– ಡಾ:ಎನ್.ಬಿ.ಶ್ರೀಧರ
ಕೋಗಿಲೆ ಹಾಡಿದೆ ಕೇಳಿದೆಯಾ, ಹೊಸ ರಾಗವ ಹಾಡಿದೆ ಆಲಿಸೆಯಾ, ಹೊಸ ಹೊಸ ಭಾವ.. ಕುಣಿಸುತ ಜೀವಾ, ಮರೆಸುತ ನೋವಾ ಪ್ರೇಮವ ತುಂಬೀ..ಎಂಬ ಸೊಗಸಾದ ಚಿ.ಉದಯ ಶಂಕರ್ ರಚಿಸಿದ ಸಮಯದ ಗೊಂಬೆ ಚಿತ್ರದ ಹಾಡನ್ನು ಅಣ್ಣಾವ್ರು ಮತ್ತು ಜಾನಕಿಯಮ್ಮನವರ ಸುಮಧುರ ಕಂಠದಲ್ಲಿ ಅದೆಷ್ಟು ಜನ ಕೇಳಿ ಆನಂದಿಸಿರಲಿಕ್ಕಿಲ್ಲ !.
ಆದರೆ ಕೋಗಿಲೆಗೆ ಅದು ಹಾಡು ಅಲ್ಲವೇ ಅಲ್ಲ. ಅದಕ್ಕೆ ಹೊಸ ರಾಗವನ್ನು ರಚಿಸಲು ಬರುವುದೇ ಇಲ್ಲ. ಅದು ಹಾಡಿದ್ದನ್ನೇ ಹಾಡುತ್ತದೆ. ಹೀಗೆ ನಮ್ಮ ಸಾಹಿತಿಗಳು ಮತ್ತು ಬರಹಗಾರರು ಪ್ರಾಣಿ ಪಕ್ಷಿಗಳನ್ನು ಕಲಾತ್ಮಕವಾಗಿ ನೋಡಿ ಅವುಗಳಿಗೆ ಇಲ್ಲದ ಗುಣಗಳನ್ನು ಅವರೋಹಿಸಿ ಅವನ್ನು ವೈಭವೀಕರಿಸಿದ್ದಾರೆ ಎಂದರೆ ಜನ ಸಾಮಾನ್ಯರು ಇದು ನಿಜ ಎಂಬಷ್ಟರ ಮಟ್ಟಿಗೆ. ಕೋಗಿಲೆಯ ಕಂಠ ಧ್ವನಿ ನಮಗೆ ಸುಶ್ರಾವ್ಯವಾಗಿ ಕೇಳಿಸಬಹುದು. ಆದರೆ ಇತರ ಪಕ್ಷಿಗಳಿಗೆ ಅದು ಗದ್ದಲ ಅನಿಸಿದರೂ ಅನಿಸಬಹುದು. ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ ಜಂಜಾಟದಲ್ಲಿ ಕೋಗಿಲೆಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ.
ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ತೀವ್ರವಾದ ನಾಚಿಕೆಯ ಹಕ್ಕಿ. ಎಲ್ಲೋ ಬಚ್ಚಿಟ್ಟುಕೊಂಡು ಕುಹೂ ಕುಹೂ ಎಂದು ಹಾಡುವುದರಿಂದ ಮಾತ್ರ ನಮಗೆ ಅದರ ಬಗ್ಗೆ ಕುತೂಹಲ ಬೆಳೆದಿದೆ. ತನ್ನ ನೆಚ್ಚಿನ ಮರದ ದಟ್ಟ ಹಸಿರಿನೊಳಗೆ ಇದರ ಕೂಗು ನಮ್ಮ ಕಿವಿಗೆ ಇಂಪು. ಅಸಲಿಗೆ ಕೋಗಿಲೆಯ ಕಂಠಕ್ಕೆ ಮರುಳಾಗುವ ನಾವು ಅದರ ನೈಜ ಬದುಕನ್ನು ಅಧ್ಯಯನ ಮಾಡಿದರೆ “ಛೇ, ಇದೆಂತ ಬದುಕು, ಈ ಬದುಕು ಬಾಲಬೇಕೆ?” ಎಂದುಕೊಂದರೂ ತಪ್ಪಿಲ್ಲ. ಕೋಗಿಲೆ ಎಷ್ಟು ಸುಶ್ರಾವ್ಯವಾಗಿ ಹಾಡುತ್ತದೆಯೋ ಅಷ್ಟೆ ಸ್ವಾರ್ಥಿ ಮತ್ತು ವಂಚಕ ಪಕ್ಷಿ. ಆದರೆ ಇದು ಮನುಷ್ಯರಾದ ನಮ್ಮ ಪರಿಭಾಷೆಯಲ್ಲಿ ಮಾತ್ರ. ಅವುಗಳಿಗೆ ಅದು ಅತ್ಯಂತ ಸಹಜ ಮತ್ತು ಅವುಗಳ ತಳಿವಾಹಿನಿಗಳಲ್ಲಿ ಲಕ್ಷಗಟ್ಟಲೆ ವರ್ಷಗಳಿಂದ ಬಂದು ಬಿಟ್ಟಿದೆ.
