ಜ್ಞಾನದ ಕೇಂದ್ರಗಳಾಗಿರುವ ಕೇರಳದ ಶಾಲೆಗಳು

ಪಾಠಶಾಲೆಗಳೆಂದರೇನು? ಎತ್ತರದ ಕಟ್ಟಡಗಳು, ಸುತ್ತಲೂ ರಕ್ಷಣೆಯ ಗೋಡೆಗಳು, ದುಬಾರಿ ಶಾಲಾ ಸಮವಸ್ತ್ರಗಳಲ್ಲ. ಪಾಠಶಾಲೆಗಳೆಂದರೆ ಮಾನವ ಜೀವನವನ್ನು ರೂಪಿಸುವ, ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಕೇಂದ್ರಗಳು, ಅರಿವಿನ ಕೇಂದ್ರಗಳು. ಮಾನವೀಯ ಮೌಲ್ಯಗಳನ್ನು ಕಲಿಸುವ ಆಧುನಿಕ ಮಂದಿರಗಳು. ಅಂತಹ ಶಿಕ್ಷಣ ವ್ಯವಸ್ಥೆಯನ್ನು ನಾವು ಕೇರಳದಲ್ಲಿ ನೇರವಾಗಿ ಅಧ್ಯಯನ ಮಾಡಿದ್ದೇವೆ. ಅಕ್ಟೋಬರ್ 30 ಮತ್ತು 31 ರಂದು, ಕೋಝಿಕ್ಕೋಡ್‌ ನಲ್ಲಿ ಕೇರಳ ಬಾಲ ಸಂಘಂ (Balasangham)ನ 7 ನೇ ರಾಜ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ನಾವು ಸದ್ಭಾವನಾ ಸಂದೇಶವಾಹಕರಾಗಿ ಭಾಗವಹಿಸಿದ್ದೆವು. ಅಲ್ಲಿ ಓದುವುದು ಮಾತ್ರವೇ ಅಲ್ಲ. ಆಟಪಾಠದ ಜೊತೆಗೆ ಅವರು ಜೀವನದ ಪಾಠಗಳನ್ನೂ ಕಲಿಸುತ್ತಾರೆ. ತರಗತಿ ಕೊಠಡಿಗಳಲ್ಲಿಯೇ ನಿಜವಾದ ಪ್ರಜೆಗಳನ್ನು ರೂಪಿಸುತ್ತಿದ್ದಾರೆ. ಉತ್ತಮ ವಾತಾವರಣ, ಫಲವತ್ತಾದ ಮಣ್ಣಿನಲ್ಲಿ ಗುಣಮಟ್ಟದ ಬೀಜಗಳನ್ನು ಬಿತ್ತಿದರೆ, ಉತ್ತಮ ಹಣ್ಣುಗಳನ್ನು ಕೊಡುವ ಮರಗಳಾಗಿ ಬೆಳೆಯುತ್ತವೆ. ತಾಯಿ ಮಣ್ಣು/ನೀರು ಮತ್ತು ತಂದೆಯನ್ನು ಬೀಜವನ್ನಾಗಿ ಭಾವಿಸಿದರೆ.. ಶಿಕ್ಷಕ ಸೂರ್ಯರಶ್ಮಿಯಂತೆ. ಈ ಮೂವರಿಂದ ಮಾತ್ರವೇ ಎಳೆಯ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ. ಈ ಮೂವರ ಸಹಭಾಗಿತ್ವದಲ್ಲಿ ನಡೆಯುತ್ತಿರುವುದೇ ಕೇರಳದ ಶಿಕ್ಷಣ ವ್ಯವಸ್ಥೆ.
ಜ್ಞಾನ

– ಲೇಖಕರು: ಭೂಪತಿ ವೆಂಕಟೇಶ್ವರಲು, ತೆಲಂಗಾಣ ಬಾಲೋತ್ಸವ ಸಮಿತಿ ಅಧ್ಯಕ್ಷ,

ಕೃಪೆ: ಪ್ರಜಾಶಕ್ತಿ (ಕನ್ನಡಕ್ಕೆ: ಸಿ.ಸಿದ್ದಯ್ಯ)

