ಡಾಲರ್ ಮೇಲಿನ ಅವಲಂಬನೆಯಿಂದ ದೂರ ಸರಿಯ ಬಯಸುವ, ಅಂದರೆ ಅಪ-ಡಾಲರೀಕರಣದತ್ತ ವಾಲುತ್ತಿರುವ ದೇಶಗಳಿಗೆ ಅವರು ಅಮೆರಿಕಕ್ಕೆ ಮಾಡುವ ರಫ್ತುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಬೆದರಿಕೆಯನ್ನು ಡೊನಾಲ್ಡ್ ಟ್ರಂಪ್ ಹಾಕಿರುವುದು ಈ ಡಾಲರ್ ಆಧಿಪತ್ಯದ ಹಿಂದೆ ಯು.ಎಸ್ ಸಾಮ್ರಾಜ್ಯಶಾಹಿಯ ಬಲವಂತವು ಕೆಲಸ ಮಾಡುತ್ತಿದೆ ಎಂಬುದನ್ನು ಸುಸ್ಪಷ್ಟಗೊಳಿಸಿದೆ. ಆದರೆ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ ಏಕಪಕ್ಷೀಯ ನಿರ್ಬಂಧಗಳನ್ನು, ಬಲವಂತಗಳನ್ನು ಎದುರಿಸಬೇಕಾಗುವ ದೇಶಗಳ ಸಂಖ್ಯೆ ಹೆಚ್ಚಾದಂತೆ, ಡಾಲರಿನ ಮೇಲಿನ ಅವಲಂಬನೆಯಿಂದ ದೂರ ಸರಿಯಬೇಕು ಎಂಬ ಪ್ರವೃತ್ತಿಯೂ ಬೆಳೆಯುತ್ತದೆ. ಟ್ರಂಪ್ ಒಡ್ಡಿದ ಈ ಬೆದರಿಕೆಯ ನಂತರ, ಭಾರತವೂ ಸೇರಿದಂತೆ ಹಲವಾರು ದೇಶಗಳು ಅಪ-ಡಾಲರೀಕರಣದ ಬಗ್ಗೆ ತಮ್ಮ ನಿರಾಸಕ್ತಿಯನ್ನು ವ್ಯಕ್ತಪಡಿಸಿವೆ. ಆದರೂ, ಸಾಮ್ರಾಜ್ಯಶಾಹಿಯು ಒಂದು ಗಂಭೀರ ಸವಾಲನ್ನು ಎದುರಿಸುತ್ತಿದೆ ಎಂಬುದರ ಬಗ್ಗೆಯಂತೂ ಸಂದೇಹವೇ ಇಲ್ಲ. ಆಧಿಪತ್ಯ
-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಅಂತಾರಾಷ್ಟ್ರೀಯ ಹಣಕಾಸು ಮತ್ತು ವಿತ್ತೀಯ ವ್ಯವಸ್ಥೆಯು ದೇಶ ದೇಶಗಳ ನಡುವೆ ನಡೆಯುವ ವ್ಯಾಪಾರಗಳಿಗೆ ಅನುಕೂಲಕರವಾದ ಒಂದು ಪಾವತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಭಾಗವಹಿಸುವ ಎಲ್ಲ ದೇಶಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಒಂದು ಸಾಧನವಾಗಿದೆ ಎಂಬ ಒಂದು ಅಭಿಪ್ರಾಯವಿದೆ. ಆದರೆ ವಾಸ್ತವ ಪರಿಸ್ಥಿತಿಯು ಸಂಪೂರ್ಣವಾಗಿ ವಿಭಿನ್ನವಾಗಿದೆ: ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ಪ್ರಾಬಲ್ಯದಿಂದ ಸ್ಥಾಪಿಸಲ್ಪಟ್ಟಿರುವ ಈ ಅಂತಾರಾಷ್ಟ್ರೀಯ ವ್ಯವಸ್ಥೆಯು ಪ್ರತಿಯಾಗಿ ಸಾಮ್ರಾಜ್ಯಶಾಹಿಯ ಈ ಪ್ರಾಬಲ್ಯವನ್ನು ಪೋಷಿಸುತ್ತದೆ. ಈ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಯು.ಎಸ್ ಡಾಲರ್ ಒಂದು ಬಾರುಕೋಲು ಆಗಿರುವುದರಿಂದ, ಅದು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯನ್ನು ಪೋಷಿಸುತ್ತದೆ ಮತ್ತು ಪ್ರತಿಯಾಗಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಇಂತಹ
ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆಯನ್ನು ಪೋಷಿಸುತ್ತದೆ. ಹಾಗಾಗಿ ಡಾಲರ್‌ನ ಪ್ರಾಬಲ್ಯವು ನಿರಂತರವಾಗಿದೆ ಮತ್ತು ಈ ಪ್ರಾಬಲ್ಯವು ವ್ಯಾಪಾರದಲ್ಲಿ ಭಾಗವಹಿಸುವ ದೇಶಗಳ ಪರಸ್ಪರ ಅನುಕೂಲಕರ ವ್ಯಾಪಾರದಲ್ಲಿ ಒಂದು ಅಡ್ಡಿಯೂ ಹೌದು ಎಂದು ಹೇಳಬಹುದು. ಆಧಿಪತ್ಯ
ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು. ‘ದೇಶ 1’ ಕ್ಕೆ ‘ದೇಶ 2’ ಹೊಂದಿರುವ ‘ಸ 2’ ಎಂಬ ಸರಕು ಬೇಕು ಮತ್ತು ‘ದೇಶ 2’ಕ್ಕೆ ‘ದೇಶ 1’ ಹೊಂದಿರುವ ‘ಸ 1” ಎಂಬ ಸರಕು ಬೇಕು ಎಂದು ಭಾವಿಸೋಣ. ಈಗಿರುವ ಅಂತರ‍್ರಾಷ್ಟ್ರೀಯ ವ್ಯವಸ್ಥೆಯಲ್ಲಿ ಇವೆರಡು ದೇಶಗಳು ಈ ಸರಕುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಿಲ್ಲ. ಏಕೆಂದರೆ, ಇಂತಹ ಒಂದು ವಿನಿಮಯಕ್ಕಾಗಿ ಪ್ರತಿಯೊಂದು ದೇಶವೂ ಬೇರೊಂದು ದೇಶವು ಹೊಂದಿರುವ ಸರಕುಗಳನ್ನು ಖರೀದಿಸುವ ಮೊದಲು ತನ್ನ ಬಳಿ ಸಾಕಷ್ಟು ಡಾಲರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಪ್ರತಿಯೊಂದು ದೇಶವೂ ಸಾಕಷ್ಟು ಡಾಲರ್‌ಗಳ ಸಂಗ್ರಹವನ್ನು ಆರಂಭಿಕವಾಗಿ ಹೊಂದಿಲ್ಲದಿದ್ದರೆ, ಈ ವ್ಯಾಪಾರವೇ ಸಂಭವಿಸುವುದಿಲ್ಲ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಡಾಲರ್ ಕರೆನ್ಸಿಯು,
ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟುಗಳಲ್ಲಿ ಹಣ ಚಲಾವಣೆಯ ಒಂದು ಮಾಧ್ಯಮವಾಗಿದೆ. ಆಧಿಪತ್ಯ
ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ
ಆದ್ದರಿಂದ, ಡಾಲರ್‌ಗಳ ಕೊರತೆಯನ್ನು ಅನುಭವಿಸುವ ದೇಶಗಳ ನಡುವೆ ಪರಸ್ಪರ ವ್ಯಾಪಾರ-ವಹಿವಾಟುಗಳು ಇರುವುದಿಲ್ಲ. ಡಾಲರ್‌ಗಳ ಕೊರತೆಯಿಂದ ಸದಾ ಪೀಡಿತವಾಗಿರುವ ಮೂರನೆಯ ಜಗತ್ತಿನ ದೇಶಗಳ ನಡುವಿನ ವ್ಯಾಪಾರದ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯ. ಈ ದೇಶಗಳು ಸ್ವಂತ ತಮ್ಮದೇ ಕರೆನ್ಸಿಗಳ
ಮೂಲಕವೇ ತಮ್ಮ ವ್ಯಾಪಾರ-ವಹಿವಾಟುಗಳನ್ನು ಕೈಗೊಳ್ಳುವುದು ಸಾಧ್ಯವಿದ್ದರೆ ಅವರು ತಮ್ಮ ಪರಸ್ಪರ ವ್ಯಾಪಾರವನ್ನು ವಿಸ್ತರಿಸಿಕೊಳ್ಳಬಹುದು. ಅಂದರೆ, ಅವರು ಅಪ-ಡಾಲರೀಕರಣ (de-dollarisation) ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ. ಅಪ- ಡಾಲರೀಕರಣ ಎಂಬ ಪದವು, ಹಣ ಚಲಾವಣೆಯ ಒಂದು ಮಾಧ್ಯಮವಾಗಿ, ವ್ಯಾಪಾರ-ವಹಿವಾಟುಗಳನ್ನು ಲೆಕ್ಕ ಹಾಕುವ ಒಂದು ಘಟಕವಾಗಿ ಅಥವಾ ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟುಗಳಿಗಾಗಿ ಯು.ಎಸ್ ಡಾಲರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆಮಾಡಿಕೊಳ್ಳುವ ಕ್ರಮವನ್ನು ಸೂಚಿಸುತ್ತದೆ. ಆಧಿಪತ್ಯ
