ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ಸರ್ದಾರಿ ಬೇಗಂ, ಮಮ್ಮೂನಂತಹ ಹೊಸ ಅಲೆ ಸಿನಿಮಾಗಳನ್ನು ನಿರ್ದೇಶಿಸಿದ ಶ್ಯಾಮ್ ಬೆನಗಲ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೊಸ ಅಲೆ ಸಿನಿಮಾ ಚಳುವಳಿಯ ಭಾಗವಾಗಿದ್ದ ಬೆನಗಲ್ ಆ ಮೂಲಕ ಸಿನಿಮಾ ನಿರ್ಮಾಣದ ವಿಭಿನ್ನ ಸಾಧ್ಯತೆಗಳನ್ನು, ಹೊಸ ಪ್ರಯೋಗಗಳನ್ನು ಹೇಗೆ ಪರಿಚಯಿಸಿದರು ಎಂಬುದನ್ನು ಈ ಲೇಖನ ವಿವರಿಸುತ್ತದೆ.
– ಬಿ. ಶ್ರೀಪಾದ ಭಟ್
ಜ್ವಾಲಾಮುಖಿಯನ್ನು ತನ್ನೊಳಗಿಟ್ಟುಕೊಂಡ ಪರ್ವತದ ಆಸ್ತಿತ್ವ ಮೇಲ್ನೋಟಕ್ಕೆ ಯಾವುದೇ ಸಂಚಲನವನ್ನೇ ಹುಟ್ಟಿಸದ ತಣ್ಣಗೆ ಕುಳಿತಂತೆ ಗೋಚರಿಸುತ್ತದೆ. ಮುಂದೊಂದು ದಿನ ಯುದ್ಧದ ದಾಳಿಗೆ ಒಳಗಾಗಿ ತತ್ತರಿಸುವ ಯಾವ ಮುನ್ಸೂಚನೆಗಳೇ ಇಲ್ಲದಂತೆ ನಗರವು ರೋಮಾಂಚದಿಂದ, ಚಟುವಟಿಕೆಯ ಬುಗ್ಗೆಯಿಂದ ನಳನಳಿಸುತ್ತಿರುತ್ತದೆ. ಮುಂದೊಂದು ದಿನ ಅಗೋಚರವಾರದ ಬದಲಾವಣೆಯ ಹೊಸತನ ತಮ್ಮನ್ನು ಮತ್ತೊಂದು ಸಹನೀಯ ಲೋಕಕ್ಕೆ ಕೊಂಡೊಯ್ಯುತ್ತದೇಯೇ ಎನ್ನುವ ಅನುಮಾನಗಳೊಂದಿಗೆ, ವರ್ತಮಾನದ ಜಡ್ಡುಗಟ್ಟಿದ ಸ್ಥಿತಿಯಲ್ಲಿ ಗ್ರಾಮವು ದಿನಗಳನ್ನು ತಳ್ಳುತ್ತಿರುತ್ತದೆ. ಆಂಕುರ್
ತಮ್ಮೊಳಗೇ ಸಂಘರ್ಷವನ್ನು ಅದುಮಿಟ್ಟುಕೊಂಡು ಬದುಕುವ ನಿಸರ್ಗ, ಮನುಷ್ಯನ ಈ ವಿಪರ್ಯಾಸಗಳು ಸ್ಪೋಟಿಸಲು ಸೂಕ್ತ ಕಾಲಕ್ಕಾಗಿ ಕಾಯುತ್ತಲೇ ಇರುತ್ತವೆ ಮತ್ತು ಸ್ಪೋಟಗೊಂಡ ನಂತರ ನಾಶಗೊಳ್ಳತ್ತವೆ ಎನ್ನುವುದು ಆ ನಂತರದ ಪರಿಣಾಮಗಳ ಮೂಲಕ ಭೌತಿಕವಾಗಿ ವ್ಯಕ್ತವಾದರೂ ಅಂತರಿಕವಾಗಿ ಮತ್ತೆ ಮತ್ತೆ ಹುಟ್ಟಿ ಬರುವ ದಿಟ್ಟತೆಯ,ಚೈತನ್ಯತೆಯ ಒರತೆಯನ್ನು ತಮ್ಮೊಳಗೆ ಪೋಷಿಸುತ್ತಲೂ ಇರುತ್ತವೆ. ಈ ಚೈತನ್ಯದ ಚಿಲುಮೆಯೇ ನಮಗೆಲ್ಲ ಭವಿಷ್ಯದ ಭೀಕರತೆ ಕುರಿತಾದ ನಮ್ಮೊಳಗಿನ ಆತಂಕವನ್ನು ಗೌಣಗೊಳಿಸುತ್ತಲೇ ಇರುತ್ತದೆ. ಆಂಕುರ್