ಮಾನವೀಯತೆ, ಪ್ರೀತಿ, ಭ್ರಾತೃತ್ವದಿಂದ ಇತರರಿಗೆ ಸಹಾಯ ಮಾಡುವ ದೃಢ ಸಂಕಲ್ಪದೊಂದಿಗೆ ಕೇರಳ ‘ಬಾಲ ಸಂಘಂ’ ಅನ್ನು ರಚಿಸಿದೆ. ಸ್ವಾತಂತ್ರ್ಯ, ರಾಷ್ಟ್ರೀಯತೆಯ ಸ್ಪೂರ್ತಿಯ ಜೊತೆಗೆ ಜಾತಿ, ಧರ್ಮ, ಪ್ರದೇಶ, ಭಾಷೆ, ಲಿಂಗ, ಪ್ರಕೃತಿ ಎಂಬ ತಾರತಮ್ಯವಿಲ್ಲದೆ ವಿಶ್ವಶಾಂತಿ, ನೈಸರ್ಗಿಕ ಪರಿಸರದ ಕಾರ್ಯಸೂಚಿಯಾಗಿ ಉಚಿತ ಆಹಾರ, ಬಸ್ ಸೌಲಭ್ಯ, ಸಂಪೂರ್ಣ ಸಾಕ್ಷರತೆಯ ಕಡೆಗೆ… ಮುಂತಾಗಿ ಮಕ್ಕಳ ಹಕ್ಕುಗಳನ್ನು ವಿವರಿಸುವ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಹಳ್ಳಿಗಳಲ್ಲಿ ಇರುವ ಪ್ರತಿ ಮಗುವಿಗೆ ಭರವಸೆಯಾಗಿದೆ. ಬಾಲ ಸಂಘಂ ಕೇರಳದಲ್ಲೆಲ್ಲಾ ವಿಸ್ತಿರಿಸಿದೆ. 14 ಜಿಲ್ಲೆಗಳ 210 ಪ್ರದೇಶಗಳಲ್ಲಿ 2,279 ಗ್ರಾಮಗಳಲ್ಲಿ 31,258 ಘಟಕಗಳಲ್ಲಿ 13 ಲಕ್ಷ ಮಕ್ಕಳೊಂದಿಗೆ ವಿಸ್ತರಿಸಿದೆ.

ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧೀಜಿಯವರೆಗೆ, ಮಾಂಟೆಸ್ಸರಿಯಿಂದ ಗಿಜುಬಾಯಿಯವರೆಗೆ ಅನೇಕ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ಮಕ್ಕಳನ್ನು ರೂಪಿಸುತ್ತಿದ್ದಾರೆ. ಅಲ್ಲಿ ದೊಡ್ಡವರು ಮಕ್ಕಳೊಂದಿಗೆ ಸ್ನೇಹ ಬೆಳೆಸುತ್ತಾರೆ. ಮಕ್ಕಳು ಹೇಳುವುದನ್ನು ಶ್ರದ್ಧೆಯಿಂದ ಕೇಳುತ್ತಾರೆ. ಮಕ್ಕಳ ಅಭಿಪ್ರಾಯಗಳನ್ನು ತಂದೆ ತಾಯಂದಿರು, ಹಿರಿಯರು ಕೇಳುವ ಸಂಪ್ರದಾಯ ಅವರ ಸಂಸ್ಕೃತಿಯಲ್ಲಿಯೇ ಇದೆ. ಇಂಗ್ಲಿಷಿನ ಜೊತೆಗೆ ಇತರ ಭಾಷೆಗಳನ್ನು ಎಷ್ಟೇ ಕಲಿತರೂ, ಅವರಿಗೆ ಆಡಳಿತದಲ್ಲಿ, ಬೋಧನೆಯಲ್ಲಿ ಮಾತೃಭಾಷೆಯ ಮೇಲಿನ ಅಕ್ಕರೆ ಕಡಿಮೆಯಾಗಿಲ್ಲ.

ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿ

ಶಿಕ್ಷಣಕ್ಕಾಗಿ ಮಾಡುವ ಖರ್ಚುಗಳನ್ನು ಭವಿಷ್ಯದ ಪೀಳಿಗೆಗೆ ಅಡಿಪಾಯವಾಗಿ ನೋಡುತ್ತದೆ ಕೇರಳದ ಎಡಪಂಥೀಯ ಸರ್ಕಾರ. ಇಂದು ಮಾಡುವ ಖರ್ಚನ್ನು ನಾಳೆಯ ಹೂಡಿಕೆ ಎಂದು ಗುರುತಿಸುತ್ತದೆ. ಕೇರಳ ರಾಜ್ಯ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಿದೆ. ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿ ಮಾಡಲು ಬಾಲಕಾರ್ಮಿಕರ ಕಳ್ಳಸಾಗಣೆ ತಡೆಗೆ ಮಕ್ಕಳ ರಕ್ಷಣಾ ಘಟಕವನ್ನು ರಚಿಸಲಾಗಿದೆ. ಅಕ್ರಮ ಸಾಗಾಣಿಕೆ, ಮಕ್ಕಳ ಭಿಕ್ಷಾಟನೆ, ಅರ್ಧದಲ್ಲಿಯೇ ವಿದ್ಯಾಭ್ಯಾಸ ನಿಲ್ಲಿಸಿದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಾಲಕಾಲಕ್ಕೆ ಪರಿಹರಿಸಿದೆ. ಶಾಲೆಗಳಿಂದ ಯಾವುದೇ ಡ್ರಾಪ್‌ಔಟ್‌ಗಳನ್ನು ಖಚಿತಪಡಿಸಿಕೊಳ್ಳಲು ಚೈಲ್ಡ್ ಹೆಲ್ಪ್ ಡೆಸ್ಕ್ ರೆಸ್ಕ್ಯೂ ಫೋರ್ಸ್‌ (Child Help Desk Rescue Force)ನ ಸಮನ್ವಯದೊಂದಿಗೆ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ ಕಾರ್ಮಿಕರ ಪತ್ತೆಗಾಗಿ ವಾರದಲ್ಲಿ ಮೂರು ದಿನ ತಪಾಸಣೆ ನಡೆಸಲಾಗುತ್ತದೆ. ಬಾಲಕಾರ್ಮಿಕರು ಕಂಡರೆ ಅವರನ್ನು ಬಿಡುಗಡೆ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಮಕ್ಕಳು ಕೆಲಸದಲ್ಲಲ್ಲ. ಶಾಲೆಯಲ್ಲಿ ಇರಬೇಕು. ಶಾಲೆಗೆ ಬಾರದ ಮಕ್ಕಳೆಲ್ಲರೂ ಬಾಲಕಾರ್ಮಿಕರೇ. ಬಾಲ್ಯವು ಒಂದು ಹಕ್ಕು.

