ಬ್ರಿಟಿಷರು ಗೆದ್ದ ಟಿಪ್ಪು ಸುಲ್ತಾನನ ಖಡ್ಗ ಕಲಕತ್ತಾದ ಮಾರ್ವಾಡಿಗಳ ವಶಕ್ಕೆ ಹೇಗೆ ಬಂತು?

ರಾಜ, ಸುಲ್ತಾನರುಗಳ ವಿಜಯ, ಸೋಲನ್ನು ನಿರ್ಧರಿಸಿತು ಮಾರ್ವಾಡಿಗಳ ವ್ಯವಹಾರ

ಈ ವ್ಯಾಪಾರಿ ಗಣ ಮೊಘಲರ ಮತ್ತು ನವಾಬರ ಸೇವೆಯಲ್ಲಿ ತಮ್ಮ ಸಂಪತ್ತನ್ನು ಹಲವು ಪಟ್ಟು ವೃದ್ಧಿಸಿಕೊಂಡಿದ್ದವರು ತಮ್ಮ ಹಣದ ಸಂಪತ್ತು, ರಾಜಕೀಯ ಸ್ಥಾನ, ತಂತ್ರಗಾರಿಕೆ, ಬುದ್ಧಿವಂತಿಕೆಯನ್ನು ಬ್ರಿಟಿಷರಿಗೆ ಒತ್ತೆಯಿಟ್ಟು, ಅವರು ಭಾರತವನ್ನು ಆಕ್ರಮಿಸಿಕೊಳ್ಳಲು ಸಹಾಯ ಮಾಡಿದರು. ಬಂಡವಾಳಕ್ಕೆ, ಬಂಡವಾಳಿಗರಿಗೆ ಲಾಭ, ದುರ್ಲಾಭಗಳನ್ನು ಬಿಟ್ಟರೆ ಬೇರೇನೂ ಲೆಕ್ಕಕ್ಕಿಲ್ಲ ಎಂಬುದಕ್ಕೆ ಮಾರವಾಡಿ, ಪಾರ್ಸಿ ವರ್ತಕರ ಈ ವರ್ತನೆ ಐತಿಹಾಸಿಕ ಸಾಕ್ಷಿಯಾಗಿದೆ. ಸುಲ್ತಾನ

ಟಿಪ್ಪು ಸುಲ್ತಾನನ ಖಡ್ಗಕ್ಕೂ ಕಲಕತ್ತಾದ ಮಾರವಾಡಿಗಳಿಗೂ ಏನು ಸಂಬಂಧ! ಬೆಟ್ಟದ ಮೇಲಿನ ಮಾವಿನಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? ಎನ್ನುತ್ತಾಳೆ ಅಕ್ಕ. ಸುಲ್ತಾನ

ಇದು ಎರಡು ಶತಮಾನಗಳ ಕಾಲದ ಕತೆ. ಅಕ್ಬರನ 16ನೇ ಶತಮಾನದ ಕಾಲದಿಂದ ಆರಂಭಿಸಿ, ಬ್ರಿಟಿಷರು ಭಾರತವನ್ನು ಆಕ್ರಮಿಸುವವರೆಗಿನ 19ನೇ ಶತಮಾನದವರೆಗಿನ ದೀರ್ಘ ಕಾಲದ ಕತೆ. ಸುಲ್ತಾನ

ಇದನ್ನೂ ಓದಿ: ಸಿಟಿ ರವಿ ಬಿಡುಗಡೆಗೆ ಹೈಕೋರ್ಟ್‌ ಆದೇಶ

ಗುಜರಾತ್ ನ ಬಂದರುಗಳು ಮತ್ತು ಆಗ್ರಾ, ದೆಹಲಿ, ಲಕ್ನೋ , ಪಾಟ್ನಾ, ಲಾಹೋರ್ ಮೊದಲಾದ ನಗರಗಳ ನಡುವಣ ವ್ಯಾಣಿಜ್ಯ ಮಾರ್ಗದ ಮೇಲೆ ಇದ್ದುದರಿಂದ ವ್ಯಾಪಾರ ವೃದ್ಧಿಸಿತು . ಈ ಪ್ರದೇಶದಲ್ಲಿ ವಿವಿಧ ರಜಪೂತ ಸಂಸ್ಥಾನಗಳು ಬೆಳೆದವು. ಮಹಾರಾಷ್ಟ್ರ, ಮಧ್ಯ ಭಾರತದ ಮರಾಠ ಸಂಸ್ಥಾನಗಳು, ಭಾರತದ ಮೊಘಲ ಚಕ್ರವರ್ತಿಗಳು ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಮಾಡಿದ ಯುದ್ಧಗಳು ಹಾಗೂ ರಾಜಿಯ ಸಂದರ್ಭಗಳಲ್ಲಿ ಗುಜರಾತ್‌ ನ ಪಾರ್ಸಿಗಳು, ಜೈನ ಬನಿಯಾಗಳು, ವಲ್ಲಭಾಚಾರ್ಯರ ವೈಷ್ಣವ ಪಂಥಕ್ಕೆ ಸೇರಿದ ಗುಜರಾತ್ ಮತ್ತು ರಾಜಸ್ಥಾನದ ಬನಿಯಾಗಳು, ಪಂಜಾಬಿನಲ್ಲಿ ಸಿಖ್ ಧರ್ಮದ ಹುಟ್ಟಿಗೆ ಕಾರಣರಾದ ಖತ್ರಿಗಳ
ವ್ಯಾಪಾರ, ಸಾಲ ನೀಡಿಕೆ, ಸಂಪತ್ತು ಅಪಾರವಾಗಿ ವೃದ್ಧಿಸಿತು. ಸುಲ್ತಾನ

