– ಎನ್ ಚಿನ್ನಸ್ವಾಮಿ ಸೋಸಲೆ
ಅಂಬೇಡ್ಕರ್ ಅವರನ್ನು ದೇವರು ಹಾಗೂ ದೇವರೆಂದು ಎಂದು ಕರೆಯಲು – ಕರೆದು ನಂಬಿಸಲು ಹಂಬಲಿಸುತ್ತಿರುವ ವರ್ಗ ಸ್ವಾತಂತ್ರ ಬಂದು ಎಪ್ಪತೆಂಟು ವರ್ಷಗಳ ನಂತರ ತಲೆಯೆತ್ತಿ ಮೆರೆಯುತ್ತಿದೆ.
ಬುದ್ಧನನ್ನು ವಿಷ್ಣುವಿನ ಅವತಾರ ಎಂದು ಕರೆದು, ವಿಷ್ಣುವಿನ ಬಿರುದಾಂಕಿತವಾಗಿರುವ “ಭಗವಾನ್” ಎಂಬ ಬಿರುದನ್ನು ನೀಡಿ “ಭಗವಾನ್ ಗೌತಮ ಬುದ್ಧ” ರನ್ನಾಗಿಸಿ – ಒಂದಷ್ಟು ದೇವರು ರೂಪವನ್ನು ನೀಡಿ ನಂಬಿಸಿದಂತೆ – ವೈದಿಕ ಧರ್ಮದ ವಿರುದ್ಧ ಸಿಡಿದಿದ್ದು ಕನ್ನಡ ನೆಲದಲ್ಲಿ ಪ್ರಪಂಚಕ್ಕೆ ಮಾದರಿಯಾಗುವ ಸಮ ಸಂಸ್ಕೃತಿ ಪ್ರತಿಪಾದನೆ ಮಾಡುವ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣನನ್ನು ಬಸವೇಶ್ವರ ರನ್ನಾಗಿಸಿ “ದೇವರ” ರೂಪ ನೀಡಿದಂತೆ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಸಹ ಹಿಂದೂ ಧರ್ಮದ ಪ್ರವರ್ಧಕ- ರಕ್ಷಕ – ಹಿಂದೂ ಧರ್ಮದ ಆಶಾ ಜ್ಯೋತಿ ಎಂದು ಹೇಳಿಕೊಂಡು, ಅ ಮೂಲಕ ಅವರನ್ನು ದೇವರನ್ನಾಗಿಸಿ ಭಾರತದ ಬಹುದೊಡ್ಡ ಈ ನೆಲದ ಮೂಲನಿವಾಸಿಗಳ ಕಾಯಕ ಸಿದ್ಧಾಂತದ ಜನವರ್ಗವನ್ನು ಪುರಾಣದ ಮೂಲಕ ಕಟ್ಟಾಕಲು ಮುಂದಾಗುತ್ತಿರುವುದಕ್ಕೆ ಜ್ವಲಂತ ನಿದರ್ಶನಗಳಿವೆ. ಈ ಪದ್ಧತಿಗೆ ಭಾರತದ ಜನತೆಯಲ್ಲಿ ಬಹುದೊಡ್ಡ ಪರಂಪರೆ ಇದೆ. ಈ ಅರ್ಥದಲ್ಲಿ ಬಾಬಾಸಾಹೇಬರು ಹೇಳಿದ ಮಾತು “ಇತಿಹಾಸವನ್ನು ಮರೆತವರು- ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ಜ್ಞಾನವಂತ ಮಾತು.
ಇಂದು,
ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ವ್ಯಕ್ತವಾಗುತ್ತಿರುವ ಈ ನೆಲ ಮೂಲ ಸಂಸ್ಕೃತಿಯ ಜನ ವರ್ಗದ ಬಹುದೊಡ್ಡ ಬೆಂಬಲದ ಮಾದರಿಯಲ್ಲಿಯೇ….
