-ಪಿ. ಕೃಷ್ಣಪ್ರಸಾದ್
-ಅನು: ಎಚ್.ಆರ್. ನವೀನ್ ಕುಮಾರ್
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ರೈತರ ಹೋರಾಟವು ಭೂಮಿಯ ಹಕ್ಕಿನ ನಿರ್ಣಾಯಕ ಸಮಸ್ಯೆಯನ್ನು ರಾಷ್ಟ್ರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಇದು ಒಂದು ಕಡೆ ರೈತರು ಮತ್ತು ಭೂರಹಿತ ಗ್ರಾಮೀಣ ಕೂಲಿಕಾರರು ಇನ್ನೊಂದೆಡೆ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಇವೆರಡರ ನಡುವಿನ ನೇರ ಸಂಘರ್ಷವಾಗಿದೆ. ಭೂಮಿ
ಉತ್ತರ ಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲಿ ಯಮುನಾ ಎಕ್ಸ್ ಪ್ರೆಸ್‌ವೇ, ಜೇವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಯುಪಿಎಸ್‌ಐಡಿಸಿ ಸೇರಿದಂತೆ ವಿವಿಧ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಂಡಿರುವ ಫಲವತ್ತಾದ ಭೂಮಿಗೆ ಸರಿಯಾದ ಪರಿಹಾರ ಮತ್ತು ಪರ್ಯಾಯ ಜೀವನೋಪಾಯವನ್ನು ರೂಪಿಸಬೇಕೆಂದು ರೈತರು ಹೋರಾಟ ನಡೆಸುತ್ತಿದ್ದಾರೆ. ರೈತ ಚಳುವಳಿ ಎತ್ತಿರುವ ಸ್ಪಷ್ಟ ಬೇಡಿಕೆಗಳಿಂದಾಗಿ ಭೂಮಿಯ ಹಕ್ಕಿಗಾಗಿನ ಈ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರು ಭಾಗವಹಿಸುತ್ತಿರುವುದು ಮತ್ತು ಸ್ಥಿರವಾಗಿ ನಿಂತಿರುವುದು ಸ್ಪಷ್ಟವಾಗಿದೆ.
ಬೆಳೆಯುತ್ತಿರುವ ದೆಹಲಿ ಮತ್ತು ನೋಯ್ಡಾ ರಾಜಧಾನಿಗಳ ನಡುವೆ ನಡೆಯುತ್ತಿರುವ ಈ ಹೋರಾಟವು ರಾಜಕೀಯ ಪ್ರಸ್ತುತತೆಯನ್ನು ಹೊಂದಿದೆ ಮತ್ತು ಭಾರತೀಯ ಕಾರ್ಪೊರೇಟ್ ಶಕ್ತಿಗಳ ಅಮಾನವೀಯ ಮುಖವನ್ನು ಬಹಿರಂಗಪಡಿಸುತ್ತದೆ. ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರ ನಾಯಕತ್ವದ ಯೋಜಿತ ಮದ್ಯಪ್ರವೇಶದಿಂದಾಗಿ ನೋಯ್ಡಾದಲ್ಲಿನ ರೈತ ಹೋರಾಟಗಳು ಸ್ಥಿರವಾಗಿವೆ. ಕಿಸಾನ್ ಸಭಾದ ರಾಷ್ಟ್ರೀಯ ನಾಯಕತ್ವವು ಸಕ್ರಿಯವಾಗಿ ಈ ಹೋರಾಟದ ಬೆಂಬಲಕ್ಕೆ ನಿಂತಿದೆ. ಕಳೆದ ವರ್ಷ ನಡೆದ ಬೃಹತ್ ಪ್ರತಿಭಟನೆಗಳಿಂದಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ | ಸರ್ಕಾರಿ ಶಾಲೆಗಳನ್ನು ಬಲಪಡಿಸಿ – ಗೊ.ರು ಚನ್ನಬಸಪ್ಪ
ಈ ಸಮಿತಿಯ ಶಿಫಾರಸ್ಸಿನಂತೆ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ಶೇ. 10ರಷ್ಟನ್ನು ರೈತರಿಗೆ ಹಿಂದಿರುಗಿಸುವುದು; ಸುಪ್ರಿಂ ಕೋರ್ಟ್ ಅನುಮೋದಿಸಿದಂತೆ ಶೇ. 64.7 ರ ಹೆಚ್ಚಿನ ಪರಿಹಾರವನ್ನು ಒದಗಿಸುವುದು; ಉತ್ತರ ಪ್ರದೇಶದಲ್ಲಿ 2017ರಿಂದ ನವೀಕರಿಸದ ಭೂಮಿಯ ದರದ ನಿಯಮಿತ ಪರಿಷ್ಕರಣೆ ಮತ್ತು ಭೂರಹಿತ ಕುಟುಂಬಗಳಿಗೆ ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸುವುದು. ಈ ಶಿಫಾರಸ್ಸುಗಳನ್ನು ಯೋಗಿ ಆದಿತ್ಯನಾಥ್ ಅವರ ‘ಡಬಲ್ ಇಂಜಿನ್’ ಸರ್ಕಾರವು ತರಲು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸಿ ಗೆಲುವು ಸಾಧಿಸುವವರೆಗೆ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಲು ರೈತರು ನಿರ್ಧರಿಸಿದ್ದಾರೆ.
