ಸಾಹಿತ್ಯ ಸಮ್ಮೇಳನ – ಯಶಸ್ಸು ಸಾಫಲ್ಯಗಳ ನಡುವೆ

ಸಾಹಿತ್ಯಕ – ಸೃಜನಾತ್ಮಕ ದೃಷ್ಟಿಯಲ್ಲಿ ಯಶಸ್ಸು ಅಲಂಕಾರಿಕ- ಸಾಫಲ್ಯ ಸಾರ್ಥಕವಾಗಿ ಕಾಣುತ್ತದೆ
“ಮಂಡ್ಯದಲ್ಲಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಸಂಪನ್ನವಾಗಿದೆ” ಇದು ಸಾರ್ವಜನಿಕ-ಸಾಹಿತ್ಯಕ ವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಆತ್ಮರತಿಯ ಮಾತುಗಳು. ಹಾಗೆ ನೋಡಿದರೆ ಈವರೆಗೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನವೂ ಈ ʼಯಶಸ್ವಿʼ ಎಂಬ ಪರಾಕಿನಿಂದ ಭಿನ್ನವಾಗಿ ನಡೆದಿಲ್ಲ. ಯಾವುದೇ ಅಡಚಣೆಗಳಿಲ್ಲದೆ, ಉತ್ತಮ ಭೋಜನ ವ್ಯವಸ್ಥೆ ಮತ್ತಿತರ ಸೌಕರ್ಯಗಳೊಂದಿಗೆ, ಸರಾಗವಾಗಿ, ಪೂರ್ವಯೋಜಿತ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸುವುದೇ ಯಶಸ್ಸು ಎಂದಾದರೆ ಇದು ಅಲ್ಲಗಳೆಯಲಾಗದ ಸತ್ಯ. ಆದರೆ ವರ್ತಮಾನದ ಜಡಗಟ್ಟಿದ ಬೌದ್ಧಿಕತೆ ಮತ್ತು ಉಸಿರುಗಟ್ಟಿದ ಸಾಮಾಜಿಕ ನಿಷ್ಕ್ರಿಯತೆಗಳ ನಡುವೆ ಸಾಹಿತ್ಯ ಸಮ್ಮೇಳನವನ್ನು ಒಂದು ಸಂದೇಶವಾಹಕವಾಗಿ ನೋಡಿದಾಗ ಅಲ್ಲಿ ಯಶಸ್ವಿ ಎಂಬ ಪದವನ್ನು ದಾಟಿ ಸಾಫಲ್ಯದತ್ತ ನೋಟಹರಿಸಬೇಕಾಗುತ್ತದೆ. ʼ ಸಾಹಿತ್ಯ ಸಮ್ಮೇಳನದ ಸಾಫಲ್ಯʼ ಎಂಬ ಪ್ರಶ್ನೆ ಉದ್ಭವಿಸಿದಾಗ, ಈವರೆಗೆ ನಡೆದಿರುವ ಬಹುತೇಕ ಸಮ್ಮೇಳನಗಳು ಹಿಮ್ಮೆಟ್ಟಿಬಿಡುತ್ತವೆ.

-ನಾ ದಿವಾಕರ

 

ಶಸ್ಸು

ಏಕೆಂದರೆ ಸಾಫಲ್ಯ ಎನ್ನುವುದು ಸಾಪೇಕ್ಷ ವಿದ್ಯಮಾನ. ನಾವು ಯಾವ ನೆಲೆಯಲ್ಲಿ ನಿಂತು ನೋಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಶತಮಾನಕ್ಕೂ ಹೆಚ್ಚಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಆಹಾರ ಹಕ್ಕು ಮತ್ತು ಅನ್ನದ ಸಂಸ್ಕೃತಿಯ ಪ್ರಶ್ನೆ ಎದುರಿಸಿ, ಸೌಹಾರ್ದತಯುತವಾಗಿ ಬಗೆಹರಿದಿದ್ದು ನಿಜಕ್ಕೂ ಸಾಫಲ್ಯದ ಒಂದು ಆಯಾಮ. ಆದರೆ ಸಾಮಾಜಿಕ ಸೌಹಾರ್ದತೆ-ಸಮನ್ವಯ ಮತ್ತು ಸಾಂಸ್ಕೃತಿಕ ಭ್ರಾತೃತ್ವದ ಮೂಲ ಸೆಲೆಯಾಗಬೇಕಾದ ಸಾಹಿತ್ಯ ಜಾತ್ರೆಯಲ್ಲಿ ಆಹಾರ ಸಮಾನತೆಯನ್ನು ಸಾಧಿಸಲು ಹೋರಾಡಬೇಕಾಯಿತು ಎನ್ನುವುದು ಯೋಚಿಸಬೇಕಾದ ವಿಚಾರ. ಅಂದರೆ 75 ವರ್ಷಗಳ ಪ್ರಜಾಪ್ರಭುತ್ವ-ಸಂವಿಧಾನಾತ್ಮಕ ಆಳ್ವಿಕೆಯ ಹೊರತಾಗಿಯೂ, ನಮ್ಮ ಸಮಾಜದ ಆಹಾರ ಸಂಸ್ಕೃತಿಯ ಬೇರುಗಳು ಕಿಂಚಿತ್ತೂ ಸಡಿಲವಾಗಿಲ್ಲ. ಸಂವೇದನಾತ್ಮಕವಾಗಿ ನೋಡಿದಾಗ ಇದು ಸಾಂಸ್ಕೃತಿಕ ಸೋಲು ಎನಿಸುವುದಿಲ್ಲವೇ ? ಯಶಸ್ಸು

