‘ಒಂದು ರಾಷ್ಟ್ರ, ಒಂದು ಚುನಾವಣೆ’ -ಪರ-ವಿರೋಧ ಚರ್ಚೆಗಳ ಸುತ್ತ

-ಸಿ.ಸಿದ್ದಯ್ಯ

ಬಹಳಷ್ಟು ವಿರೋಧದ ನಡುವೆಯೂ, ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024’ ಅನ್ನು ಲೊಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಡಿ ಇಟ್ಟಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರ ಮತ್ತು ವಿರೋಧ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಚರ್ಚೆಯಲ್ಲಿನ ಕೆಲವೊಂದು ವಾದಗಳ ಸತ್ಯ ಅಸತ್ಯಗಳ ಕುರಿತು ವಿಮರ್ಶಿಸುವ ಸಣ್ಣದೊಂದು ಪ್ರಯತ್ನ ಇಲ್ಲಿದೆ. ರಾಷ್ಟ್ರ

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು 129ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಡಿಸೆಂಬರ್ 17ರಂದು ಲೋಕಸಭೆಯಲ್ಲಿ ಮಂಡಿಸಿದರು. ಈ ವಿಷಯದ ಬಗ್ಗೆ ಮತ ಕೇಳಿದಾಗ 269 ಸದಸ್ಯರು ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಯನ್ನು ಬೆಂಬಲಿಸಿದರೆ, 198 ಸದಸ್ಯರು ವಿರೋಧಿಸಿದರು. ಮಸೂದೆ ಅಂಗೀಕಾರವಾಗಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಮಂಡನೆಯ ಹಂತದಲ್ಲಿಯೇ ತೀವ್ರ ವಿರೋಧ ವ್ಯಕ್ತವಾದ ಕಾರಣ, ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕಾಯಿತು. ರಾಷ್ಟ್ರ

ವಿಭಿನ್ನ ಸಂಸ್ಕೃತಿಗಳು ಮತ್ತು ಬಹುತ್ವವನ್ನು ಹೊಂದಿರುವ ಈ ದೇಶದಲ್ಲಿ ಒಂದೇ ಧರ್ಮ, ಒಂದೇ ರೀತಿಯ ತೆರಿಗೆ, ಒಂದೇ ರೀತಿಯ ಆಹಾರ ಮತ್ತು ಒಂದೇ ಭಾಷೆ (ಹಿಂದಿ) ಇರಬೇಕೆನ್ನುವ ಮೂಲಕ ಬಿಜೆಪಿಯು ಜನರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದೆ. ಈಗ ಪ್ರಾಯೋಗಿಕವಲ್ಲದ, ಅಗತ್ಯವಿಲ್ಲದ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ತರಲು ಒಕ್ಕೂಟ ಸರ್ಕಾರ ಮುಂದಾಗಿದೆ. ರಾಷ್ಟ್ರ

ಇದನ್ನೂ ಓದಿ: ‘ಕಣ್ಣೀರು ಅದೈರ್ಯದ ಸಂದೇಶ’ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಾಹಿತಿ ಬಾನು ಮುಷ್ತಾಕ್ ಪತ್ರ

ವಿರೋಧಿಸುವವರ ವಾದಗಳೇನು?

‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯು ಫೆಡರಲಿಸಂ ಸೇರಿದಂತೆ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ. ಇದು ‘ಒಂದು ನಾಯಕ, ಒಂದು ದೇಶ, ಒಂದು ಸಿದ್ಧಾಂತ’ದ ವಿಸ್ತರಣೆಯಾಗಿದೆ. ಮಸೂದೆಯ ನಿಬಂಧನೆಗಳು ಶಾಸಕಾಂಗದ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸುತ್ತಿವೆ. ಲೋಕಸಭೆಯ ಅಧಿಕಾರಾವಧಿಯಿಂದ ಶಾಸನ ಸಭೆಗಳ ಅವಧಿಯನ್ನು ನಿರ್ಧರಿಸಲಾಗುವುದಿಲ್ಲ, ಶಾಸಕಾಂಗಗಳು ಪ್ರತ್ಯೇಕವಾಗಿರುತ್ತವೆ. ಈ ಮಸೂದೆಯೊಂದಿಗೆ ಹೆಚ್ಚಿನ ಕೇಂದ್ರೀಕರಣವನ್ನು ಜಾರಿಗೆ ತರಲಾಗುತ್ತದೆ. ಚುನಾವಣೆಗಳನ್ನು ನಡೆಸುವ ಅಧಿಕಾರ ಮತ್ತು ವಿಧಾನಸಭೆಗಳ ಅವಧಿಯನ್ನು ಚುನಾವಣಾ ಆಯೋಗಕ್ಕೆ ಬಿಡಲಾಗಿದೆ. ಭಾರತ ಒಂದು ಗಣರಾಜ್ಯ. ರಾಷ್ಟ್ರ