ಅಂದು,
ಬುದ್ಧ ನಿಧನದ ನಂತರ ವ್ಯಕ್ತವಾದ ಅಗಾಧ ಬೆಂಬಲಿಗರನ್ನು ಸೆಳೆಯಲು ಬುದ್ಧನನ್ನು ದೇವರನ್ನಾಗಿಸಿದಂತೆ ಇಂದು ಅಂಬೇಡ್ಕರ್ ಅವರನ್ನು ಸಹ ದೇವರನ್ನಾಗಿಸಲು ಮುಂದಾಗುತ್ತಿರುವುದಕ್ಕೆ ಜ್ವಲಂತ ನಿದರ್ಶನಗಳಿವೆ.
ಭಾರತಕ್ಕೆ ಆಗಮನ ಮಾಡಿದವರು ಪುರಾಣದ ಮೂಲಕವೇ ರಾಷ್ಟ್ರವನ್ನು ಕಟ್ಟಿದ್ದೆ ಹೊರತು ವಾಸ್ತವದ ಮೂಲಕ ಅಲ್ಲ ಎಂದು. ಎರಡುವರೆ ಸಾವಿರ ವರ್ಷಗಳ ರಾಜಕೀಯ ಚರಿತ್ರೆಯನ್ನು ಹೊಂದಿರುವ ಈ ಭಾರತದಲ್ಲಿ ಯಾವ ಚಕ್ರವರ್ತಿ- ಸಾಮ್ರಾಟ – ಸುಲ್ತಾನ – ರಾಜ, ಮಹಾರಾಜ- ಪಾಳ್ಳೇಗಾರರು ಸಹ ವಾಸ್ತವದಲ್ಲಿ ಲಿಖಿತ ಸಂವಿಧಾನವನ್ನು ಇಟ್ಟುಕೊಂಡು ಆಳ್ವಿಕೆ ಮಾಡಿರುವುದಕ್ಕೆ ನಿದರ್ಶನ ಇಲ್ಲ. ಇರುವುದು ಒಂದೇ ಪುರಾಣದ ದೇವರು ಹಾಗೂ ದೇವರ ಸುತ್ತ ಬೆಸೆದುಕೊಂಡಿರುವ ಸ್ವಾರ್ಥ ಸಾಧನೆಯ ಜನವರ್ಗದವರು ರೂಪಿಸಿದ ಅಲಿಖಿತ ಕಟ್ಟುಪಾಡುಗಳ ಸಂವಿಧಾನವೇ ಎಂಬುದನ್ನು ಮರೆಯಬಾರದು.
ಇಂತಹ ಪಾರಂಪರಿಕ ಅಲಿಖಿತ ಸಂವಿಧಾನದ ದೇವರಿನ ಹೆಸರಿನ ಸಿದ್ಧಾಂತವನ್ನು ಬಯಸುವ ಜನರು ವಾಸ್ತವದ ಲಿಖಿತ ಸಂವಿಧಾನ ಹಾಗೂ ಅದನ್ನು ಬರೆದವರನ್ನು ಒಪ್ಪದೇ ಇರುವುದಕ್ಕೆ ಎಪ್ಪತೆಂಟು ವರ್ಷಗಳ ಸಾಕ್ಷಿ ಇದೆ.
ಇದನ್ನೂ ಓದಿ : ನವ ಉದಾರವಾದ ಮತ್ತು ಅದರ ಮೊದಲು – ಜಿಡಿಪಿ ದತ್ತಾಂಶ ಮರೆಮಾಚುವ ಸತ್ಯಾಂಶ
ಅಂಬೇಡ್ಕರ್ ರವರು ಬೆವರಿನ ಸಿದ್ಧಾಂತದ ನೆಲ ಮೂಲ ಸಂಸ್ಕೃತಿಯ ಬಹುದೊಡ್ಡ ವಾರಸುದಾರರು. ಇಂತಹ ಅಂಬೇಡ್ಕರ್ ಹಾಗೂ ಅವರ ಹೆಸರಿನ ಜಾಗದಲ್ಲಿ ಇಂದು ತೀರ್ಥದ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವ ಪುರಾಣ ಹಿನ್ನೆಲೆಯ ದೇವರನ್ನು ತರಲು ಪಾರಂಪರಿಕ ರಾಷ್ಟ್ರೀಯವಾದಿಗಳು ಮುಂದಾಗುತ್ತಿರುವುದು ದುರಂತವೆ ಸರಿ.