ಊಳಿಗಮಾನ್ಯ ಲಕ್ಷಣಗಳ ನಡುವೆ

ನಾವು ರಾಜಪ್ರಭುತ್ವದ ವೈಭವ ಮತ್ತು ಆಡಂಬರಗಳಿಂದ ಸಂಪೂರ್ಣವಾಗಿ ಹೊರಬಂದಿದ್ದೇವೆ ಎಂದು ಸಮಾಜಕ್ಕೆ ಕೂಗಿ ಹೇಳುವ ನೈತಿಕತೆ ಸಾಹಿತ್ಯ ಮತ್ತಿತರ ಸಾಂಸ್ಕೃತಿಕ ನೆಲೆಗಳಲ್ಲಿ ವ್ಯಕ್ತವಾಗಬೇಕು. ಸಾಹಿತಿಗಳನೇಕರು ಇದನ್ನು ತಮ್ಮ ಕೃತಿಗಳಲ್ಲಿ ಬಿಂಬಿಸುತ್ತಲೇ ಬಂದಿದ್ದಾರೆ. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಪ್ರತಿನಿಧಿಸುವ ಮತ್ತು ಕನ್ನಡದ ತೇರನ್ನು ಭವಿಷ್ಯದ ತಲೆಮಾರಿಗೆ ದಾಟಿಸುವ ಜವಾಬ್ದಾರಿ ಹೊತ್ತಿರುವ ಸಾಹಿತ್ಯ ಲೋಕ ಇದನ್ನು ದೃಢೀಕರಿಸುತ್ತಲೇ ಇರಬೇಕು. ಈ ದೃಷ್ಟಿಯಿಂದ, ಸಾಹಿತ್ಯ ಸಮ್ಮೇಳನ ಈ ನೊಗವನ್ನು ಹೊರಬೇಕಲ್ಲವೇ ? ಆದರೆ ಈ ಬಾರಿಯ ಅಕ್ಷರ ಮೇಳದಲ್ಲಿ ಸಮ್ಮೇಳನಾಧ್ಯಕ್ಷರು ಅಲಂಕರಿಸಿದ ರಾಜಸಿಂಹಾಸನವನ್ನು ಹೋಲುವ ವೈಭವೋಪೇತ ಪೀಠವೇ ರಾಜಪ್ರಭುತ್ವವನ್ನು ವೈಭವೀಕರಿಸುವಂತಿದ್ದುದು ವಿಪರ್ಯಾಸವಲ್ಲವೇ ? ಹೆಣ್ಣು ಮಕ್ಕಳಿಂದ ಪೂರ್ಣಕುಂಭ ಸ್ವಾಗತ ಮತ್ತು ಅತ್ಯಾಡಂಬರದ ಮೆರವಣಿಗೆ ಪರಂಪರೆಯ ಹೆಸರಿನಲ್ಲಿ ಬಿಂಬಿಸಿದ್ದು, ಅದೇ ಪ್ರಾಚೀನ ಊಳಿಗಮಾನ್ಯ ಲಕ್ಷಣಗಳನ್ನು. ಯಶಸ್ಸು