ರಾಜ್ಯ, ಗ್ರಾಮ ಪಂಚಾಯಿತಿ, ಮಂಡಲ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಪುರಸಭೆ ಇವೆಲ್ಲವೂ  ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು. ಆದರೆ ಈ ಮಸೂದೆಯಿಂದ ಎಲ್ಲವನ್ನು ಕೊಂದು ಹಾಕಲಾಗುತ್ತಿದೆ. ಇವು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರಲಿವೆ. ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಮೂಲ ತತ್ವವಾದ ವಿಕೇಂದ್ರೀಕರಣದ ಮನೋಭಾವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಿರ್ಣಾಯಕ ‘ಸ್ಥಳೀಯತೆ’ ಕಣ್ಮರೆಯಾಗುತ್ತದೆ. ದೇಶದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ ಮತ್ತು ಅಧಿಕಾರದ ವಿಕೇಂದ್ರೀಕರಣವನ್ನು ಹೊಂದಿದೆ. ಈ ಮಸೂದೆಯಿಂದ ಬಹು ಸಂಸ್ಕೃತಿ, ಬಹು ಭಾಷೆಗಳನ್ನು ಹೊಂದಿರುವ ವೈವಧ್ಯಮಯ ಭಾರತದ ಹಿತಕ್ಕೆ ದಕ್ಕೆಯಾಗುತ್ತದೆ. ರಾಜ್ಯಗಳ ಮೇಲಿನ ಹಕ್ಕುಗಳನ್ನು ಕೇಂದ್ರವು ಕಸಿದುಕೊಳ್ಳುತ್ತದೆ. ರಾಷ್ಟ್ರೀಯ ಪಕ್ಷಗಳ ಏಕಾಧಿಪತ್ಯಕ್ಕೆ ಕಾರಣವಾಗುತ್ತದೆ. ಇದು ಪ್ರಾದೇಶಿಕ ಪಕ್ಷಗಳ ನಾಶಕ್ಕೆ ಕಾರಣವಾಗುತ್ತದೆ. ರಾಷ್ಟ್ರ

ಮುಂದಿನ ಐದು ವರ್ಷಗಳ ಕಾಲ ಸರ್ಕಾರಗಳ ಮೈತ್ರಿ ಮುಂದುವರಿಯುತ್ತದೆ ಎಂಬ ಭರವಸೆ ಇರುವುದಿಲ್ಲ. ಮಧ್ಯಂತರದಲ್ಲಿ ವಿಧಾನಸಭೆ ವಿಸರ್ಜನೆಗೊಂಡರೆ, ಅಥವಾ ಮುಂದಿನ ಲೋಕಸಭಾ ಚುನಾವಣೆಗೂ ಮುಂಚಿತವಾಗಿ 2 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ವಿಧಾನಸಭೆಯ ಅವಧಿ ಮುಗಿದರೆ, ಮುಂದಿನ ಸಂಸತ್ತಿನ ಸಾರ್ವತ್ರಿಕ ಚುನಾವಣೆಯವರೆಗೆ ಆ ರಾಜ್ಯದಲ್ಲಿ ಚುನಾವಣೆ ನಡೆಯುವುದಿಲ್ಲ. ಅಲ್ಲಿ ಹೊಸ ಸರ್ಕಾರವನ್ನು ತರುವ ಸಾಧ್ಯತೆ ಕಡಿಮೆ. ಅವಧಿಗೂ ಮುನ್ನ ಸರ್ಕಾರ ಉರುಳಿದರೆ, ಆ ನೆಪದಲ್ಲಿ ಕೃತಕವಾಗಿ ಅಧಿಕಾರ ವಿಸ್ತರಿಸುವುದೆಂದರೆ ಜನರ ಒಪ್ಪಿಗೆಯಿಲ್ಲದ ಆಡಳಿತ ಹೇರುವುದು ಎಂದರ್ಥ. ಈ ಮಸೂದೆಯನ್ನು ವಿರೋಧಿಸುವವರು ಇಂತಹ ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ರಾಷ್ಟ್ರ

ಮಸೂದೆ ಪರ ವಾದಗಳೇನು?

1) 1952ರಿಂದ 1962ರ ವರೆಗೂ ಏಕಕಾಲದಲ್ಲಿ ಚುನಾವಣೆ ಇತ್ತು. ಈಗ ವಿರೋಧ ಏಕೆ?: ನಿಜ. ಸ್ವಾತಂತ್ರ್ಯ ಬಂದ ಆರಂಭಿಕ ದಿನಗಳಲ್ಲಿ ಅಂದರೆ 1952, 1957, 1962 ಮತ್ತು 1967 ರಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳು ನಡೆದಿವೆ. ಅಂದು ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಪಾರಮ್ಯ ಮುಂದುವರಿದಿತ್ತು. 31 ಜುಲೈ 1959ರಲ್ಲಿ ಕೇರಳದಲ್ಲಿ ಮೊದಲ ಚುನಾಯಿತ ಕಮ್ಯುನಿಸ್ಟ್ ಸರ್ಕಾರವನ್ನು ಸಂವಿಧಾನದ 356ನೇ ವಿಧಿಯ ದುರುಪಯೋಗದ ಮೂಲಕ ಅಂದಿನ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ವಜಾಗೊಳಿಸಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 60 ಕ್ಷೇತ್ರಗಳಲ್ಲಿ ಗೆದ್ದಿತ್ತು ಮತ್ತು ಐದು ಸ್ವತಂತ್ರ ಸದಸ್ಯರ ಬೆಂಬಲ ಸೇರಿದಂತೆ 114 ಶಾಸಕರ ಪೈಕಿ 65 ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದರು. ಆದರೂ ಬಹುಮತದ ಸರ್ಕಾರವನ್ನು ವಜಾಗೊಳಿಸಿ, ಅಲ್ಲಿ ಮಧ್ಯಂತರ ಚುನಾವಣೆ ನಡೆಸಲಾಯಿತು. ನಂತರದಲ್ಲಿ ವಿರೋಧ ಪಕ್ಷಗಳ ಸರ್ಕಾರಗಳನ್ನು ಅನಿಯಂತ್ರಿತವಾಗಿ ವಿಸರ್ಜನೆ ಮಾಡಿದ್ದರಿಂದ ಎರಡರ ನಡುವೆ ಅಂತರ ಉಂಟಾಗಿತ್ತು. ರಾಷ್ಟ್ರ