ಅಹೋರಾತ್ರಿ ಪ್ರತಿಭಟನೆಗಳು ನಡೆದವು
25 ನವೆಂಬರ್ 2024 ರಂದು ಹತ್ತಕ್ಕೂ ಹೆಚ್ಚು ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಡಿಯಲ್ಲಿ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಆವರಣದಲ್ಲಿ ಮಹಾಪಂಚಾಯತ್ ಅನ್ನು ಆಯೋಜಿಸಿದವು. ಈ ಹೋರಾಟದಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು. ಮಹಾಪಂಚಾಯತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿತು. ಉತ್ತರ ಪ್ರದೇಶ ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಪರಿಹರಿಸುವಲ್ಲಿ ವಿಫಲವಾದರೆ, ರೈತರು ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಡಿಸೆಂಬರ್ 2, 2024 ರಂದು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಎಚ್ಚರಿಸಿದರು.
ನವೆಂಬರ್ 26 ರಿಂದ 28 ರವರೆಗೆ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಮುಂದೆ ಮತ್ತು ನವೆಂಬರ್ 29-ಡಿಸೆಂಬರ್ 1 ರವರೆಗೆ ನೋಯ್ಡಾ ಪ್ರಾಧಿಕಾರದ ಮುಂದೆ ಅಹೋರಾತ್ರಿ ಪ್ರತಿಭಟನೆಗಳು ನಡೆದವು. ಆದಾಗ್ಯೂ, ಈ ಹಂತದಲ್ಲಿ ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡದೆ ರೈತರ ನಾಯಕತ್ವದೊಂದಿಗೆ ಯಾವುದೇ ಮಾತುಕತೆ ನಡೆಸಲಿಲ್ಲ.
ಮೂರು ತಡೆಗೋಡೆಗಳನ್ನು ದಾಟಿ ಮುಂದೆ ಸಾಗಿದರು
ಡಿಸೆಂಬರ್ 2 ರಂದು, ಸಾವಿರಾರು ರೈತರು ದೆಹಲಿಗೆ ಮೆರವಣಿಗೆ ಮಾಡಲು ಮಹಾಮಾಯಾ ಫ್ಲೈಓವರ್‌ನಲ್ಲಿ ಜಮಾಯಿಸಿದರು. ಪೊಲೀಸ್ ಬ್ಯಾರಿಕೇಡ್‌ಗಳ ನಡುವೆಯೂ ಅವರು ಮೂರು ತಡೆಗೋಡೆಗಳನ್ನು ದಾಟಿ ಮುಂದೆ ಸಾಗಿದರು. ಇದರಿಂದ ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಹಂತದಲ್ಲಿಯೇ ಉತ್ತರ ಪ್ರದೇಶದ ಆಡಳಿತವು ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿತು. ರೈತರ ಬೇಡಿಕೆಗಳನ್ನು ಈಡೇರಿಸಲು ಏಳು ದಿನಗಳೊಳಗೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅವರು ಭೇಟಿ ಮಾಡುವುದಾಗಿ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದರು. ಈ ಭರವಸೆಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ರೈತರ ನಾಯಕತ್ವವು ನೋಯ್ಡಾದ ದಲಿತ ಪ್ರೇರಣಾ ಸ್ಥಳ, ಡಾ ಅಂಬೇಡ್ಕರ್ ಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ನಡೆಸುವಂತೆ ಪ್ರತಿಭಟನೆಯನ್ನು ಬದಲಾಯಿಸಿತು, ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.
