-ನಾ ದಿವಾಕರ
ಕೋವಿಡ್ 19 ವಿಶ್ವದಾದ್ಯಂತ ಜನರ ಬದುಕನ್ನು ಮೂರಾಬಟ್ಟೆ ಮಾಡಿದ ಸಂದರ್ಭದಲ್ಲೇ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳ ಫಲವಾಗಿ ಜಾಗತಿಕ ಆರ್ಥಿಕತೆಯಲ್ಲಿ ನೆಲೆ ಕಂಡುಕೊಂಡ ಡಿಜಿಟಲ್ ಹಣಕಾಸು ವಹಿವಾಟುಗಳು (Digital transactions) ಈಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಳ್ಳುವ ರೀತಿಯಲ್ಲಿ ಸರ್ವವ್ಯಾಪಿಯಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಾರ್ವತ್ರೀಕರಿಸುವಲ್ಲಿ ಭಾರತದ ಕೊಡುಗೆ ಮಹತ್ತರವಾಗಿದ್ದು, ನಮ್ಮ ದೇಶದ ಯುಪಿಐ ಮಾದರಿ (Unified payments interface) ವಿಶ್ವಮನ್ನಣೆ ಗಳಿಸಿದ್ದು, ಭಾರತ ಮಾರುಕಟ್ಟೆಯಲ್ಲಿ ಡಿಜಿಟಲ್ ಪಾವತಿಯನ್ನು ಬಳಸುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ. ಸಾಮಾನ್ಯ ಜನರಿಗೂ ತಮ್ಮ ನಿತ್ಯ ವ್ಯವಹಾರ ವಹಿವಾಟುಗಳನ್ನು ಸುಗಮವಾಗಿಸಿರುವ ಡಿಜಿಟಲ್ ಪಾವತಿ ವ್ಯವಸ್ಥೆಯು ಸಹಜವಾಗಿಯೇ ಅತಿ ಹೆಚ್ಚು ಜನರನ್ನು ಆಕರ್ಷಿಸಿದೆ.
ಇದಕ್ಕೆ ಪೂರಕವಾಗಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಸಹ ಡಿಜಿಟಲ್ ಸೌಲಭ್ಯಗಳನ್ನು ಎಲ್ಲ ವ್ಯವಹಾರಗಳಿಗೆ ವಿಸ್ತರಿಸಲಾಗಿದ್ದು, ಸಾರ್ವಜನಿಕರು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಕುಳಿತಲ್ಲೇ ನಿರ್ವಹಿಸುವ ಅನುಕೂಲಗಳನ್ನು ಕಲ್ಪಿಸಿದೆ. ಅಂತರ್ಜಾಲ ಬ್ಯಾಂಕಿಂಗ್ (Internet Banking ), ಗೂಗಲ್ ಪೇ, ಫೋನ್ ಪೇ ಮೊದಲಾದ ಸೌಲಭ್ಯಳೊಂದಿಗೇ ಬ್ಯಾಂಕುಗಳು ಗ್ರಾಹಕರ ಅನುಕೂಲಕ್ಕಾಗಿ ತಮ್ಮದೇ Appಗಳನ್ನು ಸಿದ್ಧಪಡಿಸಿ ಎಲ್ಲ ವಹಿವಾಟುಗಳನ್ನು ಮನೆಯಿಂದಲೇ ಫೋನ್ ಮೂಲಕವೇ ನಡೆಸಲು ಅನುಕೂಲ ಮಾಡಿಕೊಟ್ಟಿವೆ. ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಇದು ಸ್ವಾಗತಾರ್ಹ. ಆದರೆ ಈ ಪ್ರಗತಿಗೆ ಸಮಾನಾಂತರವಾಗಿ ಬ್ಯಾಂಕ್ ಗ್ರಾಹಕರಲ್ಲಿ, ಮಾರುಕಟ್ಟೆ ವ್ಯವಹಾರದಲ್ಲಿ ತೊಡಗುವ ಸಾಮಾನ್ಯ ನಾಗರಿಕರಲ್ಲಿ ಡಿಜಿಟಲ್ ಜ್ಞಾನ ಎಷ್ಟು ಬೆಳೆದಿದೆ ಎನ್ನುವುದೂ ಮುಖ್ಯವಾಗುತ್ತದೆ.