ಕೋಗಿಲೆ ಹಾಡುವುದೇಕೆ?
ಗಂಡು ಕೋಗಿಲೆ ಮಾತ್ರ “ಕುಹೂ .. ಕುಹೂ .. ಎಂದು ಸುಶ್ರಾವ್ಯವಾಗಿ ಹಾಡುತ್ತದೆ. ಹೆಣ್ಣು ಕೋಗಿಲೆ ಕಿಕ್.. ಕಿಕ್. ಎಂದು ಗೊಗ್ಗರು ಶಬ್ಧವನ್ನು ಮಾತ್ರ ಹೊರಡಿಸುತ್ತದೆ. ಅದು ಹಾಡು ಎನ್ನುವುದು ನಮ್ಮ ಭ್ರಮೆ. ಆದರೆ ಕೋಗಿಲೆ ಕೂಗುವುದು ಮತ್ತೊಂದು ಅದರ ವ್ಯಾಪ್ತಿಯ ಪ್ರದೇಶವನ್ನು ಗುರುತಿಸಿಕೊಂಡು ತಾನು ಬಲಿಷ್ಟನೆಂದು ತೋರಿಸಿಕೊಳ್ಳುವ ಒಂದು ವಿಧಾನ. ಮತ್ತೊಂದು ಗಂಡು ಕೋಗಿಲೆಗೆ ಈ ಕೋಗಿಲೆಯ ವ್ಯಾಪ್ತಿಯನ್ನು ದಾಟದಂತೆ ಎಚ್ಚರಿಕೆಯ ಗಂಟೆ ಸಹ. ಇದರಲ್ಲಿ ಇರುವ ಉದ್ದೇಶ ಒಂದೇ. ಅದು ಹೆಣ್ಣು ಕೋಗಿಲೆಯನ್ನು ಆಕರ್ಷಿಸಿ ಅದನ್ನು ಕೂಡಿ ತನ್ನ ಸಂತಾನವನ್ನು ಮುಂದುವರೆಸುವುದು ಮಾತ್ರ. ಕಾರಣ ಇದೊಂದು ಹೆಣ್ಣು ಕೋಗಿಲೆಗಳನ್ನು ಆಕರ್ಷಿಸಲು ಒಂದು ಸಾಧನ ಮಾತ್ರ.
ಹೆಣ್ಣು ಕೋಗಿಲೆಗಳು ಒಲಿಯುವುದು ಸುಶ್ರಾವ್ಯ ಗಾನಕ್ಕೆ ಅಲ್ಲ. ಬದಲಾಗಿ ಅವುಗಳಿಗೆ ಸುಶ್ರಾವ್ಯ ಎಂದರೇನು ಎಂಬ ಬಗ್ಗೆಯೇ ತಿಳಿದಿರಲಿಕ್ಕಿಲ್ಲ. ಗಂಡು ಕೋಗಿಲೆ ಎಷ್ಟು ಜೋರಾಗಿ ಮತ್ತು ಎಷ್ಟು ಧೀರ್ಘ ಸಮಯದವರೆಗೆ ದಣಿಯದೇ ಅದು ಕೂಗುತ್ತದೆ ಎಂಬುದರಿಂದ ಗಂಡಿನ ದೈಹಿಕ ಸಾಮರ್ಥ್ಯ ನಿರ್ಣಯವಾಗುತ್ತದೆ. ಪ್ರಾಣಿ ಪ್ರಪಂಚದಲ್ಲಿ ದೈಹಿಕ ಸಾಮಾರ್ಥ್ಯ ಹೊಂದಿದ ಗಂಡಿಗೆ ಮಾತ್ರ ಸಂತಾನೋತ್ಪತ್ತಿಗೆ ಅಧಿಕಾರ ಇರುವುದು. ಇದು ಪ್ರಕೃತಿಯಲ್ಲಿ ಬದುಕಿ ಉಳಿಯಲು ಅರ್ಹತೆ ಸಹ. ಹೆಣ್ಣು ಕೋಗಿಲೆ “ಕಿಕ್..ಕಿಕ್..” ಎಂದು ಮೊನಚಾಗಿ ಕರ್ಕಶವಾಗಿ ಮನುಷ್ಯನ ಕಿವಿಗೆ ಇಂಪಾಗದ ಧ್ವನಿಯಲ್ಲಿ ಅರಚುತ್ತದೆ. ಒಮ್ಮೊಮ್ಮೆ ಜೋಡಿಗಳು ಒಟ್ಟಾಗಿಯೇ ಕೂಗುವುದೂ ಉಂಟು.