ವ್ಯಾಪಾರ, ಬಡ್ಡಿ ಸಾಲದ ಮತ್ತು ತೆರಿಗೆ ವಸೂಲಿ ಏಕತ್ರವಾಗಿ ಬಲಶಾಲಿಯಾಯಿತು

ಮಾರವಾಡಿಗಳ ವೈಷ್ಣವ ಪಂಥ ಅವರಿಗೆ ಉತ್ತರ ಭಾರತದಾದ್ಯಂತ ಮಾನ್ಯತೆ ಒದಗಿಸಿದರೆ, ಮೊಘಲರ ವಿಶಾಲ ಸಾಮ್ರಾಜ್ಯದಲ್ಲಿ ನಾಣ್ಯ, ಅಳತೆ, ತೂಕಗಳ ಸಾಮಾನ್ಯ ಮಾನದಂಡಗಳು ಪಶ್ಚಿಮದಿಂದ ಪೂರ್ವದವರೆಗೆ ವ್ಯಾಪಿಸಿತು. ಈ ವ್ಯಾಪಾರ ವಿಸ್ತರಣೆ ಮೊಘಲ ಆಡಳಿತಗಾರರಿಂದ ಹಾಗೂ ಅದರ ಪ್ರಭಾವದಿಂದ ಇತರ ರಾಜ, ಸುಲ್ತಾನರುಗಳಿಂದ ಹಣ ರೂಪದಲ್ಲಿ ತೆರಿಗೆ, ಕಂದಾಯ ವಸೂಲಿ ಆರಂಭವಾಯಿತು. ಇದರ ಫಲವಾಗಿ ಅಲ್ಲಿಯವರೆಗೆ ತಮ್ಮ ಧಾನ್ಯಗಳು, ಬಟ್ಟೆ, ಕಬ್ಬಿಣದ ವಸ್ತುಗಳು ಮೊದಲಾದ ಕುಶಲ ಉತ್ಪಾದನೆಗಳನ್ನೇ ತೆರಿಗೆ, ಕಂದಾಯವಾಗಿ ಕೊಡುತ್ತಿದ್ದ ರೈತರು, ಕುಶಲ ಕೆಲಸಗಾರರು ತಮ್ಮ ಬೆಳೆ, ಉತ್ಪಾದನೆಗಳನ್ನು ವ್ಯಾಪಾರಿಗಳಿಗೆ ಮಾರಿ, ಅವರಿಂದ ಹಣ ಪಡೆದು ತೆರಿಗೆ, ಕಂದಾಯಗಳನ್ನು ಪಾವತಿಸುವ ಅನಿವಾರ್ಯತೆ ಉಂಟಾಯಿತು.  ಈ ಎಲ್ಲ ಧಾನ್ಯಗಳು, ವಸ್ತುಗಳು ಸರಕುಗಳಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದರಿಂದ, ಒಂದು ಕಡೆ ವ್ಯಾಪಾರದ ಜಾಲ ಹಲ ಹಲವು ಪಟ್ಟು ವೃದ್ಧಿಸಿತು.

ಅವರು ದೊಡ್ಡ ಪ್ರಮಾಣದಲ್ಲಿ ರೈತರು ಬೆಳೆದ ಆಹಾರಧಾನ್ಯಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಂಡು ದಾಸ್ತಾನು ಮಾಡುವುದು, ಅವುಗಳ ಬೆಲೆಯನ್ನು ವಿಪರೀತ ಏರಿಸಿ ನಂತರ ಕಾಳಸಂತೆಯಲ್ಲಿ ಮಾರುವುದು ಇಂತಹ ದುರ್ವ್ಯವಹಾರಗಳಿಗೆ ಅಪರಿಮಿತ ಅವಕಾಶ ಸಿಕ್ಕಿತು. ಇಲ್ಲಿಯವರೆಗೆ ಕಂದಾಯ ವಸೂಲಿಗಾರರು ರೈತರಿಗೆ ಸರಿಯಾಗಿ ಬೆಳೆ ಬಾರದಿರುವ ಸಮಯದಲ್ಲಿಯೂ ಒತ್ತಾಯ, ದೌರ್ಜನ್ಯ ನಡೆಸಿ ಆಹಾರ ಧಾನ್ಯಗಳನ್ನು ವಸೂಲಿ ಮಾಡುತ್ತಿದ್ದರು. ಆದರೆ ಕೇವಲ ಕಂದಾಯ ನಿಗದಿಯಾಗಿರುವ ಭಾಗದಷ್ಟು ಮಾತ್ರ. ಅದನ್ನು ಸಾಮ್ರಾಟನ ಅಧಿಕಾರಿಗಳ ಮೂಲಕ ನಗರಗಳ ಜನರಿಗೆ ಧಾನ್ಯ ರೂಪದಲ್ಲಿ ಅವರ ಸಂಬಳ ನೀಡುತ್ತಿದ್ದರು.

ಆದರೆ ಈಗ ಕಡಿಮೆ ಬೆಲೆಯಲ್ಲಿ ಕೊಳ್ಳುವ ಕಾರಣ ಅವರು ಕಂದಾಯ ನೀಡಲು ಹಿಂದಿಗಿಂತ ಹೆಚ್ಚು ಧಾನ್ಯಗಳನ್ನು ಮಾರಬೇಕಾಗಿತ್ತು. ನಗರಗಳ ಜನರಿಗೆ ಇವು ದುಬಾರಿ ಬೆಲೆಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದವು.  ತೆರಿಗೆ, ಕಂದಾಯಗಳನ್ನು ಆಡಳಿತಗಾರರಿಗೆ ತೆರಲು ವ್ಯಾಪಾರಗಾರರೇ ಸಾಧನಗಳಾದ್ದರಿಂದ, ಅವರು ಹಲವು ಪ್ರದೇಶಗಳ ತೆರಿಗೆ ಕಂದಾಯ ವಸೂಲಿ ಮತ್ತು ಪಾವತಿಯನ್ನು ತಾವೇ ವಹಿಸಿಕೊಂಡರು.