ಇದನ್ನೂ ಓದಿ: ಕಾಂಗ್ರೆಸ್ ಶಕ್ತಿ ಏನು ಎಂಬುದು ನಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಮ್ಮೇಳನವನ್ನು ಉದ್ಘಾಟಿಸುತ್ತಾ ಮಾನ್ಯ ಗೊರುಚ ಅವರು ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು ಹೆಮ್ಮೆಯಿಂದ ಪುನರುಚ್ಛರಿಸುತ್ತಾ ಭಾರತದ ಸಂವಿಧಾನ ಆಶಿಸುವ ಸಮಾನತೆ, ಭ್ರಾತೃತ್ವ ಮತ್ತು ಧಾರ್ಮಿಕ ಸಮನ್ವಯತೆಯ ಬಗ್ಗೆ ನೀಡಿದ ಭಾಷಣ ಸ್ತುತ್ಯಾರ್ಹ. ಆದರೆ 21ನೇ ಶತಮಾನದಲ್ಲಿರುವ ಭಾರತ ತನ್ನ ಪ್ರಜಾಸತ್ತಾತ್ಮಕ ಚೌಕಟ್ಟಿನೊಳಗೆ ಪ್ರಾಚೀನ ಊಳಿಗಮಾನ್ಯ ಪಳೆಯುಳಿಕೆಗಳನ್ನು ಸಂಪೂರ್ಣವಾಗಿ ಕಳಚಿಹಾಕುವುದು ಅತ್ಯವಶ್ಯವಲ್ಲವೇ ? ಪರಂಪರೆಯ ಹೆಸರಿನಲ್ಲಿ ಈ ಪ್ರಾಚೀನತೆಯನ್ನು ಪುನರ್‌ ನವೀಕರಿಸುವ ವೈಭವದ ಪೀಠ-ಮೆರವಣಿಗೆ ಮತ್ತು ಪೂರ್ಣಕುಂಭದಂತಹ ಆಚರಣೆಗಳನ್ನು ಸಮ್ಮೇಳನಾಧ್ಯಕ್ಷರು ವಿರೋಧಿಸಬಹುದಿತ್ತಲ್ಲವೇ ? ಪ್ರಜಾತಂತ್ರದೆಡೆಗೆ ಸಾಗುವ ಸಾಹಿತ್ಯಕ ಹಾದಿಯಲ್ಲಿ, ಅದು ಪ್ರತಿನಿಧಿಸುವ ಮೌಲ್ಯಗಳನ್ನೇ ಅಣಕಿಸುವಂತಹ ಆಡಂಬರ ವಿಡಂಬನೆಯಾಗಿ ಕಾಣುತ್ತದೆ. ಗೊರುಚ ಅವರು ಭಿನ್ನವಾಗಿ ಯೋಚಿಸಿದ್ದಲ್ಲಿ ಅದು ಸಾಫಲ್ಯದ ಮೊದಲ ಹೆಜ್ಜೆಯಾಗುತ್ತಿತ್ತು. ಯಶಸ್ಸು

ಲಿಂಗ ಸಮಾನತೆಯ ನೆಲೆಯಲ್ಲಿ

ಭಾರತೀಯ ಪ್ರಜಾಪ್ರಭುತ್ವದ ಸಾರ್ಥಕತೆಯನ್ನು ನಾವು ಕಾಣಬೇಕಿರುವುದು ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯ ಇಲ್ಲದ ಸಮಾಜದಲ್ಲಿ. ಹೆಣ್ಣಿಗೆ ಸಮಾನ ಸ್ಥಾನಮಾನಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತ ಇನ್ನೂ ಬಹುದೂರ ಕ್ರಮಿಸಬೇಕಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಎತ್ತಿಹಿಡಿಯುವ ಗ್ರಾಂಥಿಕ ಸಂಪತ್ತು ವಿಪುಲವಾಗಿದೆ. ಈ ಸಂಪತ್ತನ್ನು ಪ್ರತಿನಿಧಿಸುವ ʼಸಾಹಿತ್ಯ ಸಮ್ಮೇಳನʼದ ವೇದಿಕೆ ಅದೇ ಸೂಕ್ಷ್ಮ ಸಂವೇದನೆಯ ಸ್ಪರ್ಶವನ್ನೇ ಕಾಣದಿರುವುದು ವಿಪರ್ಯಾಸವಲ್ಲವೇ? ಮಹಿಳಾ ಸಮ್ಮೇಳನಾಧ್ಯಕ್ಷರ ಆಯ್ಕೆಗಾಗಿ ಕೇಳಿಬಂದ ಹಕ್ಕೊತ್ತಾಯದ ಕೊರಳುಗಳು ಆಡಂಬರದ ಆಡುಂಬೊಲದಲ್ಲಿ ಸದ್ದಿಲ್ಲದೆ ಮರೆಯಾಗಿಬಿಟ್ಟವು. ಆದರೆ ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮಗಳಲ್ಲಾದರೂ ಮಹಿಳಾ ಪ್ರಾತಿನಿಧ್ಯವನ್ನು ಎತ್ತಿಹಿಡಿಯಬಹುದಿತ್ತಲ್ಲವೇ ?

