–ಸಿ.ಸಿದ್ದಯ್ಯ
–ಮಾಹಿತಿ ಕೃಪೆ: ಪ್ರಜಾಶಕ್ತಿ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ಘೋಷಿಸಿದ್ದಾರೆ. ನಮ್ಮ ದೇಶದ ಬಹುತೇಕ ಮಾಧ್ಯಮಗಳು ಈ ರಾಜೀನಾಮೆಗೆ ನಿಜವಾದ ಕಾರಣಗಳನ್ನು ಮುಚ್ಚಿಟ್ಟು ಬೇರೆಯದೇ ಕಥೆ ಕಟ್ಟಿ ಪ್ರಸಾರ ಮಾಡುತ್ತಿವೆ. ಆರ್ಥಿಕ ಅನಿಶ್ಚಿತತೆ, ಕೆನಡಾದ ಡಾಲರ್ ಮೌಲ್ಯ ಕುಸಿತ, ಹಣದುಬ್ಬರ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಜನತೆ, ಇವೆಲ್ಲವೂ ಸರ್ಕಾರದ ವಿರುದ್ದದ ಜನರ ಆಕ್ರೋಶಕ್ಕೆ ಕಾರಣವಾಗಿವೆ.
ಶ್ರೀಮಂತ ರಾಷ್ಟ್ರ ಕೆನಡಾದಲ್ಲಿ ಆಳುವ ಲಿಬರಲ್ ಪಕ್ಷದ ವಿರುದ್ದ ಜನರು ಅವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಜನರು ತಿರುಗಿ ಬಿದ್ದರೆ, ಅಧಿಕಾರದಲ್ಲಿ ಇರುವವರನ್ನು ಯಾವ ವಿಧದಲ್ಲಾದರೂ ಹೊರಗೆ ಹಾಕುತ್ತಾರೆ ಎಂಬುದನ್ನು ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿನ ಬೆಳವಣಿಗೆಗಳು ಸ್ಪಷ್ಟಪಡಿಸಿವೆ. ಕೆನಡಾದಲ್ಲಿ ಕೂಡಾ ಲಿಬರಲ್ ಪಾರ್ಟಿ ಪರಿಸ್ಥಿತಿಯೂ ಇದೇ ಆಗಿದೆ.
53 ವರ್ಷ ವಯಸ್ಸಿನ ಜಸ್ಟಿನ್ ಟ್ರುಡೊ ಹತ್ತು ವರ್ಷಗಳ ಹಿಂದೆ ಲಿಬರಲ್ ಪಕ್ಷಕ್ಕೆ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟು ಕೆನಡಾ ದೇಶದ ಪ್ರಧಾನಿಯಾದವರು. ಈಗ ಅವರ ಉಪಸ್ಥಿತಿ ಪಕ್ಷವನ್ನು ಪಾತಾಳಕ್ಕೆ ಇಳಿಸಲಿದೆ ಎಂದು ಅದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ದೇಶದ ಒಳಗೆ ಮತ್ತು ವಿದೇಶಗಳಲ್ಲಿ ಉದ್ಭವಿಸಿದ ಪರಿಸ್ಥಿತಿಯಿಂದಾಗಿ ಉಸಿರುಗಟ್ಟುವಿಕೆಯೊಂದಿಗೆ ಟ್ರುಡೊ ತಮ್ಮ ಲಿಬರಲ್ ಪಕ್ಷ ಮತ್ತು ಸರ್ಕಾರದ ಹುದ್ದೆಗಳಿಗೆ ಜನವರಿ 6ರಂದು ಹಠಾತ್ ರಾಜೀನಾಮೆ ಘೋಷಿಸಿದರು.
