ಶ್ರೀನಿವಾಸಪುರದಲ್ಲಿ ಉತ್ಸಾಹದ ಸಿಪಿಐ(ಎಂ) ಜಿಲ್ಲಾ ಸಮ್ಮೇಳನ
ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು, ವಸತಿ ರಹಿತರಿಗೆ ಮನೆ ನಿವೇಶನ ನೀಡಲು, ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ಒತ್ತಾಯಿಸಿ ಸಿಪಿಐ(ಎಂ) ಕೋಲಾರ ಜಿಲ್ಲಾ 5ನೇ ಸಮ್ಮೇಳನವು ಶ್ರೀನಿವಾಸಪುರ ಪಟ್ಟಣದಲ್ಲಿ ಡಿಸೆಂಬರ್ 13-14, 2014 ರಂದು ಎರಡು ದಿನಗಳ ಕಾಲ ನಡೆದಿದೆ. ಸಮ್ಮೇಳನವು ಚರ್ಚಿಸಿದ ಜಿಲ್ಲೆಯ ರಾಜಕೀಯ-ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ವಿವರಗಳು ಹಾಗೂ ಸಮ್ಮೇಳನದ ಕಲಾಪದ ವಿವರಗಳು ಹೀಗಿವೆ.
ಕೋಲಾರ ಜಿಲ್ಲೆಯ ರಾಜಕೀಯ ಪರಿಸ್ಥಿತಿ :
ಬಿಜೆಪಿ ನೇತೃತ್ವದ ಕೇಂದ್ರದ ಮೋದಿ ಸರಕಾರ ಹಾಗೂ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈ ಎರಡು ಪಕ್ಷಗಳ ಆಡಳಿತ ಕೋಲಾರ ಜಿಲ್ಲೆಯ ಜನರಿಗೆ ಕರಾಳವಾಗಿ ಪರಿಣಮಿಸಿವೆ. ಬಲಿಷ್ಠ ಎಡ ಚಳುವಳಿ ಇತಿಹಾಸವಿರುವ ಕೋಲಾರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳು ರಾಜಕೀಯ ಪ್ರವೇಶಿಸಿವೆ. ಇಂತಹ ಶಕ್ತಿಗಳು ಹಣದ ಹೊಳೆ ಹರಿಸಿ ಜಿಲ್ಲೆಯ ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸಿವೆ.
ಜಿಲ್ಲೆಯಲ್ಲಿ ಕಾಂಗೈನ ಕೆ.ಹೆಚ್. ಮುನಿಯಪ್ಪ ಕಳೆದ ಬಾರಿಯೂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೋಲಾರ, ಮುಳಬಾಗಿಲಿನಲ್ಲಿ ಪಕ್ಷೇತರರು ಗೆದ್ದು, ಕಾಂಗ್ರೆಸ್ ಸೇರಿದ್ದಾರೆ. ಬಂಗಾರಪೇಟೆ, ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕೆಜಿಎಫ್ನಲ್ಲಿ ಬಿಜೆಪಿ, ಮಾಲೂರಿನಲ್ಲಿ ಜೆಡಿ(ಎಸ್) ಶಾಸಕರಿದ್ದಾರೆ. ಕೋಲಾರ ಜಿಲ್ಲಾ ಪಂಚಾಯತ್ನಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ.