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ವೇದಿಕೆಯ ಉದ್ಘಾಟನೆಯನ್ನು ಗಮನಿಸಿದರೆ ಆಯೋಜಕರಿಗೆ ಈ ಆಲೋಚನೆಯೇ ಇಲ್ಲದಿದ್ದುದು ಸ್ಪಷ್ಟವಾಗುತ್ತದೆ. 11 ವಿಭಿನ್ನ ವೇದಿಕೆಗಳನ್ನು ಉದ್ಘಾಟಿಸಿದವರಲ್ಲಿ ಹೆಣ್ಣಿಗೆ ಅರ್ಧದಷ್ಟು ಬೇಡ, ಒಂದು ಸ್ಥಾನವಾದರೂ ಇರಬೇಕಿತ್ತಲ್ಲವೇ ? ಅದಿರಲಿ, ಶುಭನುಡಿಯನ್ನಾಡಲು ವೇದಿಕೆಯನ್ನು ಅಲಂಕರಿಸಿದ ʼ ಗಣ್ಯರʼ ಸಾಲಿನಲ್ಲಿ ಕಾಣುವುದು ಏಕೈಕ ಮಹಿಳೆ, ಅದೂ ಅವರ ಸಾಂವಿಧಾನಿಕ ಹುದ್ದೆಯ ಫಲ. ಕೊನೆಯಲ್ಲಿ ವಂದನಾರ್ಪಣೆಗೆ ಒಬ್ಬ ಮಹಿಳೆಗೆ ಅವಕಾಶ. ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತಕ್ಕೆ ಬೇಕೆನಿಸುವ ಹೆಣ್ಣು, ಉದ್ಘಾಟನೆಯ ಸಂದರ್ಭದಲ್ಲಿ ಬೇಡ ಎನಿಸಿಬಿಟ್ಟಳೇ ? ಸಮ್ಮೇಳನದ ಆಯೋಜಕರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಇನ್ನೂ ಸಹ ಪಿತೃಪ್ರಧಾನ ಗಂಡಾಳ್ವಿಕೆಯ ಮೌಲ್ಯಗಳಿಗೆ ಜೋತುಬಿದ್ದಿರುವುದಕ್ಕೆ ಇದಕ್ಕಿಂತಲೂ ಸಾಕ್ಷಿಬೇಕೇ ? ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಳವಳ ವ್ಯಕ್ತಪಡಿಸುವ ಸಹಾನುಭೂತಿ, ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲೂ ಇರಬೇಕಲ್ಲವೇ ? ಇದು ಸಮ್ಮೇಳನದ ಸಾಫಲ್ಯವನ್ನು ಪ್ರಶ್ನಿಸುವ ಒಂದು ನಡೆ. ಯಶಸ್ಸು

ವಿಚಾರ ಗೋಷ್ಠಿಗಳಲ್ಲಿ ಒಳಗೊಳ್ಳುವಿಕೆ

ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಧಾನ ಗೋಷ್ಠಿಗಳು ಅಲ್ಲಿ ಚರ್ಚೆಗೊಳಗಾಗುವ ವಿಚಾರಗಳ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುತ್ತವೆ. ಸಮಕಾಲೀನ ಸಮಾಜದ ಯಾವುದೇ ಜಟಿಲ ಸವಾಲುಗಳನ್ನು , ಸಮಸ್ಯೆಗಳನ್ನು ತೆಗೆದುಕೊಂಡರೂ ಅಲ್ಲಿ ಮಹಿಳೆ ಪ್ರಧಾನವಾಗಿ ಕಾಣಬೇಕಲ್ಲವೇ ? ಏಕೆಂದರೆ ಸಾಮಾಜಿಕ-ಸಾಂಸ್ಕೃತಿಕ ವಲಯದಲ್ಲಿ ಮಹಿಳೆಯೇ ಹೆಚ್ಚು ವಂಚಿತಳೂ, ನಿರ್ಲಕ್ಷಿತಳೂ ಆಗಿರುತ್ತಾಳೆ. ಹೀಗಿರುವಾಗ ಪ್ರಧಾನ ಗೋಷ್ಠಿಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ ? ಮಂಡ್ಯ ಸಾಹಿತ್ಯ ಸಮ್ಮೇಳನದ 9 ವಿಚಾರ ಗೋಷ್ಠಿಗಳ ಪೈಕಿ “ಸ್ತ್ರೀ ಎಂದರೆ ಅಷ್ಟೇ ಸಾಕೇ ” ಶೀರ್ಷಿಕೆಯ ಮಹಿಳಾ ಕೇಂದ್ರಿತ ಗೋಷ್ಠಿಯನ್ನು ಹೊರತುಪಡಿಸಿದರೆ ಉಳಿದಂತೆ ಮಹಿಳಾ ಪ್ರಾತಿನಿಧ್ಯ ಇಲ್ಲವೇ ಇಲ್ಲ ಎನ್ನುವಂತಿತ್ತು. ಗೋಷ್ಠಿ 6 , 7 ಮತ್ತು 7ರಲ್ಲಿ ಒಬ್ಬೊಬ್ಬ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ನಿರ್ವಹಣೆ, ನಿರೂಪಣೆ ಮತ್ತು ವಂದನಾರ್ಪಣೆಗೆ ಸೀಮಿತವಾಗಿದೆ. ಯಶಸ್ಸು