ಈ ಹಿನ್ನೆಲೆಯಿಂದಲೇ ಯಾವ ಜನಪರ ಸಿದ್ಧಾಂತಕ್ಕೂ ಬೆಲೆಕೊಡದ, ತಮ್ಮ ಸಿದ್ದಾಂತದಲ್ಲಿ ಜನಪರ ಕಲ್ಯಾಣವನ್ನು ಬಯಸದ, ದೇವರ ಹೆಸರಿನಲ್ಲಿ ತಮ್ಮ ಐಡೆಂಟಿಟಿಯನ್ನು ಬಯಸುವ ಜಯಮಾನದವರು ಇಂದು ತಮ್ಮ ತಳಬುಡವಿಲ್ಲದ – ಬಹುಜನರ ಮೇಲೆ ದಯೆಯೇ ಇಲ್ಲದ “ದೇವರು” ಎಂಬ ಅಜ್ಞಾನವನ್ನೇ ಹೆಗಲ ಮೇಲೆ ಕೂರಿಸಿ ಮೆರೆದಾಡಿಸಲು ಮುಂದಾಗುತ್ತಿರುವುದು. ಇವರು ದೇವರ ಹೆಸರಿನಲ್ಲಿ ” ಅಸ್ಪೃಶ್ಯತೆ ಹಾಗೂ ಅಮಾನವೀಯ ಪದ್ಧತಿಗಳನ್ನು ಜಾರಿಗೆ ತಂದು ಧರ್ಮ ಹಾಗೂ ಜಾತಿಯ ಹಿನ್ನೆಲೆಯಿಂದ ಜನರನ್ನು ಹೊಡೆದಾಳಿದ ” ಸಂವಿಧಾನವನ್ನು ಬಯಸುತ್ತಾರೆಯೇ ಹೊರತು – ” ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು ” ಎಂಬ ಸಿದ್ಧಾಂತದ ಮೂಲಕ ಭಾರತ ಹಾಗೂ ಭಾರತೀಯರನ್ನು ಗಟ್ಟಿತನದ ಸ್ವಾತಂತ್ರ್ಯ ಸಮಾನತೆ ಹಾಗೂ ಭಾದೃತ್ವದ ಹಿನ್ನೆಲೆಯಿಂದ ಬೆಸೆದಿರುವ, ಅಂಬೇಡ್ಕರ್ ಅವರು ಭಾರತೀಯರಿಗಾಗಿ ತಮ್ಮ ಒಡಲಾಳದಿಂದ ಕರುಳು-ಬಳ್ಳಿ ಬೆಸೆಯುವ ಮಾದರಿಯಲ್ಲಿ ಬರೆದ, ಸ್ವಾತಂತ್ರ ಭಾರತ ಪ್ರಜಾಪ್ರಭುತ್ವ ಹಿನ್ನೆಲೆಯಿಂದ ಸರ್ವಜ್ಞರ ಹಿತಕ್ಕಾಗಿ ಆಳ್ವಿಕೆ ಮಾಡಲು ಅಳವಡಿಸಿಕೊಂಡು ಆಳ್ವಿಕೆ ಮಾಡುತ್ತಿರುವ ಸಿದ್ಧಾಂತದ ಅಂಬೇಡ್ಕರ್ ಅವರು ರೂಪಿತ ಜನಪರ ಸಂವಿಧಾನ ಇಷ್ಟವಾಗುತಿಲ್ಲ.
ಸಂವಿಧಾನವಿರಲಿ.. ಸಂವಿಧಾನವನ್ನು ಬರೆದದ್ದು ಅಸ್ಪೃಶ್ಯ ವರ್ಗದ “ವಿಶ್ವಜ್ಞಾನಿ ಅಂಬೇಡ್ಕರ್” ಎಂಬ ಕಾರಣಕ್ಕಾಗಿ ಅವರ ಹೆಸರನ್ನು ಹೇಳಲು ಬಾಯಲ್ಲಿ ಧ್ವನಿ ಕಟ್ಟಿಕೊಳ್ಳುತ್ತಿದೆ. ಶತಶತಮಾನಗಳ ತಮ್ಮ ಪಿತ್ರಾಜಿತ ಶಾಶ್ವತ ಆಸ್ತಿಯಾದ “ಮಾನಸಿಕ ಅಸ್ಪೃಶ್ಯತೆ” ಯ ಕೊಳಚೆ ನೀರಲ್ಲಿ ಕುಳಿತು ದೇವರನ್ನು ಮುಂದೆ ಇಟ್ಟುಕೊಂಡು ಅ ಕೊಳಕನ್ನೇ ಸುಗಂಧವೆಂದು ಹೇಳುತ್ತಿರುವವರು ವಾಸ್ತವತೆಯನ್ನು ಪ್ರತಿಪಾದನೆ ಮಾಡಿದ ಅಂಬೇಡ್ಕರ್ ಅವರ ಹೆಸರನ್ನು ಹೇಳಲು ಸಾಧ್ಯವೇ..?