ಈ ತಿಂಗಳ 27 ರಂದು ಪ್ರಾರಂಭವಾಗಬೇಕಿದ್ದ ಸಂಸತ್ ಅಧಿವೇಶನಗಳನ್ನು ಮಾರ್ಚ್ 24 ರವರೆಗೆ ಸ್ಥಗಿತಗೊಳಿಸಿದರು. ತಕ್ಷಣವೇ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಸಂಸತ್ತು ಆರಂಭವಾಗುತ್ತಿದ್ದಂತೆಯೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮೂರು ಪ್ರಮುಖ ವಿರೋಧ ಪಕ್ಷಗಳು ಘೋಷಿಸಿವೆ. ಇದು ನಡೆದರೆ ಸರಕಾರದ ಪತನ ಖಚಿತ. ಟ್ರುಡೊ ಅವರ ರಾಜಿನಾಮೆ ಘೋಷಣೆ ಹೊರಬಿದ್ದ ತಕ್ಷಣವೇ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಅಮೆರಿಕದ 51 ನೇ ರಾಜ್ಯವಾಗಿ ಕೆನಡಾ ವಿಲೀನವಾಗುವುದು ಒಳ್ಳೆಯದು ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಈ ರೀತಿ ವಿಲೀನವಾದರೆ ರಷ್ಯಾ ಮತ್ತು ಚೀನಾದಿಂದ ಸ್ಪರ್ಧೆಯನ್ನು ಎದುರಿಸುವ ಅಗತ್ಯವಿರುವುದಿಲ್ಲ ಎಂದಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿ
ಬದಲಿ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರೂಡೊ ಅವರು ತಮ್ಮ ಹುದ್ದೆಯಲ್ಲಿ ಉಳಿಯುತ್ತಾರೆ. ಒಂದು ವಾರದೊಳಗೆ ಹೊಸ ನಾಯಕನನ್ನು ಆಯ್ಕೆ ಮಾಡುವುದಾಗಿ ಲಿಬರಲ್ ಪಕ್ಷ ಘೋಷಿಸಿದೆ. ಪಕ್ಷದಲ್ಲಿ ಉಂಟಾದ ಒಳಜಗಳದಿಂದ ತಮ್ಮ ಖ್ಯಾತಿ ಕುಸಿದದ್ದು, ಹಣಕಾಸು ಸಚಿವರ ರಾಜೀನಾಮೆ, ಆರ್ಥಿಕ ಅನಿಶ್ಚಿತತೆ, ವಾಣಿಜ್ಯ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಟ್ರುಡೊ ತಮ್ಮ ರಾಜೀನಾಮೆಯನ್ನು ಘೋಷಿಸಿದರು.
ಪಕ್ಷದಲ್ಲಿನ ಆಂತರಿಕ ಕಲಹದ ಕಾರಣದಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವುದಕ್ಕೆ ತಾನು ಸೂಕ್ತ ವ್ಯಕ್ತಿ ಅಲ್ಲವೆಂದು, ಈ ಅಂಶದ ಜತೆಗೆ ಸರ್ಕಾರದಲ್ಲಿನ ಬಿಕ್ಕಟ್ಟು ರಾಜೀನಾಮೆಗೆ ಕಾರಣ ಎಂದು ಹೇಳಿದ್ದಾರೆ. ರಾಜೀನಾಮೆ ನೀಡುವ ಮೊದಲು ತಮ್ಮದೇ ಪಕ್ಷದ ಹಲವು ಸಂಸದರು ಅಧಿಕಾರದಿಂದ ಇಳಿಯುವಂತೆ ಒತ್ತಾಯ ಮಾಡಿದರು.