ಏಕೆ? ಸಮ್ಮೇಳನದ ಆಯೋಜಕರಿಗೆ ಪ್ರಧಾನ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡುವ ಸಮರ್ಥ ಮಹಿಳಾ ಸಾಹಿತಿಗಳು, ಚಿಂತಕರು ಕಾಣಲೇ ಇಲ್ಲವೇ ? ಪ್ರತ್ಯೇಕವಾಗಿ ಮಹಿಳಾ ಗೋಷ್ಠಿಯನ್ನು ಏರ್ಪಡಿಸುವುದೇ ಒಂದು ಸಂಕುಚಿತ ದೃಷ್ಟಿಕೋನದ ಫಲ. ಬದಲಾಗಿ ಎಲ್ಲ ಗೋಷ್ಠಿಗಳಲ್ಲೂ ಸಮಾನ ಅವಕಾಶ ನೀಡುವ ಮೂಲಕ, ಕನ್ನಡ ನಾಡನ್ನು ಕಾಡುತ್ತಿರುವ ಸಂಕೀರ್ಣ ಸಮಸ್ಯೆಗಳನ್ನು ಮಹಿಳಾ ದೃಷ್ಟಿಕೋನದಿಂದ ಹೇಗೆ ನೋಡಬಹುದಲ್ಲವೇ ? ಸಮ್ಮೇಳನಾಧ್ಯಕ್ಷರು ತಮ್ಮ ಉದ್ಘಾಟನೆ ಮತ್ತು ಸಮಾರೋಪ ಭಾಷಣದಲ್ಲಿ ಸ್ತ್ರೀ ಸಮಾನತೆಯ ಬಗ್ಗೆ ಹೃದಯಸ್ಪರ್ಶಿಯಾಗಿ ಮಾತನಾಡಿದ್ದಾರೆ. ಆದರೆ ಈ ಆಶಯಗಳಿಗೆ ಅವರು ಕುಳಿತ ವೇದಿಕೆಗಳಲ್ಲೇ ಅತ್ಯಲ್ಪ ಅವಕಾಶ ಕಲ್ಪಿಸುವುದು, ಕನ್ನಡ ಸಾಹಿತ್ಯ ಲೋಕ ಮತ್ತು ಸಮ್ಮೇಳನದ ವಾರಸುರಾರರ ಪಿತೃಪ್ರಧಾನ ಧೋರಣೆಯ ಸಂಕೇತವಾಗಿಯೇ ಕಾಣುತ್ತದೆ. ಯಶಸ್ಸು

ಇದನ್ನೂ ನೋಡಿ: ಮನುವಾದಿ ಅಮಿತ್ ಶಾ ವಜಾಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ Janashakthi Media

ಸಮ್ಮೇಳನವು ನಿರೀಕ್ಷೆಯನ್ನೂ ಮೀರಿ  ಯಶಸ್ವಿಯಾಗಿದೆ ಎಂಬ ಸರ್ವಾಧ್ಯಕ್ಷರ ಮಾತುಗಳು ಅಂದವಾಗಿ ಕಾಣುವುದಾದರೂ, ಈ ಸಮ್ಮೇಳನದಲ್ಲೇ ಮಹಿಳಾ ಸಂಕುಲದ ನಿರೀಕ್ಷೆಗಳು ಈಡೇರಿಲ್ಲ ಎಂಬ ವಾಸ್ತವವನ್ನೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ವಿಚಾರ ಮಂಡನೆ ಮಾಡಿದ ಚಿಂತಕಿ ಅಕ್ಕೈ ಪದ್ಮಶಾಲಿ “ ಎಲ್ಲರ ಪಕ್ಕ ಕೂರುವ ಸಮಾನ ಹಕ್ಕು ನಮಗೆ ಬೇಕು ” ಎಂದು ಆಗ್ರಹಿಸಿರುವುದು ಸಮ್ಮೇಳನದ ಹೈಲೈಟ್‌ ಎನ್ನಬಹುದು. ಹಾಗೆಯೇ ಎಲ್ಲ ವೇದಿಕೆಗಳಲ್ಲೂ ಕೂರುವ ಸಮಾನ ಹಕ್ಕನ್ನು ಮಹಿಳಾ ಸಮೂಹವೂ ಕೇಳುತ್ತಲೇ ಬಂದಿದೆ. ಆದರೆ ಇಂದಿಗೂ ಸಹ ಇದು ʼಅವಕಾಶವನ್ನು ಕೊಡುವʼ ಒಂದು ಔದಾರ್ಯದ ನೆಲೆಯಲ್ಲೇ ನಿಷ್ಕರ್ಷೆಗೊಳಗುತ್ತಿದೆ. ಹೀಗೆ ʼಕೊಡುವʼ ಅಧಿಕಾರ ಇರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನದ ಆಯೋಜಕರು ಪಿತೃಪ್ರಧಾನ, ಗಂಡಾಳ್ವಿಕೆಯ ಚೌಕಟ್ಟಿನಿಂದ ಹೊರಬರದೆ ಹೋದರೆ ಈ ನಿರೀಕ್ಷೆ ಈಡೇರಲು ಸಾಧ್ಯವೇ ? ಸಮ್ಮೇಳನದ ಸಾಫಲ್ಯ ಇಲ್ಲಿ ಪ್ರಶ್ನೆಗೊಳಗಾಗುತ್ತದೆ.