ವಿಶ್ವ ಅರ್ಥವ್ಯವಸ್ಥೆಯಲ್ಲಿ ತನ್ನ ಕರೆನ್ಸಿಯು ನಿರ್ಣಾಯಕವಾಗಿರುವುದರಿಂದ ಮತ್ತು ಡಾಲರನ್ನು ಸಾಮಾನ್ಯವಾಗಿ ಚಿನ್ನಕ್ಕೆ ಸಮ ಎಂದು ಪರಿಗಣಿಸಲಾಗಿರುವುದರಿಂದ, ಸ್ವಾಭಾವಿಕವಾಗಿಯೇ ಅಪ-ಡಾಲರೀಕರಣವನ್ನು ಯು.ಎಸ್ ವಿರೋಧಿಸುತ್ತದೆ. ವಿಶ್ವದಲ್ಲಿ ಡಾಲರ್ ಹೊಂದಿರುವ ಸ್ಥಾನ-ಮಾನವು ಅದು ಒಂದು ಮುಕ್ತ ಮತ್ತು ಅಕ್ಷಯ ಚಿನ್ನದ ಗಣಿಯ ಮೇಲೆ ಕುಳಿತಿರುವಷ್ಟು ಅಪಾರ ಪ್ರಯೋಜನವನ್ನು ಯು.ಎಸ್‌ಗೆ ಒದಗಿಸುತ್ತದೆ. ಅದು ಇತರ ದೇಶಗಳಿಂದ ಸಂಪನ್ಮೂಲಗಳನ್ನು ಕೊಳ್ಳಬಹುದು. ಅದು ಅವರ ಉದ್ದಿಮೆಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು. ವಿದೇಶಗಳಲ್ಲಿ ತನಗೆ ತೋಚಿದಷ್ಟು ಹೂಡಿಕೆ ಮಾಡಬಹುದು ಮತ್ತು ತನ್ನದೇ ಆದ ಚಾಲ್ತಿ ಖಾತೆ ಕೊರತೆಗಳಿಗೆ ಹಣ ಒದಗಿಸಿಕೊಳ್ಳಬಹುದು. ಇದೆಲ್ಲವನ್ನೂ ಅದು ಸುಮ್ಮನೇ ಹೆಚ್ಚು ಡಾಲರ್‌ಗಳನ್ನು ಮುದ್ರಿಸುವ ಮೂಲಕ
ಸಾಧಿಸಿಕೊಳ್ಳಬಹುದು. ಆಧಿಪತ್ಯ
ಅಪ-ಡಾಲರೀಕರಣದ ಪ್ರವೃತ್ತಿ
ಇವೆಲ್ಲದರ ಜೊತೆಗೆ ಖಾತ್ರಿ ಮೌಲ್ಯದೊಂದಿಗೆ ಮಿತಿಯೇ ಇಲ್ಲದ ಪ್ರಮಾಣದ ಅಂತಾರಾಷ್ಟ್ರೀಯ ಖರೀದಿ ಸಾಮರ್ಥ್ಯವನ್ನು ಯು.ಎಸ್ ಹೊಂದಿರುವುದರಿಂದ, ತನ್ನ ಪ್ರಾಬಲ್ಯವನ್ನು ಒಪ್ಪಿಕೊಳ್ಳುವಂತೆ ಯು.ಎಸ್ ಡಾಲರ್, ದೇಶ ದೇಶಗಳ ಕೈತಿರುಚಬಹುದು. ತಾನು ಒಲವು ತೋರುವ ದೇಶಗಳಿಗೆ ಡಾಲರ್‌ಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬಹುದು. ಅಂತಹ ಮೀಸಲು ಡಾಲರ್‌ಗಳನ್ನು ಪಶ್ಚಿಮ ದೇಶಗಳ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಠೇವಣಿ ಇಟ್ಟಿರಲಾಗುತ್ತದೆ. ಪರ್ಯಾಯವಾಗಿ, ಅದು ಶಿಕ್ಷಿಸ ಬಯಸುವ ನಿರ್ದಿಷ್ಟ ದೇಶಗಳ ಡಾಲರ್ ಮೀಸಲುಗಳನ್ನು ಯು.ಎಸ್ ವಶಪಡಿಸಿಕೊಳ್ಳಬಹುದು. ಇರಾನ್‌ನಿಂದ ಹಿಡಿದು ರಷ್ಯಾದವರೆಗೆ ಹಲವಾರು ದೇಶಗಳಿಗೆ ಅಂತಹ ಒಂದು ಶಿಕ್ಷೆಯನ್ನು ನೀಡಲಾಗಿದೆ. ಇಂತಹ ವಶಪಡಿಸಿಕೊಳ್ಳುವ ಶಿಕ್ಷೆಯ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಡಾಲರ್‌ಗಳ ಕೊರತೆಯಿಂದ ಬಲಹೀನಗೊಂಡಿರುವ ಮೂರನೇ ಜಗತ್ತಿನ ದೇಶಗಳು ಅಪ-ಡಾಲರೀಕರಣ ಪ್ರಕ್ರಿಯೆಯನ್ನು
ಕೈಗೊಳ್ಳುವ, ಅಂದರೆ, ಯು.ಎಸ್ ಡಾಲರ್‌ಗಳ ಮೀಸಲು ಸಂಗ್ರಹಗಳನ್ನು ಇಟ್ಟುಕೊಳ್ಳುವ ಅವಶ್ಯಕತೆಯನ್ನು ಕಡಿಮೆಮಾಡಿಕೊಳ್ಳುವ ಕ್ರಮವನ್ನು ಕೈಗೊಳ್ಳುವ ಪ್ರವೃತ್ತಿಯನ್ನು ಸಾಮಾನ್ಯವಾಗಿ ಹೊಂದಿವೆ. ಆಧಿಪತ್ಯ