ಇಲ್ಲಿಯವರೆಗೆ ಈ ಕರ್ತವ್ಯ ಮೊಘಲ ಆಡಳಿತದ ಪಾಳೆಯಗಾರಿ ಸುಬೇದಾರ್ ಮೊದಲಾದ ಪ್ರತಿಷ್ಠಿತರ ವಶದಲ್ಲಿದ್ದದ್ದು ವ್ಯಾಪಾರಿಗಳ ಕೈಗೆ ಬಂತು. ರೈತರು ಕುಶಲ ಕೆಲಸಗಾರರು ಜೀವನಕ್ಕೆ ಆದಾಯ ಸಾಲದೆ ತೆರಿಗೆ, ಕಂದಾಯ ಬಾಕಿ ಉಳಿಸಿಕೊಳ್ಳುವುದು ಮಾಮೂಲಿ ತಾನೇ. ಅವರುಗಳು ಈ ಪಾವತಿಗಳಿಗೆ ವ್ಯಾಪಾರಗಾರರಿಂದ ಸಾಲ ಪಡೆಯಲಾರಂಭಿಸಿದರು. ಸಾಮಾನ್ಯ ರೈತರು ಮಾತ್ರವಲ್ಲ, ದೊಡ್ಡ ಜಹಗೀರುದಾರರು, ಜಮೀನುದಾರರು ಕೂಡಾ ವ್ಯಾಪಾರಿಗಳಿಂದ ಸಾಲ ಪಡೆಯುವುದು ಅನಿವಾರ್ಯವಾಯಿತು. ಕಂದಾಯ ವಸೂಲಿ ಇನ್ನೂ ಸುಬೇದಾರ ಮೊದಲಾದವರ ವಶದಲ್ಲಿದ್ದ ಪ್ರದೇಶಗಳಲ್ಲಿ ಕೂಡಾ ಅವರು ತೆರಿಗೆ, ಕಂದಾಯವನ್ನು ತಮ್ಮ ವೈಭವದ ಜೀವನಕ್ಕೆ ಬಳಸಿಕೊಂಡು ವ್ಯಾಪಾರಿಗಳಿಂದ ಸಾಲ ಪಡೆದರು.

ಇದರ ಪರಿಣಾಮವಾಗಿ ಅತ್ಯಂತ ದುಬಾರಿ ಬಡ್ಡಿ ದರ ವಿಧಿಸಲಾರಂಭಿಸಿದರು. ಈ ಎಲ್ಲ ವ್ಯಾಪಾರ ವಿಸ್ತರಣೆ ಹಾಗೂ ಸಾಲದ ವ್ಯವಹಾರಗಳ ಫಲವಾಗಿ ಅವರ ಸಂಪತ್ತು ಮತ್ತಷ್ಟು ವೃದ್ಧಿಸಿತು. ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿಕೆ, ವಿವಿಧ ಪ್ರದೇಶಗಳ ಕಂದಾಯ ವಸೂಲಿ ಗುತ್ತಿಗೆ ಹಿಡಿಯಲಾರಂಭಿಸಿದರು.  ಹೀಗೆ ಅವರು ಆಡಳಿತದ ಕಾರ್ಯಗಳನ್ನು ವಹಿಸಿಕೊಳ್ಳಲಾರಂಭಿಸಿದರು. ಈ ಎಲ್ಲ ವ್ಯವಹಾರಗಳಲ್ಲಿ ಮಾರವಾಡಿ ವ್ಯಾಪಾರಿಗಳದು ಬಹು ದೊಡ್ಡ ಭಾಗ. ಅವರು ರಾಜಸ್ಥಾನದ ಗಡಿಯಿಂದ ಬಂಗಾಲದ ಸುಲ್ತಾನರ ರಾಜಧಾನಿಗಳಾದ ಢಾಕಾ ಮೊದಲಾದ ನಗರಗಳವರೆಗೆ ಇವರ ವ್ಯವಹಾರ ವ್ಯಾಪಿಸಿತು.

ಉದಾಹರಣೆಗೆ ಮಹಾರಾಷ್ಟ್ರದ ಮುಖ್ಯ ನಗರವಾದ ನಾಗಪುರದಲ್ಲಿ ಇದ್ದ ಹದಿನೇಳು ವ್ಯಾಪಾರಿ ವಂಶಗಳಲ್ಲಿ 15 ಮಾರವಾಡಿಗಳು. ಹೀಗೆ ಗುಜತಾತ್‌ ನ ನೆರೆಯ ಮಹಾರಾಷ್ಟ್ರದಲ್ಲಿಯೂ ಮಾರವಾಡಿ ವ್ಯಾಪಾರಿ ಮತ್ತು ಬಡ್ಡಿ ಸಾಹುಕಾರರದೇ ಪ್ರಾಧಾನ್ಯವಾಗಿತ್ತು.  ಹೀಗೆ ಅವರು ಬನಾರಸ್, ಪಾಟ್ನಾ ಮೊದಲಾದ ನಗರಗಳಲ್ಲಿ ಮುಖ್ಯ ಸ್ಥಾನದಲ್ಲಿದ್ದರು. ವ್ಯಾಪಾರಿಗಳಲ್ಲಿ  ಮರಾಠ ಆಕ್ರಮಣದ ಜೊತೆಗೆ ದಕ್ಷಿಣ ಭಾರತದ ಹಲವು ನಗರಗಳಿಗೆ ಪ್ರವೇಶ ಪಡೆದರು. ಹಲವು ಮಾರವಾಡಿ ಕುಟುಂಬಗಳು ಬಂಗಾಲದಲ್ಲಿಯೇ ನೆಲೆಯೂರಿದವು. ದೇಶದ, ಮುಖ್ಯವಾಗಿ ಮಧ್ಯ ಭಾರತ, ಉತ್ತರ ಭಾರತ, ಬಂಗಾಲಗಳ  ಹಲವು ನಗರಗಳಲ್ಲಿ ನಗರ ಶ್ರೇಷ್ಠಿ ( ನಗರ ಸೇಠ್ ) ಆದರು.