ಹೈದರಾಬಾದ್ ಬಳಿಯ ಇಂತಹದೇ ಒಂದು ಗ್ರಾಮ. ಅಲ್ಲಿ ಬಡತನವಿದೆ. ಮೌಢ್ಯತೆ ಇದೆ. ತಳ ಸಮುದಾಯಗಳ ಅವಮಾನವಿದೆ. ಅದರಿಂದುಂಟಾದ ಯಾತನೆಯಿದೆ ಮತ್ತು ಹೌದು ಫ್ಯೂಡಲಿಸಂನ ದಬ್ಬಾಳಿಕೆ, ದೌರ್ಜನ್ಯ ಇಡೀ ಗ್ರಾಮವನ್ನು ನಿಯಂತ್ರಿಸುತ್ತಿದೆ. ಅಲ್ಲಿ ತಳ ಸಮುದಾಯಗಳ ಆರ್ಥಿಕ ಸ್ಥಿತಿ, ಸಾಮಾಜಿಕ ಅಸಮಾನತೆ ಸುಧಾರಿಸುವ ಲಕ್ಷಣಗಳೂ ಇಲ್ಲ ಹಾಗೆಯೇ ಪ್ರತಿರೋಧವಾಗಿ ಸಾಮಾಜಿಕ-ರಾಜಕೀಯ ಕ್ಷಿಪ್ರ ಕ್ರಾಂತಿಯ ಸಣ್ಣ ಕುರುಹುಗಳೂ ಕಾಣುವುದಿಲ್ಲ. ವಾಸ್ತವದಲ್ಲಿ ನೆಮ್ಮದಿಯ ಬದುಕಿನ ಭರವಸೆಯನ್ನೇ ಕಳೆದುಕೊಂಡಂತೆ ಜೀವಿಸುತ್ತಿರುವ ಆ ಗ್ರಾಮದ ಜನ ಕನಿಷ್ಠ ಕನಸಿನ ಲೋಕದಲ್ಲಿಯೂ ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದಷ್ಟು ದಡ್ಡುಗಟ್ಟಿದ್ದಾರೆ.
ಇದನ್ನೂ ಓದಿ: ಮುಂಬೈ | ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ
ಈ ಎಲ್ಲಾ ಹಿನ್ನೆಲೆಯೊಳಗಿನಿಂದಲೇ ಶ್ಯಾಮ್ ಬೆನಗಲ್ ನಿರ್ದೇಶನದ ‘ಆಂಕುರ್’(ಬೀಜಾಂಕುರ) ಸಿನಿಮಾ ಪ್ರಾರಂಭಗೊಳ್ಳುತ್ತದೆ. 1974ರಲ್ಲಿ ತೆರೆಕಂಡ ಅಂಕುರ್ ಅಪಾರ ಕನಸುಗಳನ್ನು ಹೊತ್ತುಕೊಂಡ ಬೆನೆಗಲ್ ಅವರ ಮಹತ್ವಾಕಾಂಕ್ಷೆಯ ಅವರ ನಿರ್ದೇಶನದ ಮೊದಲ ಸಿನಿಮಾ. ಕುತೂಹಲವೆಂದರೆ ಈ ಸಿನಿಮಾದಲ್ಲಿ ದಲಿತ ಮಹಿಳೆ ಲಕ್ಷ್ಮಿಯ ಪಾತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಶಬನಾ ಅಜ್ಮಿಯ ಮೊದಲ ಸಿನಿಮಾ. ನಿರ್ದೇಶಕ ಗೋವಿಂದ ನಿಹಾಲನಿ ಅವರು ಸಿನಿಮಾಟೋಗ್ರಫಿ ಮಾಡಿದ ಮೊದಲ ಸಿನಿಮಾ. ಅನಂತನಾಗ್, ವಿಜಯ್ ತೆಂಡೂಲ್ಕರ್ ಅವರ ಮಗಳು ಪ್ರಿಯಾ ತೆಂಡೂಲ್ಕರ್ ಅವರ ಚಿತ್ರ ಬದುಕಿನ ಮೊದಲ ಸಿನಿಮಾ. ಇಷ್ಟೊಂದು ಹೊಸಬರನ್ನು ಒಳಗೊಡಂತಹ ಹೊಸ ಅಲೆಯ ಸಿನಿಮಾ ಆಂಕುರ್ನ್ನು ನಿರ್ದೇಶಿಸಿದ ಶ್ಯಾಮ್ ಬೆನೆಗಲ್ ಆ ಮೂಲಕ ಒಂದು ಇತಿಹಾಸವನ್ನೇ ನಿರ್ಮಿಸಿದರು.