ತಾವು ಬಳಸುತ್ತಿರುವ ತಂತ್ರಜ್ಞಾನದ Appಗಳು ಮತ್ತು ಡಿಜಿಟಲ್ ಪಾವತಿಯ ಮಾದರಿಗಳು ಯಾವ ರೀತಿಯ ಅಪಾಯಗಳನ್ನು ತಂದೊಡ್ಡಬಹುದು ಮತ್ತು ಅವುಗಳಿಂದ ಪಾರಾಗುವ ಬಗೆ ಹೇಗೆ, ಅವುಗಳನ್ನು ತಡೆಗಟ್ಟುವ ರಕ್ಷಣಾ ವ್ಯವಸ್ಥೆಗಳೇನು ಎಂಬ ಅರಿವು ಸಾಮಾನ್ಯ ಜನರಲ್ಲಿ ಇಲ್ಲದಿರುವುದು, ಹಲವಾರು ರೀತಿಯ ಡಿಜಿಟಲ್ ಅಥವಾ ಆನ್‌ಲೈನ್ ವಂಚನೆಗಳಿಗೆ ಕಾರಣವಾಗಿದೆ. ಹಲವಾರು ಸಂದರ್ಭಗಳಲ್ಲಿ ಉನ್ನತ ಅಧಿಕಾರಿಗಳೂ ಸಹ ನಕಲಿ ಫೋನ್ ಕರೆಗಳಿಗೆ ಸ್ಪಂದಿಸಿ ತಮ್ಮ ಎಟಿಎಂ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆಯನ್ನು ಒದಗಿಸುವ ಮೂಲಕ ಲಕ್ಷಾಂತರ ರೂಗಳನ್ನು ಕಳೆದುಕೊಂಡಿದ್ದಾರೆ. ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿರುವ ಹಾಗೆಲ್ಲಾ ಡಿಜಿಟಲ್ ಸಾಕ್ಷರತೆಯೂ ಬೆಳೆಯಬೇಕಾದ್ದು ವರ್ತಮಾನದ ತುರ್ತು.
ಡಿಜಿಟಲ್ ಬಂಧನ- ಹೊಸ ವಂಚನೆಯ ಮಾದರಿ
ಇತ್ತೀಚೆಗೆ ವರದಿಯಾಗುತ್ತಿರುವ ಡಿಜಿಟಲ್ ಬಂಧನ (Digital Arrest) ಎಂಬ ಹೊಸ ವಂಚನೆಯ ವಿಧಾನ ನೂರಾರು ಜನರನ್ನು ಕಂಗೆಡಿಸಿದೆ. ಕರ್ನಾಟಕದಲ್ಲೇ ಈ ವರ್ಷ ನಡೆದಿರುವ 641 ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಜನರು 109.41 ಕೋಟಿ ರೂಗಳನ್ನು ಕಳೆದುಕೊಂಡಿದ್ದಾರೆ. ಇದರ ಪೈಕಿ ಕೇವಲ 9.45 ಕೋಟಿ ರೂ ಮರುವಸೂಲಿ ಮಾಡಲಾಗಿದ್ದು, ಇನ್ನೂ 100 ಕೋಟಿ ರೂಗಳನ್ನು ಶೋಧಿಸಬೇಕಿದ. 480 ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿದ್ದು, ಮೈಸೂರಿನಲ್ಲಿ 24 ಮತ್ತು ಮಂಗಳೂರಿನಲ್ಲಿ 21 ಪ್ರಕರಣಗಳು ವರದಿಯಾಗಿವೆ. ಈವರೆಗೂ 27 ಜನರನ್ನು ಬಂಧಿಸಲಾಗಿದೆ.