ಈ ವ್ಯಾಪಾರಿಗಳ ಪ್ರಾಮುಖ್ಯತೆ ಎಷ್ಟಿತ್ತೆಂದರೆ, ಅಂದಿನ ಮರಾಠ ಪೇಶ್ವೆಗಳ ಸರ್ಕಾರ ವ್ಯಾಪಾರಿಗಳ ವಿಷಯವಾಗಿಯೇ ಒಂದು ಆಜ್ಞಾಪತ್ರ (ರಾಜಾಜ್ಞೆ) ಹೊರಡಿಸಿತ್ತು. “ಸಾಹುಕಾರರು ರಾಜ್ಯಕ್ಕೆ ಆಭರಣವಿದ್ದಂತೆ. ಅವರು ಸಂಸ್ಥಾನ ಸಂಪದ್ಯುಕ್ತವಾಗುವಂತೆ ಮಾಡುತ್ತಾರೆ. ಅವರಿಗೆ ಗೌರವ ಮತ್ತು ರಕ್ಷಣೆ ಕೊಡಬೇಕು. ವ್ಯಾಪಾರಿಗಳಲ್ಲಿ ಪ್ರಮುಖರಾದವರಿಗೆ ರಾಜಾಸ್ಥಾನದ ಪ್ರಮುಖರು ವಾಸ ಮಾಡುವ ಪ್ರದೇಶದಲ್ಲಿ ವಾಸ ಮಾಡಲು ಅವಕಾಶ ನೀಡಬೇಕು.”

ರಜಪೂತ- ಮೊಘಲ ಮೈತ್ರಿ ಮತ್ತು ಅವರ ವೈಷ್ಣವ ಪಂಥದ ಅಂಗೀಕಾರ ಮಾರವಾಡಿಗಳು ಉತ್ತರ ಭಾರತವನ್ನೆಲ್ಲ ವ್ಯಾಪಿಸುವುದಕ್ಕೆ ಸಹಾಯಕವಾಯಿತು. ಇರಾನ್, ಮಧ್ಯ ಏಷಿಯಾಕ್ಕೂ ವಿಸ್ತರಿಸಿತು.  ಅದೇ ಸಮಯದಲ್ಲಿ ಪಂಜಾಬಿನ ಸಿಖ್ ಗುರುಗಳು ಮತ್ತು ಮೊಘಲರ ನಡುವಣ ತೀವ್ರ ಸಂಘರ್ಷ ಅವರು ಇಂತಹ ದೇಶ ವ್ಯಾಪ್ತಿಯನ್ನು ಪಡೆದುಕೊಳ್ಳಲು ಸಹಾಯಕವಾಗಲಿಲ್ಲ. ಆದರೂ ಕೈಬೆರಳಿನಲ್ಲಿ ಎಣಿಸುವಷ್ಟು ಮಾತ್ರ ಸಿಖ್ ವ್ಯಾಪಾರಿ ಕುಟುಂಬಗಳನ್ನು ಉತ್ತರ ಭಾರತ ಮತ್ತು ಬಂಗಾಲಗಳಲ್ಲಿ ಕಾಣಬಹುದು. ನಂತರದ ಕಾಲದಲ್ಲಿ ರಣಜಿತ್ ಸಿಂಗ್‌ ಸ್ಥಾಪಿಸಿದ ಸಿಖ್ ಸಂಸ್ಥಾನ ಲಾಹೋರ್, ಪೆಶಾವರ್, ರಾವಲ್ಪಿಂಡಿ ಮೊದಲಾದ ನಗರಗಳನ್ನು ಒಳಗೊಂಡ ಪಾಕಿಸ್ಥಾನದ ಬಹುಭಾಗ, ಜಮ್ಮು ಮತ್ತು ಕಾಶ್ಮೀರ, ಅಫಘಾನಿಸ್ತಾನಗಳಿಗೆ ವ್ಯಾಪಿಸಿದಾಗ, ಆ ಪ್ರದೇಶಗಳಲ್ಲಿ ಮತ್ತು ಅಲ್ಲಿಂದ ಮಧ್ಯ ಏಷಿಯಾ ಮೊದಲಾದ ಕಡೆಗಳಲ್ಲಿ ಹೆಚ್ಚು ವ್ಯಾಪಿಸಿದರು‌. ಜೈನರು ಕೂಡಾ ಅಲ್ಲಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿದರೂ ಅದು ಸೀಮಿತವಾಗಿತ್ತು.