ಪುರಾಣದ ಮೂಲಕ ಭಾರತವನ್ನು ಬಹು ಗಟ್ಟಿತನದಿಂದ ಸಾಂಸ್ಕೃತಿಕವಾಗಿ ಕಟ್ಟಿದ್ದೇವೆ ಎಂದು ತಮಗೆ ತಾವೇ ಹೇಳಿಕೊಳ್ಳುವವರು, ಶತಶತಮಾನಗಳಿಂದ ಈ ನಾಡನ್ನು ಅಜ್ಞಾನದ ಕೊಂಪಿಗೆ ದೂಡಿ, ಬಹುಜನರಿಗೆ ಶಿಕ್ಷಣದ ಹಕ್ಕನ್ನೇ ನೀಡದೆ – ಇರುವ ಒಂದಷ್ಟು ಶಿಕ್ಷಣವನ್ನು ತಾವೇ ಪಡೆದು ನಾವೇ ಬಹುದೊಡ್ಡ ಜ್ಞಾನಿಗಳು ಎಂದು ಹೇಳಿಕೊಂಡವರು ಇವರು. ಇವರ ಈ ಏಕಮುಖ ಸಿದ್ದಾಂತದ ಅಲ್ಪ ಜ್ಞಾನದ ಅಜ್ಞಾನದ ಕೊಂಪೆಯನ್ನೇ ಪರಮೋಚ್ಚ ಜ್ಞಾನವೆಂದು ಹೇಳಿಕೊಂಡು ಇವರೇ ಸೃಷ್ಟಿ ಮಾಡಿದ ರಾಜ- ಮಹಾರಾಜ -ಚಕ್ರವರ್ತಿಗಳ ಮುಂದೆ ಮೆರೆದವರಿಗೆ ವಾಸ್ತವ ಭಾರತದ ಅಂಬೇಡ್ಕರ್ ಹಾಗೂ ಅವರು ಭಾರತೀಯರಿಗಾಗಿ ಒಡಲಾಳದಿಂದ ರಚಿಸಿರುವ ಸಂವಿಧಾನ ಹಾಗೂ ಅದರ ವಾಸ್ತವತೆ ಕಿಂಚಿತ್ತೋ ಕಾಣುತ್ತಲೆ ಇಲ್ಲ. ಏಕೆಂದರೆ ಇವರಿಗೆ ಶಾಶ್ವತವಾದ ಮಾನಸಿಕ ಅಸ್ಪೃಶ್ಯತೆ ಆವರಿಸಿದೆ. ಭಾರತದಲ್ಲಿ ನಿಜ ಅಸ್ಪೃಶ್ಯರು ಇವರೇ.