ಟ್ರೂಡೊ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಕಳೆದ ಎರಡು ಚುನಾವಣೆಗಳಲ್ಲಿ, ಲಿಬರಲ್ ಪಕ್ಷವು ಕಡಿಮೆ ಶೇಕಡಾವಾರು ಮತಗಳೊಂದಿಗೆ ಹೆಚ್ಚು ಸ್ಥಾನಗಳನ್ನು ಗಳಿಸಿ ಅಲ್ಪಸಂಖ್ಯಾತ ಸರ್ಕಾರವನ್ನು ರಚಿಸಿದೆ. ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ)ಗೆ ಶೇ. 17.82 ರಷ್ಟು ಮತಗಳೊಂದಿಗೆ 25 ಸ್ಥಾನಗಳು ಬಂದಿವೆ. ಈ ಪಕ್ಷದ ಬೆಂಬಲದೊಂದಿಗೆ ಟ್ರುಡೊ ಸರ್ಕಾರ ನಡೆಸಿಕೊಂಡು ಬಂದಿದ್ದರು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನ್ಯೂ ಡೆಮಾಕ್ರಟಿಕ್ ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಅಸ್ಥಿರ ಪರಿಸ್ಥಿತಿ ಉಂಟಾಯಿತು. ಅಕ್ಟೋಬರ್ 2025 ರವರೆಗೆ ಸಂಸತ್ತಿನ ಅವಧಿ ಇದ್ದರೂ, ಯಾವುದೇ ಕ್ಷಣದಲ್ಲಾದರೂ ಸಂಸತ್ ವಿಸರ್ಜನೆ ಮತ್ತು ಮಧ್ಯಂತರ ಚುನಾವಣೆ ಬರಬಹುದು ಎಂದು ಭಾವಿಸಲಾಗಿದೆ. ಆದಾಗ್ಯೂ ವಿಷಯವನ್ನು ಅವಲಂಬಿಸಿ ತಾವು ಬೆಂಬಲಿಸುತ್ತೇವೆ ಅಥವಾ ವಿರೋಧಿಸುತ್ತೇವೆ ಎಂದು ಎನ್ಡಿಪಿ ಘೋಷಿಸಿದಾಗ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಆದರೆ ಡಿ.16ರಂದು ಉಪಪ್ರಧಾನಿ ಹಾಗೂ ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ನೀಡುವುದರೊಂದಿಗೆ ಆಡಳಿತ ಪಕ್ಷದಲ್ಲಿನ ಗೊಂದಲ ತೀವ್ರಗೊಂಡಿದೆ ಎನ್ನಬಹುದು.
ಆರ್ಥಿಕವಾಗಿ ಗಂಭೀರ ಅನಿಶ್ಚಿತತೆಯನ್ನು ಎದುರಿಸುತ್ತಿದೆ
ಎರಡು ವರ್ಷಗಳ ಹಿಂದೆ 33 ಪ್ರತಿಶತ ಕೆನಡಿಯನ್ನರು ಏರುತ್ತಿರುವ ಬೆಲೆಗಳು ಜನತೆಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಿದರೆ, 2024ರಲ್ಲಿ ಇವರ ಸಂಖ್ಯೆ ಶೇ.45ಕ್ಕೆ ಏರಿಕೆಯಾಗಿದೆ ಎಂದು ಸಾಮಾಜಿಕ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಶೇ. 38 ರಷ್ಟು ಜನರು ಹೇಳಿದ್ದಾರೆ.
2021 ರಿಂದ ಬೆಲೆ ಹಣದುಬ್ಬರ ಹೆಚ್ಚಳದ ಕಾರಣದಿಂದಾಗಿ ಐದು ಜನರಲ್ಲಿ ಒಬ್ಬರು ಸಾಮಾಜಿಕ ಸಂಸ್ಥೆಗಳಿಂದ ಹೆಚ್ಚು ಕಡಿಮೆ ಆಹಾರವನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗೆ ಅಥವಾ ತೀವ್ರವಾಗಿ ಮಾನಸಿಕ ಒತ್ತಡಕ್ಕೊಳಗಾಗಿದ್ದೇವೆ ಎಂದು 35 ಪ್ರತಿಶತದಷ್ಟು ಜನರು ಹೇಳಿದ್ದಾರೆ. ಕಡಿಮೆ ಆದಾಯ ಗಳಿಸುವವರಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ.
ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಲ್ಲಿ ಜೀವನ ಸಂತೃಪ್ತಿ ತುಂಬಾ ಕಡಿಮೆ ಇದೆ. ವೃದ್ಧರಿಗಿಂತ ಯುವಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಬಂದಿದೆ. 25ರಿಂದ 44 ವರ್ಷ ವಯಸ್ಸಿನವರಲ್ಲಿ ಶೇ. 55 ರಷ್ಟು ಜನರು ಏರುತ್ತಿರುವ ಬೆಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವೃದ್ಧರಲ್ಲಿ ಶೇ. 28 ರಷ್ಟಿದ್ದಾರೆ. ಆಹಾರ ಬ್ಯಾಂಕ್ಗಳು ಮತ್ತು ಸಾಮಾಜಿಕ ಸಂಸ್ಥೆಗಳಿಂದ ಆಹಾರವನ್ನು ಪಡೆಯುವವರಲ್ಲಿ ಯುವಕರಲ್ಲಿ ಶೇ. 46-47 ರಷ್ಟಿದ್ದರೆ, ವೃದ್ದರಲ್ಲಿ ಶೇ. 27-28 ರಷ್ಟಿದ್ದಾರೆ.