ಹುಂಡಿ ಬ್ಯಾಂಕುಗಳ ಸ್ಥಾಪನೆ

ಇಡೀ ಉತ್ತರ ಭಾರತ ವ್ಯಾಪ್ತಿಯಲ್ಲಿ ವ್ಯಾಪಾರ, ವಹಿವಾಟು ಅಪಾರ ಹೆಚ್ಚಳವಾಗಿದ್ದು ಒಂದು ಕಡೆ ಮತ್ತು ತೆರಿಗೆ, ಕಂದಾಯಗಳ ವಸೂಲಿ ಮತ್ತು ಪಾವತಿ ಮತ್ತೊಂದು ಕಡೆ, ಜೊತೆಗೆ ಯುದ್ಧಗಳಿಗೆ ಸಾಲ ನೀಡಿಕೆ ಇತ್ಯಾದಿಗಳು ಅಪಾರ ಪ್ರಮಾಣದ ಹಣವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಅವಶ್ಯಕತೆ ಉಂಟು ಮಾಡಿದವು. ಇದು ಕಳ್ಳತನ, ಲೂಟಿ ದರೋಡೆಗಳಿಗೆ ಅವಕಾಶ ಮಾಡಿಕೊಡುವುದು ಸಾಮಾನ್ಯ. ಆದ್ದರಿಂದ ಒಂದು ಹೊಸ ಹಣ ವಿನಿಮಯ ಪದ್ಧತಿ ಅತ್ಯವಶ್ಯವಾಯಿತು. ಇದರಿಂದ ಹುಂಡಿ ಪದ್ಧತಿ ಎಂಬುದು ವ್ಯಾಪಾರಿಗಳ ನಡುವೆ ಬೆಳೆದು ಬಂದಿತು. ಇದು ಬ್ಯಾಂಕಿಂಗ್ ವ್ಯವಸ್ಥೆಯ ಒಂದು ಮುಖ್ಯ ಆಯಾಮ. ಇಲ್ಲಿ ನಾವು ಬ್ಯಾಂಕಿಗೆ ಹಣ ಕಟ್ಟಿ ಅದನ್ನು ದೂರದಲ್ಲಿರುವವರಿಗೆ ಚೆಕ್ ಕಳಿಸಿ ಅಲ್ಲಿಯ ಬ್ಯಾಂಕ್ ಶಾಖೆಯಲ್ಲಿ ಪಾವತಿ ಪಡೆಯುವಂತೆ. ಇಂತಹ ದೇಶವ್ಯಾಪಿ ಪಾವತಿ ಜಾಲ ಹೊಂದಿದ ಹುಂಡಿ ಬ್ಯಾಂಕುಗಳನ್ನು ಮಾರವಾಡಿ ವ್ಯಾಪಾರಿಗಳು ಸ್ಥಾಪಿಸಿದರು.

ಒಟ್ಟಾರೆಯಾಗಿ ವ್ಯಾಪಾರಿಗಳ ಜಾಲ ದೇಶೋವಿಶಾಲವಾಗಿ ವಿಸ್ತರಿಸಿತು. ಅವರು  ಬಡ್ಡಿ ಸಾಹುಕಾರರೂ ಆದರು. ತೆರಿಗೆ ವಸೂಲಿ ಮಾಡತೊಡಗಿದರು. ಯುದ್ಧಗಳಲ್ಲಿ ಹಣ ತೊಡಗಿಸಿದರು. ಆಡಳಿತಗಾರರಿಗೇ ಸಾಲ ಕೊಡತೊಡಗಿದರು. ಆಡಳಿತದಲ್ಲಿ , ಮುಖ್ಯವಾಗಿ ತೆರಿಗೆ ಸಂಗ್ರಹದಲ್ಲಿ ಪಾತ್ರ ವಹಿಸಿದರು. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತೊಡಗಿದರು. ಹೀಗೆ ಬೆಳೆದು ಕೆಲವರು ಜಗತ್ ಶೇಟ್‌ ಗಳಾದರು.

ಜಗತ್ ಶೇಟ್

ನಗರ ಶೇಟ್‌ಗಳ ಬಗ್ಗೆ ಮೇಲೆ ಓದಿದ್ದೀರಿ. ಇದು ಭಾರತಾದ್ಯಂತ ವಾಣಿಜ್ಯ ನಗರಗಳಲ್ಲಿ ಇದ್ದಂತಹ ಒಂದು ಗಣ್ಯ ಸ್ಥಾನ. ಕರ್ನಾಟಕದಲ್ಲಿಯೂ ಇಲ್ಲಿಯ ಬಣಜಿಗರು ನಗರ ಶ್ರೇಷ್ಠಿ ಎಂಬ ಸ್ಥಾನವನ್ನು ಆಳುವವರ ಮಾನ್ಯತೆಯನ್ನು ಪಡೆದಿದ್ದರು. ಆದರೆ ಜಗತ್ ಸೇಠ್‌ನಾಗಿ ಬೆಳೆದ ಒಬ್ಬನ ಪ್ರಸಂಗವನ್ನು ಇಂತಹ ದೊಡ್ಡ ಸೇಠ್‌ಗಳ ಟಿಪಿಕಲ್ ಮಾದರಿಯಾಗಿ ತಿಳಿದುಕೊಳ್ಳೋಣ. ಸುಲ್ತಾನ