ಎಡ-ಪ್ರಗತಿಪರ-ದಲಿತ ಚಳುವಳಿಗಳಿಂದ ಹೋರಾಟಗಳ ಸ್ಪೂರ್ತಿಯ ನೆಲೆಯಾಗಿದ್ದ ಕೋಲಾರ ಜಿಲ್ಲೆಯಲ್ಲಿ ಬಿಜೆಪಿಯು ಕ್ರಮೇಣ ಕೋಮುವಾದಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುತ್ತಾ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ಹತ್ತಾರು ಸಂಕಷ್ಠಗಳಿಂದ ಜನತೆ ತತ್ತರಿಸುತ್ತಿದ್ದರೂ ಜಿಲ್ಲೆಯ ಆಡಳಿತ ಮತ್ತು ಜನಪ್ರತಿನಿಧಿಗಳು ನಿಷ್ಕ್ರಿಯರಾಗಿದ್ದಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಜಿಲ್ಲಾ ಉಸ್ತುವಾರಿ ಮಂತ್ರಿ ಜನರ ಸಮಸ್ಯೆಗಳ ಕುರಿತು ಗಮನ ಹರಿಸುತ್ತಿಲ್ಲ. ಉದ್ಯೋಗಖಾತ್ರಿ ಜಾರಿ-ರೇಷನ್ ಕಾರ್ಡ್ ವಿತರಣೆ-ಮನೆ ನಿವೇಶನಗಳ ಹಂಚಿಕೆ ರೈತ ಕಾರ್ಮಿಕರ ರಕ್ಷಣೆ-ಮೂಲಭೂತ ಸೌಕರ್ಯಗಳು ವಿತರಣೆಯಲ್ಲಿ ಜಿಲ್ಲೆಯ ಆಡಳಿತ ಯಂತ್ರ ವಿಫಲವಾಗಿದೆ.
ಆರ್ಥಿಕ ಪರಿಸ್ಥಿತಿ :
ಜಿಲ್ಲೆಯ ಜನತೆಯ ಆರ್ಥಿಕ ಪರಿಸ್ಥಿತಿ ತುಂಬಾ ಸಂಕಷ್ಠದಲ್ಲಿದೆ. ಕೃಷಿ ಪ್ರಧಾನವಾಗಿರುವಂತಹ ಜಿಲ್ಲೆಯಲ್ಲಿ ಬಿಇಎಂಎಲ್ ಬಿಟ್ಟರೆ ಯಾವುದೇ ಸಾರ್ವಜನಿಕ ಕ್ಷೇತ್ರದ ಕಾರ್ಖಾನೆ ಇಲ್ಲ. ಹಿಂದೆ ಚಿನ್ನದ ಗಣಿ-ಬಿಜಿಎಂಎಲ್ ಇದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗ 2001 ರಲ್ಲಿ ಇದಕ್ಕೆ ಬೀಗ ಹಾಕಲಾಗಿದೆ. ಇದರ ಪುನರ್ ಆರಂಭಕ್ಕೆ ಹಲವಾರು ಗೊಂದಲಗಳು ಸೃಷ್ಠಿಯಾಗಿದ್ದು, ಇದಕ್ಕೆ ಈ ಪ್ರದೇಶದ ಸಂಸದರಾದ ಕೆ.ಹೆಚ್. ಮುನಿಯಪ್ಪ ನವರೇ ಕಾರಣರಾಗಿದ್ದಾರೆ. ಸಹಕಾರ ಕ್ಷೇತ್ರದ ಕೋಮುಲ್ನಲ್ಲಿ ಅಂದಾಜು 1000 ಮಂದಿ ಕಾರ್ಮಿಕರಿದ್ದಾರೆ. ಕೋಲಾರ-ಕೆಜಿಎಫ್-ಬಂಗಾರಪೇಟೆ-ಮಾಲೂರು ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರಾಂಗಣಗಳಿದ್ದು, ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಕೆಜಿಎಫ್, ಬಂಗಾರಪೇಟೆ ವ್ಯಾಪ್ತಿಯಿಂದ ಬೆಂಗಳೂರು ಇತರೆಡೆಗೆ ಸಾವಿರಾರು ಕಾರ್ಮಿಕರು ದುಡಿಯಲು ಹೋಗಿ ಬರುತ್ತಾರೆ. ಅಸಂಘಟಿತ ವಲಯದಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಇನ್ನುಳಿದಂತೆ ಕೊಳವೆ ಬಾವಿ ಆಶ್ರಯದಲ್ಲಿ ಹೈನುಗಾರಿಕೆ, ರೇಷ್ಮೆ -ಮಾವು ಇನ್ನಿತರೆ ಕಸುಬುಗಳಿಂದ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ.
ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದು 1500 ಅಡಿಗಳು ಕೊರೆಸಿದರೂ ನೀರು ಸಿಗದೇ ರೈತರು ಹತಾಶರಾಗುತ್ತಿದ್ದಾರೆ. ಇರುವಂತಹ ನೀರಿನಲ್ಲಿ ಬೆಳೆದಂತಹ ಬೆಳೆಗಳಿಗೆ ನಿಗದಿತ ಬೆಲೆ ಸಿಗದೇ ಸಾಗುವಳಿ ಹೆಚ್ಚಾಗಿ ರೈತರು ಸಂಕಷ್ಠ ಪರಿಸ್ಥಿತಿಯಲ್ಲಿದ್ದಾರೆ. ಈ ಕೃಷಿ ಬಿಕ್ಕಟ್ಟಿನಿಂದ ಕೆಲವು ರೈತರು ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಇನ್ನು ಕೆಲವರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರುತ್ತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗದ ಕಾರಣ ಅಸಂಘಟಿತ ವಲಯಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸಿಪಿಐ(ಎಂ) ನೇತೃತ್ವದ ಚಳುವಳಿಯಿಂದಾಗಿ ಕೆಲವು ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಜಾರಿಗೊಂಡಿದೆ. ಯೋಜನೆ ಎಲ್ಲೆಡೆ ಜಾರಿಯಾಗುತ್ತಿಲ್ಲ.
ಶಾಶ್ವತ ನೀರಾವರಿ ಯೋಜನೆ ಉದ್ದೇಶದ ಡಾ.ಪರಮಶಿವಯ್ಯ ವರದಿ ಕುರಿತು ಬೇರೆ ಬೇರೆ ವ್ಯಕ್ತಿಗಳು ಮತ್ತು ಬೇರೆ ಬೇರೆ ಪಕ್ಷಗಳು ವ್ಯತಿರಿಕ್ತವಾಗಿ ವಿಶ್ಲೇಷಿಸುವುದು ನಡೆದಿದೆ. ಜಿಲ್ಲೆಯ ಜನರು ತೀವ್ರವಾದ ಅಭಿಲಾಷೆ ಹೊಂದಿರುವ ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಆಗಲು ಸಾಧ್ಯವಿರುವ ಡಾ. ಪರಮಶಿವಯ್ಯ ವರದಿ ಜಾರಿಗೆ ಚಳುವಳಿ ಬಲಗೊಳ್ಳಬೇಕಿದೆ. ಶಾಶ್ವತ ನೀರಾವರಿ ಯೋಜನೆಗಳ ಜಾರಿಯಿಂದಲೇ ಜಿಲ್ಲೆಯ ಆರ್ಥಿಕ ಸುಧಾರಣೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ ಟೆಮೋಟೋ, ಹುಣಸೇ, ಮಾವು, ಅಲೂಗಡ್ಡೆ, ರೇಷ್ಮೆ, ಹಾಲು ಇನ್ನಿತರೆ ಕೃಷಿ ಉತ್ಪನ್ನಗಳ ಸಂಬಂಧ ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳ ಸ್ಥಾಪನೆ ಅನಿವಾರ್ಯವಾಗಿದೆ. ಇದು ಜಿಲ್ಲೆಯ ದುಡಿಯುವ ಜನರ ಆಶಾಕಿರಣವಾಗಬಹುದಾಗಿದೆ.