ಇದನ್ನೂ ಓದಿ : ಹವಾಮಾನದ ತಾಪಮಾನ ಹಾಗೂ ಅಸಮಾನತೆ

ಸರ್ಕಾರಿ ಶಾಲೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ

ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಿಗೆ ಅರಿವು ಮೂಡಿಸಿ, ಕೇರಳ ಸಮಾಜವನ್ನು ಒಪ್ಪಿಸಿ “ಬಾಲ್ಯವು ಶಾಲೆಯಲ್ಲಿಯೇ ಇರಬೇಕು” ಎಂದು ನಿರ್ಧರಿಸಿದ್ದಾರೆ. ಪಾಠಶಾಲೆ ಮಾತ್ರವೇ ಮಕ್ಕಳ ಬಗ್ಗೆ ಕಾಳಜಿ ವಹಿಸುವ ಏಕೈಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಕ್ಕಂತೆ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ಅಂತರರಾಷ್ಟ್ರೀಯ ಶಾಲೆಗಳಿಗೆ ಮಾನದಂಡವಾಗಿ ವಿನ್ಯಾಸಗೊಳಿಸಲಾಗಿದೆ. ಶಿಕ್ಷಣದ ಜೊತೆಗೆ ಆಟ ಮತ್ತು ಆಟದ ಮೈದಾನಗಳಿಲ್ಲದ ಶಾಲೆಗಳಿಗೆ ಅವಕಾಶವಿಲ್ಲ. ಪ್ರತಿ ಪಾಠಶಾಲೆಯು ಪಿಇಟಿ, ನಾಟಕ, ಸ್ಕ್ರಿಪ್ಟ್, ಡ್ಯಾನ್ಸ್ ಟೀಚರ್ ಇವರೆಲ್ಲರೂ ತಪ್ಪದೇ ಇರಬೇಕು. ಆಧುನಿಕ ವಿಜ್ಞಾನವನ್ನು ಕಾಲಕಾಲಕ್ಕೆ ಒದಗಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಶಿಕ್ಷಣ ತರಗತಿಗಳು, ಯೋಜನೆಯು ಪ್ರತಿ ಮಗುವು ಅದರ ಪ್ರಯೋಜನವನ್ನು ಪಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಸಮಾಜದ ಸಹಭಾಗಿತ್ವವಿಲ್ಲದೆ ಕೇವಲ ಸರ್ಕಾರದ ಪ್ರಯತ್ನಗಳು ಮಾತ್ರ ಫಲಿತಾಂಶವನ್ನು ನೀಡುವುದಿಲ್ಲ. ಅದಕ್ಕಾಗಿಯೇ ಎಲ್ಲ ಕ್ಷೇತ್ರಗಳ ಜನರ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಅನುತ್ತೀರ್ಣರಾದರೆ, ಶಿಕ್ಷಕರು ಅನುತ್ತೀರ್ಣ, ಶಿಕ್ಷಣ ವ್ಯವಸ್ಥೆಯು ಅನುತ್ತೀರ್ಣ ಆದಂತೆ ನೋಡುತ್ತಾರೆ.

ಮಕ್ಕಳ ನೈತಿಕ ಸ್ಥೈರ್ಯಕ್ಕಾಗಿ ಸಮರ ಕಲೆಗಳನ್ನು (Martial arts) ಕಲಿಸುತ್ತಾರೆ. ಪ್ರಾಚೀನ ನೃತ್ಯಗಳಲ್ಲಿ ತರಬೇತಿ ನೀಡುತ್ತಾರೆ. ಅರ್ಥವಾಗದ ಪಾಠಗಳನ್ನು ಕಲಾ ರೂಪಗಳ ಮೂಲಕ ಮನಸ್ಸಿಗೆ ನಾಟುವಂತೆ ಹೇಳಲಾಗುತ್ತದೆ. ಹೀಗಾಗಿ ಆಟಪಾಠಗಳು ಮಕ್ಕಳ ದೈನಂದಿನ ಜೀವನದ ಒಂದು ಭಾಗವಾಗಿದೆ.

ಡಿಜಿಟಲ್ ಪಾಠಶಾಲೆಗಳು

‘ಸಮಗ್ರ’ ಎನ್ನುವ ಪೋರ್ಟಲ್ ಮೂಲಕ ಕೇರಳ ಶಿಕ್ಷಣ ಇಲಾಖೆಯು ಸಾವಿರಕ್ಕೂ ಹೆಚ್ಚು ಸರ್ಕಾರಿ ಪಾಠಶಾಲೆಗಳನ್ನು ಡಿಜಿಟಲ್ ಪಾಠಶಾಲೆಗಳನ್ನಾಗಿ ಪರಿವರ್ತಿಸಿ 45 ಸಾವಿರ ಸ್ಮಾರ್ಟ್ ರೂಮ್‌ ಗಳನ್ನು ನಿರ್ಮಿಸಿದೆ. ಲಿಟಲ್ ಕೈಟ್ಸ್ ಮತ್ತು ಐಟಿ ಕ್ಲಬ್‌ ಗಳನ್ನು ರಚಿಸಿ ಯೂನಿಮೇಷನ್, ಕಿರುಚಿತ್ರಗಳು ಮತ್ತು ಸೈಬರ್ ಭದ್ರತೆ ಕುರಿತ ಅಂಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ, ವಾರದಲ್ಲಿ ಒಂದು ದಿನ ಕೋಳಿ ಮಾಂಸ ಬಡಿಸುತ್ತಾರೆ.