160 ರೈತರನ್ನು ಜೈಲಿಗೆ ಕಳುಹಿಸಲಾಯಿತು
ಡಿಸೆಂಬರ್ 3 ರಂದು, ರೈತರ ನಂಬಿಕೆಯನ್ನು ಉಲ್ಲಂಘಿಸಿ, ಆಡಳಿತವು ಸುಮಾರು 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸುಮಾರು 100ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಸುಮಾರು 300 ಪ್ರತಿಭಟನಾಕಾರರನ್ನು ಧರಣಿ ಸ್ಥಳದಿಂದ ಬಲವಂತವಾಗಿ ಹೊರಹಾಕಿತು. ಮಹಿಳಾ ರೈತರ ಮೇಲೂ ಪುರುಷ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ನಡೆಸಿದರು. ಧರಣಿ ಸತ್ಯಾಗ್ರಹ ಜಾಮೀನು ಪಡೆಯಬಹುದಾದ ಅಪರಾಧವಾಗಿದ್ದರೂ, 160 ರೈತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ನೇರವಾಗಿ ಲುಕ್ಸಾರ್ ಜೈಲಿಗೆ ಕಳುಹಿಸಲಾಯಿತು. ಹೋರಾಟದ ಪ್ರಮುಖ ನಾಯಕರಾದ ರೂಪೇಶ್ ವರ್ಮಾ (ಎಐಕೆಎಸ್ ನ ಜಿಲ್ಲಾಧ್ಯಕ್ಷ), ಸುಖಬೀರ್ ಖಲೀಫಾ, ಸುನಿಲ್ ಫೌಜಿ ಮತ್ತು ಪವನ್ ಖಾತಾನಾ ಅವರನ್ನು ಜೈಲಿಗೆ ಹಾಕಲಾಯಿತು. ಮಹಿಳಾ ರೈತರು ಮತ್ತು ಹಿರಿಯರನ್ನು ಬಿಡುಗಡೆಗೊಳಿಸಿದಾಗ, ಮರುದಿನ ಬೆಳಿಗ್ಗೆ ಪೊಲೀಸರು “ಗೃಹಬಂಧನ” ಎಂಬ ನೆಪದಲ್ಲಿ ಮನೆಗಳಿಗೆ ಅತಿಕ್ರಮವಾಗಿ ನುಗ್ಗಿ, ರೈತರನ್ನು ಬಂದಿಸಲಾಯಿತು. ಸಾಮೂಹಿಕ ಪ್ರತಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸಿದ ಪೊಲೀಸರು ಕಾರ್ಯಕರ್ತರನ್ನು ವ್ಯಾಪಕವಾಗಿ ವಶಕ್ಕೆ ತೆಗೆದುಕೊಂಡು ಹಳ್ಳಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದರು.
ಪೊಲೀಸ್ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಲು ಮಹಾಪಂಚಾಯತ್‌ಗೆ ಕರೆ
ಉತ್ತರ ಪ್ರದೇಶದ ಪ್ರಮುಖ ರೈತ ಸಂಘಟನೆ, ಬಿಕೆಯು (ಟಿಕಾಯತ್) ಪೊಲೀಸ್ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಲು ಯಮುನಾ ಎಕ್ಸ್ ಪ್ರೆಸ್‌ವೇಯ ಝೀರೋ ಪಾಯಿಂಟ್‌ನಲ್ಲಿ ಡಿಸೆಂಬರ್ 4 ರಂದು ಮಹಾಪಂಚಾಯತ್‌ಗೆ ಕರೆ ನೀಡಿತು. ಮಹಾಪಂಚಾಯತ್‌ಗೆ ಅವಕಾಶ ನೀಡದಿರಲು ಯೋಗಿ ಆದಿತ್ಯನಾಥ್ ಆಡಳಿತ ನಿರ್ಧರಿಸಿತ್ತು. ಟಿಕಾಯತ್ ಕಾಲ್ನಡಿಗೆಯಲ್ಲಿ ಹೆದ್ದಾರಿಯನ್ನು ತಲುಪಲು ಪ್ರಯತ್ನಿಸಿದಾಗ ಅಲಿಗಢ ಪೊಲೀಸರು ರಾಕೇಶ್ ಟಿಕಾಯತ್ ರನ್ನು ಬಲವಂತವಾಗಿ ಬಂಧಿಸಿದರು. ಎಸ್‌ಕೆಎಂ ನಾಯಕ ತಜೀಂದರ್ ಸಿಂಗ್ ವಿರ್ಕ್ ಮತ್ತು ಇತರ ಕಾರ್ಯಕರ್ತರನ್ನು ಖಾರ್ಕತ್ ಪೊಲೀಸ್ ಠಾಣೆಯಲ್ಲಿ ಮೂರು ಗಂಟೆಗಳ ಕಾಲ ಬಂಧನದಲ್ಲಿಡಲಾಯಿತು.