ಜಿಲ್ಲೆಯಲ್ಲಿ ಕೈಗಾರಿಕೆಗಳ ವಿಸ್ತರಣೆ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಆದರೆ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಕೆಲಸ ಕೊಡುವುದಾಗಲಿ ಇತರೆ ರೀತಿಯಲ್ಲಿ ಕಾರ್ಖಾನೆ ಮಾಲೀಕರಿಂದ ಸಹಾಯ ನೀಡುವುದಾಗಲಿ ಸಮರ್ಪಕವಾಗಿ ನಡೆಯದೇ ಭೂಮಿ ಕಳೆದುಕೊಂಡ ರೈತರು ಕಂಗಾಲಾಗುತ್ತಿದ್ದಾರೆ. ಇದರೊಂದಿಗೆ ಹೈಕೋರ್ಟ್ ನಿರ್ದೇಶನದ ಹೆಸರಿನಲ್ಲಿ ದೊಡ್ಡ ದೊಡ್ಡ ಭೂಮಾಫಿಯಗಳ ಭೂ ಒತ್ತುವರಿಯ ತಂಟೆಗೆ ಹೋಗದೇ ಹಾಗೆಯೇ ಬಿಟ್ಟು, ಜೀವನಾಧಾರಕ್ಕಾಗಿ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಸಣ್ಣ ಸಣ್ಣ ರೈತರನ್ನು ಒಕ್ಕಲೆಬ್ಬಿಸಿ ಅವರನ್ನು ಭೂಮಿಯಿಂದ ತೆರವುಗೊಳಿಸಲು ಜಿಲ್ಲಾಡಳಿತ ಹಾತೊರೆಯುತ್ತಿದೆ.
ಜಿಲ್ಲೆಯ ಸಮಗ್ರ ಅಭಿವೃದ್ದಿಯ ಮೂಲಕ ಜನರ ಜೀವನ ಮಟ್ಟ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನಚಳುವಳಿಗಳು ಮಧ್ಯ ಪ್ರವೇಶಿಸಿ ಜಿಲ್ಲೆಯ ಸಮಗ್ರ ಅಭಿವೃದ್ದಿಯ `ಸಂಕಲ್ಪದೊಂದಿಗೆ ಜನ ಚಳುವಳಿಯನ್ನು ಬೆಳೆಸ ಬೇಕಿದೆ. ಜನರ ಬದುಕಿನ ಜ್ವಲಂತ ಪ್ರಶ್ನೆಗಳನ್ನು ಮುಂಚೂಣಿಗೆ ತರಬೇಕಿದೆ.
ಸಾಮಾಜಿಕ ಪರಿಸ್ಥಿತಿ :
ಸಾಮಾಜಿಕ ಅಸಮಾನ ವ್ಯವಸ್ಥೆ ಮುಂದುವರಿದಿದೆ. ಸಿಪಿಐ(ಎಂ) ಪಕ್ಷ ಪ್ರಾರಂಭದಿಂದಲೂ ಅಸಮಾನತೆ ಜಾತಿ ತಾರತಮ್ಯಗಳ ವಿರುದ್ಧ ಹೋರಾಟಗಳನ್ನು ಸಂಘಟಿಸುತ್ತಿದೆ. ಜಿಲ್ಲೆಯಲ್ಲಿ ದಲಿತ ಚಳುವಳಿಯ ಬೆಳವಣಿಗೆಗೆ ಸಹಕರಿಸುತ್ತಾ ಜಾತಿ-ದೌರ್ಜನ್ಯಗಳ ವಿರುದ್ದ ಸಮರಶೀಲ ಹೋರಾಟಗಳನ್ನು ರೂಪಿಸುತ್ತಾ, ಆರ್ಥಿಕ ಬೇಡಿಕೆಗಳಿಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ವಿತರಣೆ ಮತ್ತು ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಹಲವಾರು ರೀತಿಯಲ್ಲಿ ಪ್ರತಿಭಟನೆಗಳನ್ನು ರೂಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ದಲಿತರ ಹಕ್ಕುಗಳ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಪ್ರಮುಖವಾಗಿ ಮುಳಬಾಗಿಲು ತಾಲ್ಲೂಕಿನ ವಿವೇಕಾನಂದ ನಗರ ಗುಡಿಸಲು ವಾಸಿಗಳ ಸುಧೀರ್ಘವಾದ ಯಶಸ್ವಿ ಹೋರಾಟ, ಮೇಲ್ ತಾಯಲೂರು ನಲ್ಲಿ ನಡೆದ ದಲಿತ ಬಾಲಕನ ಪರವಾದ ಹೋರಾಟ, ಮುಳಬಾಗಿಲಿನ ಕಗ್ಗನಹಳ್ಳಿಯಲ್ಲಿ ದಲಿತರಿಗೆ ಹಾಕಲಾದ ಬಹಿಷ್ಕಾರದ ವಿರುದ್ಧ, ಮಾಲೂರಿನ ಹರಿಣಿಘಟ್ಟ, ಮಾತಂಗಪುರ, ಚಾಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ಸಾಮಾಜಿಕ ಸಮಸ್ಯೆಗಳು ಬಂದಾಗ ಸಿಪಿಐ(ಎಂ) ಪಕ್ಷ ನೊಂದವರ ಪರ ಮಧ್ಯ ಪ್ರವೇಶಿಸಿದೆ. ದೀಪ್ತಿ ಕೊಲೆ ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಂಘಟಿಸಿದ್ದ 30 ದಿನಗಳ ಯಶಸ್ವಿ ಪ್ರತಿಭಟನೆ, ಮಹಿಳೆಯರು ಮತ್ತು ಬಾಲಕಿಯರ ಮೇಲೆ ದೌರ್ಜನ್ಯ ಖಂಡಿಸಿ ಕೋಲಾರ ಜಿಲ್ಲಾ ಬಂದ್ ಮುಂತಾದ ಹೋರಾಟಗಳನ್ನು ಸಿಪಿಐ(ಎಂ) ಪಕ್ಷ ಬೆಂಬಲಿಸಿ ಯಶಸ್ಸಿಗೆ ಶ್ರಮಿಸಿದೆ.
ಇತ್ತೀಚೆಗೆ ಜಾತಿವಾರು ಸಂಘಟನೆಗಳು ಎಲ್ಲಾ ವಿಭಾಗಗಳಲ್ಲಿ ಕ್ರಿಯಾಶೀಲವಾಗುತ್ತಿವೆ. ಸಾಮಾಜಿಕ ಸುಧಾರಕರನ್ನು ಜಾತಿ ನಾಯಕರನ್ನಾಗಿಸುವ ವ್ಯವಸ್ಥಿತ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸವರ್ಣಿಯರ ಮನೆಗಳಿಗೆ ವೈಯಕ್ತಿಕ ಆಹ್ವಾನ ಸ್ವೀಕರಿಸಿ ದಲಿತರ ಗೃಹ ಪ್ರವೇಶ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ ಈಗಲೂ ಸಾಕಷ್ಟು ಸಾರ್ವಜನಿಕ ನೀರಿನ ಮೂಲದಿಂದ ನೀರು ಪಡೆಯಲು ನಿಷೇಧ ಮತ್ತು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನಿಷೇಧ ಇರುವುದನ್ನು ಗುರುತಿಸಬೇಕಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮಧ್ಯೆ ಮೂಲಭೂತವಾದಿ ಸಂಘಟನೆಯಾದ ಎಸ್ಡಿಪಿಐ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು, ಕಳೆದ ನಗರಸಭಾ ಚುನಾವಣೆಯಲ್ಲಿ ಕೆಲವು ವಾರ್ಡ್ ಗಳಲ್ಲಿ ಸ್ಪರ್ಧಿಸಿದೆ. ದಲಿತರು-ಮಹಿಳೆಯರು-ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ.
ಈ ಮೇಲಿನ ಒಟ್ಟು ಪರಿಸ್ಥಿತಿ ಕುರಿತು ಸಿಪಿಐ(ಎಂ) ಕೋಲಾರ ಜಿಲ್ಲಾ 5ನೇ ಸಮ್ಮೇಳನವು ವಿವರವಾಗಿ ಚರ್ಚಿಸಿತು ಮತ್ತು ಮುಂದಿನ ದಿನಗಳಲ್ಲಿ ಜನ ಸಮೂಹಗಳ ಸಮಸ್ಯೆಗಳ ಆಧಾರದಲ್ಲಿ ಚಳುವಳಿಯನ್ನು ಬಲಗೊಳಿಸಲು ತೀರ್ಮಾನಿಸಿತು.