ಇನ್ನು ಮಕ್ಕಳ ಮೇಲೆ ಬೆಲೆ ಏರಿಕೆಯ ಋಣಾತ್ಮಕ ಪರಿಣಾಮದ ಕುರಿತು ಹೇಳುವ ಅಗತ್ಯವಿಲ್ಲ. ಆರ್ಥಿಕವಾಗಿ ಕೆನಡಾ ಗಂಭೀರ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಕೆನಡಾದ ಡಾಲರ್ ಮೌಲ್ಯವೂ ಕಳೆದ ವಾರ ಕುಸಿದು ಹೊಸ ದಾಖಲೆ ನಿರ್ಮಿಸಿದೆ. ಪ್ರಧಾನಿಯವರ ರಾಜೀನಾಮೆ ಘೋಷಣೆಯ ನಂತರ ಕೊಂಚ ಏರಿಕೆಯಾಗಬಹುದು ಆದರೆ ಅನಿಶ್ಚಿತತೆ ಮುಂದುವರೆಯಬಹುದು.
ಶ್ರೀಮಂತ ದೇಶಗಳಲ್ಲಿನ ಬಿಕ್ಕಟ್ಟು
ಶ್ರೀಮಂತ ದೇಶಗಳಲ್ಲಿನ ಬಿಕ್ಕಟ್ಟು 2008 ರಿಂದ ಇಂದಿನವರೆಗೂ ಕೆನಡಾದಲ್ಲಿಯೂ ಅನಿಶ್ಚಿತತೆಯ ಸೂಚ್ಯಂಕವು ತೀವ್ರ ಏರಿಳಿತಗಳಿಗೆ ಒಳಪಟ್ಟಿದೆ. 2000 ಇಸವಿಯಿಂದ 2008 ರವರೆಗೆ ಇದು 50 ರಿಂದ 200 ರ ನಡುವೆ ಏರಿಳಿತವಾದ ನಂತರ, ಇದು 100 ರಿಂದ 400 ರ ನಡುವೆ ಏರಿಳಿತ ಕಂಡಿತು. 2020 ರ ಕರೋನಾ ಸಮಯದಲ್ಲಿ ಗರಿಷ್ಠ 690, ಕಳೆದ ವರ್ಷ 650 ಆಗಿತ್ತು.
ಟ್ರುಡೊ ಅವರ ರಾಜಿನಾಮೆ ಘೋಷಣೆಯೊಂದಿಗೆ ಈ ವರ್ಷ ಅದು ಮತ್ತೆ ಹೆಚ್ಚಾಗುವ ಸೂಚನೆಗಳು ಕಾಣಿಸುತ್ತಿವೆ. ಹೊಸ ಸರ್ಕಾರ ರಚನೆಯಾದರೂ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಯಲಿರುವುದರಿಂದ ಹೂಡಿಕೆದಾರರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಮುಂದಾಗುವುದಿಲ್ಲ. ತಮ್ಮ ಯೋಜನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಅಥವಾ ಮುಂದೂಡುವ ಸಾಧ್ಯತೆಗಳಿವೆ. ಇದರಿಂದ ಅನಿವಾರ್ಯವಾಗಿ ಉದ್ಯೋಗದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಹೊಸ ನೇಮಕಾತಿಗಳು ಸೀಮಿತವಾಗುತ್ತವೆ.