ರಾಜ್ಯ ಸರ್ಕಾರದ ಎಲ್ಲಾರೀತಿಯ ಅಡೆತಡೆಗಳ ಹೊರತಾಗಿಯೂ, ಸುಮಾರು 5,000 ರೈತರು ಮಹಾಪಂಚಾಯತ್ ನಲ್ಲಿ ಸೇರಲು ಯಶಸ್ವಿಯಾದರು. ಸಿಐಟಿಯು ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಎಐಕೆಎಸ್ ಮುಖಂಡರಾದ ಹನ್ನನ್ ಮೊಲ್ಲಾ, ವಿಜೂ ಕೃಷ್ಣನ್, ಪಿ. ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ಆಡಳಿತವು ಎಲ್ಲ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡದಿದ್ದರೆ, ರೈತರು ನೋಯ್ಡಾದ ಡಾ ಅಂಬೇಡ್ಕರ್ ಪಾರ್ಕ್ ಗೆ ಮೆರವಣಿಗೆ ನಡೆಸಿ ಅಹೋರಾತ್ರಿ ಧರಣಿ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಮಹಾಪಂಚಾಯತ್ ಘೋಷಿಸಿತು.
ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಿದ ಆಡಳಿತವು ಎಲ್ಲಾ ಜೈಲಿನಲ್ಲಿರುವ ರೈತರನ್ನು ಸಂಜೆ 4:30 ರೊಳಗೆ ಬಿಡುಗಡೆ ಮಾಡಲು ನಿರ್ಧರಿಸಿತು. ಬಿಡುಗಡೆಯಾದ ರೈತರನ್ನು ಸ್ಫೂರ್ತಿದಾಯಕ ಘೋಷಣೆಗಳು, ಸಂಭ್ರಮಾಚರಣೆಗಳ ನಡುವೆ ಸ್ವಾಗತಿಸಲಾಯಿತು. ಈ ಮಹತ್ವದ ವಿಜಯವು ನಿರಂಕುಶಾಧಿಕಾರದ ಮೇಲೆ ಪ್ರಜಾಪ್ರಭುತ್ವದ ವಿಜಯವನ್ನು ಗುರುತಿಸಿತು. ಇದನ್ನು ವೈಯಕ್ತಿಕ ಸೋಲು ಎಂದು ಭಾವಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೌತಮ್ ಬುದ್ಧ ನಗರ ಮತ್ತು ಅಲಿಗಢದಲ್ಲಿ “ಅರಾಜಕತೆ” ಹರಡಲು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಜೈಲ್ ಭರೋ ಚಳವಳಿ ಘೋಷಣೆ
ಇದಕ್ಕೆ ಪ್ರತೀಕಾರವಾಗಿ ಡಿಸೆಂಬರ್ 4ರ ರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ 35 ರೈತರನ್ನು ಮತ್ತೆ ಬಂಧಿಸಿ ನೇರವಾಗಿ ಲುಕ್ಸಾರ್ ಜೈಲಿಗೆ ಕಳುಹಿಸಲಾಯಿತು. ಪೊಲೀಸರು ವ್ಯಾಪಕ ಗೃಹಬಂಧನವನ್ನೂ ಆರಂಭಿಸಿದರು. ಜೈಲ್ ಭರೋ (ಜೈಲುಗಳನ್ನು ಭರ್ತಿ ಮಾಡಿ) ಚಳವಳಿಯನ್ನು ಘೋಷಿಸಲಾಯಿತು. ಡಿಸೆಂಬರ್ 5 ರಂದು, ಮಹಿಳೆಯರು ಸೇರಿದಂತೆ 120 ರೈತರು ಸ್ವಯಂಪ್ರೇರಣೆಯಿಂದ ಬಂಧನಕ್ಕೆ ಒಳಗಾದರು. ಮಹಿಳೆಯರನ್ನು ಬಿಡುಗಡೆಗೊಳಿಸಿದರೆ, ಉಳಿದವರನ್ನು ಜೈಲಿಗೆ ಹಾಕಲಾಯಿತು. ಡಿಸೆಂಬರ್ 6 ರಂದು, ಇನ್ನೂ 120 ರೈತರನ್ನು ಬಂಧಿಸಲಾಯಿತು. ಡಿಸೆಂಬರ್ 7 ರಂದು ಲುಕ್ಸರ್ ಜೈಲಿನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅಂತಿಮವಾಗಿ ರೈತರನ್ನು ಬಿಡುಗಡೆ ಮಾಡಲಾಯಿತು.