ಸಿಬಿಐ, ಜಾರಿ ನಿರ್ದೇಶನಾಲಯ, ಎನ್‌ಸಿಬಿ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಸಂಪರ್ಕಿಸುವ ವಂಚಕರು ಭಾರಿ ಮೊತ್ತದ ಹಣವನ್ನು ವರ್ಗಾಗಾಯಿಸುವಂತೆ ಮಾಡುತ್ತಾರೆ. 2024 ರಲ್ಲಿ ಇಲ್ಲಿಯವರೆಗೆ ದೇಶದಾದ್ಯಂತ ವಿವಿಧ ರೀತಿಯ ಸೈಬರ್ ವಂಚನೆಗಳಿಗೆ ಸಿಲುಕಿ ಜನರು 19,888.42 ಕೋಟಿ ರೂಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಸರ್ಕಾರಿ ಸಂಸ್ಥೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ICCCC) ಈ ವಂಚಕ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದೆ. ಈ ಸಂಸ್ಥೆಯ ವರದಿಯ ಅನುಸಾರ ದೇಶದಲ್ಲಿ ಸಂಭವಿಸಿರುವ 92,323 ಡಿಜಿಟಲ್ ಬಂಧನದ ಪ್ರಕರಣಗಳಲ್ಲಿ ಸಾಮಾನ್ಯ ಜನರು 2140.99 ಕೋಟಿ ರೂಗಳನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷದಲ್ಲೇ ದೇಶಾದ್ಯಂತ 42 ಸಾವಿರ, ಕರ್ನಾಟಕದಲ್ಲಿ 11 ಸಾವಿರ ವಂಚನೆ ಪ್ರಕರಣಗಳು ಸಂಭವಿಸಿವೆ. ಡಿಜಿಟಲ್ ಅರಿವಿನ ಕೊರತೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಲು ಉಂಟಾಗುವ ಮುಜುಗರದ ಕಾರಣ ಅನೇಕರು ವರದಿ ಮಾಡದಿರುವ ಪ್ರಸಂಗಗಳೂ ಇವೆ ಎಂದು ICCCC ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.
ಡಿಜಿಟಲ್ ಬಂಧನ ಸ್ವರೂಪ ಮತ್ತು ವಿಸ್ತರಣೆ
ಭಾರತದಲ್ಲಿ ಹಾಗೂ ಜಾಗತಿಕ ಮಟ್ಟದಲ್ಲೂ ಸಹ ಸೈಬರ್ ಅಥವಾ ಡಿಜಿಟಲ್ ವಂಚನೆಗಳ ಉಲ್ಬಣವನ್ನು COVID-19 ಸಾಂಕ್ರಾಮಿಕದ ದಾಳಿಯ ದಿನಗಳಿಂದ ಗುರುತಿಸಬಹುದು. ಈ ಅವಧಿಯಲ್ಲಿ ಎಲ್ಲ ದೇಶಗಳ ಆರ್ಥಿಕತೆಗಳಲ್ಲೂ ನಗದು ವಹಿವಾಟುಗಳನ್ನು ಕಡಿಮೆ ಮಾಡಿ ಆನ್ ಲೈನ್ ವಹಿವಾಟುಗಳನ್ನು ಹೆಚ್ಚಿಸುವ ಉಪಕ್ರಮಗಳು ಕಂಡುಬಂದಿದ್ದವು. ಭಾರತದಲ್ಲಿ ಡಿಜಿಟಲ್ ಬಂಧನ ಹಗರಣಗಳು ಕೊರಿಯರ್ ವಂಚನೆಗಳ ರೂಪದಲ್ಲಿ 2023 ರಲ್ಲಿ ಪ್ರಾರಂಭವಾದವು. ಉದ್ದೇಶಿತ ವ್ಯಕ್ತಿಗೆ ಕರೆ ಮಾಡಿ FedEx ನಂತಹ ಕೊರಿಯರ್ ಸೇವೆಯ ಕಾರ್ಯನಿರ್ವಾಹಕನಂತೆ ನಟಿಸುವ ವಂಚಕರು ಅವರ ಹೆಸರಿನಲ್ಲಿರುವ ಪ್ಯಾಕೇಜ್ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿ ಅವರನ್ನು ನಕಲಿ ಕಸ್ಟಮ್ಸ್ ಅಥವಾ ಸೈಬರ್ ಸೆಲ್ ಅಧಿಕಾರಿಗೆ ಸಂಪರ್ಕಿಸುತ್ತಾರೆ. ವ್ಯಕ್ತಿಯ ಗುರುತು ಪತ್ತೆಹಚ್ಚಿದ ನಂತರ ಹಿಂತಿರುಗಿಸಲಾಗುವುದು ಎಂದು ನಂಬಿಸಿ ನಿರ್ದಿಷ್ಟ ಮೊತ್ತವನ್ನು ಆರ್‌ಬಿಐ ನಿಗದಿಪಡಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕೋರಲಾಗುತ್ತದೆ. ಬಂಧನದಿಂದ ಪಾರಾಗಲು ಇದು ಅವಶ್ಯ ಎಂದು ನಂಬಿಸಲಾಗುತ್ತದೆ.