ಜನಸಂಖ್ಯೆಯ ಅರ್ಧಭಾಗವನ್ನು ಪ್ರತಿನಿಧಿಸುವ ಮಹಿಳಾ ಸಂಕುಲವನ್ನು ಸಮಾನ ನೆಲೆಯಲ್ಲಿಟ್ಟು, ಒಳಗೊಳ್ಳುವ ಸಾಂಸ್ಕೃತಿಕ ನೀತಿಯನ್ನು (Inclusive Cultural Policy) ಅನುಸರಿಸಬೇಕಾದ ನೈತಿಕತೆಯನ್ನು ಕನ್ನಡ ಸಾಹಿತ್ಯ ಲೋಕ ಮತ್ತು ಸಾಹಿತ್ಯ ಪರಿಷತ್ತು ರೂಢಿಸಿಕೊಳ್ಳಬೇಕಿದೆ. ಇತರ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಈ ಕೊರತೆ ಢಾಳಾಗಿ ಕಾಣುತ್ತಲೇ ಇದೆ. ಈ ಕೊರತೆಯನ್ನು ನೀಗಿಸುವ ಜವಾಬ್ದಾರಿ ಸಾಹಿತ್ಯ ಲೋಕದ ಮೇಲಿದೆ. ಏಕೆಂದರೆ ಸಾಹಿತ್ಯ ಎನ್ನುವುದು ಮನುಜ ಸಂಬಂಧಗಳ ಸೂಕ್ಷ್ಮ ಸಂವೇದನೆಗಳನ್ನು ವಸ್ತುನಿಷ್ಠವಾಗಿ ಪರಾಮರ್ಶಿಸುವ ಒಂದು ಬೌದ್ಧಿಕ ಪ್ರಕ್ರಿಯೆ. ಇಲ್ಲಿ ಲಿಂಗ ಸೂಕ್ಷ್ಮತೆ ಪ್ರಧಾನವಾಗಿರಬೇಕಲ್ಲವೇ ? ಅಖಿಲ ಭಾರತ ಸಾಹಿತ್ಯ ಸಮ್ಮೇಳನವೇ ಈ ಔನ್ನತ್ಯವನ್ನು ಸಾಧಿಸದೆ ಹೋದರೆ, ಇನ್ನುಳಿದ ಸಮಾಜದಲ್ಲಿ ಹೇಗೆ ನಿರೀಕ್ಷಿಸಲು ಸಾಧ್ಯ ? ಸಮ್ಮೇಳನದ ಯಶಸ್ಸು ಮತ್ತು ಸಾಫಲ್ಯದ ನಡುವಣ ಅಂತರವನ್ನು ಇಲ್ಲಿ ಕಾಣಬಹುದು. ಯಶಸ್ಸು

ಅಂತಿಮ ಫಲ –ಸಾಫಲ್ಯದೆಡೆಗೆ

ಸಾಹಿತ್ಯ ಸಮ್ಮೇಳನದ ಸಾರ್ಥಕ್ಯ ಮತ್ತು ಸಾಫಲ್ಯ ಇರುವುದು ಸಮಾರೋಪದಲ್ಲಿ ಕೈಗೊಳ್ಳುವಂತಹ ನಿರ್ಣಯಗಳಲ್ಲಿ.  87ನೆಯ ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿ ಕೆಲವು ಅಮೂಲ್ಯ ನಿರ್ಣಯಗಳಿಗೆ ಸಾಕ್ಷಿಯಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಅಧ್ಯಯನವನ್ನು ಪ್ರಧಾನವಾಗಿ ಬಿಂಬಿಸುವ ನಿರ್‌ಣಯಗಳು ಸ್ವಾಗತಾರ್ಹ. ಆದರೆ ಕಳೆದ 86 ಸಮ್ಮೇಳನಗಳಲ್ಲಿ ಕೈಗೊಳ್ಳಲಾದ ಅಮೂಲ್ಯ ನಿರ್ಣಯಗಳನ್ನು ನಮ್ಮ ಸರ್ಕಾರಗಳು ಎಷ್ಟರ ಮಟ್ಟಿಗೆ ಸಾಕಾರಗೊಳಿಸಿವೆ ಎಂದು ಹಿಂತಿರುಗಿ ನೋಡಿದಾಗ ನಿರಾಸೆಯಾಗುವುದೇ ಹೆಚ್ಚು. ಸಮ್ಮೇಳನವನ್ನು ಆಯೋಜಿಸುವ ಕನ್ನಡ ಸಾಹಿತ್ಯ ಪರಿಷತ್ತು ಈ ನಿರ್ಣಯಗಳ ಜಾರಿಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡಗಳನ್ನು ಹೇರುತ್ತದೆ ? ಅಥವಾ ಮುಂದಿನ ಸಮ್ಮೇಳನದವರೆಗೆ ನಿದ್ರೆಗೆ ಜಾರುತ್ತದೆಯೋ ? ಇದು ಯೋಚಿಸಬೇಕಾದ ವಿಚಾರ.