1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಂಟು ರಾಜ್ಯಗಳ ವಿಧನಸಭಾ ಚುನಾವಣೆಯಲ್ಲಿ ಸೋಲನುಭವಿಸಿತ್ತು. ನಂತರ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದವು. 1989 ರಿಂದ 2014 ರವರೆಗೆ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಇಂದಿಗೂ ಸಹಾ, ಪ್ರಾದೇಶಿಕ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ಸಮ್ಮಿಶ್ರ ಸರ್ಕಾರಗಳು ನಡೆಯುತ್ತಿವೆ. ದೇಶದ ಭಿನ್ನ ಸಂಸ್ಕೃತಿಗಳು ಮತ್ತು ಐತಿಹಾಸಿಕ ಸನ್ನಿವೇಶಗಳಿಂದಾಗಿ ಬಹು ಪಕ್ಷಗಳು ಉಳಿದುಕೊಂಡಿವೆ. ಹೀಗಿರುವಾಗ, ಏಕಕಾಲಕ್ಕೆ ಚುನಾವಣೆ ಮೂಲಕ ಪ್ರಾದೇಶಿಕ ಪಕ್ಷಗಳನ್ನು ನಾಶಮಾಡಿ, ದೊಡ್ಡ ರಾಷ್ಟ್ರೀಯ ಪಕ್ಷವೊಂದರ ಏಕಸ್ವಾಮ್ಯ ಆಡಳಿತ ತರುವ ಹುನ್ನಾರ ಇದರಲ್ಲಿ ಅಡಗಿದೆ ಎಂದಾಗುತ್ತದೆಯಲ್ಲವೇ? ರಾಷ್ಟ್ರ

2) ಪದೇ ಪದೇ ನಡೆಯುವ ಚುನಾವಣೆ ಅಭಿವೃದ್ದಿಗೆ ಅಡ್ಡಿ: ಪದೇ ಪದೇ ಚುನಾವಣೆ ನಡೆಯುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತಿದೆ ಎಂಬುದು ಇವರ ವಾದ. ಇದಕ್ಕೆ, ಚುನಾವಣೆಗಳ ಸಮಯದಲ್ಲಿ ನೀತಿಸಂಹಿತೆ ಜಾರಿಯನ್ನು ಉಲ್ಲೇಖಿಸುತ್ತಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ,  ಹೆಚ್ಚೆಂದರೆ ಮೂರ್ನಾಲ್ಕು ತಿಂಗಳು ಇಡೀ ದೇಶಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಹಿಸುತ್ತದೆ. ಉಳಿದ ನಾಲ್ಕೂವರೆ ವರ್ಷಗಳ ಕಾಲ ಇಡೀ ದೇಶಕ್ಕೆ ಅನ್ವಹಿಸುವಂತೆ ನೀತಿಸಂಹಿತೆ ಇರುವುದಿಲ್ಲ. ಆ ಸಮಯದಲ್ಲಿ ಇಡೀ ದೇಶಕ್ಕೆ ಅನ್ವಹಿಸುವ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಬಹುದಲ್ಲವೇ? ರಾಷ್ಟ್ರ