ಕೋಗಿಲೆಯು ಮರದಿಂದ ನೆಲಕ್ಕಿಳಿಯದಿರುವ ಹಕ್ಕಿ. ಅಪರೂಪಕ್ಕೆ ಮರದ ಮೇಲೆ ಹುಳಹುಪ್ಪಟೆ ಆಹಾರ ಸಿಗದಿದ್ದಾಗ ಮಾತ್ರ ಅವುಗಳನ್ನು ಹುಡುಕಲು ನೆಲಕ್ಕೆ ಬರಬಹುದು. ಚಳಿಗಾಲದಲ್ಲಿ ಮಾತ್ರ ಈ ಹಕ್ಕಿಯ ಕುಲವೇ ಪ್ರಪಂಚದಲ್ಲಿ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಒಂದು ಸಣ್ಣ ಶಬ್ಧವನ್ನೂ ಸಹ ಹೊರಡಿಸದೇ ತನ್ನ ಪಾಡಿಗೆ ತಾನು ನಿಶ್ಯಬ್ಧವಾಗಿ ಬದುಕುತ್ತದೆ. ವಸಂತಕಾಲ ಹತ್ತಿರವಾಗುತ್ತಿದ್ದಂತೆ ಕೋಗಿಲೆಯು ಹಾಡಲು ಶುರುಮಾಡುತ್ತದೆ. ಬೇಸಿಗೆಯಲ್ಲಂತೂ ಇದು ತಾರಕಕ್ಕೆ ಏರುತ್ತದೆ.
ಎಲ್ಲಾ ಗಂಡು ಕೋಗಿಲೆಗಳು ಹೊರಡಿಸುವ ಶಬ್ಧ ಒಂದೇ ತೆರನಾಗಿರುವುದಿಲ್ಲ. ಕೆಲವು ಪ್ರಬೇಧಗಳು ಮಾತ್ರ ಮನುಷ್ಯನ ಕಿವಿಗೆ ಇಂಪೆನಿಸುವ ಶಬ್ಧವನ್ನು ಹೊರಡಿಸುತ್ತವೆ. ಏಶಿಯನ್ ಗಂಡು ಕೋಗಿಲೆಗಳು ಹೊರಡಿಸುವ ಶಬ್ಧ ನಮ್ಮ ಕಿವಿಗೆ ಕರ್ಕಶವಾಗಿರುತ್ತದೆ.
ಏನು ಕೋಗಿಲೆಯ ಬದುಕಿನ ಅರ್ಥ?
ಎಲ್ಲಾ ಪಶುಪಕ್ಷಿಗಳಿಗೂ ಪ್ರಪಂಚಕ್ಕೆ ಬಂದ ಮೇಲೆ ಮೂರೇ ಉದ್ಧೇಶಗಳು. ಮೊದಲನೆಯದು ಆಹಾರ ಹುಡುಕಿ ಬದುಕುವುದು, ಸಂತಾನೋತ್ಪತ್ತಿ ಮಾಡುವುದು ಮತ್ತು ಶತ್ರುಗಳಿಂದ ಬಚಾವಾಗಿ ಜೀವನ ಸಾಗಿಸುವುದು. ಮನುಷ್ಯರಿಗೆ ಪ್ರಪಂಚದಲ್ಲಿ ನೈಸರ್ಗಿಕವಾಗಿ ಆಯಸ್ಸು ಎಂದು ಒಂದಿಷ್ಟು ವರ್ಷಗಳಿವೆ. ಆದರೆ ಪಕ್ಷಿ ಮತ್ತು ಪ್ರಾಣಿ ಪ್ರಪಂಚದಲ್ಲಿ ಅವುಗಳಿಗಳಿಗೆ ಬದುಕುವ “ತಾಕತ್ತು” ಇದ್ದರೆ ಮಾತ್ರ ಅವುಗಳ ನೈಸರ್ಗಿಕ ಆಯಸ್ಸಿನಷ್ಟು ಬದುಕುತ್ತವೆ. ಅವು ಸಾಯುವುದು ಆಹಾರ ಸಿಗದಿದ್ದಾಗ ಅಥವಾ ಮತ್ತೊಂದು ಪ್ರಾಣಿಯ ಆಹಾರವಾಗಿ. ಅಪರೂಪಕ್ಕೆ ಅವುಗಳಿಗೆ ಕಾಯಿಲೆ ಬರಬಹುದು. ಅನೇಕ ಹಕ್ಕಿಗಳಂತೆ ಕೋಗಿಲೆಯೂ ಸಹ ಒಂದು ವಲಸೆ ಹಕ್ಕಿ.