ಈ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಕೇಳಿಬಂದ ನೋವಿನ ದನಿಗಳು, ಆಕ್ರೋಶದ ನುಡಿಗಳು ಮತ್ತು ಹಕ್ಕೊತ್ತಾಯದ ದಿಟ್ಟ ಮಾತುಗಳು ನಮ್ಮ ಸಮಾಜ ಮತ್ತು ಮಹಿಳಾ ಸಮೂಹ ಎದುರಿಸುತ್ತಿರುವ ಸಂಕೀರ್ಣತೆಗಳನ್ನು ತೆರೆದಿಟ್ಟಿವೆ. ಭಾರತ ಸ್ವಾತಂತ್ರ್ಯ ಪಡೆದು, ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಕಳೆದಿವೆ, ಈ ಅವಧಿಯಲ್ಲಿ ಅಂದರೆ 1950 ರಿಂದ 2024ರವರೆಗೆ 54 ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈ 55ನೇ ಸಮ್ಮೇಳನದಲ್ಲೂ ಮಹಿಳಾ ಸಮೂಹವು ಸಮಾನ ಅವಕಾಶಗಳಿಗಾಗಿ ಆಗ್ರಹಿಸಬೇಕಿರುವುದು ಪುರುಷ ಸಮಾಜಕ್ಕೆ ಮತ್ತು ಗಂಡಾಳ್ವಿಕೆಯ ವ್ಯವಸ್ಥೆಗೆ ನಾಚಿಕೆಗೇಡಿನ ವಿಚಾರ ಅಲ್ಲವೇ ? 88ನೇ ಸಮ್ಮೇಳನದಲ್ಲಾದರೂ ಇದು ಸಾಕಾರಗೊಳ್ಳುವುದೇ ಕಾದುನೋಡಬೇಕಿದೆ. ಸಮ್ಮೇಳನದ ಅಭೂತಪೂರ್ವ ಯಶಸ್ಸನ್ನು ಸಂಭ್ರಮಿಸುವ ಮನಸ್ಸುಗಳಿಗೆ ಈ ಸುಡು ವಾಸ್ತವಗಳು ನಾಟಿದರೂ ಸಾಕು. ಯಶಸ್ಸು

ಮೂಲ ಆಶಯಗಳತ್ತ ಮುನ್ನಡೆ

ಉಳಿದಂತೆ 450ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಲ್ಲಿ ಕನ್ನಡ ಸಾಹಿತ್ಯ ಕೃತಿಗಳು ಉತ್ತಮ ಸ್ಪಂದನೆ ಪಡೆದಿರುವುದು, ಪುಸ್ತಕಗಳು ಹೆಚ್ಚು ಮಾರಾಟವಾಗಿರುವುದು ಯಶಸ್ಸಿನ ಒಂದು ಭಾಗ. ಆದರೆ ಕನ್ನಡ ಗ್ರಾಂಥಿಕ ಜಗತ್ತು, ಪ್ರಕಾಶಕರ ಪ್ರಪಂಚ ಮತ್ತು ಬರಹಗಾರರ ಸಂಕೀರ್ಣ ಸವಾಲುಗಳನ್ನು ಈ ಖರೀದಿ-ಮಾರಾಟದ ಭರಾಟೆ ನೀಗಿಸುವುದಿಲ್ಲ ಎನ್ನುವ ವಾಸ್ತವತೆಯ ಅರಿವೂ ನಮಗಿರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಿರುವುದು ಸಾಹಿತ್ಯ ಸಮ್ಮೇಳನದ ಮೂಲ ಆಶಯವನ್ನು. ಮೂರು ದಿನಗಳ ಕಾಲ ಮೂವತ್ತಕ್ಕೂ ಹೆಚ್ಚು ಗೋಷ್ಠಿಗಳಲ್ಲಿ ಚರ್ಚಿಸಲಾದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ-ರಾಜಕೀಯ ಸಮಸ್ಯೆಗಳು ಸಮಕಾಲೀನ-ಆಧುನಿಕ ಮತ್ತು 21ನೇ ಶತಮಾನದ ಕನ್ನಡ ಸಾಹಿತ್ಯದಲ್ಲಿ ಎಷ್ಟರ ಮಟ್ಟಿಗೆ ಬಿಂಬಿತವಾಗುತ್ತಿವೆ ? ಪ್ರಧಾನವಾಗಿ ಈ ವಿಷಯ ಇಲ್ಲಿ ಚರ್ಚೆಗೊಳಗಾಗಬೇಕಿತ್ತು. ನವ ಉದಾರವಾದ, ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ, ಕೋಮುವಾದ-ಮತಾಂಧತೆ ಮತ್ತು ಇವೆಲ್ಲವನ್ನೂ ಬೆಸೆಯುವ ಪಿತೃಪ್ರಧಾನ ಮೌಲ್ಯಗಳು ಸಾಹಿತ್ಯಕವಾಗಿ, ಗ್ರಾಂಥಿಕವಾಗಿಯಾದರೂ ಪ್ರತಿಫಲಿಸುತ್ತಿದೆಯೇ ಎಂಬ ಪ್ರಶ್ನೆ ಇಲ್ಲಿ ಚರ್ಚೆಗೊಳಗಾಗಬೇಕಿತ್ತು.