ಈ ಹಿಂದೆ, ದಕ್ಷಿಣ ಆಫ್ರಿಕಾದ ವಿರುದ್ಧ ವಿಶ್ವ ಸಂಸ್ಥೆಯು ಅದು ವರ್ಣಭೇದ ನೀತಿಯನ್ನು ಅನುಸರಿಸುತ್ತಿತ್ತು ಎಂಬ ಕಾರಣಕ್ಕಾಗಿ ಕೆಲವು ನಿರ್ಬಂಧಗಳನ್ನು ಹೇರಿತ್ತು. ಆದರೆ, ಈಗ ವಿಶ್ವದ ಮೂರನೇ ಒಂದು ಭಾಗದಷ್ಟು ದೇಶಗಳು ಏಕಪಕ್ಷೀಯ ಪಾಶ್ಚಿಮಾತ್ಯ ನಿರ್ಬಂಧಗಳಿಗೆ ಒಳಪಟ್ಟಿವೆ, ಅಂದರೆ, ವಿಶ್ವಸಂಸ್ಥೆಯ ಬೆಂಬಲವನ್ನು ಹೊಂದಿರದ ನಿರ್ಬಂಧಗಳಿಗೆ ಒಳಪಟ್ಟಿವೆ. ಇವು ಯಾವುದೇ ಅಂರ‍್ರಾಷ್ಟ್ರೀಯ ತತ್ವ ಅಥವ ನೀತಿಗಳ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕಾಗಿ ವಿಧಿಸಿದ ನಿರ್ಬಂಧಗಳಲ್ಲ, ಇಂತಹ ಸನ್ನಿವೇಶದಲ್ಲಿ ಜಾಗತಿಕ ದಕ್ಷಿಣದ ದೇಶಗಳಲ್ಲಿ ಮತ್ತು ಇಂತಹ ನಿರ್ಬಂಧಗಳಿಗೆ ಗುರಿಯಾದ ದೇಶಗಳಲ್ಲಿ ಅಪ-ಡಾಲರೀಕರಣ ಪ್ರಕ್ರಿಯೆಯನ್ನು ಕೈಗೊಳ್ಳುವ ಬಯಕೆಯು ಬಲಗೊಳ್ಳುವುದು ಸಹಜವೇ. ಈ ರೀತಿಯ ಒಂದು ಆಶಯವು ಇತ್ತೀಚೆಗೆ ಜರುಗಿದ ಬ್ರಿಕ್ಸ್ ದೇಶಗಳ ಕಜಾನ್ ಶೃಂಗಸಭೆಯಲ್ಲಿ ವ್ಯಕ್ತವಾಗಿದೆ.
ಈ ರೀತಿಯಲ್ಲಿ ಅಪ-ಡಾಲರೀಕರಣ ಪ್ರಕ್ರಿಯೆಯನ್ನು ಕೈಗೊಳ್ಳುವ ಬಯಕೆಯನ್ನು ಬಲಪಡಿಸುವಲ್ಲಿ ಯು.ಎಸ್ ನೇತೃತ್ವದ ಪಾಶ್ಚ್ಯಾತ್ಯ ನಿರ್ಬಂಧಗಳು ವಹಿಸಿದ ಪಾತ್ರವನ್ನು ಸ್ವತಃ ಯುಎಸ್ ಆಡಳಿತವೇ ಗುರುತಿಸಿದೆ. ಜುಲೈನಲ್ಲಿ ಸದನದ ಆರ್ಥಿಕ ಸೇವೆಗಳ ಸಮಿತಿಯೊಂದಿಗೆ ಮಾತನಾಡಿದ ಯು.ಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್, ಯುಎಸ್ ಹೇರಿದ ಆರ್ಥಿಕ ನಿರ್ಬಂಧಗಳು ಬ್ರಿಕ್ಸ್ ದೇಶಗಳು ಅಪ- ಡಾಲರೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪ್ರಯತ್ನಿಸಲು ಕಾರಣವಾಗಿವೆ ಎಂದು ಹೇಳಿದರು. ಯುಎಸ್ ಎಷ್ಟು ಹೆಚ್ಚು ನಿರ್ಬಂಧಗಳನ್ನು ಹೇರುತ್ತದೆಯೋ, ಅಷ್ಟು ಹೆಚ್ಚು ದೇಶಗಳು (ಬ್ರಿಕ್ಸ್) ಯು.ಎಸ್ ಡಾಲರ್ ಅನ್ನು ಒಳಗೊಂಡಿರದ ಹಣಕಾಸು ವಹಿವಾಟು ವಿಧಾನಗಳನ್ನು ಹುಡುಕುತ್ತವೆ ಎಂಬುದನ್ನು ಅವರು ಒಪ್ಪಿಕೊಂಡರು. ಹೀಗೆ ತಾನು ಎಳೆದ ಗೆರೆಯನ್ನು ದಾಟದಂತೆ ದೇಶ ದೇಶಗಳನ್ನು
ಬೆದರಿಸಲು ಡಾಲರ್ ಹೊಂದಿರುವ ಪ್ರಾಬಲ್ಯವನ್ನು ಯು.ಎಸ್ ಬಳಸಿಕೊಳ್ಳುತ್ತದೆ ಎಂಬುದನ್ನು ಮತ್ತು ಹೀಗೆ ಬೆದರಿಸಲ್ಪಟ್ಟ ದೇಶಗಳ ಸಂಖ್ಯೆಯು ಹೆಚ್ಚುತ್ತಿದೆ ಎಂಬುದನ್ನು ಅಮೆರಿಕನ್ ಆಡಳಿತ ಒಪ್ಪಿಕೊಳ್ಳುತ್ತಿದೆ ಎಂಬ ಅಂಶವನ್ನು ಯೆಲೆನ್ ಅವರ ಹೇಳಿಕೆಯು ಸೂಚಿಸುತ್ತದೆ.