ಇದನ್ನೂ ಓದಿ : ಹವಾಮಾನದ ತಾಪಮಾನ ಹಾಗೂ ಅಸಮಾನತೆ
ವೈಜ್ಞಾನಿಕ ಹಿನ್ನೆಲೆ ಮತ್ತು ವರ್ಗೀಕರಣ
ಕೋಗಿಲೆಗಳು ಕ್ಯುಕ್ಯುಲಿಡೇ ಕುಟುಂಬಕ್ಕೆ ಸೇರಿವೆ, ಇದರಲ್ಲಿ ರೋಡ್‌ರನ್ನರ್ಸ್, ಕೋಯೆಲ್ಸ್ ಮತ್ತು ಅನಿಸ್‌ಗಳಂತಹ ಇತರ ಪಕ್ಷಿಗಳು ಸೇರಿವೆ. ಸರಿಸುಮಾರು 54 ವರ್ಗ ಮತ್ತು 140 ಕ್ಕೂ ಹೆಚ್ಚು ಜಾತಿಯ ಕೋಗಿಲೆಗಳಿವೆ. ನಾವು ದಿನ ನಿತ್ಯ ಕಾಣುವ ಸಾಮಾನ್ಯ ಕೋಗಿಲೆಗೆ ಆಂಗ್ಲ ಭಾಷೆಯಲ್ಲಿ ಕ್ಯುಕುಲಸ್ ಕ್ಯಾನೊರಸ್ ಎಂದು ಕರೆಯುತ್ತಿದ್ದು ಇದು ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡಿದೆ. ಸಾಮಾನ್ಯವಾಗಿ ಕೋಗಿಲೆಯ ಬಣ್ಣ ಕಪ್ಪು. ಗಂಡು ಕೋಗಿಲೆಯು ಹೊಳಪಿನ ಕಪ್ಪು ಬಣ್ಣದ್ದಾಗಿದ್ದು ಹಳದಿ ಬೆರೆತ ಕೊಕ್ಕು ಮತ್ತು ಕಡು ಕೆಂಪು ಕಣ್ಣು ಹೊಂದಿರುತ್ತದೆ. ಹೆಣ್ಣು ಕೋಗಿಲೆಯು ಕಂದು ಬಣ್ಣದ್ದಾಗಿದ್ದು, ಅದರ ಮೈಯ ತುಂಬೆಲ್ಲಾ ಬಿಳಿಯ ಸಣ್ಣ ಪಟ್ಟೆಗಳಿರುತ್ತವೆ.
ಜೀವನಾವಧಿ
ಬಹುತೇಕ ಕೋಗಿಲೆಗಳ ವಯಸ್ಸು ೨-೩ ವರ್ಷ. ಆದರೆ ಯಾವ ಕಾಡಿನ ಪಕ್ಷಿ ಅಥವಾ ಕೋಗಿಲೆಯೂ ಸಹ ಅದರ ನೈಸರ್ಗಿಕ ಜೀವನವನ್ನು ಮುಗಿಸಿ ನೈಸರ್ಗಿಕ ಮರಣ ಹೊಂದುವ ಸಾಧ್ಯತೆ ಬಹಳ ಕಡಿಮೆ ಎನ್ನುತ್ತಾರೆ ಪಕ್ಷಿ ವಿಜ್ಞಾನಿಗಳು. ವಯಸ್ಸಾದ ಮೇಲೆ, ಶಕ್ತಿ ಗುಂದಿದ ಮೇಲೆ, ಕಣ್ಣು ಕಾಣಿಸದೇ ಬೇಟೆಯಾಡಲು ಸಾಧ್ಯವಾಗದೇ ಹಸಿವಿನಿಂದ ಅಥವಾ ಇತರ ಯಾವುದೋ ಜೀವಿಗೆ ಆಹಾರವಾಗಿ ಸಾಯುವುದು ಬಹಳ ಸಾಮಾನ್ಯ. ಪ್ರಾಣಿ ಪ್ರಪಂಚದಲ್ಲಿ ಕರುಣೆ, ವಾತ್ಸಲ್ಯ, ವೃದ್ಧಾಪ್ಯ ಎಂಬಿತ್ಯಾದಿ ಪದಗಳಿಗೆ ಅರ್ಥವೇ ಇಲ್ಲ. ಅಲ್ಲಿ ಬಲಶಾಲಿಯಾಗಿರುವವರೆಗೆ ಮಾತ್ರ ಬದುಕಲು ಹಕ್ಕು. ಇದು ಪ್ರಕೃತಿಯ ನಿಯಮ.
ಎಲ್ಲೆಲ್ಲಿವೆ?