ಸಿನಿಮಾದ ಪ್ರಾರಂಭದ ದೃಶ್ಯದಲ್ಲಿಯೇ ಗ್ರಾಮದ ಮಹಿಳೆಯು ಗ್ರಾಮದೇವತೆಗೆ ಪಂಡ್ಲು(ಹಣ್ಣು) ಎನ್ನುತ್ತಾ ಹಣ್ಣಿನ ಬೀಜವನ್ನು ಅರ್ಪಿಸುತ್ತಿರುವಾಗಲೇ ಅಲ್ಲಿಯೇ ದಲಿತ ಮಹಿಳೆ ಲಕ್ಷ್ಮಿ(ಶಬನಾ ಅಜ್ಮಿ) ಮಗುವಿಗಾಗಿ ಗ್ರಾಮದೇವತೆಯ ಮುಂದೆ ಹರಕೆ ಸಲ್ಲಿಸುತ್ತಿರುತ್ತಾಳೆ. ಇದು ಒಂದು ಬೀಜಾಂಕುರಕ್ಕಾಗಿ ಕಾಯುತ್ತಿರುವ, ಬೇಡಿಕೊಳ್ಳುತ್ತಿರುವ ಸಂಕೇತ. ಮುಂದೆ ಇಡೀ ಸಿನಿಮಾದುದ್ದಕ್ಕೂ ಈ ಮಾದರಿಯ ಅನೇಕ ಸಂಕೇತಗಳು ಪ್ರೇಕ್ಷಕನಿಗೆ ಎದುರಾಗುತ್ತಲೇ ಇರುತ್ತವೆ, ಚಕಿತಗೊಳಿಸುತ್ತಿರುತ್ತವೆ. ಬೀಜಾಂಕುರದ ಅನೇಕ ಮೆಟಾಫರ್ ದೃಶ್ಯಗಳನ್ನು ಸಮರ್ಥವಾಗಿ ಚಿತ್ರೀಕರಿಸಿರುವ ಶ್ಯಾಮ್ ಬೆನೆಗಲ್ ಮುಂದಿನ ಕಾಲು ಶತಮಾನದ ಭಾರತದ ಹೊಸ ಅಲೆಯ ಸಿನಿಮಾಗಳಿಗೆ ರೂಪಕಗಳ ಒಂದು ರೆಫೆರೆನ್ಸ್ ಕಾವ್ಯದ ಕಿಟಿಕಿಯ ಬಾಗಿಲುಗಳನ್ನೇ ಈ ಅಂಕುರ್ ಸಿನಿಮಾ ಮೂಲಕ ತೆರೆಯುತ್ತಾರೆ. ಈ ಹಿಂದೆ ಖುತ್ವಿಕ್ ಘಟಕ್, ಸತ್ಯಜಿತ್ ರೇ ಈ ಬೆಂಚ್ ಮಾರ್ಕಗಳನ್ನು ಸೃಷ್ಟಿಸಿಬಿಟ್ಟಿದ್ದರು. ಅದರ ಮುಂದುವರೆದ ಭಾಗವೇ ಆಂಕುರ್ ಸಿನಿಮಾ.
ಇದೇ ಗ್ರಾಮದ ಜಮೀನ್ದಾರನ ಮಗನಾದ ಸೂರ್ಯನ(ಅನಂತನಾಗ್) ಪದವಿ ವ್ಯಾಸಂಗದ ಆಸೆಯು ತನ್ನ ತಂದೆಯ ದರ್ಪದ ಮೂಲಕ ಮೊಟಕುಗೊಂಡು ಹಳ್ಳಿಯಲ್ಲಿರುವ ಹೊಲಮನೆಗಳನ್ನು ನೋಡಿಕೊಳ್ಳಲು ರವಾನಿಸಲ್ಪಡುತ್ತಾನೆ. ಇದರ ಜೊತೆಗೆ ಮೇಲ್ಜಾತಿಗಳ ರಿವಾಜಿನಂತೆ ಸೂರ್ಯನ ಮದುವೆಯು ಅಪ್ರಾಪ್ತ ಬಾಲಕಿ ಸರೋಜಳೊಂದಿಗೆ(ಪ್ರಿಯಾ ತೆಂಡೂಲ್ಕರ್) ನಡೆದು ಹೋಗುತ್ತದೆ. ಆದರೆ ಆಕೆ ಖುತುಮತಿಯಾಗುವವವರೆಗೂ ಸೂರ್ಯ ಆ ಗ್ರಾಮದಲ್ಲಿ ಒಂಟಿಯಾಗಿ ಬದುಕಬೇಕಾಗುತ್ತದೆ. ಇಲ್ಲಿ ಸೂರ್ಯನ ತಂದೆ ತಮ್ಮ ಜಮೀನ್ದಾರಿ ದರ್ಪಕ್ಕೆ ಮತ್ತು ಅದರ ಸ್ವರಕ್ಷಣೆಗೆ ಕೌಸಲ್ಯ ಎನ್ನುವ ಮಹಿಳೆಯನ್ನು ‘ಇಟ್ಟುಕೊಂಡಿರುತ್ತಾನೆ’.