ಪ್ರತಿಭಟನೆಯ ಈ ವಿನೂತನ ರೂಪವು ರಾಜ್ಯ ಯಂತ್ರದ ಮಿತಿಗಳನ್ನು ಬಹಿರಂಗಪಡಿಸಿತು. ಪ್ರತಿ ಹಳ್ಳಿಯ ರೈತರು ಪೊಲೀಸ್ ದಬ್ಬಾಳಿಕೆಯನ್ನು ಅನುಭವಿಸಿದರು. ಆದರೆ ಅದನ್ನು ಪರಿಣಾಮಕಾರಿಯಾಗಿ ವಿರೋಧಿಸುವುದು ಮತ್ತು ಉತ್ತರ ಪ್ರದೇಶ ಪೊಲೀಸರ ಅಕ್ರಮ ಮತ್ತು ಅರಾಜಕ ಕಾರ್ಯವನ್ನು ಹೇಗೆ ಬಹಿರಂಗಪಡಿಸಬೇಕು ಎಂಬುದನ್ನು ಕಲಿತರು.
ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿನ್ಹಾ ಅವರು ಡಿಸೆಂಬರ್ 7 ರಂದು ಗ್ರೇಟರ್ ನೋಯ್ಡಾಗೆ ಭೇಟಿ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ಜೈಲಿನಲ್ಲಿದ್ದ ರೈತರನ್ನು ಬಿಡುಗಡೆ ಮಾಡದೆ ಇರುವ ಬಗ್ಗೆ ಹಠ ಹಿಡಿದಿದ್ದರಿಂದ, ಚರ್ಚೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ವಿಫಲರಾದರು. ಅಕ್ರಮವಾಗಿ ಜೈಲಿನಲ್ಲಿರುವ ಎಲ್ಲ ರೈತರನ್ನು ಬೇಷರತ್ ಬಿಡುಗಡೆ ಮಾಡದೆ ಆಡಳಿತದೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ರೈತರು ತಾತ್ವಿಕ ನಿಲುವು ತಳೆದರು.
ಡಿಸೆಂಬರ್ 10 ರಂದು, ಎಐಕೆಎಸ್, ಸಿಐಟಿಯು ಮತ್ತು ಎಐಡಿಡಬ್ಲ್ಯೂಎ ಸದಸ್ಯರನ್ನೊಳಗೊಂಡ ನಿಯೋಗ, ಸಂಸದ ಮತ್ತು ಎಐಕೆಎಸ್ ಉಪಾಧ್ಯಕ್ಷ ಅಮ್ರರಾಮ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮನೀಶ್ ಕುಮಾರ್ ವರ್ಮಾ ಅವರನ್ನು ಭೇಟಿ ಮಾಡಿತು. ಹಳ್ಳಿಗಳಲ್ಲಿ ಇನ್ನು ಮುಂದೆ ಯಾವುದೇ ಗೃಹಬಂಧನಗಳನ್ನು ನಡೆಸುವುದಿಲ್ಲ, ಶಾಂತಿಯುತ ಪ್ರತಿಭಟನೆಗಳು, ಧರಣಿಗಳ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡುವುದನ್ನು ತಡೆಯುತ್ತೇವೆ. ಮತ್ತು ಆಡಳಿತವು ರೈತರೊಂದಿಗೆ ಶೀಘ್ರವಾಗಿ ಚರ್ಚೆಯನ್ನು ಪ್ರಾರಂಭಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತೇವೆಂದು ನಿಯೋಗಕ್ಕೆ ಜಿಲ್ಲಾಧಿಕಾರಿ ಭರವಸೆ ನೀಡಿದರು. ಹೆಚ್ಚುವರಿಯಾಗಿ, ಜೈಲಿನಲ್ಲಿರುವ ರೈತರ ಬಿಡುಗಡೆಯನ್ನು ತ್ವರಿತಗೊಳಿಸಲು ಉತ್ತರ ಪ್ರದೇಶ ಆಡಳಿತದೊಂದಿಗೆ ಸಮಾಲೋಚಿಸುವುದಾಗಿ ಡಿಎಂ ನಿಯೋಗಕ್ಕೆ ಭರವಸೆ ನೀಡಿದರು.