ಏಕಪಕ್ಷೀಯ ನಿರ್ಬಂಧಗಳನ್ನು ಹೇರುವ ಮೂಲಕ ಪ್ರಾಬಲ್ಯವನ್ನು ಚಲಾಯಿಸುವಲ್ಲಿ ಒಂದು ನಿರ್ದಿಷ್ಟ ದ್ವಂದ್ವವಿದೆ. ಸಾಮ್ರಾಜ್ಯಶಾಹಿಯು ಹೇಳಿದ ಮಾತನ್ನು ಕೇಳದ ಒಂದು ಅಥವಾ ಎರಡು ಹಠಮಾರಿ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಸಾಮ್ರಾಜ್ಯಶಾಹಿಯ ಇಡೀ ಸಂರಚನೆಗೆ ಯಾವ ಧಕ್ಕೆಯನ್ನೂ ಉಂಟುಮಾಡದ ರೀತಿಯಲ್ಲಿ ನಿರ್ಬಂಧಗಳು ಪರಿಣಾಮಕಾರಿಯಾಗಬಹುದು. ಆದರೆ, ನಿರ್ಬಂಧಗಳನ್ನು ಹಲವಾರು ದೇಶಗಳ ಮೇಲೆ ಹೇರಿದರೆ ಈ ಸಂರಚನೆಯೇ ಅಪಾಯಕ್ಕೆ ಒಳಗಾಗುತ್ತದೆ. ನವ ಉದಾರವಾದದ ಅಡಿಯಲ್ಲಿ ಎಷ್ಟೊಂದು ದೇಶಗಳನ್ನು ಸಂಕಷ್ಟಗಳಿಗೆ ಒಳಪಡಿಸಲಾಗಿದೆ ಎಂಬುದನ್ನು ಗಮನಿಸಿದರೆ, ಕಾಲಾನಂತರದಲ್ಲಿ ಅವಿಧೇಯ ದೇಶಗಳ ಸಂಖ್ಯೆಯು ಹೆಚ್ಚುವ ಪ್ರವೃತ್ತಿ ಕಂಡುಬರುತ್ತದೆ. ನಿರ್ಬಂಧಗಳಿಗೆ ಒಳಗಾದ ದೇಶಗಳ ಸಂಖ್ಯೆಯು ಹೆಚ್ಚುತ್ತಾ ಹೋದಂತೆಯೇ, ಅಪ-ಡಾಲರೀಕರಣದ ಪ್ರವೃತ್ತಿಯೂ ಸಹ ಅಗತ್ಯವಾಗಿ ಬಲಗೊಳ್ಳುತ್ತಲೇ ಹೋಗುತ್ತದೆ. ಡಾಲರ್‌ನ ಪ್ರಾಬಲ್ಯದ ಹಿಂದೆ ಸಂಪೂರ್ಣ ದಬ್ಬಾಳಿಕೆ ಇದೆ ಮತ್ತು ಈ ಪ್ರಾಬಲ್ಯವು ಸಾಮ್ರಾಜ್ಯಶಾಹಿಯ ಒತ್ತಡವನ್ನು ಆಧರಿಸಿದೆ ಎಂಬ ಅಂಶವು ಸ್ಪಷ್ಟವಾಗಿ ಗೋಚರಿಸುತ್ತಿರುವ ಸಮಯದಲ್ಲಿ ಡಾಲರ್ ವ್ಯವಸ್ಥೆಯು ಎಲ್ಲ ದೇಶಗಳಿಗೂ ಹಿತಕಾರಿ ಎಂಬ ಉದಾರವಾದಿ ದಾವೆ ಬರೀ ಪೊಳ್ಳು ಎಂಬುದನ್ನು ಬಯಲಿಗೆ ತರುತ್ತಿದೆ.