ಅಲ್ಲಿಯ ಸಂಸ್ಥಾನ ಜೈಪುರದ ಮಹಾರಾಜನಾಗಿದ್ದ ಮಾನ್ ಸಿಂಗ್ ಮೊಘಲ್ ಸಾಮ್ರಾಜ್ಯದ  ಸೈನ್ಯದ ಒಬ್ಬ ಪ್ರಸಿದ್ಧ ಸರದಾರನಾಗಿ, ಭಾರತದ ಹಲವೆಡೆಗಳಲ್ಲಿ ಮೊಘಲರ ಸಾಮ್ರಾಜ್ಯ ವಿಸ್ತರಣೆ, ಸಂರಕ್ಷಣೆಯಲ್ಲಿ ತೊಡಗಿದ್ದವನು. ಅವನ ಸಂಸ್ಥಾನದ  ದೊಡ್ಡ ಮಾರವಾಡಿ, ಓಸ್ವಾಲ್ ವಂಶಕ್ಕೆ ಸೇರಿದ ಹೀರಾನಂದ್ ಸಾಹೂ ಮಾನ್ ಸಿಂಗನ ಸೈನ್ಯಕ್ಕೆ ಸರಬರಾಜುದಾರ,  ಬಡ್ಡಿ ಸಾಹುಕಾರನಾಗಿದ್ದವನು. ಕೊನೆಗೆ ಬಿಹಾರದಲ್ಲಿ ನೆಲೆಯೂರಿದ. ಅವನ ಮಗ ಮಾಣಿಕ್ ಚಂದ್ ಬಿಹಾರ, ಬಂಗಾಲ, ಒರಿಸ್ಸಾಗಳನ್ನು ವ್ಯಾಪಿಸಿದ್ದ ಬಂಗಾಲ ಸಂಸ್ಥಾನದ ನವಾಬ ಮುರ್ಷಿದ್ ಖುಲಿ ಖಾನ್ ಎಂಬುವನ ಖಾಸಾ ಬ್ಯಾಂಕರ್ ಆದ. ಅವನ ಸಂಸ್ಥಾನದ ಪ್ರದೇಶಗಳೆಲ್ಲದರ ತೆರಿಗೆ ಕಂದಾಯ ಸಂಗ್ರಹ, ಹಣದ ವ್ಯವಹಾರಗಳಿಗೆ ಸಂಬಂಧಿಸಿ ನವಾಬನಿಗೆ ಸಲಹೆಗಾರನಾಗಿದ್ದ.

ಬಿಹಾರ, ಬಂಗಾಲಗಳು ಅಂದು ಇಡೀ ಮೊಘಲ ಸಾಮ್ರಾಜ್ಯದ ಅತ್ಯಂತ ಹೆಚ್ಚು ಆದಾಯ ತರುವ ಪ್ರದೇಶಗಳಾಗಿದ್ದವು. ತಮ್ಮ ಅಧೀನದ ಗ್ರಾಮೀಣ ವ್ಯಾಪಾರಿ, ಬಡ್ಡಿ ವ್ಯವಹಾರಿಗಳ ಮೂಲಕ ತೆರಿಗೆ ಸಂಗ್ರಹಿಸುತ್ತಿದ್ದ. ಇಡೀ  ಬಂಗಾಲ ಸಂಸ್ಥಾನದ ತೆರಿಗೆ, ಕಂದಾಯಗಳನ್ನು ತಮ್ಮ ಬ್ಯಾಂಕ್ ಮೂಲಕ ದೆಹಲಿಯ ಮೊಘಲ್  ಬಾದಶಾಹನಿಗೆ ತಲುಪಿಸುವಷ್ಟು ದೊಡ್ಡ ವ್ಯವಹಾರ ಉಳ್ಳವನು. ಆದ್ದರಿಂದ ಇವನಿಗೆ ಬಾದಶಾ ಕೂಡಾ ಮನ್ನಣೆ ಕೊಡುತ್ತಿದ್ದ. ಸುಲ್ತಾನ

ಈ  ಮನ್ನಣೆಯನ್ನು ಬಳಸಿ ತನ್ನ ನವಾಬನಿಗೆ ಮೊಘಲ ದರ್ಬಾರಿಗಳಿಂದ ಆಪತ್ತು ಎದುರಾದರೆ ರಕ್ಷಿಸುತ್ತಿದ್ದ. ಇವನ ಬ್ಯಾಂಕ್ ಹುಂಡಿಗಳು ಬಂಗಾಲದಿಂದ ದೆಹಲಿಯವರೆಗೆ ಮಾತ್ರವಲ್ಲ, ಅದರಾಚೆಗೆ ಆಫ್ಘಾನಿಸ್ತಾನ, ತುರ್ಕಿಸ್ತಾನ, ಕಜಾಕ್‌ಸ್ತಾನ  ಮೊದಲಾದ ದೇಶಗಳಲ್ಲಿ ಮಾನ್ಯತೆ ಪಡೆದಿದ್ದವು. ಆದ್ದರಿಂದ ಮೊಘಲ್ ಬಾದಶಾನೇ ಇವನಿಗೆ ಜಗತ್ ಶೇಟ್ ಎಂಬ ಬಿರುದು ನೀಡಿದ. ಇದು ಒಬ್ಬ ಶೇಟ್ ಪಡೆದ ಬಿರುದು ಇರಬಹುದು. ಆದರೆ ಇಂತಹ ಪ್ರಮಾಣದಲ್ಲಿ ವ್ಯಾಪಾರ, ಬ್ಯಾಂಕಿಂಗ್ ವ್ಯವಹಾರ ಇತ್ಯಾದಿಗಳಲ್ಲಿ ತೊಡಗಿದ ಹಲವು ಮಾರವಾಡಿ ಶೇಟ್‌ ಗಳಿದ್ದರು. ಸುಲ್ತಾನ

ಬ್ರಿಟಿಷರು ಗೆದ್ದ ಟಿಪ್ಪು ಸುಲ್ತಾನನ ಖಡ್ಗ ಕಲಕತ್ತಾದ ಮಾರ್ವಾಡಿಗಳ ವಶಕ್ಕೆ ಹೇಗೆ ಬಂತು?