ಇವರಿಗೆ ಪ್ರತಾಪ್ ಎನ್ನುವ ಮಗನೊಬ್ಬನಿರುತ್ತಾನೆ. ಇವರಿಬ್ಬರಿಗೂ ಗ್ರಾಮದಲ್ಲಿಯೇ ವಾಸ್ತವ್ಯವನ್ನು ಕಲ್ಪಿಸಿಕೊಡುವ ಜಮೀನ್ದಾರ ತನ್ನ ಮಗ ಸೂರ್ಯನನ್ನೂ ಅಲ್ಲಿಗೇ ಕಳುಹಿಸುತ್ತಾನೆ. ಇದು “ಆಂಕುರ್” ಸಿನಿಮಾ ಒಂದು ಎಳೆ. ಇದು ಇಡೀ ಆಂದ್ರ ಪ್ರದೇಶದ ಜಮೀನ್ದಾರಿ ಪದ್ಧತಿಯ ಒಂದು ಆಯಾಮವನ್ನು ಸಂಕೇತಿಸುತ್ತದೆ. ಇಲ್ಲಿ ಜಮೀನ್ದಾರನಲ್ಲಿ ಯಾವುದೇ ಇಬ್ಬಂದಿತನವಿಲ್ಲ ಹಾಗೆಯೇ ಅವನ ಮಗ ಸೂರ್ಯನಲ್ಲಿಯೂ ಈ ಇಟ್ಟುಕೊಂಡವರು ಅನುಭವಿಸುವ ಶೋಷಣೆಯ ಕುರಿತಾಗಿ ಆಕ್ರೋಶವಿಲ್ಲ ಆದರೆ ಇವರಿಂದ ತನ್ನ ತಾಯಿಗೆ ಉಂಟಾದ ಅವಮಾನದ ಕುರಿತಾಗಿ ವ್ಯಗ್ತತೆಯಿದೆೆ. ಆದರೆ ಇಟ್ಟುಕೊಂಡವಳಾದ ಕೌಸಲ್ಯಾ ಅಳವಡಿಸಿಕೊಂಡ ಹೊಂದಾಣಿಕೆಯನ್ನೇ ನೆಚ್ಚಿಕೊಂಡ ಬದುಕಿನ ಅಸಹಾಯಕತೆಯು ಯಾವುದೇ ಸಂಘರ್ಷದ ಕಿಡಿ ಇಲ್ಲದೇ ಮುರುಟಿಹೋಗಿದ್ದರೆ ಇಡೀ ಸಿನಿಮಾದ ಉದ್ದಕ್ಕೂ ಈ ಮಾದರಿಯ ಶೋಷಣೆಗೆ ಒಳಗಾಗುತ್ತಲೇ ಇರುವ ದಲಿತ ಮಹಿಳೆ ಲಕ್ಷ್ಮಿ ಊಳಿಗಮಾನ್ಯದ ಲಕ್ಷಣಗಳುಳ್ಳ ವ್ಯವಸ್ಥೆಯೊಂದಿಗೆ ದಿನನಿತ್ಯ ಮೌನವಾಗಿ ಸಂಘರ್ಷಿಸುತ್ತಲೇ ತನ್ನ ವೈಯುಕ್ತಿಕ ಭಾವುಕತೆಯನ್ನು ಸಮಾಜದ ಕಟ್ಟುಪಾಡುಗಳೊಂದಿಗೆ ಸಮತೋಲನಗೊಳಿಸಿಕೊಳ್ಳುತ್ತಾ ಹೆಣಗುತ್ತಿರುತ್ತಾಳೆ ಮತ್ತು ಸ್ಪೋಟಗೊಳ್ಳುವ ಕ್ಷಣಕ್ಕಾಗಿ ಮೌನವಾಗಿ ಕಾಯುತ್ತಿರುತ್ತಾಳೆ
ಲಕ್ಷ್ಮಿ ಗಂಡ ‘ಕಿಶ್ತಿಯಾ’(ಸಾಧು ಮೆಹೆರ್) ಕಿವುಡ ಮತ್ತು ಮೂಗ. ಮತ್ತು ಕುಡಿತಕ್ಕೆ ದಾಸ್ಯನಾಗಿ ತನ್ನ ಬದುಕನ್ನು ನಾಶಗೊಳಿಸಿಕೊಳ್ಳುತ್ತಾ ತನ್ನ ಹೆಂಡತಿ ಲಕ್ಷ್ಮಿಯ ಬದುಕಿಗೂ ಅಭದ್ರತೆಯನ್ನು, ಅಂತತ್ರತೆಯನ್ನು ತಂದಿಡುತ್ತಾನೆ. ಆಳದಲ್ಲಿ ಮುಗ್ಧನಾದ ಕಿಶ್ತಿಯಾನನ್ನು ಕಟ್ಟಿಕೊಂಡು ಲಕ್ಷ್ಮಿ ಊರ ಹೊರಗೆ ಅಸ್ಪೃಶ್ಯಳಾಗಿ ಬದುಕುತ್ತಿರುತ್ತಾಳೆ. ಇದು ಈ ಸಿನಿಮಾದ ಕೇಂದ್ರ ಎಳೆ. ಗ್ರಾಮಕ್ಕೆ ಬಂದ ಆರಂಭದಲ್ಲಿ ಸೂರ್ಯ ಆಧುನಿಕತೆಯನ್ನು ಪ್ರದರ್ಶಿಸುತ್ತಾ ತನಗೆ ಜಾತಿಪದ್ಧತಿಯಲ್ಲಿ ನಂಬಿಕೆ ಇಲ್ಲ ಎನ್ನುತ್ತಾ ದಲಿತ ಮಹಿಳೆ ಲಕ್ಷ್ಮಿ ತನಗೆ ದಿನ ನಿತ್ಯ ಅಡುಗೆ ಮಾಡುತ್ತಾಳೆ ಎಂದು ಅದೇಶಿಸುತ್ತಾನೆ. ಆದರೆ ಈತನ ಪೊಳ್ಳುತನ, ಸೋಗಲಾಡಿತನ, ಹೇಡಿತನ ಕ್ರಮೇಣ ಬಯಲಾಗುತ್ತಾ ಹೊಗುತ್ತದೆ. ಸೂರ್ಯನ ಪಲಾಯನವಾದದ ಮೂಲಕ ನಿರ್ದೇಶಕ ಬೆನಗಲ್ ಜಾತಿ ಪದ್ಧತಿಯ ಕ್ರೌರ್ಯವನ್ನು ಅದರ ಸಂಕೀರ್ಣತೆಯನ್ನು ಟೀಕಿಸುತ್ತಾ ಹೋಗುತ್ತಾರೆ. ಆದರೆ ಇಲ್ಲಿ ಜಾತಿ-ಫ್ಯೂಡಲ್ ವ್ಯವಸ್ಥೆಯ ವಿರುದ್ಧ ಯಾವುದೇ ದಂಗೆಗಳು ಜರಗುವುದಿಲ್ಲ.