ಟ್ರಂಪ್ ಬೆದರಿಕೆ
ಡಾಲರ್ ಆಧಿಪತ್ಯದ ಹಿಂದಿರುವ ಒಂದು ನಿಕಟತಮ ಕಾರಣವನ್ನು 1970ರ ದಶಕದಲ್ಲಿ ಯುಎಸ್ ಮತ್ತು ತೈಲ ಉತ್ಪಾದಿಸುವ ದೇಶಗಳ ನಡುವೆ ಆದ ಒಪ್ಪಂದದಲ್ಲಿ ಕಾಣಬಹುದು. ಸೌದಿ ಅರೇಬಿಯಾದ ಮಧ್ಯಸ್ಥಿಕೆಯ ಮೂಲಕ ನಡೆದ ಈ ಒಪ್ಪಂದ ಡಾಲರನ್ನು ತೈಲ ಬೆಲೆಗಳನ್ನು ವ್ಯಕ್ತಪಡಿಸುವ ಮತ್ತು ತೈಲ ವ್ಯಾಪಾರವನ್ನು ಕೈಗೊಳ್ಳುವ ಮಾಧ್ಯಮವಾಗಿ ಬಳಸಲಾಗುವುದು ಎಂದಿತ್ತು. ತೈಲವು ಹೊಂದಿರುವ ಪ್ರಾಮುಖ್ಯತೆ ಡಾಲರ್‌ಗೆ ಒಂದು ಬಹು ದೊಡ್ಡ ಉತ್ತೇಜನವನ್ನು ಕೊಟ್ಟಿತು. ಒಂದು ನಿಜಸಂಗತಿಯೆಂದರೆ, ಇತ್ತೀಚೆಗೆ ರಷ್ಯಾದ ನಾಣ್ಯ ರೂಬಲನ್ನು ನಾಶಮಾಡುವ ಉದ್ದೇಶದಿಂದ ಪಾಶ್ಚ್ಯಾತ್ಯ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಿದಾಗ, ತನ್ನ ತೈಲ ಮತ್ತು ಅನಿಲ ರಫ್ತಿನ ಬಾಬ್ತು ಮಾಡುವ ಎಲ್ಲ ಪಾವತಿಗಳನ್ನೂ ರೂಬಲ್‌ನಲ್ಲೇ ಮಾಡಬೇಕೆಂದು ರಷ್ಯಾ ಒತ್ತಾಯಿಸಿದ್ದರಿಂದಾಗಿ ರಷ್ಯಾಕ್ಕೆ ತನ್ನ ಕರೆನ್ಸಿಯನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಯಿತು.
ಆದರೆ ಈಗ, ಡಾಲರ್ ಆಧಿಪತ್ಯವನ್ನು ಮುಂದುವರೆಸಿಕೊAಡು ಹೋಗಲು ತೈಲ ರಫ್ತುದಾರರೊಂದಿಗೆ 1970ರ ದಶಕದಲ್ಲಿ ಮಾಡಿಕೊಂಡಂತಹ ಒಪ್ಪಂದವು ಸಾಕಾಗುವುದಿಲ್ಲ ಎಂದನಿಸುತ್ತಿದೆ. ಅಪ-ಡಾಲರೀಕರಣದ ಸಂಬಂಧವಾಗಿ ಕೇಳಿಬರುತ್ತಿದ್ದ ಎಲ್ಲಾ ಮಾತುಗಳನ್ನೂ ಅಸಂಬದ್ಧವೆಂದು ಈ ಹಿಂದೆ ತಳ್ಳಿಹಾಕುತ್ತಿದ್ದ ಜಾನೆಟ್ ಯೆಲೆನ್ ಕೂಡ ಈಗ ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಸನ್ನಿವೇಶದಲ್ಲಿ, ಡಾಲರ್‌ನಿಂದ ದೂರ ಸರಿಯ ಬಯಸುವ ದೇಶಗಳಿಗೆ ಅವರು ಅಮೆರಿಕಕ್ಕೆ ಮಾಡುವ ರಫ್ತುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಬೆದರಿಕೆಯನ್ನು ಡೊನಾಲ್ಡ್ ಟ್ರಂಪ್ ಹಾಕಿರುವುದು ಆಶ್ಚರ್ಯವೇನಲ್ಲ. ಈ ಟ್ರಂಪ್ ಬೆದರಿಕೆಯು ಡಾಲರ್ ಆಧಿಪತ್ಯದ ಹಿಂದೆ ಯು.ಎಸ್ ಸಾಮ್ರಾಜ್ಯಶಾಹಿಯ ಬಲವಂತವು ಕೆಲಸ ಮಾಡುತ್ತಿದೆ ಎಂಬುದನ್ನು ಸುಸ್ಪಷ್ಟಗೊಳಿಸಿದೆ.