ಅದೇ ರೀತಿ, ವಿಧಾನಸಭಾ ಚುನಾವಣೆಗಳು ನಡೆಯುವ ರಾಜ್ಯಗಳಿಗೆ ಸೀಮಿತವಾಗಿ ಒಂದೆರಡು ತಿಂಗಳು ಮಾತ್ರ ನೀತಿಸಂಹಿತೆ ಅನ್ವಹಿಸುತ್ತದೆ. ಇದು ಮತ್ತು ಲೋಕಸಭೆ ಚುನಾವಣೆ ಸೇರಿದಂತೆ ರಾಜ್ಯಗಳಿಗೆ ಐದು ವರ್ಷಗಳಲ್ಲಿ ಐದಾರು ತಿಂಗಳು ಮಾತ್ರ ನೀತಿ ಸಂಹಿತೆಯು ಅಭಿವೃದ್ದಿ ಯೋಜನೆಗಳ ಘೋಷಣೆಗೆ ಅಡ್ಡಿಬರುತ್ತದೆಯಷ್ಟೆ. ನಿಜವಾಗಿಯೂ ಜನಪರವಾದ ಅಭಿವೃದ್ಧಿ ಯೋಜನೆಗಳನ್ನು, ಜನಪರ ನೀತಿಗಳನ್ನು ಜಾರಿಗೊಳಿಸುವ ಬದ್ದತೆ ಸರ್ಕಾರಗಳಿಗೆ ಇದ್ದರೆ, ನೀತಿಸಂಹಿತೆ ಜಾರಿಯಲ್ಲಿಲ್ಲದ ಸಮಯದಲ್ಲಿ ಆ ಕೆಲಸ ಮಾಡಬಹುದಲ್ಲವೇ? ಚುನಾವಣಾ ಘೋಷಣೆ ಇನ್ನು ಕೆಲವೇ ದಿನಗಳು ಇವೆ ಎನ್ನುವಾಗಲೂ, ಮತದಾರರನ್ನು ಸೆಳೆಯಲು ಜನಪರ ನೀತಿಗಳ ಘೋಷಣೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಇಂತಹ ಘೋಷಣೆಗಳನ್ನು ಮಾಡಲೆಂದೇ, ಚುನಾವಣಾ ದಿನಾಂಕ ಪ್ರಕಟಿಸುವುದನ್ನು ತಡಮಾಡುವಂತೆ ಆಳುವ ಸರ್ಕಾರವು ಚುನಾವಣಾ ಆಯುಕ್ತರ ಮೇಲೆ ಪ್ರಭಾವ ಬೀರಿರುವ ಉದಾಹರಣೆಗಳೂ ಸಾಕಷ್ಟಿವೆ.

ಹಾಗಾದರೆ, ಯಾರ ಅಭಿವೃದ್ಧಿಗೆ ಅಡ್ಡಿ ಎಂಬ ಪ್ರಶ್ನೆ ಮೂಡುತ್ತದೆ. ಪದೇ ಪದೇ ನಡೆಯುವ ಚುನಾವಣೆಗಳು ಜನಪರ ಯೋಜನೆಗಳ ಘೋಷಣೆಗೋ, ಅಭಿವೃದ್ದಿ ಯೋಜನೆಗಳ ಜಾರಿಗೋ, ದೇಶದ ಅಭಿವೃದ್ಧಿಗೋ ಅಡ್ಡಿಯಾಗಿಲ್ಲ. ಬದಲಿಗೆ, ಜನತೆಗೆ ಸಂಕಷ್ಟಗಳನ್ನು ತರುವ ಜನವಿರೋಧಿ, ದೇಶವಿರೋಧಿ, ರೈತ ಮತ್ತು ಕಾರ್ಮಿಕ ವಿರೋಧಿಯಾದ ನವ ಉದಾರವಾದಿ ನೀತಿಗಳನ್ನು, ಹಿಂದುತ್ವವಾದಿ ನೀತಿಗಳನ್ನು ಜಾರಿಗೆ ತರಲು ಇಂತಹ ಚುನಾವಣೆಗಳು ಆಳುವವರಿಗೆ ಅಡ್ಡಿಯಾಗುತ್ತಿವೆ.  ಒಂದು ವೇಳೆ ಏಕಕಾಲಕ್ಕೆ ಚುನಾವಣೆ ಪದ್ದತಿ ಬಂದರೆ, ಸರ್ಕಾರ ಎಷ್ಟೇ ಜನವಿರೋಧಿ ನೀತಿಗಳನ್ನು ಜಾರಿಗೆ ತಂದರೂ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೆ ತಂದರೂ,  ಇದರಿಂದಾಗಿ ನೊಂದ ಜನರು ಆಳುವವರ ವಿರುದ್ದ ತಿರುಗಿ ಬಿದ್ದರೂ, ಐದು ವರ್ಷಗಳವರೆಗೆ ಸರ್ಕಾರವನ್ನು ಅಲುಗಾಡಿಸಲಾಗದ ಪರಿಸ್ಥಿತಿ ಬರುತ್ತದೆ. ರಾಷ್ಟ್ರ