ಮುಂದೆ ಆರು ವರ್ಷಗಳ ನಂತರ ಬಿಡುಗಡೆಯಾದ ಆಕ್ರೋಶ್(ನಿ: ಗೋವಿಂದ ನಿಹಾಲನಿ) ಸಿನಿಮಾದಲ್ಲಿನ ಆಳವಾದ ಮಡುಗಟ್ಟಿದ ನೋವಿನ ಆಭಿವ್ಯಕ್ತಿ ಶಕ್ತಿಯೂ ಸಹ ಆಂಕುರ್ ಸಿನಿಮಾದಲ್ಲಿಲ್ಲ. ಜಾತಿ ಪದ್ಧತಿಯ ಎಳೆ ಎಳೆಯನ್ನು ಬಿಚ್ಚಿಡುವ ಅಧ್ಯಯನದ ಮಾದರಿಯ ವಿಶ್ಲೇಷಣಾತ್ಮಕವಾದ ನಿರೂಪಣೆಯನ್ನು ಬೆನೆಗಲ್ ಅನುಸರಿಸುವುದಿಲ್ಲ. ರಾಜಕೀಯ ಸಂವಾದಗಳನ್ನು ನಡೆಸುವುದಿಲ್ಲ. ಆದರೆ ಈ ಎಲ್ಲಾ ಮಾದರಿಯ ಕ್ರೌರ್ಯವನ್ನು ರೂಪಕಗಳ ಮೂಲಕ ಹೇಳುತ್ತಾ ಸಾಗುವ ಬೆನೆಗಲ್ ಉದಾತ್ತವಾದ ದೃಷ್ಟಿಕೋನದ ಮೂಲಕವೇ ಈ ವ್ಯವಸ್ಥೆಯ ಹಿಪೋಕ್ರಸಿ, ಆರ್ಥಿಕ ಅಸಮಾನತೆ ಮತ್ತು ಮಹಿಳೆಯ ಸಾಮಾಜಿಕ ಸ್ಥಾನಮಾನವನ್ನು ಪರೀಕ್ಷಿಸುತ್ತಾ, ಅನ್ವೇಷಿಸುತ್ತಾ ಹೋಗುತ್ತಾರೆ.
ನಿಸರ್ಗದ ದೃಶ್ಯಕಾವ್ಯ, ಜನಪದ ಕಾವ್ಯದ ಹಿನ್ನೆಲೆ ಸಂಗೀತದ ಆಸರೆಯಲ್ಲಿ ಗ್ರಾಮದ ಬದುಕಿನ ಒಡಕುಗಳು, ಸಮಕಾಲೀನ ಭಾರತ ಮತ್ತು ಟಿಸಿಲೊಡೆಯುತ್ತಾ, ವಿಭಜನೆಗೊಳ್ಳುತ್ತಾ ಸಾಗುವ ಗ್ರಾಮೀಣ ಬದುಕನ್ನು ಅನೇಕ ಮೆಟಫರ್ ಮೂಲಕ ನಮ್ಮ ಮುಂದೆ ಕಟ್ಟಿಕೊಡುತ್ತಾರೆ. ಸೂರ್ಯನ ಜಮೀನ್ದಾರ ತಂದೆಯು ತನ್ನ ದರ್ಪಕ್ಕೆ ಅನುಗುಣವಾಗಿ ಕೌಸಲ್ಯಳನ್ನು ಇಟ್ಟುಕೊಳ್ಳುವುದನ್ನು ಮಾನ್ಯತೆ ಮಾಡುವ ವ್ಯವಸ್ಥೆ ಇದೇ ಗ್ರಾಮದ ಮಹಿಳೆಯೊಬ್ಬಳು ತಾನೊಲ್ಲದ ನಪುಂಸಕ ಗಂಡನನ್ನು ತೊರೆದು ಬೇರೊಬ್ಬನೊಂದಿಗೆ ಸಂಸಾರ ಕಟ್ಟಿಕೊಳ್ಳುವುದನ್ನು ವಿರೋಧಿಸುತ್ತಾ ಆ ಮಹಿಳೆಯನ್ನು ಶಿಕ್ಷಿಸುತ್ತದೆ. ತನ್ನ ಲೈಂಗಿಕ ತೃಷೆಗಾಗಿ ಲಕ್ಷ್ಮಿಯೊಂದಿಗೆ ಸಂಭೋಗ ನಡೆಸುವ ಸೂರ್ಯ ಆಕೆ ಗರ್ಭಿಣಿಯೆಂದು ಗೊತ್ತಾದಾಗ ಆಕೆಯಿಂದ ಕ್ರಮೇಣ ದೂರವಾಗುತ್ತಾ ಅವಳನ್ನು ಒಂಟಿಯಾಗಿಸುತ್ತಾನೆ.