ಅಂತಹ ಒಂದು ಬಲವಂತವು ಪರಿಣಾಮಕಾರಿಯಾಗಲೂ ಬಹುದು. ಏಕೆಂದರೆ, ಯಾವುದೇ ಅಪ-ಡಾಲರೀಕರಣವು ಒಂದು ಪ್ರಕ್ರಿಯೆಯಾಗಿರುವುದರಿಂದ, ಅದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಪ-ಡಾಲರೀಕರಣವನ್ನು ಕೈಗೊಳ್ಳುವ ದೇಶಗಳು ಈ ಮಧ್ಯೆ ಯುಎಸ್‌ಗೆ ತಮ್ಮ ರಫ್ತುಗಳನ್ನು ಮೊಟಕುಗೊಳಿಸಿದರೆ, ಅವು ಡಾಲರ್‌ಗಳ ತೀವ್ರ ಕೊರತೆಯನ್ನು ಎದುರಿಸುತ್ತವೆ. ಅದು ಅವರ ಜೀವನವನ್ನು ಅತ್ಯಂತ ಕಷ್ಟಕರವಾಗಿಸುತ್ತದೆ. ಡಾಲರ್-ಅಲ್ಲದ ಪಾವತಿಗಳ ಮೂಲಕ ತಮ್ಮ ಆಮದು ಅವಶ್ಯಕತೆಗಳನ್ನು ಅವರು ಹಾಗೂ ಹೀಗೂ ನಿರ್ವಹಿಸಿಕೊಳ್ಳಬಹುದಾದರೂ, ಐಎಂಎಫ್ ಅಥವಾ ವಿಶ್ವ ಬ್ಯಾಂಕ್ ಅಥವಾ ಪಾಶ್ಚ್ಯಾತ್ಯ ಹಣಕಾಸು ಸಂಸ್ಥೆಗಳೊಂದಿಗೆ ಡಾಲರ್ ಕರೆನ್ಸಿಯ ಬಾಹ್ಯ ಸಾಲಗಳನ್ನು ಅವರು ಒಂದು ವೇಳೆ ಹೊಂದಿದ್ದರೆ, ಆನಂತರ ಅವುಗಳನ್ನು ತೀರಿಸುವುದು ಅಸಾಧ್ಯವಾಗುತ್ತದೆ.
ಹಾಗಾಗಿ ಟ್ರಂಪ್ ಅವರ ಈ ಬೆದರಿಕೆಯು ಒಂದು ಗಂಭೀರ ಸ್ವರೂಪವನ್ನು ಪಡೆಯುತ್ತದೆ. ಯುಎಸ್ ಸಾಮ್ರಾಜ್ಯಶಾಹಿಯ ಪ್ರಕ್ರಿಯೆಯನ್ನು ಉದಾರವಾದಿ ವಟಗುಟ್ಟುವಿಕೆಯು ಸಾಮಾನ್ಯವಾಗಿ ಮರೆಮಾಚುತ್ತದೆಯಾದರೂ, ಈ ಬೆದರಿಕೆಯನ್ನು ಒಡ್ಡುವ ಮೂಲಕ ಟ್ರಂಪ್ ನಿರ್ಲಜ್ಜವಾಗಿ ಅದನ್ನು ಬಹಿರಂಗಪಡಿಸಿರುವುದು ಗಮನಾರ್ಹವಾಗಿದೆ.
ಸವಾಲಿನ ಗಂಭೀರತೆಗೆ ಸಾಕ್ಷಿ
ವಿಪರ್ಯಾಸವೆಂದರೆ, ಅಲ್ಪಾವಧಿಯಲ್ಲಿ ಪರಿಣಾಮಕಾರಿಯಾಗಬಹುದಾದ ಈ ಬೆದರಿಕೆಯೇ ಅಪ-ಡಾಲರೀಕರಣ ಅಗತ್ಯವಾಗಿದೆ ಮತ್ತು ಡಾಲರ್ ಆಧಿಪತ್ಯವು ಯು.ಎಸ್‌ಗೆ ಗುಲಾಮರಾಗುವ ಪರಿಸ್ಥಿತಿಯನ್ನು ಉಂಟುಮಾಡುತ್ತದೆ ಎಂದು ಹೆಚ್ಚು ಹೆಚ್ಚು ದೇಶಗಳನ್ನು ಜಾಗೃತಗೊಳಿಸುತ್ತದೆ. ಯಾವುದೇ ಒಂದು ಅರ್ಥಪೂರ್ಣ ಅಪ-ಡಾಲರೀಕರಣವು ಸಂಭವಿಸುವ ಮೊದಲು ಇನ್ನೂ ಹೆಚ್ಚು ದೂರವನ್ನು ಕ್ರಮಿಸಬೇಕಾಗುತ್ತದೆ, ಮತ್ತು ಕಜಾನ್ ಶೃಂಗಸಭೆಗೆ ಈ ಸತ್ಯ ಚೆನ್ನಾಗಿ ತಿಳಿದಿತ್ತು.