ಉದಾಹರಣೆಗೆ: ಒಕ್ಕೂಟ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ತಂದಿತ್ತು. ಇದನ್ನು ವಿರೋಧಿಸಿ, ದೆಹಲಿ ಸೇರಿದಂತೆ ದೇಶದಲ್ಲೆಡೆ ನಡೆದ ರೈತರ ಹೋರಾಟಗಳಿಗೆ ಮಣಿದು ಕೇಂದ್ರ ಸರ್ಕಾರ ಆ ಮಸೂದೆಗಳನ್ನು ಹಿಂಪಡೆಯಿತು (ಇವುಗಳನ್ನು ಹಿಂಬಾಗಿಲಿನಿಂದ ಜಾರಿಗೆ ತರುತ್ತಿದೆ ಎಂಬುದು ಬೇರೆ ವಿಷಯ). ಈ ರೀತಿ ಮಸೂದೆಗಳನ್ನು ಹಿಂಪಡೆಯಲು ಪ್ರಮುಖ ಕಾರಣ ಮುಂದೆ ಬರಲಿದ್ದ ಕೆಲವು ರಾಜ್ಯಗಳ ಚುನಾವಣೆಗಳು. ಈ ಚುನಾವಣೆಗಳೇ ಇರದಿದ್ದರೆ ಅಂದರೆ, ಐದು ವರ್ಷಗಳ ಕಾಲ ದೇಶದಲ್ಲಿ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳೇ ಇಲ್ಲದಿದ್ದರೆ, ರೈತರ ಹೋರಾಟಕ್ಕೆ ಒಕ್ಕೂಟ ಸರ್ಕಾರ ಮಣಿಯದೆ, ರೈತ ವಿರೋಧಿಯಾದ ಆ ಮೂರು ಕೃಷಿ ಕಾಯ್ದೆಗಳನ್ನು ಖಂಡಿತವಾಗಿಯೂ ಹಿಂತೆಗೆಯದೆ ಜಾರಿಗೆ ತರುತ್ತಿತ್ತು. ಭಾರತದ ಕೃಷಿ ಕಾರ್ಪೊರೇಟ್ ಹಿಡಿತದ ಕಡೆಗೆ ಹೋಗುತ್ತಿತ್ತು. ಚುನಾವಣೆಗಳಲ್ಲಿ ಸೋಲುವ ಭೀತಿಯಿಂದಾಗಿಯೇ ಕಾರ್ಪೊರೇಟ್ ಕುಳಗಳ ಕೃಷಿ ವಲಯ ಮತ್ತು ಕೃಷಿ ಉತ್ಪನ್ನಗಳ ಮೇಲೆ ಮತ್ತಷ್ಟು ಹಿಡಿತ ಸಾಧಿಸುವ ‘ಅಭಿವೃದ್ಧಿ’ಯ ವೇಗಕ್ಕೆ ಅಡ್ಡಿಯಾಯಿತು ಎಂಬುದು ಇದರ ಅರ್ಥ.

3) ಚುನಾವಣಾ ವೆಚ್ಚ ಹೆಚ್ಚಾಗುತ್ತದೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವವು ಚುನಾವಣೆಗಾಗಿ ಮಾಡುವ ವೆಚ್ಚವನ್ನು ಅನಗತ್ಯ ವೆಚ್ಚ ಎಂದು ವಾದಿಸುವುದೇ ಸರಿಯಾದುದಲ್ಲ ಎಂಬುದನ್ನು ಹೇಳುತ್ತಲೇ, ಸರ್ಕಾರ ಚುನಾವಣೆಗಳಿಗಾಗಿ ಮಾಡುವ ವೆಚ್ಚಕ್ಕಿಂತ, ರಾಜಕೀಯ ಪಕ್ಷಗಳು ಮಾಡುವ ವೆಚ್ಚವೇ ಹೆಚ್ಚು. ಒಂದು ಮಾಹಿತಿಯ ಪ್ರಕಾರ ಚುನಾವಣೆಗಾಗಿ ಸರ್ಕಾರ ಮಾಡುವ ವೆಚ್ಚ ಐದಾರು ಸಾವಿರ ಕೋಟಿ ಮಾತ್ರ. ಸರ್ಕಾರವು ದೊಡ್ಡ ಬಂಡವಾಳಗಾರರ 15 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಿರುವುದು, ಶೇ. 8ರಷ್ಟು ಕಾರ್ಪೊರೇಟ್ ತೆರಿಗೆ ಕಡಿತದ ಮೂಲಕ ಸರ್ಕಾರಕ್ಕೆ ಬರಬೇಕಾದ ತೆರಿಗೆ ಆದಾಯ ವರ್ಷಕ್ಕೆ ಒಂದು ಲಕ್ಷ ಕೋಟಿಗೂ ಹೆಚ್ಚಿನ ನಷ್ಟ, ಪ್ರೋತ್ಸಾಹದ ಹೆಸರಿನಲ್ಲಿ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ಆರ್ಥಿಕ ನೆರವು ಇವುಗಳ ಮುಂದೆ ಸರ್ಕಾರ ಚುನಾವಣೆಗಾಗಿ ಮಾಡುವ ವೆಚ್ಚ ತೀರಾ ಸಣ್ಣ ಪ್ರಮಾಣದ್ದು.

ಒಟ್ಟಾರೆ ವೆಚ್ಚ 1.35 ಲಕ್ಷ ಕೋಟಿ ವೆಚ್ಚ!

ಅಭ್ಯರ್ಥಿಗಳ ವೆಚ್ಚಕ್ಕೆ ಸಂಬಂಧಿಸಿದಂತೆ, ಪ್ರತಿಯೊಬ್ಬ ಸ್ಪರ್ಧಿಯು ಲೋಕಸಭೆ ಕ್ಷೇತ್ರಗಳಿಗೆ 75-95 ಲಕ್ಷ (ಪ್ರದೇಶವನ್ನು ಅವಲಂಬಿಸಿ) ಮತ್ತು ವಿಧಾನಸಭಾ ಸ್ಥಾನಗಳಿಗೆ 28-40 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವಂತಿಲ್ಲ. ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಜಾಹೀರಾತುಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು, ವಾಹನಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಪ್ರತಿ ಅಭ್ಯರ್ಥಿಯು ಪ್ರಚಾರಕ್ಕಾಗಿ ಕಾನೂನುಬದ್ಧವಾಗಿ ಖರ್ಚು ಮಾಡಬಹುದಾದ ಮೊತ್ತವನ್ನು ಖರ್ಚು ಮಿತಿಗಳು ಉಲ್ಲೇಖಿಸುತ್ತವೆ.

ಆದರೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು (ಎಡ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಹೊರತುಪಡಿಸಿ) ಈ ಮಿತಿಯ ಹಲವು ಪಟ್ಟು ಹೆಚ್ಚು ವೆಚ್ಚ ಮಾಡುತ್ತಾರೆ. ಚುನಾವಣಾ ವೆಚ್ಚವನ್ನು ಟ್ರ್ಯಾಕ್ ಮಾಡುವ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (CMS) ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿನ ಒಟ್ಟಾರೆ ವೆಚ್ಚ 1.35 ಲಕ್ಷ ಕೋಟಿ. ಅಂದರೆ, 96 ಕೋಟಿ ಮತದಾರರಿರುವ ಭಾರತದಲ್ಲಿ ತಲಾ ಮತದಾರನಿಗೆ ಮಾಡಿದ ಸರಾಸರಿ ವೆಚ್ಚ 1,400 ರೂಪಾಯಿಗಳು. 2019 ರ ಚುನಾವಣೆಯಲ್ಲಿ 60,000 ಕೋಟಿ ಖರ್ಚು ಮಾಡಲಾಗಿದೆ.

ಬಿಜೆಪಿಯವರಿಂದಲೇ ಹೆಚ್ಚಿನ ವೆಚ್ಚ

ಚುನಾವಣೆಯಲ್ಲಿ ಅತ್ಯದಿಕ ಹಣವನ್ನು ಖರ್ಚು ಮಾಡುವ ಬಿಜೆಪಿಯವರೇ ‘ಅನಗತ್ಯ ವೆಚ್ಚ’ ಎಂಬ ಮಾತುಗಳನ್ನು ಹೇಳುತ್ತಾರೆ. 2024ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮಾಡಿದ ವೆಚ್ಚದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಬಿಜೆಪಿ ಒಂದೇ ಮಾಡಿದೆ. ಚುನಾವಣಾ ಬಾಂಡ್ ಮೂಲಕ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು  ಪಡೆದ ಒಟ್ಟು ದೇಣಿಗೆಯಲ್ಲಿ ಶೇ. 60ರಷ್ಟು ದೇಣಿಗೆಯನ್ನು ಬಿಜೆಪಿ ಒಂದೇ ಪಡೆದಿರುವುದು ಇದಕ್ಕೆ ಒಂದು ಸಾಕ್ಷಿಯಾಗಿದೆ.

ಕಮ್ಯೂನಿಸ್ಟ್ ಪಕ್ಷಗಳು ಮಾತ್ರವೇ ಚುನಾವಣಾ ಬಾಂಡ್ ಪಡೆಯಲಿಲ್ಲ, ಮಾತ್ರವಲ್ಲ, ಕಮ್ಯೂನಿಸ್ಟರು ಮಾತ್ರವೇ ಸಿದ್ದಾಂತದ ಆಧಾರದಲ್ಲಿ, ತಾವು ಅನುಸರಿಸುವ ನೀತಿ, ನಿಲುವುಗಳ ಆಧಾರದಲ್ಲಿ ಮತದಾರರ ಬಳಿ ಹೋಗಿ ಮತ ಯಾಚಿಸುತ್ತವೆ. ಹಣ ಕೊಡುವ ಅಥವಾ ಮತ್ಯಾವುದೇ ಅಕ್ರಮ ರೀತಿಯಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವುದಿಲ್ಲ. ಚುನಾವಣಾ ವೆಚ್ಚಕ್ಕಾಗಿ ಜನರ ಬಳಿಯೇ ಹಣ ಸಂಗ್ರಹಿಸುತ್ತವೆ. ಎಲ್ಲಾ ಪಕ್ಷಗಳು ಇದನ್ನು ಅನುಸರಿಸಿದರೆ, ಚುನಾವಣಾ ವೆಚ್ಚ ತೀರಾ ಕಡಿಮೆಯಾಗುತ್ತದೆ. ಆದರೆ, ಬಂಡವಾಳಶಾಹಿ ಪಕ್ಷಗಳ ಬಳಿ ಜನಪರವಾದ ನೀತಿ, ನಿಲುವುಗಳಿಲ್ಲ. ಅವು ತಮ್ಮ ಉದಾರವಾದಿ  ಪರವಾದ  ನೀತಿ ನಿಲುವುಗಳನ್ನು ಸಂಪೂರ್ಣವಾಗಿ ಬಹಿರಂಗ ಪಡಿಸುವುದಿಲ್ಲ. ಅವುಗಳು ದೊಡ್ಡ ಬಂಡವಾಳಗಾರರ ಬಾಲಂಗೋಚಿಗಳು. ಹಾಗಾಗಿ ಜನರ ಬಳಿ ಹೇಳಿಕೊಳ್ಳುವಂತಹ ಜನಪರ ಯೋಜನೆಗಳು ಇರುವುದಿಲ್ಲ. ಚುನಾವಣಾ ಆಮಿಷಗಳ ಮೂಲಕ, ಸುಳ್ಳುಗಳ ಅಬ್ಬರದ ಪ್ರಚಾರದ ಮೂಲಕ, ಬಂಡವಾಶಾಹಿ ಪಕ್ಷಗಳು ಪ್ರಜಾಪ್ರಭುತ್ವ ಕುರಿತಂತೆ ಜನರಲ್ಲಿರುವ ಅರಿವುಗಳ ಕೊರತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ.