ಕಳೆದ ಮೂರು ದಶಕಗಳಿಂದ ಹೋರಾಟ
ಕಳೆದ ಮೂರು ದಶಕಗಳಿಂದ ಈ ಭಾಗದಲ್ಲಿ ರೈತರ ಹೋರಾಟಗಳು ನಡೆಯುತ್ತಲೇ ಇವೆ. 1990 ಮತ್ತು 2000 ದ ಸಮಯದಲ್ಲಿ ಜಾರಿಯಲ್ಲಿದ್ದ ವಸಾಹತುಶಾಹಿ ಕಾಲದ ಭೂಸ್ವಾಧೀನ ಕಾಯ್ದೆಯಡಿಯಲ್ಲಿ ರೈತರು ತಮ್ಮ ಭೂಮಿಯನ್ನು ನೀಡುವಂತೆ ಒತ್ತಾಯಿಸಲಾಯಿತು. ಈ ಕ್ರಮಗಳು ವ್ಯಾಪಕ ಪ್ರತಿರೋಧ ಮತ್ತು ಸಾಮೂಹಿಕ ಪ್ರತಿಭಟನೆಗಳನ್ನು ಹುಟ್ಟುಹಾಕಿದವು.
2008, 2011 ಮತ್ತು 2012ರಲ್ಲಿ ಭಟ್ಟ ಪರ್ಸೌಲ್ ಸೇರಿದಂತೆ ನೋಯ್ಡಾ ಗ್ರಾಮಗಳಲ್ಲಿ ಹೋರಾಟಗಳನ್ನು ಹತ್ತಿಕ್ಕುವ ಉದ್ದೇಶದಿಂದ ಪೋಲೀಸರು ಗುಂಡು ಹಾರಿಸಿದ ಘಟನೆಗಳಲ್ಲಿ ಆರು ರೈತರು ಮತ್ತು ಐವರು ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು. ದೇಶದಾದ್ಯಂತ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರವು 2013 ರ ಭೂಸ್ವಾಧೀನ ಮತ್ತು ಪುನರ್ವಸತಿ (LARR) ಕಾಯಿದೆಯನ್ನು ಜಾರಿಗೊಳಿಸಲು ಮುಂದಾಯಿತು.
ಮೋದಿ ಸರ್ಕಾರದಿಂದ ಭೂಸ್ವಾಧೀನ ಸುಗ್ರೀವಾಜ್ಞೆ ಪರಿಚಯ
ರೈತರ ಹಕ್ಕುಗಳ ವಿರುದ್ಧ ಬಿಜೆಪಿ ನಿರಂತರವಾಗಿ ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿ ನಿಂತಿದೆ. ಮೊದಲ ಮೋದಿ ಸರ್ಕಾರವು LARR ಕಾಯಿದೆ 2013 ರ ನಿಬಂಧನೆಗಳನ್ನು ರದ್ದುಗೊಳಿಸಲು 2014 ರಲ್ಲಿ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಪರಿಚಯಿಸಿತು. ಆದರೆ, ಭೂಮಿ ಅಧಿಕಾರ್ ಆಂದೋಲನದ ಅಡಿಯಲ್ಲಿ ರೈತರು ದೇಶಾದ್ಯಂತ ಹೋರಾಟಗಳನ್ನು ಪ್ರಾರಂಭಿಸಿದರು ಮತ್ತು ಅದರ ಜಾರಿಗೊಳಿಸುವಿಕೆಯನ್ನು ಯಶಸ್ವಿಯಾಗಿ ವಿರೋಧಿಸಿದರು. ಇದರ ನಂತರ, ರೈತರಿಗೆ LARR ಕಾಯಿದೆ 2013 ರ ಪ್ರಯೋಜನಗಳನ್ನು ನಿರಾಕರಿಸುವ ಕಾನೂನುಗಳನ್ನು ಅಂಗೀಕರಿಸಲು ಬಿಜೆಪಿ ತನ್ನ ರಾಜ್ಯ ಸರ್ಕಾರಗಳನ್ನು ಉತ್ತೇಜಿಸಿತು. ಕಾರ್ಪೊರೇಟ್ ಸಂಸ್ಥೆಗಳು ಅಗ್ಗದ ದರದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಕೂಲವಾಯಿತು.
ಸೂಕ್ತ ಪರಿಹಾರ, ಪುನರ್ವಸತಿ, ಪರ್ಯಾಯ ಉದ್ಯೋಗ ಇಲ್ಲದೆ ಭೂಮಿಯನ್ನು ಕಳೆದುಕೊಂಡ ರೈತರು ಮತ್ತು ಭೂಮಾಲೀಕರು ಈಗ ನೋಯ್ಡಾ ಗ್ರಾಮಗಳಂತೆ ದೇಶಾದ್ಯಂತ ಸ್ಥಳೀಯ ಜಂಟಿ ಕ್ರಿಯಾ ಸಮಿತಿಗಳನ್ನು ರಚಿಸುತ್ತಿದ್ದಾರೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ, ಸಮಸ್ಯೆ ಆಧಾರಿತ ಏಕತೆಯನ್ನು ನಿರ್ಮಿಸುವುದು, ಸಂತ್ರಸ್ತ ಕುಟುಂಬಗಳನ್ನು ಸಾಮೂಹಿಕ ಹೋರಾಟಗಳಿಗೆ ಸಜ್ಜುಗೊಳಿಸುವುದು ಮತ್ತು ರೈತ-ಕಾರ್ಮಿಕರ ಒಗ್ಗಟ್ಟನ್ನು ಬೆಳೆಸುವ ಮೂಲಕ ಹಾಗೂ ಸಾರ್ವಜನಿಕ ಬೆಂಬಲವನ್ನು ಪಡೆಯುವ ಮೂಲಕ ಪ್ರಭುತ್ವದ ದಬ್ಬಾಳಿಕೆಯನ್ನು ಎದುರಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹೋರಾಟ ಮುಂದುವರಿದಿದೆ
ಹೋರಾಟ ಮುಂದುವರಿದಿದೆ. ಸಿಐಟಿಯು, ಎಐಕೆಎಸ್, ಎಐಎಡಬ್ಲೂಎ ಸಂಘಟನೆಗಳು ಡಿ.12ರಂದು ಪೊಲೀಸ್ ಕಮಿಷನರೇಟ್‌ಗೆ ಮೆರವಣಿಗೆ ನಡೆಸಿ ಜೈಲಿನಲ್ಲಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿವೆ. ಎಸ್.ಕೆ.ಎಂ. ನಿಯೋಗವು ಡಿಸೆಂಬರ್ 14 ರಂದು ಗ್ರಾಮಗಳಿಗೆ ಭೇಟಿ ನೀಡಿದೆ. ಎಸ್.ಕೆ.ಎಂ. ಚಳುವಳಿಗೆ ತನ್ನ ಬೆಂಬಲವನ್ನು ಘೋಷಿಸಿದೆ ಮತ್ತು ದೇಶಾದಾದ್ಯಂತ ಭೂಸ್ವಾಧೀನ ಸಂತ್ರಸ್ತ ರೈತರನ್ನು ಒಟ್ಟುಗೂಡಿಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ರೈತರ ನಿಜವಾದ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದೆ.
ಇದನ್ನೂ ನೋಡಿ: ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಿ : ಅಹೋರಾತ್ರಿ ಧರಣಿ ಕುಳಿತ ಅಂಗನವಾಡಿ ಅಕ್ಕಂದಿರು Janashakthi Media