ಹೀಗೆ ಕೊರಿಯರ್‌ಗಳ ಮೂಲಕ ಆರಂಭವಾದ ವಂಚಕ ಜಾಲ ಈಗ ಡಿಜಿಟಲ್ ಬಂಧನದ ರೂಪ ಪಡೆದುಕೊಂಡಿದೆ. ಆರ್‌ಬಿಐ ಅಥವಾ ಟೆಲಿಕಾಂ ಪ್ರಾಧಿಕಾರದ ಅಧಿಕಾರಿಗಳ ಸೋಗಿನಲ್ಲಿ ಫೋನ್ ಕರೆಗಳನ್ನು ಮಾಡುವುದೇ ಅಲ್ಲದೆ ಬಂಧನಕ್ಕೊಳಗಾಗುವ, ಜೈಲುಪಾಲಾಗುವ ಬೆದರಿಕೆಯನ್ನೊಡ್ಡಿ ಉದ್ದೇಶಿತ ವ್ಯಕ್ತಿಗಳಿಂದ ಹಣ ವಸೂಲಿ ಮಾಡುವುದು ಈ ಮಾದರಿಯ ಒಂದು ವಿಧಾನ. ಉದ್ದೇಶಿತ ವ್ಯಕ್ತಿಗಳ ಖಾಸಗಿ ವ್ಯವಹಾರಗಳು ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ಗಮನಿಸುತ್ತಲೇ ಕೆಲವರನ್ನು ಆಯ್ಕೆ ಮಾಡುವ ವಂಚಕರು ಸಾಮಾನ್ಯವಾಗಿ ಆನ್‌ಲೈನ್ ಖರೀದಿಯ ಸಂದರ್ಭದಲ್ಲಿ ಸೃಷ್ಟಿಯಾಗುವ ದತ್ತಾಂಶಗಳನ್ನು ಡಾರ್ಕ್‌ವೆಬ್ ಎಂಬ ತಂತ್ರಜ್ಞಾನದ ವೇದಿಕೆಯ ಮೂಲಕ ಪಡೆದುಕೊಳ್ಳುತ್ತಾರೆ. ಉದ್ದೇಶಿತ ವ್ಯಕ್ತಿಗಳಲ್ಲಿ ನಂಬಿಕೆ ಹುಟ್ಟಿಸಲು ಅವರ ಹಿಂದಿನ ಕೆಲವು ವಹಿವಾಟುಗಳ ವಿವರಗಳನ್ನೂ ಒದಗಿಸುತ್ತಾರೆ. ಸಾಮಾನ್ಯವಾಗಿ ಈ ವಿವರಗಳು ಕಾನೂನು ಜಾರಿಮಾಡುವ ಸಂಸ್ಥೆಗಳಿಗಷ್ಟೇ ಲಭ್ಯವಾಗುತ್ತದೆ ಎಂಬ ವಿಶ್ವಾಸದೊಂದಿಗೆ ಸಾಮಾನ್ಯರು ಈ ವಿವರಗಳನ್ನು ಒದಗಿಸಿ ವಂಚನೆಗೊಳಗಾಗುತ್ತಾರೆ.