ಹಾಗಾಗಿದ್ದರೆ ಕನ್ನಡ ಸಾಹಿತ್ಯ ಲೋಕದ ಸಾಫಲ್ಯ-ವೈಫಲ್ಯಗಳು ಮುನ್ನಲೆಗೆ ಬರುತ್ತಿದ್ದವು. ಕನ್ನಡ ಸಾಹಿತ್ಯ ವಲಯದಲ್ಲಿ ಬರೆಯುವವರು ಹೇರಳವಾಗಿದ್ದಾರೆ, ಓದುವವರಿಲ್ಲ ಎಂಬ ಕೊರಗು ಕೇಳಿಬರುತ್ತಲೇ ಇದೆ. ಇದಕ್ಕೆ ಕಾರಣಗಳೇನು ? ಗ್ರಂಥ ಲೋಕದ ಮೇಲೆ ವಾಣಿಜ್ಯ ಹಿತಾಸಕ್ತಿಗಳ ಹಿಡಿತವೇ ಅಥವಾ ಓದು-ಅಧ್ಯಯನಕ್ಕೆ ಬೇಕಾದ ಸೌಕರ್ಯಗಳ ಕೊರತೆಯೇ ಅಥವಾ ಜನಸಾಮಾನ್ಯರ ಕಿರಿಯ ತಲೆಮಾರಿಗೆ ಕೈಗೆಟುಕದ ದುಬಾರಿ ಬೆಲೆಯ ಪುಸ್ತಕಗಳೇ ? ಈ ವಿಚಾರ ಗಂಭೀರ ಚರ್ಚೆಗೊಳಗಾಗಬೇಕಿತ್ತು. ಚರಿತ್ರೆಯನ್ನು ಬಗೆದು ಬಗೆದು ನೋಡುವ ಪ್ರಕ್ರಿಯೆಯೊಂದಿಗೇ ವರ್ತಮಾನದ ಸುಡು ವಾಸ್ತವಗಳನ್ನು ಸೂಕ್ಷ್ಮವಾಗಿ ಗಮನಿಸಿ, ಭವಿಷ್ಯದ ಹಾದಿಗಳಿಗೆ ದಿಕ್ಸೂಚಿಯಾಗುವ ಸಾಹಿತ್ಯಕ ಪ್ರಯತ್ನಗಳ ಬಗ್ಗೆ ಇಲ್ಲಿ ಚರ್ಚೆಯಾಗಬೇಕಿತ್ತು. ಇಲ್ಲಿ ಆತ್ಮರತಿಯನ್ನು ಬದಿಗಿಟ್ಟು ಆತ್ಮಾವಲೋಕನದತ್ತ ಗಮನಹರಿಸಬೇಕಾದ ಅವಶ್ಯಕತೆ ಎದ್ದು ಕಾಣುತ್ತದೆ. ಯಶಸ್ಸು

ಈ ಹಲವು ಕೊರತೆಗಳನ್ನು ಹೊರತುಪಡಿಸಿ ನೋಡಿದಾಗ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ʼಯಶಸ್ವಿಯಾಗಿʼ ನೆರವೇರಿದಂತೆ ಕಾಣುತ್ತದೆ. ಆದರೆ ಯಶಸ್ಸು ಕ್ಷಣಿಕ, ಸಾರ್ಥಕತೆ ಇರುವುದು ಸಾಫಲ್ಯದಲ್ಲಿ. ಕನ್ನಡ ಸಾಹಿತ್ಯ ಸಮ್ಮೇಳನಗಳು ಈ ಸಾಫಲ್ಯ ಸಾಧಿಸುವಲ್ಲಿ ವಿಫಲವಾಗುತ್ತಲೇ ಬಂದಿವೆ. ಈಗ ಮತ್ತೊಂದು, ಮಂಡ್ಯ ಸಮ್ಮೇಳನ, ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಾದರೂ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಗೊಳಿಸುವುದಕ್ಕೆ ತೃಪ್ತರಾಗದೆ, ಅದರ ಸಾಫಲ್ಯ-ಸಾರ್ಥಕ್ಯದ ಬಗ್ಗೆ ಯೋಚಿಸುವಂತಾಗೋಣವೇ?

ಇದನ್ನೂ ಓದಿ: ಸಾರ್ವಜನಿಕರಿಗೆ ತೊಂದರೆ ಕಿರುಕುಳ ಕೊಟ್ಟರೆ ಅಮಾನತ್ತು: ಸಚಿವ ಸಂತೋಷ್ ಲಾಡ್ ಎಚ್ಚರಿಕೆ

Donate Janashakthi Media

Leave a Reply

Your email address will not be published. Required fields are marked *