ಮುಂದುವರೆದು, ಅವರ ಪಾರಂಪರಿಕ ಶಾಶ್ವತವಾದ ಮಾನಸಿಕ ಅಸ್ಪೃಶ್ಯತೆಯ ಹಿನ್ನೆಲೆಯಿಂದ ಇದು ಕಾಣುವುದೂ ಇಲ್ಲ ಎಂಬುದಕ್ಕೆ ಪ್ರಜಾಪ್ರಭುತ್ವ ಭಾರತದ ನಿರಂತರ ಸಂವಿಧಾನ ಉಲ್ಲಂಘನೆಯ ಅನೇಕ ಘಟನೆಗಳು ಸಾಕ್ಷಿಯಾಗುತ್ತಿವೆ. ಭಾರತಕ್ಕೆ ವಾಸ್ತವದ ಸಂವಿಧಾನ ಇದೆ. ಅದು ತನ್ನದೇ ಆದ ಕಾನೂನುಗಳನ್ನು ಜನಪರವಾಗಿ ರೂಪಿಸಿಕೊಂಡಿದೆ. ಆದರೆ ದೇವರು ಎಂಬ ಹಿನ್ನೆಲೆಯ ಅಜ್ಞಾನವೇ ಸಂವಿಧಾನದ ಕಾನೂನುಗಳನ್ನು ನಿಯಂತ್ರಿಸುತ್ತಿದೆ ಎಂಬುವುದಕ್ಕೆ ನಮ್ಮ ಗ್ರಾಮೀಣ ಜನರ ಜಾತಿ, ಜಾತಿ ಹಿನ್ನೆಲೆಯಿಂದ ಶ್ರೇಷ್ಠ -ಕನಿಷ್ಠ, ಊರು- ಕೇರಿ ಎಂಬ ಬಹುದೊಡ್ಡ ಸಾಮಾಜಿಕ ಅಂತರದಿಂದ ಸ್ಮೃಶ್ಯ -ಅಸ್ಪೃಶ್ಯ ಎಂಬ ಸಾಮಾಜಿಕ ಅಂತ ಪತನವೇ ಸೃಷ್ಟಿಯಾಗಿರುವುದು ಸಾಕ್ಷಿಯಾಗಿದೆ. ಸಂವಿಧಾನದ ನಿಯಮಗಳು ರಾಷ್ಟ್ರಪತಿಯಿಂದ ಸಾಮಾನ್ಯ ಜನರವರೆಗೂ ಒಂದೇ ನಿಯಮಗಳು ಇದ್ದರೂ ಸಹ ಇಂತಹ ಪ್ರದೇಶಗಳಲ್ಲಿ ಮೌಖಿಕವಾಗಿಯೇ ಪ್ರಬಲ ಕಟ್ಟುಪಾಡುಗಳ ಆಧಾರದಲ್ಲಿ ಸೃಷ್ಟಿಯಾಗಿರುವ ಶ್ರೇಣಿಕೃತ ಬದುಕಿನ ಚಿತ್ರಣವೆ ಸಾಕ್ಷಿಯಾಗಿದೆ. ಇಂತಹ ಅಮಾನುಷ ಹಿನ್ನೆಲೆಯಿಂದಲೇ ಪ್ರಶ್ನಾರ್ತಿತ ಮಾದರಿಯ ಅಜ್ಞಾನದ ನಿಯಂತ್ರಣ ಮಾಡಬಹುದಾದ ದೇವರನ್ನೇ ಮುನ್ನೆಲೆಗೆ ತರಲು ಇಂದು ಬಯಸುತ್ತಿರುವುದು. ಇಂತಹ ಸಂವಿಧಾನವನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹಿರಂಗವಾಗಿ ಸುಟ್ಟದ್ದು ಎಂಬುದನ್ನು ಮರೆಯಬಾರದು.
ಇದು ಸ್ಪಷ್ಟವಾಗಿ ಅವರ ಅಜ್ಞಾನದ ಕಣ್ಣಿಗೆ ಕಾಣುತ್ತಿದ್ದರೂ ಸಹ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಜಾತಿಯ ಹಿನ್ನೆಲೆಯಿಂದ ಅಜ್ಞಾನವನ್ನೇ ಜ್ಞಾನವೆಂದು, ದೇವರು- ದೇವರ ಸುತ್ತ ಬೆಸೆದುಕೊಂಡಿರುವ ಅವೈಜ್ಞಾನಿಕ ಹಿನ್ನೆಲೆಯ ಪುರಾಣದಿಂದ ಕಟ್ಟುಕಥೆ ರೂಪಿಸಿದ ಅಂಧಕಾರಿಗಳಿಗೆ ತಾವು ಮಾಡುತ್ತಿರುವ ತಪ್ಪು ಹಾಗೂ ಜನರಿಗೆ ಹೇಳುತ್ತಿರುವ ಸುಳ್ಳುಗಳು ಕಂಡರೂ ಕಾಣಲಿಲ್ಲ ಹಾಗೂ ಕೇಳುತ್ತಿದ್ದರು ಕೇಳಲಿಲ್ಲ.