ಇನ್ನು ಕೆಲವು ಪ್ರಕರಣಗಳಲ್ಲಿ ಉದ್ದೇಶಿತ ವ್ಯಕ್ತಿಗೆ ವಿಡಿಯೋ ಕರೆ ಮಾಡುವ ಸಲುವಾಗಿ Skype ಡೌನ್ ಲೋಡ್ ಮಾಡಿಕೊಳ್ಳಲು ಹೇಳಿ, ವಿಡಿಯೋ ಕರೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲಾಖೆಯ ಲಾಂಛನಗಳನ್ನು ಹೊಂದಿರುವ ಪತ್ರಗಳನ್ನು, ಗುರುತಿನ ಚಿಹ್ನೆಗಳನ್ನು ತೋರಿಸಿ ಕಾನೂನುಬದ್ಧವಾಗಿರುವಂತೆ ನಟಿಸುವುದು ವಂಚಕರ ಒಂದು ಮಾದರಿ. ಕೆಲವೊಮ್ಮೆ ಉನ್ನತ ಅಧಿಕಾರಿಗಳನ್ನು ಅನುಕರಿಸುವ ಮೂಲಕ ಉದ್ದೇಶಿತ ವ್ಯಕ್ತಿಗಳಲ್ಲಿ ನಂಬಿಕೆ ಹುಟ್ಟಿಸುತ್ತಾರೆ. ಆರಂಭದಲ್ಲಿ ಇದು ಪ್ರಾರಂಭವಾದಾಗ, ಈ ಹೆಚ್ಚಿನ ಕರೆಗಳು ಆಗ್ನೇಯ ಏಷ್ಯಾದ ದೇಶಗಳಾದ ಕಾಂಬೋಡಿಯಾ, ಲಾವೋಸ್ ಮತ್ತು ವಿಯೆಟ್ನಾಂನಿಂದ ಬರುತ್ತಿವೆ ಎಂದು ಗುರುತಿಸಲಾಗುತ್ತಿತ್ತು.
ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತೀಯ ಯುವಕರು ಐಟಿ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ಉದ್ಯೋಗದ ಆಕಾಂಕ್ಷೆಗಳಿಮದ ಈ ಆಮಿಷಕ್ಕೆ ಒಳಗಾಗುತ್ತಾರೆ. ಈ ವರ್ಷದ ಆರಂಭದಲ್ಲಿ, 5,000 ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಸ್ವದೇಶಕ್ಕೆ ಮರಳಿದ ಜನರ ಮೇಲೆ ಸೈಬರ್ ವಂಚನೆಗಳನ್ನು ನಡೆಸಲು ಒತ್ತಾಯಿಸಲಾಯಿತು ಎಂದು ವರದಿ ಮಾಡಲಾಗಿದೆ. ಆದಾಗ್ಯೂ, ಈ ವರ್ಷದ ಮೇ ಮತ್ತು ಜೂನ್ ನಡುವೆ ಸುಮಾರು 1,300 ಭಾರತೀಯರನ್ನು ಇಂತಹ ಹಗರಣ ಸಂಯುಕ್ತಗಳಿಂದ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಈ ಹಗರಣಗಳನ್ನು ಮುಚ್ಚಲು ಮಾರ್ಗಗಳು
ಡಿಜಿಟಲ್ ಬಂಧನ ಹಗರಣಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಜನರಿಗೆ ಸಹಾಯ ಮಾಡುವ ಪ್ರಮುಖ ಅಂಶವೆಂದರೆ ಜನ ಜಾಗೃತಿ ಒಂದೇ. ಅಕ್ಟೋಬರ್ 27 ರಂದು ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನ ಸಂಚಿಕೆಯಲ್ಲಿ, ಪ್ರಧಾನಿ ಮೋದಿಯವರು ಡಿಜಿಟಲ್ ಬಂಧನಗಳ ಬಗ್ಗೆ ಗಮನ ಸೆಳೆದರು, ಹಗರಣದ ವಿರುದ್ಧ ಜನರನ್ನು ಎಚ್ಚರಿಸಿದರು. “ ಡಿಜಿಟಲ್ ಬಂಧನ ವಂಚನೆಗಳ ಬಗ್ಗೆ ಎಚ್ಚರದಿಂದಿರಿ. ಕಾನೂನಿನಡಿಯಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ. ಅಂತಹ ತನಿಖೆಗಾಗಿ ಯಾವುದೇ ಸರ್ಕಾರಿ ಸಂಸ್ಥೆ ನಿಮ್ಮನ್ನು ಫೋನ್ ಅಥವಾ ವೀಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ, ”ಎಂದು ಅವರು ಹೇಳಿದ್ದರು.