ರಾಲಿ-ಬಹಿರಂಗ ಸಭೆ
ಕೋಲಾರ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಕೃಷಿ ಕೂಲಿ ಕಾರ್ಮಿಕರು, ರೈತರು, ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ವಿದ್ಯಾರ್ಥಿ ಯುವಜನರು ಸೇರಿ ಡಿಸೆಂಬರ್ 13 ರಂದು ಶ್ರೀನಿವಾಸಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮುಗಿಲು ಮುಟ್ಟುವ ರೀತಿಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಮೆರವಣಿಗೆಯಲ್ಲಿ ಕಲಾವಿದರು ಚಕ್ಕೆ ಕೋಲಾಟ ಪ್ರದರ್ಶೀಸಿದ್ದು, ಎಲ್ಲರ ಗಮನ ಸೆಳೆಯಿತು.
ನಂತರ ತಹಶೀಲ್ದಾರ್ ಕಛೇರಿ ಆವರಣದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನೇ ಪ್ರಶ್ನಿಸಿ ಅಧಿಕಾರಕ್ಕೆ ಬಂದ ಬಿಜೆಪಿಯ ಆರ್ಥಿಕ ನೀತಿಗಳು ಜನವಿರೋಧಿಯಾಗಿದೆ. ಪ್ರಧಾನಿ ಮೋದಿ ಬಹುರಾಷ್ಟ್ರೀಯ ಕಂಪನಿಗಳ ಚೀಫ್ ಎಕ್ಸಿಕ್ಯೂಟಿವ್ ಆಪೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಕಳೆದ ಆರು ತಿಂಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಒಂದೇ ಒಂದು ಕಾರ್ಯಕ್ರಮವನ್ನು ಜಾರಿ ಮಾಡಿಲ್ಲ. ಬದಲಿಗೆ ದೇಶೀಯ ಮತ್ತು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಜನವಿರೋಧಿ ನೀತಿಗಳ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ಸಿಂಗ್ 30 ಕಿ.ಮೀ. ವೇಗದಲ್ಲಿ ಹೋದರೆ, ಪ್ರಧಾನಿ ಮೋದಿ 150 ಕಿ.ಮೀ. ವೇಗದಲ್ಲಿ ಹೋಗುತ್ತಿದ್ದಾರೆ.
ಹಿಂದಿನ ಪ್ರಧಾನಿ ಮನಮೋಹನ್ಸಿಂಗ್ ಸ್ವತಂತ್ರ ತೀರ್ಮಾನಗಳನ್ನು ಕೈಗೊಳ್ಳದೇ ಸೋನಿಯಾಗಾಂಧಿ ಕಡೆ ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇಂದು ಮೋದಿ ಸಹ ಸ್ವತಂತ್ರ ತೀರ್ಮಾನಗಳನ್ನು ಕೈಗೊಳ್ಳದೇ ಆರ್ಎಸ್ಎಸ್ ಅಣತಿಯಂತೆ ಆಡಳಿತ ನಡೆಸುತ್ತಿದ್ದಾರೆ. ಆರ್.ಎಸ್.ಎಸ್.ನವರ ಆದೇಶದಂತೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಲು ಕಾರ್ಯತಂತ್ರ ರೂಪಿಸ ತೊಡಗಿದ್ದಾರೆ. ಇದಕ್ಕಾಗಿ ಕೋಮು ಶಕ್ತಿಗಳನ್ನು ಬೆಳೆಸಲು ಮುಂದಾಗಿದ್ದಾರೆ ಎಂದು ಅವರು ಖಂಡಿಸಿದರು.