ವಾಸ್ತವದ ಹಿನ್ನೆಲೆಯಿಂದ ಇದಕ್ಕೆ ನಿಜ ಕಾರಣ ದೇವರು ಹಾಗೂ ದೇವರ ಹೆಸರಲ್ಲಿ ಸೃಷ್ಟಿಯಾಗಿರುವ ಅಜ್ಞಾನ.
ಇದಕ್ಕೆ ಸ್ಪಷ್ಟವಾದ ಉತ್ತರ ಅಂಬೇಡ್ಕರ್ ಎಂಬ ವಾಸ್ತವದ ಜ್ಞಾನ. ಅಂಬೇಡ್ಕರ್ ಅವರ ಬದುಕು- ಜೀವನ, ಅಂಬೇಡ್ಕರ್ ಅವರ ಹೋರಾಟ ಹಾಗೂ ಸಂಘರ್ಷ, ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣಗಳು, ಅಂಬೇಡ್ಕರ್ ಅವರ ರೂಪಿಸಿದ ಸಂವಿಧಾನದಲ್ಲಿ ಸ್ಪಷ್ಟವಾದ ಉತ್ತರವಿದೆ. ಇವೆಲ್ಲವನ್ನು ನಿರಾಕರಿಸಲು ಅಂಬೇಡ್ಕರ್ ವಿರೋಧಿಗಳಿಗೆ ಇರುವ ದಾರಿ ಒಂದೇ ಶತಶತಮಾನಗಳಿಂದಲೂ ಈ ಭಾರತದ ಮೂಲ ನಿವಾಸಿ ಜನರನ್ನು ಮೂರ್ಖರನ್ನಾಗಿಸಿರುವ “ದೇವರು” ಎಂಬ ಅವೈಜ್ಞಾನಿಕ ಅಸ್ತ್ರ. ಈ ಅಸ್ತ್ರವನ್ನು ಬಿಟ್ಟರೆ.. ” ಬಂಡೆಯಲ್ಲೂ ನೀರು ಬರುತ್ತದೆ” “ಸಮುದ್ರದ ಮೇಲು ನಡೆದಾಡುತ್ತದೆ” “ಬಾಯಿಯೊಳಗೆಯೇ ಭೂಲೋಕವನ್ನು ದರ್ಶನ ಮಾಡಿಸುತ್ತದೆ” ಎಂಬುದು.
ಇಂತಹ ಪುರಾಣದ ಮಾಯಾ ಲೋಕಕ್ಕೆ ತಾನೇ ಶತಶತಮಾನಗಳಿಂದಲೂ ಭಾರತದ ಜನರು ತಲೆಬಾಗಿ ಮೂರ್ಖರಾಗಿರುವುದು. ಈ ಮೂರ್ಖತನವನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಖಂಡಿಸಿದ್ದು. ಅದಕ್ಕಾಗಿ “ಅಂಬೇಡ್ಕರ್ ” ಬೇಡ, ಆದರೆ ಇವರನ್ನು ಶತಶತಮಾನಗಳಿಂದಲೂ ಶಾಶ್ವತವಾಗಿ ಮೂರ್ಖರನ್ನಾಗಿಸಿದ್ದ “ದೇವರು” ಬೇಕು.