ತನ್ನ ಈ ಹೇಡಿತನದ ಮೂಲಕ ಅಕ್ಷರಸ್ಥ ಸೂರ್ಯ ಅನಕ್ಷರಸ್ಥನಾದ ತನ್ನ ತಂದೆಗಿಂತಲೂ ಹೆಚ್ಚಿನ ಲಂಪಟ ಮತ್ತು ಪಲಾಯನಾದಿ ಎಂದು ಸಾಬೀತುಪಡಿಸುತ್ತಾನೆ. ಲಕ್ಷ್ಮಿಯು ತಾನು ಹಂಬಲಿಸುವ ‘ಬೀಜಾಂಕುರ’ವು ಸೂರ್ಯನೊಂದಿಗೆ ಕೂಡಿಕೊಳ್ಳುವುದರ ಮೂಲಕ ಫಲಿಸುತ್ತದೆ. ಆದರೆ ಸೂರ್ಯನ ಹೇಡಿತನ ಮತ್ತು ಕ್ರೌರ್ಯವನ್ನು ಕ್ಲೆöÊಮಾಕ್ಸ್ನಲ್ಲಿ ಅತ್ಯಂತ ಸಮರ್ಥವಾಗಿ ಬಯಲುಗೊಳಿಸುವ ಬೆನೆಗಲ್ ಅದೇ ಸಂದರ್ಭದಲ್ಲಿ ಲಕ್ಷ್ಮಿಯ ಮಡುಗಟ್ಟಿದ ನೋವು, ಆಕ್ರಂದನ, ಹತಾಶೆಯನ್ನು ಸ್ಪೋಟಿಸಿಬಿಡುತ್ತಾರೆ. ತನ್ನ ಗಂಡ ‘ಕಿಶಿಯಾ’ನನ್ನು ಹಲ್ಲೆ ಮಾಡಲು ಬಂದನೆಂದು ಹಿಗ್ಗಾಮುಗ್ಗ ಥಳಿಸುವ ಜಮೀನ್ದಾರ ಸೂರ್ಯನ ವಿರುದ್ಧ ಲಕ್ಷಿö್ಮ ಬಂಡಾಯವೇಳುತ್ತಾಳೆ. ಸ್ತ್ರೀ ಶಕ್ತಿಯ ಎಲ್ಲಾ ಮಗ್ಗುಲುಗಳನ್ನು ಬಳಸಿಕೊಂಡು ಜೀವಸೆಲೆಯಾದ ನೈತಿಕತೆಯ ಬೆಂಬಲದೊಂದಿಗೆ ತನ್ನ ಒಳತೋಟಿಗೆ ಧ್ವನಿಯನ್ನು ನೀಡುವ ದಲಿತ ಮಹಿಳೆ ಲಕ್ಷ್ಮಿಯ ಬಂಡಾಯ ಎಲ್ಲಾ ಸ್ತ್ರೀ ಹೋರಾಟಗಳಿಗೆ ಅರ್ಥಪೂರ್ಣವಾದ ಮುಂದಾಳತ್ವವನ್ನು ಒದಗಿಸುತ್ತದೆ.
