ಹೆಸರಾಂತ ಪತ್ರಕರ್ತ, ಕವಿ ಪ್ರೀತಿಶ್ ನಂದಿ ನಿಧನ

ಮುಂಬೈ : ಹೆಸರಾಂತ ಪತ್ರಕರ್ತ, ಕವಿ, ಚಿತ್ರ ನಿರ್ಮಾಪಕ ಪ್ರೀತಿಶ್ ನಂದಿ ಅವರು ಬುಧವಾರ ಇಲ್ಲಿನ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಜನವರಿ 15, 1951 ರಂದು ಬಿಹಾರದ ಭಾಗಲ್ಪುರದಲ್ಲಿ ಪ್ರೀತಿಶ್ ನಂದಿ ಜನಿಸಿದರು. ತಮ್ಮ 74 ನೇ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ 8 ದಿನಗಳ ಮೊದಲು ಅವರು ಜಗತ್ತಿಗೆ ವಿದಾಯ ಹೇಳಿದರು. ಚಲನಚಿತ್ರ ನಿರ್ಮಾಪಕರಾಗಿರುವುದರ ಜೊತೆಗೆ ಅವರು ಕವಿ, ಚಿತ್ರಕಾರ, ಪತ್ರಕರ್ತ, ಮಾಜಿ ಸಂಸದ, ಮಾಧ್ಯಮ ಮತ್ತು ಟಿವಿ ವ್ಯಕ್ತಿತ್ವ, ಪ್ರಾಣಿ ಹಕ್ಕುಗಳ ಕಾರ್ಯಕರ್ತರೂ ಆಗಿದ್ದರು. 1998 ರಲ್ಲಿ ಶಿವಸೇನಾ ಟಿಕೆಟ್‌ನಲ್ಲಿ ಅವರು ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು ಮತ್ತು 6 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಕರ್ನಾಟಕದ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರ ಫೇಸ್ಬುಕ್ ನಲ್ಲಿ ಪ್ರೀತೀಶ್ ನಂದಿಯವರ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ.

ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಅವರ ಕವಿತೆಗಳನ್ನು ಪ್ರಕಟಿಸುವ ಮೂಲಕ) 80ರ ದಶಕದಲ್ಲಿ ಪರಿಚಯಿಸಿದ್ದಕ್ಕಾಗಿ.

ಜಾಹೀರಾತು ರಂಗದಿಂದ ಪತ್ರಿಕಾ ಸಂಪಾದಕರಾಗಿ ಬಂದ ಪ್ರೀತೀಶ್ ಕಾಲದ ಇಲಸ್ಟ್ರೇಟೆಡ್ ವೀಕ್ಲಿ, ಪತ್ರಿಕೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ 80ರ ದಶಕದಲ್ಲೇ ತನ್ನ ಕಾಲಕ್ಕಿಂತ 50 ವರ್ಷ ಮುಂದಿತ್ತು ಎಂದರೆ ತಪ್ಪಾಗದು. ನಾನು ಸುದ್ದಿಮನೆಗೆ ಕಾಲಿಟ್ಟದ್ದೇ 80ರ ದಶಕದ ಕೊನೆಯಲ್ಲಿ. ಆದರೆ ವಿದ್ಯಾರ್ಥಿಯಾಗಿಯೇ ಇಲಸ್ಟ್ರೇಟೆಡ್ ವೀಕ್ಲಿಯನ್ನು ಕಾಲೇಜು ಲೈಬ್ರರಿಯಲ್ಲಿ ನೋಡಿ ಬೆರಗಾಗುತ್ತಿದ್ದೆ. ಉದ್ಯೋಗಕ್ಕೆ ಸೇರಿದ ತಕ್ಷಣ ಮಾಡಿದ ಕೆಲಸ, ಇಲಸ್ಟ್ರೇಟೆಡ್ ವೀಕ್ಲಿ ಚಂದಾದಾರನಾದುದು. ಅದರ ಕೊನೆಯ ಸಂಚಿಕೆಯ ತನಕವೂ ಚಂದಾದಾರನಾಗಿದ್ದೆ. ಆದರೆ, ದುರದೃಷ್ಟವಶಾತ್ ಸಂಗ್ರಹದಲ್ಲಿದ್ದ ಆ ಎಲ್ಲ ಸಂಚಿಕೆಗಳೂ 35 ವರ್ಷ ಹಿಂದೆ ಗೆದ್ದಲಿಗೆ ಆಹಾರವಾದವು… ಅದರ ಪುಟಗಳಲ್ಲಿ ಕಪ್ಪು-ಬಿಳುಪಿನಲ್ಲೇ ಸಾಧಿಸುತ್ತಿದ್ದ ಪುಟ ವಿನ್ಯಾಸದ ಸೊಬಗು, ಆ ಕಾಲಕ್ಕಿಂತ ಬಹಳ ಮುಂದಿದ್ದ ಡಿಸೈನ್ ಪ್ರಯೋಗಗಳು, ಮುಖಪುಟದಲ್ಲಿ ಒಂದಿಷ್ಟು ಕಾಲ ಬರುತ್ತಿದ್ದ ವ್ಯಕ್ತಿಗಳ ವಾಟರ್ ಕಲರ್ ಪೋರ್ಟ್ರೈಟ್‌ಗಳು… ಈಗಿನ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಗ್ರಾಫಿಕ್ ಡಿಸೈನರ್‌ಗಳೂ ನಾಚುವಂತಿದ್ದವು.