ಬ್ರಿಟಿಷರು ದೇಶವನ್ನು ಆಕ್ರಮಣ ಮಾಡಲು ಸಹವರ್ತಿಗಳಾದರು

ಈ ಜಗತ್ ಶೇಟ್‌ ಕತೆ ಇಷ್ಟಕ್ಕೇ ಮುಗಿಯಲಿಲ್ಲ. ಬ್ರಿಟಿಷರು ಪ್ರವೇಶಿಸಿದಾಗ ಅವರ ಹತ್ತಿ ಸರಕುಗಳ ವ್ಯಾಪಾರಕ್ಕೆ ಸಹಾಯ ಮಾಡಿದರು. ಅದಕ್ಕೆ ಸಾಲ ನೀಡಿದರು. ಆದರೆ ಬಹು ದೊಡ್ಡ, ಬಹಳ ಜನರಿಗೆ ತಿಳಿಯದ ಸಂಗತಿ ಎಂದರೆ ಬ್ರಿಟಿಷರು ದೇಶವನ್ನು ಆಕ್ರಮಣ ಮಾಡಲು ಸಹವರ್ತಿಗಳಾಗಿದ್ದು.

ಇಲ್ಲಿಯವರೆಗೂ ಬಂಗಾಲದ ನವಾಬನ ಆಪ್ತ ಸಹವರ್ತಿಗಳಾಗಿದ್ದವನು, ಅದರ ದೊಡ್ಡ ಲಾಭ ಪಡೆದವನು, ಬ್ರಿಟಿಷರ ಆಕ್ರಮಣದ ಮೊದಲ ಅತ್ಯಂತ ಯಶಸ್ಸಾದ ಪ್ಲಾಸಿ ಕದನದ ಸಮಯದಲ್ಲಿ ನವಾಬ ಸಿರಾಜ್ ಉದ್ ದೌಲನ ವಿರುದ್ಧವಾಗಿ ಬ್ರಿಟಿಷ್ ಕರ್ನಲ್ ಕುಪ್ರಸಿದ್ಧ ರಾಬರ್ಟ್ ಕ್ಲೈವನಿಗೆ ಜಗತ್ ಶೇಟ್ ಅಂದಿನ ಬೆಲೆಗಳಲ್ಲಿ 12 ಲಕ್ಷ ರೂ.ಗಳನ್ನು ನೀಡಿದ. ಅವನ ಜೊತೆಗಾರ ದೊಡ್ಡ ವ್ಯಾಪಾರಿಗಳು- ಮಾರವಾಡಿಗಳು, ಬಂಗಾಲಿಗಳು ಕೂಡಾ ಅವರವರದೇ ರೀತಿ ಪ್ರಮಾಣದಲ್ಲಿ ಬ್ರಿಟಿಷರಿಗೆ ಸಹಾಯ ನೀಡಿದರು. ಅಷ್ಟೇ ಅಲ್ಲದೆ ಸಿರಾಜ್ ಉದ್ ದೌಲ ತನ್ನ ಸಂಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸಿದಾಗ, ಈ ವ್ಯಾಪಾರಿಗಳು ನವಾಬನಿಗೆ ತುರ್ತು ಅವಶ್ಯವಾಗಿದ್ದ ಹಣ ನೀಡಲು ನಿರಾಕರಿಸಿದರು. ಇವರುಗಳು ಬ್ರಿಟಿಷರಿಗೆ ಸಿರಾಜ್ ಉದ್ ದೌಲನ ಧಾಳಿಗಳ ಬಗ್ಗೆ ಯುದ್ಧ ತಂತ್ರಗಳ ಬಗ್ಗೆ ಮಾಹಿತಿ ಒದಗಿಸುವ ಮೂಲಕ ಅವರು ಜಯ ಗಳಿಸಲು ನಿರ್ಣಾಯಕ ಸಹಾಯ ನೀಡಿದರು.

ಅಂತಹ ಮಾರವಾಡಿಗಳಲ್ಲೊಬ್ಬ ಅಕ್ಬರನ ಆಡಳಿತದಲ್ಲಿ ವಿವಿಧ ಮುಖ್ಯ ಸ್ಥಾನಗಳನ್ನು ಪಡೆದಿದ್ದ. ಅವನ ವಂಶದ ಹಯಾಲಿ ರಾಮ್ ಎಂಬುವನಿಗೆ ಬಿಹಾರದ ಪಾಟ್ನಾದಲ್ಲಿ ಮುಖ್ಯ ಸ್ಥಾನ ಪಡೆದಿದ್ದ. ಈ ಸ್ಥಾನ ಬಲದಿಂದಲೇ ಕ್ಲೈವನ ಜೊತೆ ಸಂಬಂಧ ಬೆಳೆಸಿ ಅವರಿಗೆ ಸಹಾಯ ಮಾಡಿದ. ಈ ಸಹಾಯಕ್ಕಾಗಿ ಕ್ಲೈವ್ ಅವನಿಗೆ ರಾಜಾ ಬಹದ್ದೂರ್ ಎಂಬ ಬಿರುದು ಕೊಟ್ಟು ಜಹಗೀರು ನೀಡಿದ. ಅಷ್ಟೇ ಅಲ್ಲದೆ ಬ್ರಿಟಿಷರ ಅಗತ್ಯ ಮತ್ತು ಅವರ ವಸಾಹತುಶಾಹಿ ಆಡಳಿತ ವ್ಯವಸ್ಥೆಗೆ ತಕ್ಕಂತೆ ಬಿಹಾರದ ಕಂದಾಯ ಮತ್ತು ತೆರಿಗೆ ವ್ಯವಸ್ಥೆಯನ್ನು ಪುನರ್ ರೂಪಿಸುವ ಸ್ಥಾನ ನೀಡಿದರು. ಇವನು ಬ್ರಿಟಿಷರು ಪ್ರಸಿದ್ಧ ಔಧ್, ಗ್ವಾಲಿಯರ್ ಮೊದಲಾದ ಸಂಸ್ಥಾನಗಳ ಮೇಲೆ ಆಕ್ರಮಣ ನಡೆಸಿದಾಗ ಬ್ರಿಟಿಷರ ಪರವಾಗಿ ಆ ನವಾಬ, ರಾಜರುಗಳೊಡನೆ ಸಂಧಾನ ನಡೆಸಿದ. ಈ ಸಹಾಯಕ್ಕಾಗಿ ಮತ್ತಷ್ಟು ಜಹಗೀರುಗಳನ್ನು ಮತ್ತು ರಾಜಾ ಎಂಬ ಬಿರುದು ಮತ್ತು ಸ್ಥಾನವನ್ನು ನೀಡಲಾಯಿತು. ಸುಲ್ತಾನ