ತನ್ನ ಮೊದಲ ಸಿನಿಮಾದಲ್ಲಿಯೇ ಅಪಾರ ಪ್ರತಿಭೆಯನ್ನು ಹೊರಹೊಮ್ಮಿಸುವ ಶಬನಾ ಅಜ್ಮಿ ದಲಿತ ಮಹಿಳೆ ಲಕ್ಷ್ಮಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾಳೆ. ತನ್ನ ಮುಂದಿನ ಸಾರ್ಥಕ ಕಲಾ ಬದುಕಿಗೆ ಈ ಪಾತ್ರದ ಮೂಲಕ ಅರ್ಥಪೂರ್ಣ ಮುನ್ನುಡಿಯನ್ನು ಬರೆದ ಶಬನಾ ಅಜ್ಮಿ ಎಲ್ಲಿಯೂ ಕಿರುಚಾಡುವುದಿಲ್ಲ. ಭಾವಾವೇಶಕ್ಕೆ ಒಳಗಾಗುವುದಿಲ್ಲ. ತೆಳ್ಳಗಿನ ಕೆಲವೊಮ್ಮೆ ಕೀರಲು ಧ್ವನಿಯಲ್ಲಿ ಮಾತನಾಡುವ ಶಬನಾ ಲಕ್ಷ್ಮಿ ಪಾತ್ರಕ್ಕೆ ಘನತೆಯನ್ನು ತಂದುಕೊಡುತ್ತಾಳೆ. ಬೆಳ್ಳಿ ಪರದೆಯ ಮೇಲೆ ತನ್ನ ವ್ಯಕ್ತಿತ್ವದ ಒಂದು ಭಾಗವನ್ನೇ ನಟಿಸುತ್ತಿದ್ದೇನೆ ಎನ್ನುವಷ್ಟು ಲಕ್ಷ್ಮಿ ಪಾತ್ರದಲ್ಲಿ ಬೆರೆತುಹೋಗುವ ಶಬನಾ ನಿರ್ದೇಶಕ ಬೆನೆಗಲ್ ಅವರ ಆಶಯಗಳಿಗೆ ಯಶಸ್ವಿಯಾಗಿ ಸ್ಪಂದಿಸುತ್ತಾಳೆ. ಲಕ್ಷ್ಮಿ ಪಾತ್ರದ ತಬ್ಬಲಿತನವನ್ನು ನಿರ್ವಿಕಾರವಾಗಿ ಸಂಭಾಳಿಸುತ್ತಾ ಎಲ್ಲಾ ದಬ್ಬಾಳಿಕೆಗೆ ಮುಂದೊಂದು ದಿನ ನಾನು ತಕ್ಕ ಉತ್ತರ ನೀಡುತ್ತೇನೆ ಎನ್ನುವ ಆಳವಾದ, ತಣ್ಣಗಿನ ಭಾವದ ದಿಟ್ಟ ಅಭಿವ್ಯಕ್ತಿಯನ್ನು ತನ್ನ ಮೊದಲ ಸಿನಿಮಾದಲ್ಲಿಯೇ ಸಮರ್ಥವಾಗಿ ಪ್ರದರ್ಶಿಸಿದ ಶಬನಾ ಅಜ್ಮಿ ಮುಂದೆ ಹೊಸ ಅಲೆಯ ಸಿನಿಮಾಗಳ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಪಾತ್ರಗಳ ಒಳಹೊಕ್ಕು ತನ್ನ ಕಮಿಟ್ಮೆಂಟ್ನ ಮೂಲಕ ಅದನ್ನು ಪರದೆಯ ಮೇಲೆ ಪ್ರತಿನಿಧಿಸುವ ಶಬನಾ ಅಜ್ಮಿಯ ಕಲಾವಂತಿಕೆ, ಸರಳತೆ, ದಿಟ್ಟತೆ ಎಲ್ಲಾ ಹೆಣ್ಣುಮಕ್ಕಳಿಗೆ ಒಂದು ಆದರ್ಶ.
ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡುವ ಕನಸನ್ನು ಕಂಡ ಎಲ್ಲಾ ತರುಣ/ತರುಣಿಯರಿಗೆ ಆಂಕುರ್ ಸಿನಿಮಾ ಒಂದು ಅತ್ಯುತ್ತಮ ಪ್ರವೇಶಿಕೆ. ಗ್ರಾಮೀಣ ಸಮಾಜದ ಫ್ಯೂಡಲ್ ವ್ಯವಸ್ಥೆ, ಅಲ್ಲಿನ ಬೂರ್ಜ್ವದ ಗುಣಲಕ್ಷಣಗಳು, ಮೌಢ್ಯತೆ, ತಳಸಮುದಾಯಗಳ ಶೋಷಿತ ಬದುಕು, ಗಂಡು ಹೆಣ್ಣಿನ ಸಂಬಂಧಗಳು, ಕುಸಿದ ದಾಂಪತ್ಯ, ಜಾತಿ ಪದ್ಧತಿಯ ಅಸಮಾನತೆ ಎಲ್ಲಾ ಎಳೆಗಳನ್ನು ಒಂದೇ ಬಂಧದಲ್ಲಿ ದಟ್ಟವಾಗಿ ಪೋಣಿಸಿ ಚಿತ್ರಕತೆಯ ಆಶಯಕ್ಕೆ ಕಿಂಚಿತ್ತೂ ಧಕ್ಕೆ ಬರದಂತೆ ರೂಪಕಗಳ ಸಹಾಯದಿಂದ ನಿರೂಪಿಸುತ್ತ ಸಾಗುವ ಶ್ಯಾಮ್ ಬೆನೆಗಲ್ ಅವರ ನಿರ್ದೇಶನ ಎಲ್ಲ ಉದಯೋನ್ಮುಖ ಯುವಕ/ಯುವತಿಯರಿಗೆ ಅತ್ಯುತ್ತಮ ಪಠ್ಯ. ಸೌಂದರ್ಯ ಮತ್ತು ಮುಡುಗಟ್ಟಿದ ದುಖ ಎರಡನ್ನು ಏಕಕಾಲಕ್ಕೆ ನಿಸರ್ಗ, ಮನುಷ್ಯನನ್ನು ಬಳಸಿಕೊಂಡು ಅಭಿವ್ಯಕ್ತಿಸುವ ಕಲೆಗಾರಿಕೆಯನ್ನು ಹೊಸ ತರುಣ/ತರುಣಿಯರು ಆಂಕುರ್ ಸಿನಿಮಾದ ಮೂಲಕ ಕಲಿಯಬಹುದಾದ ಮತ್ತೊಂದು ಪಠ್ಯ.