ಭ್ರಷ್ಠರಿಗೆ ಅವಕಾಶ ಇಲ್ಲ ಎನ್ನುವ ಮೋದಿ, ಕಲ್ಲಿದ್ದಲು ಹಗರಣದ ಆರೋಪಿ ನಿತಿನ್ ಗಡ್ಕರಿ ಸೇರಿದಂತೆ ಹಲವು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪವಿದ್ದರೂ, ಜಾರ್ಖಂಡ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಮೇಲೂ ಭ್ರಷ್ಟಾಚಾರದ ಆರೋಪ ಇದ್ದರೂ ಅವರನ್ನು ಅಧಿಕಾರದಲ್ಲಿ ಮುಂದುವರಿಸಿದ್ದಾರೆ. ಭ್ರಷ್ಟಾಚಾರದ ಹಗರಣಗಳ ಸಂಬಂಧ ಜೈಲುವಾಸ ಅನುಭವಿಸಿದ ಯಡಿಯೂರಪ್ಪರಿಗೆ ಬಿಜೆಪಿಯ ಉಪಾಧ್ಯಕ್ಷ ಪಟ್ಟ ನೀಡಿದ್ದಾರೆ ಎಂದೂ ಶ್ರೀರಾಮರೆಡ್ಡಿಯವರು ಬಿಜೆಪಿಯ ನಿಜವಾದ ಮುಖವನ್ನು ಬಯಲಿಗೆಳೆದರು.
ಮುಖ್ಯ ಅತಿಥಿಗಳಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿಜೆಕೆ ನಾಯರ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ಕೋಲಾರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಅರ್ಜುನನ್, ಪಿ. ಶ್ರೀನಿವಾಸ್, ವಿ. ಗೀತಾ, ಎ.ಆರ್. ಬಾಬು, ಸ್ವಾಗತ ಸಮಿತಿಯ ಪೋಷಕರಾದ ಡಾ. ವೆಂಕಟಾಚಲ, ರಿಯಾಜ್ ಷರೀಪ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯ ಎನ್. ವೀರಪ್ಪರೆಡ್ಡಿ ವಂದಿಸಿದರು.
ನಂತರದ ಪ್ರತಿನಿಧಿ ಅಧಿವೇಶನಕ್ಕೆ ಮುಂಚೆ ಪಕ್ಷದ ಹಿರಿಯ ಸದಸ್ಯರಾದ ಜಿ.ಅರ್ಜುನನ್ ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನದ ಕಾರ್ಯ ಕಲಾಪಗಳು ಆರಂಭವಾಯಿತು. ಪ್ರತಿನಿಧಿಗಳ ಅಧಿವೇಶನವನ್ನು ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಉದ್ಘಾಟಿಸಿದರು. ಸಮ್ಮೇಳನದ ಕಾರ್ಯ ಕಲಾಪ ನಡೆಸಲು ಜಿ.ಅರ್ಜುನನ್, ಪಿ.ಶ್ರೀನಿವಾಸ್, ವಿ.ಗೀತಾ, ವೀರಪ್ಪರೆಡ್ಡಿ ರವರನ್ನು ಒಳಗೊಂಡ ಅಧ್ಯಕ್ಷ ಮಂಡಳಿಯನ್ನು ಸಮ್ಮೇಳನವು ಚುನಾಯಿಸಿತು. ಜಿಲ್ಲಾ ಕಾರ್ಯದರ್ಶಿಗಳು ಮಂಡಿಸಿದ ಕರಡು ವರದಿ ಆಧರಿಸಿ ಸಮ್ಮೇಳನವು ವಿವರವಾದ ಚರ್ಚೆ ನಡೆಸಿತು.