ಜಗತ್ ಶೇಟ್ ‌ನ ಜೊತೆ ಮತ್ತೊಬ್ಬ ಅಗರ್‌ವಾಲ್ ವಂಶದ  ಮಾರವಾಡಿ ವಾರಾಣಸಿಯಲ್ಲಿದ್ದವನು ಗೋಪಾಲ್ ದಾಸ್. ಈತ ಈಸ್ಟ್ ಇಂಡಿಯಾ ಕಂಪನಿಯ ಬ್ಯಾಂಕರ್ ಆಗಿದ್ದ. ಕಲಕತ್ತಾಕ್ಕೆ ತನ್ನ ವ್ಯವಹಾರವನ್ನು ವರ್ಗಾಯಿಸಿ ಬಹು ದೊಡ್ಡ ಸಂಪತ್ತು ಪಡೆದುಕೊಂಡ. ಅವನ ಮಗ ಭವಾನಿದಾಸ್, ಟಿಪ್ಪೂ ಸುಲ್ತಾನನ ಮೇಲೆ 1799ರಲ್ಲಿ ಕೊನೆಯ ಧಾಳಿ ಮಾಡಿ ಯಶಸ್ವಿಯಾದ ಯುದ್ಧಕ್ಕೆ ಎಲ್ಲ ಸರಬರಾಜು ಮಾಡಿದವನು. ಅದು ಎಷ್ಟೊಂದು ಮುಖ್ಯವೆಂದು ಬ್ರಿಟಿಷ್ ಸೇನಾಧಿಕಾರಿ ಪರಿಗಣಿಸಿದನೆಂದರೆ, ಭವಾನಿ ದಾಸನ ಸಹಾಯದ ಸ್ಮರಣಾರ್ಥವಾಗಿ ಟಿಪ್ಪುವಿನ ಅಮೂಲ್ಯ ಖಡ್ಗವನ್ನೇ ಕೊಡುಗೆಯಾಗಿ ನೀಡಿದ.

ಹೀಗೆ ಈ ವ್ಯಾಪಾರಿ ಗಣ ಮೊಘಲರ ಮತ್ತು ನವಾಬರ ಸೇವೆಯಲ್ಲಿ ತಮ್ಮ ಸಂಪತ್ತನ್ನು ಹಲವು ಪಟ್ಟು ವೃದ್ಧಿಸಿಕೊಂಡಿದ್ದವರು ತಮ್ಮ ಹಣದ ಸಂಪತ್ತು, ರಾಜಕೀಯ ಸ್ಥಾನ, ತಂತ್ರಗಾರಿಕೆ, ಬುದ್ಧಿವಂತಿಕೆಯನ್ನು  ಬ್ರಿಟಿಷರಿಗೆ ಒತ್ತೆಯಿಟ್ಟು ಅವರು ಭಾರತವನ್ನು ಆಕ್ರಮಿಸಿಕೊಳ್ಳಲು ಸಹಾಯ ಮಾಡಿದರು. ಬಂಡವಾಳಕ್ಕೆ, ಬಂಡವಾಳಿಗರಿಗೆ ಲಾಭ, ದುರ್ಲಾಭಗಳನ್ನು ಬಿಟ್ಟರೆ ಬೇರೇನೂ ಲೆಕ್ಕಕ್ಕಿಲ್ಲ ಎಂಬುದಕ್ಕೆ ಮಾರವಾಡಿ, ಪಾರ್ಸಿ ವರ್ತಕರ ಈ ವರ್ತನೆ ಐತಿಹಾಸಿಕ ಸಾಕ್ಷಿಯಾಗಿದೆ.

ಮುಂದೆ ಸಿಪಾಯಿ ದಂಗೆ ಎಂದು ಕರೆಯಲಾದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರ ಪಾತ್ರ ಮತ್ತೊಂದು ಸಾಕ್ಷಿಯಾಗಿದೆ.

ಮುಂದಿನ ವಾರಕ್ಕೆ.

ಇದನ್ನೂ ನೋಡಿ: ಅಂಬೇಡ್ಕರ್ ಕುರಿತ ಹೇಳಿಕೆ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ Janashakthi Media

 

Donate Janashakthi Media

Leave a Reply

Your email address will not be published. Required fields are marked *