ಆನ್‌ಲೈನ್ ಮಾಹಿತಿಯ ಅತಿಯಾದ ಸ್ಫೋಟ ಮತ್ತು ಡಿಜಿಟಲ್ ತಂತ್ರಜ್ಞಾನದ ಅತಿಯಾದ ಬಳಕೆಯು ನಮ್ಮ ಅರಿವಿನ ಚಿಂತನೆಯ ಮೇಲೆ ಪರಿಣಾಮ ಬೀರಿದೆ, ಇದು ಜನರು ಸುಲಭವಾಗಿ ಭಯಭೀತರಾಗಲು ಕಾರಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಜಿಟಲ್ ವಂಚನೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಸರ್ಕಾರವು ಶಾಲೆಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. “ನಾವು ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಘಟನೆಗಳನ್ನು ತ್ವರಿತವಾಗಿ ವರದಿ ಮಾಡಲು ಸಂತ್ರಸ್ತರನ್ನು ಪ್ರೋತ್ಸಾಹಿಸುತ್ತೇವೆ. ತಕ್ಷಣದ ವರದಿ ಮಾಡುವುದು ಬಹಳ ಮುಖ್ಯ, ”ಎಂದು ICCCC ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ.
ಸೈಬರ್ ವಂಚನೆ ಪ್ರಕರಣಗಳಿಗೆ ಸಹಾಯಕ್ಕಾಗಿ 1930 ಸಹಾಯವಾಣಿಯನ್ನು ಬಳಸಲು ಸಾರ್ವಜನಿಕರನ್ನು ಎಚ್ಚರಿಸಲಾಗಿದೆ. ಅಂತರ್ಜಾಲ ಮತ್ತು ಸೈಬರ್‌ಸ್ಪೇಸ್ ಡಿಜಿಟಲ್ ವಂಚನೆಗಳಿಂದ ತುಂಬಿದೆ. ಆನ್‌ಲೈನ್ ಡೇಟಿಂಗ್ ಸ್ಕ್ಯಾಮ್‌ಗಳಿಂದ ಹಿಡಿದು ಹಣಕಾಸು ವಂಚನೆಗಳವರೆಗೆ ಕ್ರಿಪ್ಟೋಕರೆನ್ಸಿ ಹಗರಣಗಳವರೆಗೆ, ಇತ್ತೀಚೆಗೆ ಹಲವು ಪ್ರಕರಣಗಳು ವರದಿಯಾಗಿವೆ. ಸಾಮಾನ್ಯ ಜನರಲ್ಲೂ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ಕೈಪಿಡಿಗಳನ್ನು ಮುದ್ರಿಸಿ, ವಿದ್ಯುನ್ಮಾನ ಸಂವಹನ ಮಾಧ್ಯಮಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದರಿಂದ ಸೈಬರ್ ಅಪರಾಧಗಳು ಮತ್ತು ಡಿಜಿಟಲ್ ಬಂಧನದಂತಹ ಪ್ರಕರಣಗಳನ್ನು ತಡೆಗಟ್ಟಬಹುದು.
ಇದನ್ನೂ ನೋಡಿ: ಕನ್ನಡ ಸಾಹಿತ್ಯ ಸಮ್ಮೇಳನ |ಮಂಡ್ಯದ ಪ್ರೀತಿಯ ನಾಟಿ ಕೋಳಿ ಸಾರುಮುದ್ದೆ ನೀಡಬೇಕು – ಎಂ.ಜಿ.ಹೆಗಡೆ Janashakthi Media