ಕೋಗಿಲೆಗಳು ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಎಲ್ಲಾ ಖಂಡಗಳಲ್ಲಿ ಕಂಡುಬರುತ್ತವೆ, ಜೌಗು ಮತ್ತು ಕಾಡುಗಳಿಂದ ಹುಲ್ಲುಗಾವಲುಗಳವರೆಗೆ ವಿವಿಧ ಪರಿಸರದಲ್ಲಿ ಇವು ವಾಸಿಸುತ್ತವೆ. ವ್ಯಾಪಕವಾಗಿ ಹರಡಿದೆ. ಅವು ವಲಸೆ ಹಕ್ಕಿಗಳು. ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾದ ಉಷ್ಣವಲಯದ ಪ್ರದೇಶಗಳಲ್ಲಿ ಅನೇಕ ಪ್ರಭೇದಗಳು ಚಳಿಗಾಲದಲ್ಲಿ ವಾಸಿಸುತ್ತವೆ. ಅವುಗಳ ಆವಾಸಸ್ಥಾನದ ಆಯ್ಕೆಯು ಸಾಮಾನ್ಯವಾಗಿ ಅವುಗಳ ಪರಾವಲಂಬಿ ಸಂತಾನೋತ್ಪತ್ತಿ ಅಭ್ಯಾಸಗಳಿಗೆ ಮತ್ತು ಅವುಗಳ ಆಹಾರವಾದ ಕೀಟಗಳ ಸಮೃದ್ಧಿಯನ್ನು ಹೊಂದಿದ ಪ್ರದೇಶವನ್ನು ಅವಲಂಭಿಸಿರುತ್ತದೆ. ಕೋಗಿಲೆಯು ಭಾರತವಲ್ಲದೆ ನೆರೆಯ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ದೇಶಗಳಲ್ಲೂ ಕಂಡುಬರುತ್ತದೆ. ಈಶಾನ್ಯ ಭಾರತದ ಬಗೆಯ ಕೋಗಿಲೆಗಳು, ಉಳಿದ ಕಡೆಯವುಗಳಿಗಿಂತ ದೊಡ್ಡ ಮೈಕಟ್ಟು ಹೊಂದಿರುತ್ತವೆ. ಕೋಗಿಲೆಯು ಹೆಚ್ಚಾಗಿ ತೋಟಗಳು, ತೋಪುಗಳು ಹಾಗು ದೊಡ್ಡ ಎಲೆಯ ಮರಗಳಿಂದ ಕೂಡಿದ ಬಯಲಿನಲ್ಲಿ ಕಂಡುಬರುತ್ತವೆ. ಹಳ್ಳಿಗಾಡಿಗಿಂತಲೂ ಪಟ್ಟಣಗಳ ಕೈತೋಟದ ಮರಗಳಲ್ಲೇ ಇವುಗಳು ಹೆಚ್ಚು ಕಾಣಸಿಗುತ್ತವೆ.
ಆಹಾರ
ಕೋಗಿಲೆಗಳು ಪ್ರಾಥಮಿಕವಾಗಿ ಕೀಟಾಹಾರಿ ಪಕ್ಷಿಗಳು. ಅದರಲ್ಲೂ ಚಿಟ್ಟೆಯ ಮೊಟ್ಟೆ ಮತ್ತು ಲಾರ್ವಾದಂತ ಹುಳುಗಳು ಇವುಗಳಿಗೆ ಬಲು ಇಷ್ಟ. ಜೇಡಗಳು, ಸಾವಿರಾರು ಜಾತಿಯ ಹುಳುಗಳು, ಜೀರುಂಡೆಗಳು ಮತ್ತು ಇರುವೆಗಳಂತಹ ಇತರ ಕೀಟಗಳನ್ನು ಸಹ ಇವು ತಿನ್ನುತ್ತವೆ. ಒಂದು ದಿನಕ್ಕೆ ಕೋಗಿಲೆಯೊಂದು ಸರಾಸರಿ ೪೦-೫೦ ಗ್ರಾಂ ಹುಳಗಳನ್ನು ಭಕ್ಷಿಸುತ್ತದೆ ಮತ್ತು ವರ್ಷಕ್ಕೆ ಸುಮಾರು ೧೮-೨೦ ಕಿಲೋ ಮತ್ತು ವರ್ಷಕ್ಕೆ ಸುಮಾರು ೭೨೦೦ ಟನ್ನುಗಳಷ್ಟು ಹುಳಗಳನ್ನು ಇವು ತಿಂದು ಮುಗಿಸುತ್ತವೆ. ಈ ಕಾರಣದಿಂದ ಕೋಗಿಲೆಗಳು ಕೀಟ ನಿಯಂತ್ರಣದಲ್ಲಿ ಗಣನೀಯ ಪಾತ್ರ ವಹಿಸುತ್ತವೆ. ಇವು ಅತ್ಯಂತ ಅವಕಾಶವಾದಿ ನಯವಂಚಕ ಪಕ್ಷಿಗಳು. ಇತರ ಸಣ್ಣ ಪುಟ್ಟ ಹಕ್ಕಿಗಳು ಕೋಟವನ್ನು ಹಿಡಿದು ಭಕ್ಶಿಸುತ್ತಾ ಇದ್ದರೆ ಅದಕ್ಕೆ ಗೊತ್ತಾಗದ ಹಾಗೇ ಅದರ ಬಾಯಿಯಿಂದ ಕೀಟವನ್ನು ಎಗರಿಸಿ ಕದ್ದು ತಿಂದು ಬಿಡುತ್ತವೆ. ಈ ಕಳ್ಳತನಕ್ಕೆ ಕೋಗಿಲೆಗಳ ಹಾರುವ ವೇಗ ಮತ್ತು ಅದರ ಚುರುಕು ಕಣ್ಣು ಸಹ ಸಹಕಾರಿ. ಸುಮ್ಮನೆ ಬೇರೆ ಹಕ್ಕಿಯಿಂದ ಹುಳುವನ್ನು ಕದ್ದು ತಿನ್ನುವ ಸಮಯವನ್ನು ನೈಜವಾಗಿ ಬೇಟೆಯಾಡಲು ವಹಿಸಿದರೆ ಅವುಗಳ ಹೊಟ್ಟೆ ಬೇಗ ತುಂಬುತ್ತದೆ. ಆದರೆ ಇದೆಲ್ಲಾ ತಿಳಿಯಲು ಅವು ಮನುಷ್ಯನಷ್ಟು ಬೆಳೆದ ಮೆದುಳು ಹೊಂದಿಲ್ಲವಲ್ಲ!.