ಒಂದೇ ಸಮಯದಲ್ಲಿ ನೂರಾರು ಮಕ್ಕಳು ಒಟ್ಟಿಗೆ ಸೇರಿ ಊಟ ಮಾಡಬಹುದಾದ ಡೈನಿಂಗ್ ಹಾಲ್, ಪೋಷಕರ ವಿಸಿಟಿಂಗ್ ಹಾಲ್ ಮತ್ತು ದೊಡ್ಡ ಅಡುಗೆಮನೆ ಇರುತ್ತವೆ. ಸ್ವಚ್ಛತೆಯ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರುತ್ತಾರೆ. ಶಾಲೆಯ ಆವರಣದಲ್ಲಿ ಒಂದು ಎಲೆ ಬಿದ್ದರೂ ವಿದ್ಯಾರ್ಥಿಗಳು ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಾರೆ. ಪ್ರತಿ ಶಾಲೆಯಲ್ಲೂ ಒಳಾಂಗಣ ಕ್ರೀಡಾಂಗಣ ಇರುತ್ತದೆ. ಶಿಕ್ಷಣ ಒಂದೇ ಅಲ್ಲ. ಯಾವುದೇ ವಿದ್ಯಾರ್ಥಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ತರಬೇತಿ ನೀಡಲಾಗುತ್ತದೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ, ಒಬ್ಬ ಹಿಂದುಳಿದ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುತ್ತದೆ.

ಬಾಲ ಸಂಘಗಳೇ ಭವಿಷ್ಯದ ಶಕ್ತಿ

ಮಕ್ಕಳ ಸಾಂಸ್ಕೃತಿಕ ಉತ್ಸವಗಳು ‘ವೇನಲುಂಬಿಕಲ್’ (ಬೀದಿ ನಾಟಕಗಳು) ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳುಗಳಲ್ಲಿ ನಡೆಯುತ್ತದೆ. ನಾಲ್ಕು ಸಾವಿರ ಬಾಲ ಕಲಾವಿದರು 210 ಗುಂಪುಗಳಲ್ಲಿ ಮಕ್ಕಳ ಸಾಮಾಜಿಕ ಸಮಸ್ಯೆಗಳ ಕುರಿತು ಲಕ್ಷಾಂತರ ಜನರೊಂದಿಗೆ ಪ್ರದರ್ಶನ ನೀಡಿ, ವಯಸ್ಕರಲ್ಲಿಯೂ ಜಾಗೃತಿ ಮೂಡಿಸುತ್ತಾರೆ. ಆಟಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸುವವರನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಅಂತಹ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ವಿಶ್ವ ಕ್ರೀಡೆಗಳಲ್ಲಿ ವಿಜೇತರನ್ನಾಗಿಸುತ್ತಿದ್ದಾರೆ. ವೈಜ್ಞಾನಿಕ ವಿಚಾರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೇಸಿಗೆ ರಜೆಯಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ.ಜ್ಞಾನ