ಟ್ರಂಪ್ ಒಡ್ಡಿದ ಈ ಬೆದರಿಕೆಯ ನಂತರ, ಭಾರತವೂ ಸೇರಿದಂತೆ ಹಲವಾರು ದೇಶಗಳು ಅಪ-ಡಾಲರೀಕರಣದ ಬಗ್ಗೆ ತಮ್ಮ ನಿರಾಸಕ್ತಿಯನ್ನು ವ್ಯಕ್ತಪಡಿಸಿವೆ. ಅದು ಅಮೆರಿಕದೊಂದಿಗಿನ ತಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ತಕ್ಷಣದ ಕ್ರಮವೇ ಆಗಿದ್ದರೂ, ಸಾಮ್ರಾಜ್ಯಶಾಹಿಯು ಒಂದು ಗಂಭೀರ ಸವಾಲನ್ನು ಎದುರಿಸುತ್ತಿದೆ
ಎಂಬುದರ ಬಗ್ಗೆ ಸಂದೇಹವೇ ಇಲ್ಲ. ಉಕ್ರೇನ್ ಮತ್ತು ಗಾಜಾದ ವಿಷಯದಲ್ಲಿ ಗೋಚರಿಸುವ ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ಐಕ್ಯತೆ ಮತ್ತು ಎಲ್ಲ ಸಾಮ್ರಾಜ್ಯಶಾಹಿ ದೇಶಗಳ ಸೋಶಲ್ ಡೆಮಾಕ್ರೇಟರು ಸಾಮ್ರಾಜ್ಯಶಾಹಿಯ ಬೆಂಬಲಕ್ಕೆ ನಿಂತಿರುವುದು ಸಾಮ್ರಾಜ್ಯಶಾಹಿಗೆ ಎದುರಾಗಿರುವ ಸವಾಲಿನ ಗಂಭೀರತೆಗೆ ಒಂದು ಸಾಕ್ಷಿಯಾಗಿದೆ.
ಅಪ-ಡಾಲರೀಕರಣದ ಚರ್ಚೆಯು ಈ ಸವಾಲಿನ ಭಾಗವಾಗಿದೆ. ಬ್ರಿಕ್ಸ್ ದೇಶಗಳ ನಡುವೆಯೂ ಸಹ ಹಾಲಿ ವ್ಯವಸ್ಥೆಯನ್ನು ಬದಲಿಸುವ ಪರ್ಯಾಯ ಹಣಕಾಸು ವ್ಯವಸ್ಥೆ ಬಗ್ಗೆ ಯಾವುದೇ ಒಂದು ಸ್ಪಷ್ಟ ಕಲ್ಪನೆ ಇಲ್ಲ. ಇಂತಹ ಬದಲಿಯು ಸಂಭವಿಸಿದಾಗ, ಡಾಲರ್ ಆಧಿಪತ್ಯಕ್ಕೆ ಬದಲಾಗಿ ಬೇರೊಂದು ದೇಶದ ಅಥವಾ ಕೆಲವು ದೇಶಗಳ ಆಧಿಪತ್ಯವನ್ನು ಬಿಂಬಿಸುವ ಕರೆನ್ಸಿ ಬರುವಂತಾಗಬಾರದು ಎಂಬುದನ್ನು ವಿಶ್ವದ ಪ್ರಗತಿಪರ ಅಭಿಪ್ರಾಯವು ಖಚಿತಪಡಿಸಿಕೊಳ್ಳಬೇಕು.
ಇದಕ್ಕಾಗಿ, ಡಾಲರಿನ ಸ್ಥಾನದಲ್ಲಿ ಬೇರೊಂದು ಕರೆನ್ಸಿ- ಅದು ಅಸ್ತಿತ್ವದಲ್ಲಿರುವ ಯಾವುದೋ ಒಂದು ಕರೆನ್ಸಿಯಾಗಿರಬಹುದು ಅಥವಾ ಯಾವುದೋ ಪರ್ಯಾಯ ಬ್ರಿಕ್ಸ್ ಕರೆನಿಯಾಗಬಹುದು-ಬಂದಾಗ ಹಿಂದಿನದೇ ವ್ಯವಸ್ಥೆಗಳು ಜೀವಂತವಾಗಿ ಉಳಿಯದಂತೆ ಮಾಡುವುದು ಅವಶ್ಯವಾಗುತ್ತದೆ. ಸ್ವತಃ ನಿಯಮಗಳೇ ಬದಲಾಗಬೇಕಾಗುತ್ತದೆ. ಮತ್ತು, ಇದರಲ್ಲಿರುವ ಒಂದು ಬಲು ಮುಖ್ಯವಾದ ಬದಲಾವಣೆಯೆಂದರೆ, ಪಾವತಿಗಳ ಸಮತೋಲನವನ್ನು ಸಾಧಿಸಲು ಮಾಡಬೇಕಾದ ಹೊಂದಾಣಿಕೆಯ ಹೊರೆಯು ಬ್ರೆಟನ್ ವುಡ್ಸ್ ವ್ಯವಸ್ಥೆಯ ಅಡಿಯಲ್ಲಿದ್ದಂತೆ ಮತ್ತು ಈಗಿರುವಂತೆ ಕೊರತೆಯ ದೇಶಗಳ ಮೇಲೆ ಬೀಳಬಾರದು. ಬದಲಿಗೆ ಹೊಂದಾಣಿಕೆಯ ಹೊರೆಯನ್ನು ಮೀಸಲು ವಿನಿಮಯವನ್ನು ಅಧಿಕವಾಗಿ ಹೊಂದಿರುವ ದೇಶಗಳು ಹೊರಬೇಕು.
ಇದನ್ನೂ ನೋಡಿ: ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ! -ಸಂತೋಷ್ ಲಾಡ್ Janashakthi Media