ಸಂತಾನೋತ್ಪತ್ತಿ
ಈ ವಿಷಯದಲ್ಲಿ ಕೋಗಿಲೆಗಳು ಹಕ್ಕಿಗಳಲ್ಲಿಯೇ ಅತ್ಯಂತ ಪರಾವಲಂಬಿ ಜೀವಿಗಳು. ಪಕ್ಷಿ ಕುಲಕ್ಕೆ ಸೇರಿದ ಲಕ್ಷಾಂತರ ಹಕ್ಕಿಗಳ ವಂಶವಾಹಿಯಲ್ಲಿಯೇ ಬಂದಿರುವ ಕಸ ಕಡ್ಡಿ ತಂದು ಗೂಡು ಕಟ್ಟುವ ಅವುಗಳ ಮೂಲಭೂತ ಕಲೆಯೇ ಇದಕ್ಕೆ ತಿಳಿದಿಲ್ಲ. ಇದೊಂದು ಬೆರಗಾಗುವ ವಿಷಯ. ಕೋಗಿಲೆಗಳು ಎಂದಿಗೂ ಗೂಡು ಕಟ್ಟುವುದಿಲ್ಲ ಎನ್ನುವುದು ಅನೇಕರಿಗೆ ತಿಳಿದ ವಿಷಯ. ಹೆಣ್ಣು ಕೋಗಿಲೆಯು ಕಾಗೆಯ ಅಥವಾ ಕೋಗಿಲೆಯ ಗಾತ್ರದಲ್ಲಿ ತತ್ತಿಯಿಡುವ ಇತರ ಹಕ್ಕಿಗಳ ಗೂಡಿಗೆ ಕದ್ದು ಹೋಗಿ, ಮೊಟ್ಟೆ ಇಟ್ಟು ಬರುತ್ತದೆ.
ಬಹುತೇಕ ಹಕ್ಕಿಗಳು ಗೂಡು ಕಟ್ಟಿ ಮೊಟ್ಟೆಯಿಡುವ ಸಮಯ ಮತ್ತು ಕೋಗಿಲೆಯು ಮೊಟ್ಟೆಯಿಡುವ ಸಮಯ ಒಂದೇ. ಅದಕ್ಕಂತಲೇ ಕೋಗಿಲೆಗಳ ಮರಿ ಮಾಡುವ ದಿನಗಳು ಕಾಗೆಗಳು ಮರಿ ಮಾಡುವ ದಿನಗಳೊಂದಿಗೆ ತಳುಕು ಹಾಕಿಕೊಂಡಿದೆ. ಕಾಗೆಗಳು ಮತ್ತು ಇತರ ಪಕ್ಷಿಗಳು ಬೆರೆತು, ಮೊಟ್ಟೆಯಿಡಲು ಗೂಡು ಕಟ್ಪುವುದು ಏಪ್ರಿಲ್ ಇಂದ ಆಗಸ್ಟ್ ವರೆಗಿನ ಹೊತ್ತಿನಲ್ಲಿ. ಕೋಗಿಲೆಗಳೂ ಸಹ ಈ ತಿಂಗಳುಗಳಲ್ಲೇ ಬೆರೆತು ಮೊಟ್ಟೆ ಇಡಲು ಅಣಿಯಾಗುತ್ತವೆ. ಎಲ್ಲಾ ಪಕ್ಷಿವರ್ಗದ ಹೆಣ್ಣು ಪಕ್ಷಿಗಳು ಗೂಡು ಕಟ್ಟುವಲ್ಲಿ ಮತ್ತು ಕೆಲ ಜಾತಿಯ ಗಂಡು ಪಕ್ಷಿಗಳು ತಮ್ಮ ಮುಂದಿನ ಸಂತಾನಕ್ಕಾಗಿ ಗೂಡು ಕಟ್ಟಲು ಭರದಿಂದ ಸಿದ್ಧತೆ ನಡೇಸಿದರೆ ಕೋಗಿಲೆ ಮಾತ್ರ ಅವುಗಳು ಗೂಡು ಕಟ್ಟಿಯಾದ ಮೇಲೆ ಅದರಲ್ಲಿ ಯಾವಾಗ ಮೊಟ್ಟೆಯಿಡಲಿ ಎಂದು ಕಾಯುತ್ತಾ ಕುಳಿತಿರುತ್ತದೆ. ಕೋಗಿಲೆ ಮೊಟ್ಟೆಯಿಡಲು ಕಾಗೆಯ ಗೂಡಷ್ಟೇ ಅಲ್ಲದೇ ಅದರದೇ ಗಾತ್ರದ ಹುಲ್ಲುಗಾವಲು ಪಿಪಿಟ್‌ಗಳು, ರಾಬಿನ್‌ಗಳು, ಡನಾಕ್ಸ್, ರೀಡ್ ವಾರ್ಬ್ಲರ್‌ಗಳು, ಪೈಡ್ ವ್ಯಾಗ್‌ಟೇಲ್‌ಗಳು ಮತ್ತು ವಿಲೋ ವಾರ್ಬ್ಲರ್‌ಗಳು ಇತ್ಯಾದಿ ಇತರ ಜಾತಿಯ ಹಕ್ಕಿಗಳನ್ನೂ ಸಹ ಬಳಸಿಕೊಳ್ಳುತ್ತದೆ.
ಗಂಡು ಕೋಗಿಲೆಯು ಕಾಗೆಯಂತ ಪಕ್ಷಿಯ ಗೂಡಿನ ಬಳಿ ಬಂದು, ಮೊಟ್ಟೆಗಳನ್ನ ಜೋಪಾನಿಸುತ್ತ ಕುಳಿತ ಗಂಡು-ಹೆಣ್ಣು ಕಾಗೆಗಳನ್ನು ಅಣಕಿಸಿ ಅವುಗಳಿಗೆ ಒದ್ದು ತನ್ನನ್ನ ಅಟ್ಟಿ ಬರುವಂತೆ ಮಾಡುತ್ತದೆ. ಇದನ್ನೇ ಕಾದು ಕುಳಿತ ಹೆಣ್ಣು ಕೋಗಿಲೆ, ಕದ್ದುಹೋಗಿ, ಕಾಗೆಗಳ ಮೊಟ್ಟೆಗಳ ನಡುವೆ ಅವುಗಳನ್ನೇ ಹೋಲುವಂತಿರುವ ತನ್ನ ಮೊಟ್ಟೆಗಳನ್ನು ಇಟ್ಟು ಬರುತ್ತದೆ. ಈ ಸಾಹಸದ ಕೆಲಸದಲ್ಲಿ ಎಷ್ಟೋ ಸಲ ಬಾರಿ ಗಂಡು ಕೋಗಿಲೆ ಸಿಕ್ಕಿ ಬಿದ್ದು ಕಾಗೆಗಳ ದಾಳಿಯಿಂದ ಸಾಯುತ್ತದೆ. ಗೂಡಿಗೆ ಮರಳಿ ಬಂದ ಪೆದ್ದ ಜೋಡಿ ಕಾಗೆಗಳು ತಮಗರಿವಿಲ್ಲದೆಯೇ ಕೋಗಿಲೆಯ ಮೊಟ್ಟೆಗಳಿಗೂ ಕಾವು ನೀಡಿ ಮರಿಮಾಡುತ್ತವೆ.