ಆಮದು ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ; ಡೊನಾಲ್ಡ್ ಟ್ರಂಪ್
ಕೆನಡಾದ ಅತಿದೊಡ್ಡ ವ್ಯಾಪಾರ ಪಾಲುದಾರ ಯುನೈಟೆಡ್ ಸ್ಟೇಟ್ಸ್. ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದರು. ಆರ್ಥಿಕ ವಲಯದಲ್ಲಿ ಅನಿಶ್ಚಿತ ಪರಿಸ್ಥಿತಿ ಇರುವ ಕಾರಣದಿಂದ ಈ ವಿಷಯದಲ್ಲಿ ಕೆನಡಾದ ಚೌಕಾಶಿ ಶಕ್ತಿ ಕಡಿಮೆಯಾಗುತ್ತದೆ. ಟ್ರಂಪ್ ಕ್ರಮವು ಅಮೆರಿಕದ ಗ್ರಾಹಕರ ಮೇಲೆ ಹೊರೆಯಾದರೂ, ಕೆನಡಾದ ರಫ್ತುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
1985 ರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟುಗಳಲ್ಲಿ ಕೆನಡಾ ಹೆಚ್ಚುವರಿಯಲ್ಲಿದೆ. ತಮ್ಮ ಸರಕುಗಳನ್ನು ಹೆಚ್ಚು ಆಮದು ಮಾಡಿಕೊಳ್ಳಲು ಅಮೇರಿಕಾ ಯಾವಾಗಲೂ ಒತ್ತಾಯಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಪಕ್ಷದ ಹಲವು ಸಂಸದರ ಬೇಡಿಕೆಯ ಹೊರತಾಗಿಯೂ ರಾಜೀನಾಮೆ ನೀಡಲು ಟ್ರೂಡೊ ಗೆ ಇಷ್ಟವಿರಲಿಲ್ಲ. ಡಿಸೆಂಬರ್ನಲ್ಲಿ ನಡೆದ ಬೆಳವಣಿಗೆಗಳ ಪರಿಣಾಮದಿಂದ ರಾಜೀನಾಮೆ ನೀಡಬೇಕಾಯಿತು.
ಬಜೆಟ್ ಕೊರತೆ 60 ಶತಕೋಟಿ ಡಾಲರ್ ಗಳಿಗೆ ಹೆಚ್ಚಳ
ಪ್ರಧಾನಿ ಜೊತೆಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಹಣಕಾಸು ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. ರಾಜಕೀಯ ಗಿಮಿಕ್ ಗಳಿಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪರೋಕ್ಷವಾಗಿ ಮಾಡಿದ ಟೀಕೆಗಳ ಪತ್ರ ಬಹಿರಂಗವಾದ ನಂತರ ಒತ್ತಡ ಮತ್ತಷ್ಟು ಹೆಚ್ಚಾಯಿತು. ಈ ವರ್ಷದ ಬಜೆಟ್ ಕೊರತೆಯು 20 ಶತಕೋಟಿ ಡಾಲರ್ ಇರುತ್ತದೆ ಎಂದು ಅಂದಾಜಿಸಲಾಗಿತ್ತಾದರೂ, ಅದು 60 ಶತಕೋಟಿ ಡಾಲರ್ಗಳಿಗೆ ಹೆಚ್ಚಾಗಿದೆ. ಬಜೆಟ್ ಕೊರತೆ, ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವ ಭರವಸೆಯೊಂದಿಗೆ ಯುವಕನಾಗಿ ಕ್ಷೇತ್ರಕ್ಕೆ ಪ್ರವೇಶಿಸಿದ ಟ್ರುಡೊಗೆ ಯುವಜನರ ಬಾರಿ ಬೆಂಬಲದೊಂದಿಗೆ 2015ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ ಆಚರಣೆಯಲ್ಲಿ ಅದಕ್ಕೆ ವಿಭಿನ್ನವಾಗಿ ನಡೆದುಕೊಂಡರು. ಅವರು ಗಂಭೀರ ಭ್ರಷ್ಟಾಚಾರ ಆರೋಪವನ್ನೂ ಕೂಡಾ ಎದುರಿಸಿದ್ದಾರೆ.