ನಿರ್ಣಯಗಳು
ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ, ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳನ್ನು ಸ್ಥಾಪನೆಗಾಗಿ, ವಸತಿ ರಹಿತರಿಗೆ ಮನೆ ನಿವೇಶನ-ಬಗರ್ ಹುಕುಂ ಸಾಗುವಳಿಯನ್ನು ಸಕ್ರಮ ಮಾಡಬೇಕೆಂದು, ಬಿಜಿಎಂಎಲ್ ಚಿನ್ನದ ಗಣಿಯನ್ನು ಸರ್ಕಾರವೇ ಪುನರ್ ಆರಂಭಿಸಬೇಕು, ಸಮರ್ಪಕ ರೇಷನ್ ಕಾರ್ಡ್ ವಿತರಿಸಬೇಕು ಮತ್ತು ರೇಷನ್ ಕಾರ್ಡ್ ಗೊಂದಲ ನಿವಾರಿಸಲು, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ, ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿ, ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ ಸಾಮಾಜಿಕ ಭದ್ರತೆ ಕಲ್ಪಿಸಲು ಒತ್ತಾಯಿಸಿ, ರೈತ ಮತ್ತು ಕೃಷಿ ಕೂಲಿಕಾರರಿಗೆ ಅಗತ್ಯ ಬ್ಯಾಂಕ್ ಸಾಲ ನೀಡಲು ಒತ್ತಾಯಿಸಿ, ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು, ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಒತ್ತಾಯಿಸಿ, ಬಿಜಿಎಂಎಲ್ ಚಿನ್ನದ ಗಣಿಯನ್ನು ಸರ್ಕಾರವೇ ಪುನರ್ ಆರಂಭಿಸಲು, ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಒತ್ತಾಯಿಸಿ, ಸಾಚಾರ್ ಸಮಿತಿ ವರದಿಯನ್ನು ಜಾರಿಗಾಗಿ, ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ, ಉನ್ನತೀಕರಿಸಲು ಒತ್ತಾಯಿಸಿ, ಮಹಿಳೆಯರ ಮೇಲಿನ ದೌರ್ಜನ್ಯ-ಅತ್ಯಾಚಾರಗಳನ್ನು, ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ-ವಿಶೇಷ ಘಟಕ ಯೋಜನೆಯ ಸಮರ್ಪಕ ಜಾರಿಗೆ ಒತ್ತಾಯಿಸಿ, ಶಿಕ್ಷಣದ ಖಾಸಗೀಕರಣ, ಕೇಸರೀಕರಣ ಹಾಗೂ ಕೋಮುವಾದೀಕರಣ ವಿರೋಧಿಸಿ, ಉದ್ಯೋಗ-ಇಲ್ಲವೇ ನಿರುದ್ಯೋಗ ಭತ್ಯೆ ನೀಡಲು ಒತ್ತಾಯಿಸಿ, ಸರ್ಕಾರಿ ಉದ್ದಿಮೆಗಳಲ್ಲಿರುವ ಷೇರು ಬಂಡವಾಳ ವಾಪಸ್ಸಾತಿ ವಿರೋಧಿಸಿ, ಭ್ರಷ್ಠಾಚಾರ ವಿರೋಧಿಸಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ, ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಒತ್ತಾಯಿಸಿ, ಗುತ್ತಿಗೆ ಪದ್ದತಿ ನಿಷೇಧಿಸಲು ಒತ್ತಾಯಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ನೂತನ ಜಿಲ್ಲಾ ಸಮಿತಿ
ಸಮ್ಮೇಳನವು ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿತು. ನೂತನ ಸಮಿತಿಯು ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ಗಾಂಧಿನಗರ ನಾರಾಯಣಸ್ವಾಮಿಯವರನ್ನು ಪುನರ್ ಆಯ್ಕೆ ಮಾಡಿತು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಜಿ. ಅರ್ಜುನನ್, ಪಿ. ಶ್ರೀನಿವಾಸ್, ಪಿ.ಆರ್. ಸೂರ್ಯನಾರಾಯಣ, ವಿ. ಗೀತಾ, ಎ.ಆರ್. ಬಾಬು ಆಯ್ಕೆಯಾದರು. ಸದಸ್ಯರಾಗಿ ಟಿ.ಎಂ. ವೆಂಕಟೇಶ್, ಹೊನ್ನೇನಹಳ್ಳಿ ಯಲ್ಲಪ್ಪ, ಪಾತಕೋಟೆ ನವೀನ್ ಕುಮಾರ್, ಎನ್. ವೀರಪ್ಪರೆಡ್ಡಿ, ತಂಗರಾಜ್, ಆನಂದರಾಜ್, ಅಚ್ಯುತ, ನಿಕ್ಸನ್, ಸಂಪಂಗಿ, ಬಿ.ಎಸ್. ನಾಗರತ್ನ, ಎಂ. ವಿಜಯಕೃಷ್ಣ, ವೆಂಕಟಾಚಲಪತಿ ಆಯ್ಕೆಯಾದರು.