ಕೋಗಿಲೆ ಮತ್ತು ಕಾಗೆಯ ಮೊಟ್ಟೆಗಳು ತಿಳಿ ಬೂದು ಬಣ್ಣ ಮತ್ತು ಕೆಂಪು ಚುಕ್ಕೆಗಳಿಂದ ಕೂಡಿದ್ದು, ಗಾತ್ರದಲ್ಲಿ ತುಸು ಏರುಪೇರು ಹೊಂದಿರುತ್ತವೆ. ಈ ವ್ಯತ್ಯಾಸವನ್ನು ಅವುಗಳ ವಾಸನೆ, ಬಣ್ಣ ಅಥವಾ ಗಾತ್ರದ ವ್ಯತ್ಯಾಸದಿಂದ ಗುರುತಿಸುವ ಶಕ್ತಿ ಅಥವಾ ಬುದ್ಧಿವಂತಿಕೆ ಕಾಗೆಗಳಿಗಿಲ್ಲ. ಮೊಟ್ಟೆ ಒಡೆದು ಬಂದ ಕೋಗಿಲೆಯ ಮರಿಗಳೂ ತಮ್ಮ ಮಕ್ಕಳೇ ಎನ್ನುವ ಬೆಪ್ಪಿನಲ್ಲಿ, ತಮ್ಮ ಇತರ ಮರಿಗಳೊಂದಿಗೆ ಕೋಗಿಲೆ ಮರಿಗಳಿಗೂ ಗುಟುಕು ನೀಡಿ ತಿನಿಸಿ ಸಲಹುತ್ತವೆ. ಹೊಟ್ಟೆಬಾಕಗಳಾದ ಕೋಗಿಲೆ ಮರಿಗಳು ಕಾಗೆಯ ಮರಿಗಳಿಗಿಂತಲೂ ಹೆಚ್ಚು ಉಂಡು ತಿಂದು, ಬೇಗ ಬೆಳೆದು, ರೆಕ್ಕೆ ಬಲಿತ ಕೂಡಲೇ ಗೂಡು ಬಿಟ್ಟು ಹಾರುತ್ತವೆ. ಹಸಿವಾದರೆ ಕೆಲವೊಮ್ಮೆ ತಮಗಿಂತ ಚಿಕ್ಕದಾಗಿರುವ ಇತರ ಮರಿಗಳನ್ನೇ ತಿಂದು ಮುಗಿಸುತ್ತವೆ. ತಾಯಿ ಕಾಗೆಗೆ ಇದು ಗೊತ್ತೇ ಆಗುವುದಿಲ್ಲ. ಕಾಗೆಗಳು ಇತರ ಹಕ್ಕಿಗಳಿಗೆ ಕಿರುಕುಳ ಕೊಟ್ಟರೆ, ಈ ಕೋಗಿಲೆಗಳು ಕಾಗೆಗಳಿಗೇ ಚಳ್ಳೆಹಣ್ಣು ತಿನಿಸುತ್ತವೆ!
ಮೂಢ ನಂಬಿಕೆಗಳು
ಎಲ್ಲಾ ವಿಷಯರಿಗೆ ಇರುವ ಮೂಢ ನಂಬಿಕೆಗಳಿಗೆ ಕೋಗಿಲೆಯೂ ಸಹ ಹೊರತಾಗಿಲ್ಲ. ಕೋಗಿಲೆ ಕೂಗುವುದು ವಸಂತ ಕಾಲವನ್ನು ಸ್ವಾಗತಿಸಲು ಎಂದಿದ್ದರೂ ಸಹ ಅದು ಸಂಗಾತಿಯನ್ನು ಕರೆಯಲು ಮಾತ್ರ. ಬ್ರಿಟನ್ನಿನ ಒಂದು ನಂಬಿಕೆಯ ಪ್ರಕಾರ ಯುವತಿಗೆ ಕೋಗಿಲೆ ಕೂಗುವುದು ಕೇಳಿಸುವುದು ಅವಳ ಮದುವೆ ನಿಶ್ಚಯವಾಗುವ ಸಂಕೇತ. ನಾರ್ವೆ ದೇಶದ ನಂಬಿಕೆಯೊಂದರ ಪ್ರಕಾರ ಕೋಗಿಲೆ ದಕ್ಶಿಣ ದಿಕ್ಕಿನಲ್ಲಿ ಕೂಗಿದರೆ ಹಣ ಬರುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ಕೂಗಿದರೆ ಹಣ ಕಳೆದುಹೋಗುತ್ತದೆ ಎಂದರ್ಥ. ಹೀಗೆಯೇ ಬೇಕಾದಷ್ಟಿವೆ.
ಪ್ರಕೃತಿಯಲ್ಲಿ ನಮಗೆ ಅರ್ಥವಾಗದ ಏನೇನು ಸೋಜಿಗದ ವಿಷಯಗಳಿವೆ ಎಂಬುದು ನಮಗೆ ಗೊತ್ತೇ ಇರುವುದಿಲ್ಲ. ಆದರೆ ಈ ವಿಸ್ಮಯಗಳನ್ನು ಆನಂದಿಸಲು ಆಸಕ್ತಿ, ತಾಳ್ಮೆ ಮತ್ತು ಕುತೂಹಲ ಇದ್ದರೆ ಮಾತ್ರ ಸಾಧ್ಯ. ಈವತ್ತು ಅಂದರೆ ಜನವರಿ ೫ ರಾಷ್ಟ್ರೀಯ ಹಕ್ಕಿಯ ದಿನವೆಂಬುದೂ ಸಹ ಒಂದು ವಿಶೇಷ.
ಇದನ್ನೂ ನೋಡಿ : ಸಮುದ್ರ ದೈತ್ಯ ಸಸ್ತನಿ | ತಿಮಿಂಗಲಗಳ ಆಸಕ್ತಿದಾಯಕ ವಿಷಯಗಳು| ಡಾ.ಎನ್ ಬಿ ಶ್ರೀಧರ್ Janashakthi Media