ಪದೇ ಪದೇ ನಡೆಯುವ ಚುನಾವಣೆಗಳಿಂದ ಜನಜೀವನಕ್ಕೆ ಅಡ್ಡಿಯುಂಟಾಗುತ್ತದೆ, ಅವರನ್ನು ಜೀವನದ ಮುಖ್ಯ ಚಟುವಟಿಕೆಗಳಿಂದ ವಿಮುಖರನ್ನಾಗುವಂತೆ ಮಾಡುತ್ತದೆ ಎಂಬುದೊಂದು ವಾದ. ದೇಶದಲ್ಲಿ ನಿರುದ್ಯೋಗದಿಂದ ಬಳಲುತ್ತಿರುವ ಕೋಟ್ಯಾಂತರ ಜನರ ಕುರಿತು ಇದೇ ರೀತಿ ಚಿಂತನೆ ಮಾಡಿ, ಅವರನ್ನು ಉದ್ಯೋಗಿಗಳನ್ನಾಗಿ ಮಾಡಿ ಅಭಿವೃದ್ದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಇಂತಹ ನಿರುದ್ಯೋಗದ ಕಾರಣದಿಂದಲೇ ಐದು ವರ್ಷಗಳ ಅವಧಿಯಲ್ಲಿ ಬರುವ ಮೂರ್ನಾಲ್ಕು ಚುನಾವಣೆಗಳಲ್ಲಿ (ಲೋಕಸಭೆ, ವಿಧಾನಸಭೆ ಮತ್ತು ಸ್ಥಳೇಯ ಸಂಸ್ಥೆಗಳ ಚುನಾವಣೆಗಳು) ಕೆಲವೇ ಸಮಯ ಭಾಗಿಯಾಗಲು ಯುವಜನರು ಮುಂದೆ ಬರುತ್ತಾರೆ.

ಇವರನ್ನೇ, ರಾಜಕೀಯ ಪುಡಾರಿಗಳು, ನಿರುದ್ಯೋಗಿಗಳು, ಪದೇ ಪದೇ ಚುನಾವಣೆ ನಡೆಯುವುದನ್ನು ಬಯಸುತ್ತಾರೆ ಎಂದೆಲ್ಲಾ ಏಕಕಾಲಿಕ ಚುನಾವಣೆಯನ್ನು ಬೆಂಬಲಿಸುವ ಸಂಘಪರಿವಾರದ ಅನುಯಾಯಿಗಳು ಹೀಯಾಳಿಸತೊಡಗಿದ್ದಾರೆ.  ಆದರೆ, ಚುನಾವಣೆಯಲ್ಲಿ ಇಂತಹ ನಿರುದ್ಯೋಗಿಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುವ ಇತ್ತೀಚಿನ ಪಕ್ಷ ಎಂದರೆ, ಅದು ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ಆರೆಸ್ಸೆಸ್. ಏಕೆಂದರೆ, ಹೆಚ್ಚು ಚುನಾವಣಾ ನಿಧಿ ಸಂಗ್ರಹ ಮಾಡುವ ಮತ್ತು ಹೆಚ್ಚು ಹಣ ಖರ್ಚು ಮಾಡುವ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಅಂದರೆ, ಇವರು ಹೇಳುತ್ತಿರುವ ರಾಜಕೀಯ ಪುಡಾರಿಗಳು, ನಿರುದ್ಯೋಗಿಗಳಲ್ಲಿ ಬಿಜೆಪಿ ಬೆಂಬಲಿಗರೇ ಹೆಚ್ಚಿರುತ್ತಾರೆ.

ವಿಶ್ವದ ಹಲವು ದೇಶಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುತ್ತವೆ: ಇಲ್ಲಿ ನಡೆಸುವುದರಿಂದ ತಪ್ಪೇನಿದೆ? ಇವರು ಈ ವಾದವನ್ನೂ ಮಾಡುತ್ತಾರೆ. ಭಾರತದಲ್ಲಿ ಇರುವಷ್ಟು ಭಾಷೆಗಳು ಮತ್ತು ವೈವಿಧ್ಯತೆಯನ್ನು ಹೊಂದಿರುವ ಯಾವುದೇ ದೇಶಗಳು ಜಗತ್ತಿನಲ್ಲಿಲ್ಲ. ಭಾರತದ ನಗರಗಳಿಗಿಂತ ತೀರಾ ಚಿಕ್ಕದಾದ, ಕಡಿಮೆ ಜನಸಂಖ್ಯೆ ಇರುವ, ಒಂದೇ ಭಾಷೆ, ಒಂದೇ ಸಂಸ್ಕೃತಿ ಇರುವ ದೇಶಗಳ ಚುನಾವಣೆಗೆ ಭಾರತದ ಚುನಾವಣೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ.