ಇಡೀ ಸಿನಿಮಾದಲ್ಲಿ ಎಲ್ಲಿಯೂ ರಾಜಕೀಯ ಭಾಷೆಯನ್ನು ಮಾತನಾಡದ, ಜಾತಿ-ಫ್ಯೂಡಲ್ ವ್ಯವಸ್ಥೆಯ ಕ್ರೌರ್ಯ ಮತ್ತು ಹಿಂಸೆಯ ಕುರಿತಾಗಿ ಮಾತನಾಡದ ಆಂಕುರ್ ಸಿನಿಮಾದ ಮಿತಿಯನ್ನು ಆರು ವರ್ಷಗಳ ನಂತರ 1980ರಲ್ಲಿ ತಮ್ಮ ಮೊದಲ ನಿರ್ದೇಶನದ ಆಕ್ರೋಶ್ ಸಿನಿಮಾದ ಮೂಲಕ ಗೋವಿಂದ ನಿಹಾಲನಿ ನಿವಾರಿಸುತ್ತಾರೆ. ಆಂಕುರ್ ಸಿನಿಮಾದ ಆಶಯವನ್ನು ಮತ್ತಷ್ಟು ಆಳವಾಗಿ, ಸಮರ್ಥವಾಗಿ, ದಿಟ್ಟವಾಗಿ ಆಕ್ರೋಶ್ ತನ್ನೊಳಗಿನ ಜ್ವಾಲಾಮುಖಿಯನ್ನು ಹೊರಹಾಕುವುದರ ಮೂಲಕ ಹೇಳುತ್ತಾ ಹೊಗುತ್ತದೆ. ಇದೂ ಸಹ ಹೊಸ ತಲೆಮಾರಿನ ಯುವಕ/ಯುವತಿಯರಿಗೆ ಒಂದು ಪಠ್ಯ. ಮುಂದೆ ಸುಬ್ರಮಣ್ಯಪುರಂ ಮತ್ತು ಗ್ಯಾಂಗ್ಸ್ ಆಫ್ ವಸಾಯಿಪುರ ಸಿನಿಮಾಗಳು ಇದೇ ಆಶಯಗಳನ್ನು ಜಾಗತೀಕರಣಗೊಂಡ ಭಾರತದಲ್ಲಿ ಮತ್ತೊಂದು ಘಟ್ಟಕ್ಕೆ ಅನಾಮತ್ತಾಗಿ ಎತ್ತಿಕೊಂಡು ಮತ್ತೊಂದು ಲೋಕಕ್ಕೆ ನಮ್ಮನ್ನು ಸೆಳೆದುಕೊಂಡುಬಿಡುತ್ತವೆ.
ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಪುಟ್ಟ ಬಾಲಕನೊಬ್ಬ ಜಮೀನ್ದಾರ ಸೂರ್ಯನ ಮನೆಯ ಕಿಟಿಕಿಗೆ ಕಲ್ಲನ್ನು ಎಸೆದು ಅದನ್ನು ಪುಡಿಗೊಳಿಸುತ್ತಾನೆ. ಇದು ಮುಂದಿನ ತಲೆಮಾರಿನೊಳಗೆ ಬಂಡಾಯದ ಬೀಜಾಂಕುರದ ಸಂಕೇತ. ಒಂದು ರೂಪಕ. ವಿಶೇಷವೆಂದರೆ ಇಂಡಿಯಾದಲ್ಲಿ ಮುಂದಿನ ಇಪ್ಪತ್ತು ವರ್ಷಗಳ ಕಾಲ ತಯಾರಾದ ವಿಭಿನ್ನ ಮಾದರಿಯ ಹೊಸ ಅಲೆಯ ಸಿನಿಮಾಗಳಿಗೆ ಸಹ ಅಂಕುರ್ ಸಿನಿಮಾ ಒಂದು ಬೀಜಾಂಕುರ.
(ಬಿಸಿಲು ಬಯಲು ನೆಳಲು-ಹೊಸ ಅಲೆಯ ಸಿನಿಮಾ ಕುರಿತ ಕಥನ- ಪುಸ್ತಕದಿಂದ ಆಯ್ದ ಅಧ್ಯಾಯ, ಪ್ರಕಾಶನ: ಅಹರ್ನಿಶಿ)
ಇದನ್ನೂ ನೋಡಿ: ಮನುವಾದಿ ಅಮಿತ್ ಶಾ ವಜಾಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ Janashakthi Media