ಕನ್ನಡದಲ್ಲಿ ಕೆಲವರು “ಪೇಜ್ ಡಿಸೈನ್” ಅರ್ಹತೆಗೇ ಸಂಪಾದಕರಾದ “ಡಿಸೈನರ್ ಸಂಪಾದಕರು” ಇದ್ದಾರೆ. ಅವರು ಇಂದು ಅಟ್ಟ ಹತ್ತಿ ಕೂತಮೇಲೆ ಹೊರತರುತ್ತಿರುವ, ವಾಕರಿಕೆ ತರಿಸುವ “ರದ್ದಿ” ವಿನ್ಯಾಸಗಳನ್ನು ಕಂಡರೆ “ವ್ಯಾಕ್” ಅನ್ನಿಸುತ್ತದೆ. ಎಲ್ಲಿ ಒಂದು ಸೆಂಟಿ ಮೀಟರ್ ಜಾಗ ಖಾಲಿ ಬಿಟ್ಟರೆ “ಭಾರೀ ನಷ್ಟ” ಸಂಭವಿಸೀತು ಎಂಬ ಯೋಚನೆಯಲ್ಲಿ ಪುಟ ವಿನ್ಯಾಸ ಮಾಡುವ ನಮ್ಮ ಕನ್ನಡ ಪತ್ರಿಕೆಗಳ ಪುಟ ಕಟ್ಟುವ ಮಂದಿ ಸಾಧ್ಯವಾದರೆ, ಎಲ್ಲಾದರೂ ಲಭ್ಯವಿದ್ದರೆ, ಹಳೆಯ ಇಲಸ್ಟ್ರೇಟೆಡ್ ವೀಕ್ಲಿ ಪುಟಗಳನ್ನು ನೋಡಬೇಕು. ಅಲ್ಲಿ, ಪುಟ ವಿನ್ಯಾಸದಲ್ಲಿ “ಖಾಲಿ ಜಾಗದ” ಮಹತ್ವ ಅರಿಯಬೇಕು. ಆ ಕಾಲದಲ್ಲೇ ಫ್ಯಾಷನ್ ಫೊಟೋಗ್ರಾಫರ್ ಗೌತಮ್ ರಾಜಾಧ್ಯಕ್ಷ (ಇವರು ನನಗೆ ನೆನಪಿರುವಂತೆ ಇಲಸ್ಟ್ರೇಟೆಡ್ ವೀಕ್ಲಿ ಮುಚ್ಚುವ ಕಾಲಕ್ಕೆ ಅದರ ಸಂಪಾದಕರಾಗಿದ್ದರು) ಜೊತೆ ಸೇರಿ ಮಾಡಿದ ಕೆಲವು ಕಪ್ಪು-ಬಿಳುಪು ಪುಟಗಳ ವಿನ್ಯಾಸ ಪ್ರಯೋಗಗಳನ್ನು ಗಮನಿಸಬೇಕು.

ಹಾಗಿದ್ದರೆ, ಜಾಹೀರಾತು ರಂಗದ ಹಿನ್ನೆಲೆಯ ಪ್ರೀತೀಶ್ ನಂದಿ ಬರೇ ಪುಟ ವಿನ್ಯಾಸ ಮಾಡಿದ್ದೇ? ಅಲ್ಲ. ಸ್ವತಃ ಪತ್ರಕರ್ತರಾಗಿ ಇಲಸ್ಟ್ರೇಟೆಡ್ ವೀಕ್ಲಿಗೆ ಅವರು ಮಾಡಿದ ಕೆಲವು ಸಂದರ್ಶನಗಳು ಭಾರತದ ರಾಜಕೀಯರಂಗದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದವು. ಓಷೊ ರಜನೀಶ್ ಸಂದರ್ಶನ, ಕರ್ನಾಟಕದ ಮಾಜೀ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಒಂದು ಹಗರಣದ ಕಾಲದ ಸಂದರ್ಶನ, ಮಾಜೀ ಪ್ರಧಾನಿ ಚಂದ್ರಶೇಖರ್ ಅವರ ಕಾಲದ ಟೆಲಿಫೋನ್ ಟ್ಯಾಪಿಂಗ್ (?) ಹಗರಣ, ಬೊಫೋರ್ಸ್ ಕಾಲದಲ್ಲಿ ಅಮಿತಾಬ್-ಅಜಿತಾಬ್ ಸಂದರ್ಶನ, ಓದಿಶಾ ಮುಖ್ಯಮಂತಿರ್ ಜೆ. ಬಿ. ಪಟ್ನಾಯಕ್ ಸಂದರ್ಶನ… ಹೀಗೆ ಅವರು ಸಂದರ್ಶನ ಮಾಡಿದರೇ ಅದು “ಬಾಂಬ್!”.

ಪ್ರೀತೀಶ್ ನಂದಿ ಅವರನ್ನು ಭಾರತೀಯ ಪತ್ರಿಕೋದ್ಯಮ ಅವರ ಸಾಮರ್ಥ್ಯದಷ್ಟು ಬಳಸಿಕೊಳ್ಳಲಿಲ್ಲ, ಅಥವಾ ಆ ಕಾಲಕ್ಕೆ ಅವರು ಭಾರತೀಯ ಪತ್ರಿಕೋದ್ಯಮ ಇದ್ದಲ್ಲಿಗಿಂತ ಬಹಳ ಮುಂದಿದ್ದರು ಅನ್ನಿಸುತ್ತದೆ. ಹೋಗಿಬನ್ನಿ ಪ್ರೀತೀಶ್ ನಂದಿ.

Donate Janashakthi Media

Leave a Reply

Your email address will not be published. Required fields are marked *