ಥಿತಿ, ಜನರಲ್ಲಿ ಜಾಗೃತಿ, ಜನಚಳುವಳಿಗಳ ಒತ್ತಡಗಳು, ಆಳುವ ಪಕ್ಷಗಳಿಗೆ ಜನಪ್ರಿಯತೆ ಗಳಿಸಿಕೊಳ್ಳುವ ಚುನಾವಣಾ ರಾಜಕಾರಣದ ಒತ್ತಡಗಳು ಮುಂತಾದ ಹಲವು ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ಕಡಿಮೆ ದರದಲ್ಲಿ ಆಹಾರ ಪೂರೈಸುವ ರೇಷನ್ ಪದ್ಧತಿ ಮುಂತಾದ ಕ್ರಮಗಳು ಬಂದವು. ಮುಂದೆ ಅದೇ ದಾರಿಯಲ್ಲಿ ಅಂಗನವಾಡಿಗಳ ಮೂಲಕ ದೇಶದ ಗರ್ಭಿಣಿಯರು ಮತ್ತು ಬಾಣಂತಿ-ಮಕ್ಕಳಿಗೆ ಪೌಷ್ಟಿಕ ಆಹಾರ ಆರೈಕೆ ಮಾಡುವ ವ್ಯವಸ್ಥೆ, ಆ ನಂತರ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಮುಂತಾದವುಗಳು ಜಾರಿಗೆ ಬಂದಿವೆ.

Donate Janashakthi Media

Leave a Reply

Your email address will not be published. Required fields are marked *