ಪ್ರಧಾನಿ ಹುದ್ದೆಗೆ ಪೈಪೋಟಿ
ಟ್ರುಡೊ ರಾಜೀನಾಮೆಯಿಂದ ಆಡಳಿತಾರೂಢ ಲಿಬರಲ್ ಪಕ್ಷ ಮತ್ತು ವಿರೋಧ ಪಕ್ಷ ಕನ್ಸರ್ವೇಟಿವ್ ಪಕ್ಷದಿಂದ ಪ್ರಧಾನಿ ಹುದ್ದೆಗೆ ಪೈಪೋಟಿ ಹೆಚ್ಚಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ರಿಸ್ಟಿಯಾ ಫ್ರೀಲ್ಯಾಂಡ್, ಪ್ರಸ್ತುತ ಸಾರಿಗೆ ಸಚಿವೆಯಾಗಿರುವ ಭಾರತೀಯ ಮೂಲದ ಅನಿತಾ ಇಂದಿರಾ ಆನಂದ್ ಮತ್ತು ವಿದೇಶಾಂಗ ಸಚಿವೆ ಮೆಲಿನಾ ಜೋಲಿ ಕೂಡ ಪ್ರಮುಖ ಸ್ಪರ್ಧಿಗಳಾಗಿದ್ದಾರೆ ಎಂದು ವರದಿಯಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಗವರ್ನರ್ ಆಗಿ ಸೇವೆ ಸಲ್ಲಿಸಿ, ಟ್ರುಡೊಗೆ ಸಲಹೆಗಾರರಾಗಿರುವ ಮಾರ್ಕ್ ಕಾರ್ನಿ ಕೂಡ ರೇಸ್ನಲ್ಲಿದ್ದಾರೆ.
ಸರ್ಕಾರಕ್ಕೆ ಅಪಕೀರ್ತಿ ತಂದ ಕಾರ್ಬನ್ ತೆರಿಗೆ ಹೇರಿಕೆಯು ಅವರ ಸಲಹೆಯ ಮೇರೆಗೆ ನಡೆಯಿತು. ಮೂರು ಬಾರಿ ಹೆಚ್ಚಿನ ಮತಗಳನ್ನು ಪಡೆದರೂ ಅಗತ್ಯ ಸ್ಥಾನಗಳನ್ನು ಪಡೆಯುವಲ್ಲಿ ವಿಫಲರಾಗಿರುವ ವಿರೋಧ ಪಕ್ಷದ ನಾಯಕ ಪಿಯರ್ ಪೊಯ್ಲಿವಾರೆ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.
ಒಂದು ಟಿವಿ ನಡೆಸಿದ ಸಮೀಕ್ಷೆಯಲ್ಲಿ ಪಿಯರ್ ಅವರಿಗೆ 44.2 ಶೇಕಡಾ ಜನರು ಬೆಂಬಲ ವ್ಯಕ್ತಪಡಿಸಿದರೆ, ಟ್ರುಡೊ ಅವರಿಗೆ 24 ಶೇಕಡಾ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕರೋನಾ ನಂತರ ವಿವಿಧ ದೇಶಗಳಲ್ಲಿ ನಡೆದ ಚುನಾವಣೆಗಳ ತೀರ್ಪುಗಳನ್ನು ನೋಡಿದರೆ, ಅಧಿಕಾರದಲ್ಲಿ ಇರುವವರೆಲ್ಲರೂ ಬಹುತೇಕ ಸೋತಿದ್ದಾರೆ. ಕೆನಡಾದಲ್ಲಿ ಕೂಡಾ ಲಿಬರಲ್ ಪಾರ್ಟಿ ಪರಿಸ್ಥಿತಿಯೂ ಇದೇ ಆಗಿದೆ. ವಿವಿಧ ಆಕರ್ಷಕ ಭರವಸೆಗಳಿಂದ ಆಕರ್ಷಿತರಾಗಿ, ಅವರನ್ನು ಹೃದಯ ರಾಜರೆಂದು ಬೆಂಬಲಿಸಿದ ಜನರೇ ತಿರುಗಿ ಬಿದ್ದರೆ ಯಾವ ವಿಧದಲ್ಲಾದರೂ ಹೊರಗೆ ಹಾಕುತ್ತಾರೆ ಎಂಬುದನ್ನು ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿನ ಬೆಳವಣಿಗೆಗಳು ಇದನ್ನು ಸ್ಪಷ್ಟಪಡಿಸಿವೆ. ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಇದರಿಂದ ಪಾಠ ಕಲಿಯುತ್ತವೆಯೇ?
ಇದನ್ನೂ ನೋಡಿ: ಹಾಸನ | ಅಂಬೇಡ್ಕರ್ಗೆ ಅವಮಾನ : ಅಮಿತ್ ಶಾ ವಿರುದ್ಧ ರಸ್ತೆ ತಡೆ – ಬಂಧನ ಬಿಡುಗಡೆJanashakthi Media