ಇಂತಹ ಸುಳ್ಳು ಕಥೆಗಳು ಹೊಸದೇನಲ್ಲ

ಒಟ್ಟಾರೆ ಹೇಳುವುದಾದರೆ, ಬಿಜೆಪಿ ನೇತೃತ್ವದ ಸರ್ಕಾರ ಜನವಿರೋದಿಯಾದ ತಮ್ಮ ನೀತಿ ನಿಲುವುಗಳನ್ನು ಜಾರಿಗೆ ತರುವ ಸಂದರ್ಭಗಳಲ್ಲೆಲ್ಲಾ, ಮತ್ತು ಸಂಘಪರಿವಾರವು ಇಂತಹ ಸುಳ್ಳು ಕಥೆಗಳನ್ನು ಕಟ್ಟಿ ಜನರ ಬೆಂಬಲ ಪಡೆಯಲು ಮತ್ತು ಅವುಗಳಿಗೆ ಇರುವ ವಿರೋಧದ ಮಟ್ಟವನ್ನು ತಗ್ಗಿಸಲು ಪ್ರಯತ್ನಿಸುತ್ತದೆ. 500 ಮತ್ತು 1000 ಮುಖಬೆಲೆಯ ನೋಟುಗಳ ರದ್ದತಿ, ಜಿಎಸ್ ಟಿ ಜಾರಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ  370ನೇ ವಿಧಿ ರದ್ದು, ಮೂರು ಕೃಷಿ ಕಾಯ್ದೆಗಳನ್ನು ತಂದಾಗ ರೈತರ ಹೋರಾಟವನ್ನು ಹತ್ತಿಕ್ಕಲು, ತ್ರಿವಳಿ ತಲಾಖ್ ಸಂಬಂಧಿಸಿದ ಕಾನೂನು, ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದದ ಸಂದರ್ಭ, ಅಡುಗೆ ಅನಿಲದ ಮೇಲಿನ ಸಬ್ಸಿಡಿ ರದ್ದು ಮಾಡಲು,… ಈ ಸಂದರ್ಭಗಳಲ್ಲೆಲ್ಲಾ ಸಂಘಪರಿವಾರದವರು, ಇವೆಲ್ಲವೂ ಜನರ ಹಿತಕ್ಕಾಗಿ ಎನ್ನುತ್ತಾ ಏನೆಲ್ಲಾ ಕಥೆಗಳನ್ನು ಕಟ್ಟಿ ಜನರ ನಡುವೆ ಹರಡಿದರು ಎಂಬುದನ್ನು ನೆನಪಿಸಿಕೊಂಡಾಗ ಮಾತ್ರ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರವಾದ ಅವರ ವಾದಗಳು ಎಷ್ಟು ವಂಚನೆಗಳಿಂದ ಕೂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ನವ ಉದಾರವಾದಿ ನೀತಿಗಳನ್ನು ಒಪ್ಪಿಕೊಂಡು ಮೂರು ದಶಕಗಳು ಕಳೆದರೂ, ವಿಶ್ವ ಬ್ಯಾಂಕ್ ಮತ್ತು ವಿಶ್ವ ವಾಣಿಜ್ಯ ಸಂಸ್ಥೆ ಪ್ರೇರಿತ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಭಾರತದ ಆಳುವ ವರ್ಗಕ್ಕೆ ಸಾಧ್ಯವಾಗಿಲ್ಲ. ಈ ನೀತಿಗಳ ಜಾರಿಯ ಕಾರಣದಿಂದಾಗಿಯೇ ಹಿಂದೆ ಆಳುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಇದೇ ಕಾರಣದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಕೆಳಗೆ ತಳ್ಳಿದ್ದಾರೆ. ಜನರು ಚುನಾವಣೆ ಮೂಲಕ ವ್ಯಕ್ತಪಡಿಸುವ ಇಂತಹ ಅಭಿಪ್ರಾಯಗಳು ನವ ಉದಾರವಾದಿ ನೀತಿಗಳನ್ನು ಜಾರಿ ಮಾಡಲು ಆಳುವ ವರ್ಗಕ್ಕೆ ಅಡ್ಡಿಯಾಗಿವೆ. ಇದನ್ನು ನಿವಾರಿಸಲೆಂದೇ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಯತ್ನಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರದ ಸ್ಥಿರತೆಯ ಜಪವು ಹೆಚ್ಚು ಅಸ್ಥಿರತೆ ಮತ್ತು ಹೆಚ್ಚು ಆರ್ಥಿಕ ಹೊರೆಗೆ ಕಾರಣವಾಗುತ್ತದೆ. ಜೊತೆಗೆ, ಏಕರೂಪದ ಬಹುಸಂಖ್ಯಾತ ಧಾರ್ಮಿಕ ನಿರಂಕುಶಾಧಿಕಾರಕ್ಕಾಗಿ ಹಿಂದುತ್ವವಾದಿಗಳು ಆತೊರೆಯುತ್ತಿದ್ದಾರೆ. ಜನರು ಇದನ್ನು ತಡೆಯುವ ಪ್ರಯತ್ನ ಮಾಡಬೇಕಿದೆ.

ಇದನ್ನೂ ನೋಡಿ: ತುಮಕೂರು ರಸ್ತೆಯ ತಾಳೇಕೇರಿ ಬಳಿ ಭೀಕರ ಅಪಘಾತ Janashakthi Media

Donate Janashakthi Media

Leave a Reply

Your email address will not be published. Required fields are marked *