ಈ ” ದೇವರು ” ಎಂಬ ಅಸ್ತ್ರ ತಾನೇ ಈ ನೆಲ ಮೂಲ ಸಂಸ್ಕೃತಿಯ ಬಹುಜನರನ್ನು” ತನ್ನ ನೆಲದಲ್ಲಿ, ಅಂದರೆ ದೇಶದಲ್ಲಿಯೇ ಅಸ್ಪೃಶ್ಯತೆಯ ಸಂಕೋಲೆಗೆ ಸಿಲುಕಿಸಿ- ಮಾನವನಿಗೆ ಬದುಕಲು ಬೇಕಾದ ಕೆಲವೇ ಕೆಲವು ಮೂಲಭೂತ ಹಕ್ಕುಗಳಿಂದಲೂ ವಂಚಿಸಿ ಅನಾಥರನ್ನಾಗಿಸಿದ್ದು ” ಎಂಬ ಪರಿಜ್ಞಾನ ದೇವರ ಹೆಸರನ್ನು ಹೇಳುವವರಿಗೆ ಗೊತ್ತಿದ್ದರೂ ಸಹ ಗೊತ್ತಿಲದಂತೆ ನಟಿಸುತ್ತಾರೆ. ಮುಂದುವರೆದು ಅಸ್ಪೃಶ್ಯರಿಗೆ ಇದರ ಪರಿಜ್ಞಾನವೂ ಬಾರದಂತೆ ಕಾಲಕಾಲಕ್ಕೆ ಎಲ್ಲಾ ಮಾಲೆಗಳನ್ನು ಅವರ ಅಜ್ಞಾನದ ಕೊರಳಿಗೆ ಹಾಕಿಸಿ ನಡು ಬೀದಿಯಲ್ಲಿ ನಿಲ್ಲಿಸುತ್ತಿದ್ದಾರೆ.
ಹಾಗೆಯೇ ಬಹುಮುಖ್ಯವಾಗಿ
” ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರು ನಿಜ ಭಾರತೀಯರಿಗಾಗಿ ಬರೆದ ಸಂವಿಧಾನ ಈ ಎಲ್ಲ ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದು ತಮ್ಮ ಎರಡುವರೆ ಸಾವಿರ ವರ್ಷಗಳ ಸುದೀರ್ಘ ಅಮಾನುಯ ಬದುಕಿನ ಇತಿಹಾಸ ತಿಳಿದವರಿಗೆ ಮಾತ್ರ ಅರಿಯುತ್ತದೆ. ಅದನ್ನು ಸಂವಿಧಾನದ ಮೂಲಕ ಅಧಿಕರಿಸಿ , ತಮ್ಮ ಮುಂದಿನ ಬಹುದೊಡ್ಡ ಪರಂಪರೆಗೆ ಬಿಟ್ಟು ಹೋಗುವ ಗಟ್ಟಿತನದ ಭೀಮಜ್ಞಾನದ ಸ್ಪಷ್ಟವಾದ ಅರಿವಿರಬೇಕಾದವರಿಗೆ ಏನೋ ಗೊತ್ತಿಲ್ಲದಿದ್ದರೂ ಸಹ ತೋರಿಕೆಗಾಗಿ ಗೊತ್ತಿರುವ ಹಾಗೆ ನಟಿಸುತ್ತಿದ್ದಾರೆ ” ಇಂದು ಇಂತಹ ತೋರಿಕೆಯೇ ದಲಿತ ಪ್ರಜ್ಞೆಯಾಗಿ ಅನಾವರಣಗೊಂಡಿದೆ. ಇದು ಬಹು ಅಪಾಯಕಾರಿ.
ಈ ಇಬ್ಬರ ನಡುವೆ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಸಂವಿಧಾನ ಸಿಲುಕಿದೆ.
ನಮ್ಮ ದೇಶದಲ್ಲಿ ಹಸಿವು- ಬಡತನ – ಅಜ್ಞಾನಕ್ಕಿಂತಲೂ ಬಹು ಅಪಾಯಕಾರಿ ಎಂದರೆ “ಅಸ್ಪೃಶ್ಯತೆ” ಎಂಬುದನ್ನು ಮರೆಯಬಾರದು. ಹಾಗೆ ಈ ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡಿದ್ದು ಸಹ ದೇವಾಲಯ ಹಾಗೂ ದೇವಾಲಯದ ಒಳಗೆ ಆಸೀನರಾಗಿರುವ ದೇವರು ಎಂಬ ಅಜ್ಞಾನ ಕಲ್ಪಿತ ಪುರಾಣವನ್ನು ಸೃಷ್ಟಿ ಮಾಡಿದವರು ಎಂಬುದನ್ನು ಸಹ ಮರೆಯಬಾರದು.
ಇದನ್ನೂ ನೋಡಿ : ನಿರಂಜನ 100 | ದೇಶ -ವಿದೇಶದಲ್ಲಿ ಹೆಸರಾದ ನಿರಂಜನ – ವಿಶ್ಲೇಷಣೆ – ಜಿ.ಎನ್. ನಾಗರಾಜ Janashakthi Media