ಬಾಲ ಸಾಹಿತ್ಯ ಅಕಾಡೆಮಿ

ಮಲಯಾಳಂನಲ್ಲಿ ಬಾಲ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಮಕ್ಕಳ ಬರಹಗಳು, ಮುದ್ರಣಗಳು ಅಲ್ಲಿಂದ ಹೊರಬರುತ್ತವೆ. ಪ್ರತಿ ಮನೆಗಳಲ್ಲಿ ಗ್ರಂಥಾಲಯ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಾರೆ. ಮಕ್ಕಳ ಕಾರ್ಯಕ್ರಮಗಳಲ್ಲಿ ಕುಟುಂಬಗಳು ಮತ್ತು ವಯಸ್ಕರು ಭಾಗವಹಿಸುತ್ತಾರೆ. ಸಂವಿಧಾನದ ಪೀಠಿಕೆ ವಾಚನ ಮಾಡುವ ಮಕ್ಕಳ ಸಭೆ, ಸಂಸದೀಯ ಕಾರ್ಯಕ್ರಮಗಳು, ಜಾತ್ಯತೀತ, ಮಾನವೀಯತೆ, ಸರ್ವಧರ್ಮೀಯ ಉತ್ಸವಗಳು ಮತ್ತು ಔತಣಕೂಟಗಳನ್ನು ಆಯೋಜಿಸುತ್ತಾರೆ. ಜ್ಞಾನ

ವಿಜ್ಞಾನ ಆಧಾರಿತ ಸಮಾಜ ನಿರ್ಮಾಣದೆಡೆಗೆ

ಸೂರ್ಯ ಗ್ರಹಣ, ಚಂದ್ರ ಗ್ರಹಣ, ಮೂಢನಂಬಿಕೆಗಳಿಗೆ ಸವಾಲೊಡ್ಡಿದ ಹತ್ತು ಸಾವಿರ ಮಕ್ಕಳು ರಸ್ತೆಗಿಳಿದು ಗ್ರಹಣವನ್ನು ವೀಕ್ಷಿಸಿದರು. ವಿಜ್ಞಾನದ ಅದ್ಭುತ ಪ್ರದರ್ಶನಗಳು, ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಜಗತ್ತು ಮಕ್ಕಳದ್ದು, ಬೆಳೆಯಲು ಎಲ್ಲೆಗಳಿಲ್ಲ ಎಂಬಂತೆ ವಿಜ್ಞಾನ ಆಧಾರಿತ ಸಮಾಜ ನಿರ್ಮಾಣದಲ್ಲಿ ಯೋಜಿತ ಹೆಜ್ಜೆ ಇಡುತ್ತಿದೆ.

ಎಲ್ಲರಿಗೂ ಶಿಕ್ಷಣ, ಸಮಾನ ಶಿಕ್ಷಣ, ಗುಣಮಟ್ಟದ ಶಿಕ್ಷಣ, ಉಚಿತ ಶಿಕ್ಷಣ ನೀಡುತ್ತಿದ್ದರೂ ಧಾರ್ಮಿಕ ಶಕ್ತಿಗಳು ಮತ್ತೆ ಕತ್ತಲೆಗೆ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ‘ವಿಜ್ಞಾನದ ಬೆಳಕಿನಲ್ಲಿಯೇ ಧರ್ಮಗಳೂ ನಶಿಸಿ ಹೋಗುತ್ತವೆ, ಜ್ಞಾನವಷ್ಟೇ ಬೆಳಕಾಗಿ ಉಳಿಯುತ್ತದೆ’ ಎಂಬ ದೃಷ್ಟಿಯಲ್ಲಿ ಬಾಲ ಸಂಘಂ ನ ಮಕ್ಕಳೇ ಇತರೆ ಮಕ್ಕಳನ್ನು, ದೊಡ್ಡವರನ್ನು ಪ್ರಗತಿಪರ ಸಂಸ್ಕೃತಿಯತ್ತ ಕರೆದೊಯ್ಯುತ್ತಿದ್ದಾರೆ. ಹೊಸ ಸಮಾಜದ ಕಡೆಗೆ ಭವಿಷ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಒಳ್ಳೆಯ ದಿನಗಳಿಗಾಗಿ ಒಳ್ಳೆಯ ನೀತಿಗಳಿಗಾಗಿ ಕೇರಳ ಒಂದು ಉತ್ತಮ ಸಂಕೇತವಾಗಿದೆ. ಜ್ಞಾನ

ಇದನ್ನೂ ನೋಡಿ : ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ Janashakthi Media

Donate Janashakthi Media

Leave a Reply

Your email address will not be published. Required fields are marked *